ಏಕದಿನ ವಿಶ್ವಕಪ್ 2027 ರ ಅರ್ಹತಾ ಪಂದ್ಯಗಳ ವೇಳಾಪಟ್ಟಿ ಪ್ರಕಟ
2027 ODI World Cup Qualifiers: 2027ರ ಏಕದಿನ ವಿಶ್ವಕಪ್‌ಗೆ ದಕ್ಷಿಣ ಆಫ್ರಿಕಾ, ಜಿಂಬಾಬ್ವೆ, ನಮೀಬಿಯಾ ಆತಿಥ್ಯ ವಹಿಸಲಿವೆ. 14 ತಂಡಗಳ ಈ ಪಂದ್ಯಾವಳಿಗೆ ಅರ್ಹತಾ ಸುತ್ತು ಫೆಬ್ರವರಿ 22 ರಿಂದ ಮಾರ್ಚ್ 23, 2027 ರವರೆಗೆ ನಡೆಯಲಿದೆ. ಐಸಿಸಿ ರ್ಯಾಂಕಿಂಗ್, ಆತಿಥೇಯ ರಾಷ್ಟ್ರಗಳು ಮತ್ತು ಅರ್ಹತಾ ಸುತ್ತಿನ ಮೂಲಕ ತಂಡಗಳು ವಿಶ್ವಕಪ್‌ಗೆ ಪ್ರವೇಶ ಪಡೆಯಲಿವೆ. ಹೊಸ ಸ್ವರೂಪದಲ್ಲಿ ನಡೆಯುವ ಈ ಟೂರ್ನಿಯಲ್ಲಿ ಆತಿಥೇಯ ದೇಶಗಳ ನಗರಗಳು ಮತ್ತು ಕ್ರೀಡಾಂಗಣಗಳನ್ನು ಸಹ ಖಚಿತಪಡಿಸಲಾಗಿದೆ.

2027 ರ ಏಕದಿನ ವಿಶ್ವಕಪ್‌ಗೆ ( 2027 World Cup) ಆಫ್ರಿಕಾ ಖಂಡದ ಮೂರು ದೇಶಗಳು ಆತಿಥ್ಯವಹಿಸುತ್ತಿರುವುದು ಎಲ್ಲರಿಗೂ ಗೊತ್ತಿರುವ ವಿಚಾರವೆ. ದಕ್ಷಿಣ ಆಫ್ರಿಕಾ, ಜಿಂಬಾಬ್ವೆ ಮತ್ತು ನಮೀಬಿಯಾದಲ್ಲಿ ಮುಂಬರುವ ಏಕದಿನ ವಿಶ್ವಕಪ್ ನಡೆಯಲಿದೆ. ಕೆಲವೇ ದಿನಗಳ ಹಿಂದೆ ಈ ಮೂರು ದೇಶಗಳ ಯಾವ್ಯಾವ ನಗರಗಳಲ್ಲಿ ಪಂದ್ಯಗಳು ನಡೆಯಲಿವೆ ಎಂಬುದನ್ನು ಐಸಿಸಿ ಖಚಿತಪಡಿಸಿತ್ತು. ಇದೀಗ ಈ ಪಂದ್ಯಾವಳಿ ಆರಂಭಕ್ಕೂ ಮುನ್ನ ನಡೆಯಲಿರುವ ಅರ್ಹತಾ ಸುತ್ತಿನ ಬಗ್ಗೆ ಐಸಿಸಿ ಮಹತ್ವದ ಮಾಹಿತಿಯನ್ನು ಹಂಚಿಕೊಂಡಿದೆ. ಏಕದಿನ ವಿಶ್ವಕಪ್ 2027 ರ ಅರ್ಹತಾ ಸುತ್ತಿನ ಪಂದ್ಯಗಳು ಯಾವಾಗ ನಡೆಯಲಿವೆ ಎಂಬುದನ್ನು ಐಸಿಸಿ ಬಹಿರಂಗಪಡಿಸಿದೆ.
10 ತಂಡಗಳ ನಡುವೆ ಅರ್ಹತಾ ಸುತ್ತು
10 ತಂಡಗಳ ನಡುವೆ ನಡೆಯಲಿರುವ ಅರ್ಹತಾ ಸುತ್ತಿನ ಪಂದ್ಯಗಳು ಫೆಬ್ರವರಿ 22 ರಿಂದ ಮಾರ್ಚ್ 23, 2027 ರವರೆಗೆ ನಡೆಯಲಿವೆ. ಪ್ರಸ್ತುತ ಐಸಿಸಿ, ಅರ್ಹತಾ ಸುತ್ತಿನ ದಿನಾಂಕವನ್ನು ಮಾತ್ರ ಬಹಿರಂಗಪಡಿಸಿದ್ದು, ಈ ಸುತ್ತು ಎಲ್ಲಿ ನಡೆಯಲಿದೆ ಎಂಬುದರ ಬಗ್ಗೆ ಯಾವುದೇ ಮಾಹಿತಿ ನೀಡಿಲ್ಲ. 10 ತಂಡಗಳ ನಡುವೆ ನಡೆಯಲಿರುವ ಈ ಅರ್ಹತಾ ಸುತ್ತಿನಲ್ಲಿ ಅಗ್ರ ನಾಲ್ಕು ಸ್ಥಾನ ಪಡೆಯುವ ತಂಡಗಳು ಪಂದ್ಯಾವಳಿಗೆ ಅರ್ಹತೆ ಪಡೆಯುತ್ತವೆ.
