ಬಾಲಿವುಡ್ ಸ್ಟಾರ್ಗೂ ತಟ್ಟಿತು ಎಲ್‌ಪಿಜಿ ಸಿಲಿಂಡರ್ ಕೊರತೆಯ ಬಿಸಿ
LPG Shortage in India: ದೇಶಾದ್ಯಂತ ಎಲ್‌ಪಿಜಿ (LPG) ಸಿಲಿಂಡರ್‌ಗಳ ಕೊರತೆ ಉಂಟಾಗಿದೆ. ಹೋಟೆಲ್ ಉದ್ಯಮ ಈಗಾಗಲೇ ತತ್ತರಿಸಿದ್ದು ಸಾವಿರಾರು ಕೋಟಿ ನಷ್ಟ ಎದುರಿಸುತ್ತಿದೆ. ಸಾಮಾನ್ಯ ಜನರಿಗೂ ಸಹ ಎಲ್‌ಪಿಜಿ ಕೊರತೆಯ ಬಿಸಿ ತಟ್ಟಿದೆ. ಸಾಮಾನ್ಯರು ಮಾತರವೇ ಅಲ್ಲದೆ ಬಾಲಿವುಡ್‌ನ ಸ್ಟಾರ್ ನಟರಿಗೂ ಸಹ ಎಲ್‌ಪಿಜಿ ಕೊರತೆಯ ಬಿಸಿ ತಟ್ಟಿದೆ.

ದೇಶಾದ್ಯಂತ ಈಗ ಎಲ್‌ಪಿಜಿ (LPG) ಸಿಲಿಂಡರ್‌ಗಳ ಕೊರತೆ ಉಂಟಾಗಿದೆ. ಇರಾನ್ ಮತ್ತು ಅಮೆರಿಕ-ಇಸ್ರೇಲ್ ನಡುವೆ ಸೃಷ್ಟಿಯಾಗಿರುವ ಸಂಘರ್ಷದಿಂದಾಗಿ ಇಂಧನ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿದ್ದು, ಭಾರತದಲ್ಲಿ ಎಲ್‌ಪಿಜಿ ಕೊರತೆ ಶುರುವಾಗಿದೆ. ಬೆಂಗಳೂರು ಸೇರಿದಂತೆ ದೇಶದಾದ್ಯಂತ ಹೋಟೆಲ್ ಉದ್ಯಮಕ್ಕೆ ಭಾರಿ ಪೆಟ್ಟು ಬಿದ್ದಿದೆ. ಹಲವಾರು ಹೋಟೆಲ್‌ಗಳು ಈಗಾಗಲೇ ಬಾಗಿಲು ಹಾಕಿವೆ. ಗೃಹಬಳಕೆ ಸಿಲಿಂಡರ್ ಲಭ್ಯತೆಯೂ ಕಡಿಮೆ ಆಗಿದೆ. ಈ ಪರಿಸ್ಥಿತಿಯಿಂದ ಸಾಮಾನ್ಯ ಜನರಿಗೆ ಸಾಕಷ್ಟು ಸಮಸ್ಯೆ ಆಗುತ್ತಿದೆ. ಸಾಮಾನ್ಯರಿಗೆ ಮಾತ್ರವಲ್ಲದೆ ಇದೀಗ ಬಾಲಿವುಡ್‌ನ ಸೆಲೆಬ್ರಿಟಿಗಳಿಗೂ ಎಲ್‌ಪಿಜಿ ಸಿಲಿಂಡರ್ ಕೊರತೆ ಸಮಸ್ಯೆಯ ಬಿಸಿ ತಟ್ಟಿದೆ. ಬಾಲಿವುಡ್ ಸ್ಟಾರ್ ನಟ ಅಕ್ಷಯ್ ಕುಮಾರ್ ಅವರು ಇದೀಗ ಸಿಲಿಂಡರ್ ಕೊರತೆಯಿಂದಾಗಿ ಸಮಸ್ಯೆ ಎದುರಿಸುತ್ತಿದ್ದು, ಇಂಡಕ್ಷನ್ ಕಡೆ ಮುಖ ಮಾಡಿದ್ದಾರೆ.
ಸ್ವತಃ ಅಕ್ಷಯ್ ಕುಮಾರ್ ಈ ಬಗ್ಗೆ ಆಸಕ್ತಿದಾಯಕ ಮಾಹಿತಿಯನ್ನು ಹಂಚಿಕೊಂಡಿದ್ದು, ‘ನನಗೆ ಎಲ್‌ಪಿಜಿ ಕೊರತೆಯ ಬಗ್ಗೆ ಅಷ್ಟಾಗಿ ಮಾಹಿತಿ ಇರಲಿಲ್ಲ, ಮನೆಯಲ್ಲಿ ಸದ್ಯಕ್ಕೆ ಅಡುಗೆ ಅನಿಲಕ್ಕೆ ಯಾವುದೇ ತೊಂದರೆ ಇಲ್ಲ. ಆದರೆ ನನ್ನ ಪತ್ನಿ ಟ್ವಿಂಕಲ್ ಈಗಾಗಲೇ ಎರಡು ಇಂಡಕ್ಷನ್ ಸ್ಟೌವ್‌ಗಳನ್ನು ಆರ್ಡರ್ ಮಾಡಿ ತರಿಸಿಕೊಂಡಿದ್ದಾರೆ’ ಎಂದು ಅಕ್ಷಯ್ ತಿಳಿಸಿದ್ದಾರೆ. ಭವಿಷ್ಯದಲ್ಲಿ ಒಂದು ವೇಳೆ ಅಡುಗೆ ಅನಿಲದ ಪೂರೈಕೆ ಸಂಪೂರ್ಣ ನಿಂತುಹೋದರೆ ಅಡುಗೆಗೆ ತೊಂದರೆಯಾಗಬಾರದು ಎಂಬ ದೂರದೃಷ್ಟಿಯಿಂದ ಟ್ವಿಂಕಲ್ ಈ ನಿರ್ಧಾರ ಕೈಗೊಂಡಿದ್ದಾರೆ’ ಎಂದಿದ್ದಾರೆ.
ಇದನ್ನು ಓದಿ:ರುಂಡ ಇಲ್ಲದ ವ್ಯಕ್ತಿ ಜೊತೆ ಅಕ್ಷಯ್ ಕುಮಾರ್
ವರದಿಗಳ ಪ್ರಕಾರ, ಮುಂಬೈ, ದೆಹಲಿ-ಎನ್‌ಸಿಆರ್, ಕರ್ನಾಟಕ, ಗುಜರಾತ್ ಮತ್ತು ತಮಿಳುನಾಡಿನಂತಹ ರಾಜ್ಯಗಳಲ್ಲಿ ಇಂಡಕ್ಷನ್ ಸ್ಟೌವ್‌ಗಳ ಮಾರಾಟದಲ್ಲಿ ಶೇ.300 ರಷ್ಟು ಏರಿಕೆಯಾಗಿದೆ. ಅನೇಕ ಹೋಟೆಲ್‌ಗಳು ಮತ್ತು ರೆಸ್ಟೋರೆಂಟ್‌ಗಳು ಈಗಾಗಲೇ ಎಲ್‌ಪಿಜಿಯಿಂದ ಎಲೆಕ್ಟ್ರಿಕ್ ಪರ್ಯಾಯಗಳಿಗೆ ಅಥವಾ ಕಲ್ಲಿದ್ದಲು ಒಲೆಗಳಿಗೆ ಬದಲಾಗುತ್ತಿವೆ. ಹಲವು ರಾಜ್ಯಗಳಲ್ಲಿ ಎಲ್‌ಪಿಜಿ ಸಿಲಿಂಡರ್‌ಗಳ ಬ್ಲಾಕ್ ಮಾರುಕಟ್ಟೆ ಬೆಲೆಯೂ ಅಚಾನಕ್ಕಾಗಿ ಗಗನಕ್ಕೇರಿರುವುದು ಮತ್ತು ಪೂರೈಕೆ ಕಡಿಮೆ ಇರುವುದು ಜನರನ್ನು ಇಂತಹ ಪರ್ಯಾಯಗಳತ್ತ ಸೆಳೆಯುತ್ತಿದೆ.
ಎಲ್‌ಪಿಜಿ ಪೂರೈಕೆಯಲ್ಲಿನ ವ್ಯತ್ಯಯದಿಂದಾಗಿ ಸರ್ಕಾರವು ಸಾರ್ವಜನಿಕರಲ್ಲಿ ಸಿಲಿಂಡರ್‌ಗಳನ್ನು ಅನಗತ್ಯವಾಗಿ ಸಂಗ್ರಹಿಸಿಡಬೇಡಿ ಎಂದು ಮನವಿ ಮಾಡಿದೆ. ಸಾಧ್ಯವಾದಷ್ಟು ಪೈಪ್ಡ್ ನ್ಯಾಚುರಲ್ ಗ್ಯಾಸ್ (PNG) ಅಥವಾ ವಿದ್ಯುತ್ ಒಲೆಗಳನ್ನು ಬಳಸಲು ಸೂಚಿಸಿದೆ. ಅಕ್ಷಯ್ ಕುಮಾರ್ ಅವರ ಈ ನಡೆ ಬಾಲಿವುಡ್ ವಲಯದಲ್ಲೂ ಚರ್ಚೆಗೆ ಕಾರಣವಾಗಿದ್ದು, ಇತರ ತಾರೆಯರು ಸಹ ತಮ್ಮ ಮನೆಯ ಅಡುಗೆ ವ್ಯವಸ್ಥೆಯನ್ನು ಸುರಕ್ಷಿತವಾಗಿರಿಸಲು ಮುಂದಾಗುತ್ತಿದ್ದಾರೆ.
ಅಕ್ಷಯ್ ಕುಮಾರ್ ಅವರು ತಾವೊಬ್ಬ ಉತ್ತಮ ಅಡುಗೆಯವನೆಂದು ಹಲವು ಬಾರಿ ಹೇಳಿಕೊಂಡಿದ್ದಾರೆ. ಈ ಹಿಂದೆ ಸಂದರ್ಶನವೊಂದರಲ್ಲಿ, ತಾವು ತಮ್ಮ ಮಕ್ಕಳಿಗೆ ‘ಚಾಕೊಲೇಟ್ ಪರಾಠ’ದಂತಹ ವಿಶೇಷ ಖಾದ್ಯಗಳನ್ನು ತಯಾರಿಸಿಕೊಡುವುದಾಗಿ ಹೇಳಿದ್ದರು. ಈಗ ಮನೆಯಲ್ಲಿ ಇಂಡಕ್ಷನ್ ಸ್ಟೌವ್ ಬಂದಿರುವುದರಿಂದ, ಅಕ್ಷಯ್ ಅವರ ಅಡುಗೆ ಪ್ರಯೋಗಗಳು ಇನ್ಮುಂದೆ ವಿದ್ಯುತ್ ಒಲೆಯ ಮೇಲೆ ಮುಂದುವರಿಯಲಿವೆ ಎಂದು ಊಹಿಸಬಹುದು.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