2027 ರ ಏಕದಿನ ವಿಶ್ವಕಪ್ ಹೊಸ ಸ್ವರೂಪದಲ್ಲಿ ನಡೆಯಲಿದ್ದು, ಈ ಪಂದ್ಯಾವಳಿಯಲ್ಲಿ 14 ತಂಡಗಳು ಭಾಗವಹಿಸಲಿವೆ. ಇದರಲ್ಲಿ 8 ತಂಡಗಳು ಐಸಿಸಿ ಏಕದಿನ ರ್ಯಾಂಕಿಂಗ್ ಆಧಾರದ ಮೇಲೆ ವಿಶ್ವಕಪ್‌ಗೆ ಅರ್ಹತೆ ಗಿಟ್ಟಿಸಿಕೊಂಡರೆ, ಉಳಿದ ಎರಡು ತಂಡಗಳು ಐಸಿಸಿ ಪೂರ್ಣ ಸದಸ್ಯತ್ವ ಹೊಂದಿರುವ ಆತಿಥೇಯ ರಾಷ್ಟ್ರಗಳಾಗಿ ನೇರ ಪ್ರವೇಶ ಪಡೆದುಕೊಳ್ಳಲಿವೆ. ಇನ್ನು ಅರ್ಹತಾ ಸುತ್ತಿನಿಂದ ಬಂದ 4 ತಂಡಗಳು ಈ 10 ತಂಡಗಳ ಜೊತೆಗೆ ಸೇರಿಕೊಳ್ಳಲಿವೆ.
ಸೂಪರ್ ಸಿರೀಸ್ ಪಂದ್ಯಗಳು
ಈ 14 ತಂಡಗಳ ಪೈಕಿ ಕೊನೆಯ 3 ಸ್ಥಾನಗಳನ್ನು ಅಂದರೆ 12, 13 ಮತ್ತು 14 ನೇ ಸ್ಥಾನ ಪಡೆಯುವ ತಂಡಗಳು ಮೊದಲ ಹಂತದಲ್ಲಿ ಸೂಪರ್ ಸಿರೀಸ್ ಪಂದ್ಯಗಳನ್ನು ಆಡಲಿವೆ. ಇದರಲ್ಲಿ ಅಗ್ರಸ್ಥಾನ ಪಡೆಯುವ ತಂಡ ಮುಂದಿನ ಸುತ್ತಿಗೆ ಅರ್ಹತೆ ಪಡೆದುಕೊಂಡರೆ, ಉಳಿದೆರಡು ತಂಡಗಳು ಟೂರ್ನಿಯಿಂದ ಹೊರಬೀಳಲಿವೆ. ಇದಾದ ಬಳಿಕ 12 ತಂಡಗಳ ನಡುವೆ ಏಕದಿನ ವಿಶ್ವಕಪ್ ಪಂದ್ಯಾವಳಿ ಶುರುವಾಗಲಿದೆ.
2027 ರ ಏಕದಿನ ವಿಶ್ವಕಪ್‌ಗೆ 12 ನಗರಗಳ ಆತಿಥ್ಯ; ಐಸಿಸಿ ಅಧಿಕೃತ ಪ್ರಕಟಣೆ
3 ದೇಶಗಳಲ್ಲಿ ವಿಶ್ವಕಪ್
ಮೇಲೆ ಹೇಳಿದಂತೆ 2027 ರ ಏಕದಿನ ವಿಶ್ವಕಪ್ ಅನ್ನು ದಕ್ಷಿಣ ಆಫ್ರಿಕಾ, ಜಿಂಬಾಬ್ವೆ ಮತ್ತು ನಮೀಬಿಯಾ ಆಯೋಜಿಸಲಿವೆ. ಎಲ್ಲಾ ಪಂದ್ಯಗಳು 12 ವಿಭಿನ್ನ ಕ್ರೀಡಾಂಗಣಗಳಲ್ಲಿ ನಡೆಯಲಿವೆ. ದಕ್ಷಿಣ ಆಫ್ರಿಕಾ ಅತಿ ಹೆಚ್ಚು ಪಂದ್ಯಗಳನ್ನು ಅಂದರೆ 8 ಪಂದ್ಯಗಳನ್ನು ಆಯೋಜಿಸಲಿದೆ. ಉಳಿದ 3 ಪಂದ್ಯಗಳು ಜಿಂಬಾಬ್ವೆಯಲ್ಲಿ ಮತ್ತು ಒಂದು ಪಂದ್ಯ ನಮೀಬಿಯಾದಲ್ಲಿ ನಡೆಯಲಿದೆ. ವಿಶ್ವಕಪ್ ಅಕ್ಟೋಬರ್ 4, 2027 ರಿಂದ ನವೆಂಬರ್ 21, 2027 ರವರೆಗೆ ನಡೆಯುವ ಸಾಧ್ಯತೆಗಳಿವೆ.




