ನಟ ಶಿವರಾಜ್ಕುಮಾರ್ ಅವರು ಕ್ಯಾನ್ಸರ್ ಮುಕ್ತವಾಗಿದ್ದಾರೆ. ಯಶಸ್ವಿಯಾಗಿ ಶಸ್ತ್ರ ಚಿಕಿತ್ಸೆ ಮುಗಿಸಿದ್ದರಿಂದ ಎಲ್ಲರೂ ನಿಟ್ಟುಸಿರು ಬಿಟ್ಟಿದ್ದಾರೆ. ಶಿವಣ್ಣ ಅವರಿಗೆ ಯಾವ ರೀತಿಯ ಶಸ್ತ್ರ ಚಿಕಿತ್ಸೆ ಮಾಡಲಾಗಿದೆ ಎಂಬುದನ್ನು ಅವರ ಸಂಬಂಧಿ ಮಧು ಬಂಗಾರಪ್ಪ ವಿವರಿಸಿದ್ದಾರೆ. ‘ನಡೆದಿರುವುದು ತುಂಬ ದೊಡ್ಡ ಆಪರೇಷನ್. ಹಾಗಾಗಿಯೇ ನಾನು ಅವರ ಜೊತೆ ಅಲ್ಲಿಗೆ ಹೋಗಿದ್ದು. ಯಶಸ್ವಿಯಾಗಿ ಸರ್ಜರಿ ನಡೆದಿದೆ’ ಎಂದು ಹೇಳಿದ್ದಾರೆ. ಒಟ್ಟು 6 ಸರ್ಜರಿ ಮಾಡಿದ್ದು, 190 ಹೊಲಿಗೆ ಹಾಕಲಾಗಿದೆ ಎಂದು ಕೂಡ ಅವರು ಮಾಹಿತಿ ಹಂಚಿಕೊಂಡಿದ್ದಾರೆ.
‘ಏಕಕಾಲಕ್ಕೆ 6 ಆಪರೇಷನ್ ನಡೆಯಿತು. ಕರುಳಿನ ಒಂದು ಭಾಗವನ್ನು ತೆಗೆದು, ಅದನ್ನೇ ಯೂರಿನ್ ಬ್ಲಾಡರ್ ಆಗಿ ಮಾಡುತ್ತಾರೆ. ಒಳಗಿನಿಂದ 190 ಹೊಲಿಗೆ ಹಾಕಲಾಗಿದೆ. ನಾವು ಇದನ್ನೆಲ್ಲ ವಿವರವಾಗಿ ಹೇಳಿರಲಿಲ್ಲ. ಐದೂವರೆ ಗಂಟೆ ಸರ್ಜರಿ ಪ್ಲ್ಯಾನ್ ಮಾಡಲಾಗಿತ್ತು. 5 ಗಂಟೆ ಒಳಗೆ ಮುಗಿಸಿದರು. ಯಾವುದೇ ತೊಂದರೆ ಆಗಲಿಲ್ಲ. 4 ಗಂಟೆ ಒಳಗೆ ನಾವು ಹೋಗಿ ಮಾತನಾಡಿಸಿದೆವು’ ಎಂದು ಮಧು ಬಂಗಾರಪ್ಪ ಅವರು ಮಾಹಿತಿ ನೀಡಿದ್ದಾರೆ.
‘ಎಲ್ಲರ ಹಾರೈಕೆಯಿಂದ, ಉತ್ತಮ ವೈದ್ಯರಿಂದ ಎಲ್ಲವೂ ಚೆನ್ನಾಗಿ ಆಗಿದೆ. ಎಲ್ಲರೂ ಶಿವಣ್ಣನ ಬಗ್ಗೆ ಕಾಳಜಿ ವ್ಯಕ್ತಪಡಿಸಿದ್ದಾರೆ. ಆದರೆ ಸೋಶಿಯಲ್ ಮೀಡಿಯಾದಲ್ಲಿ ಹರಡಿರುವ ವದಂತಿಗಳು ನಿಲ್ಲಬೇಕು. ಆಗಿರುವುದು ಬ್ಲಾಡರ್ ರಿಕನ್ಸ್ಟ್ರಕ್ಷನ್. ಕಿಡ್ನಿ ವೈಫಲ್ಯ ಅಂತ ಹೇಳುವುದು ತಪ್ಪಾಗುತ್ತದೆ. ಸರಿಯಾಗಿ ಗೊತ್ತಿಲ್ಲದೇ ಕೆಲವರು ತಪ್ಪು ಮಾಹಿತಿ ಹಬ್ಬಿಸುತ್ತಾರೆ. ಹಾಗೆ ಮಾಡಬಾರದು’ ಎಂದಿದ್ದಾರೆ ಮಧು ಬಂಗಾರಪ್ಪ.
‘ಶಿವರಾಜ್ಕುಮಾರ್ ಅವರಿಗೆ ಬ್ರೇನ್ನಲ್ಲಿ ಒಂದು ಸ್ಟಂಟ್ ಇದೆ. ಅವರಿಗೆ ಒಮ್ಮೆ ಚಿಕ್ಕ ಹಾರ್ಟ್ ಅಟ್ಯಾಕ್ ಕೂಡ ಆಗಿತ್ತು. ಮತ್ತೆ ಅವರಿಗೆ ಯಾಕೆ ಈ ಆರೋಗ್ಯ ಸಮಸ್ಯೆ ಎಂಬ ಬೇಸರ ಎಲ್ಲರಿಗೂ ಇತ್ತು. ಈಗ ಶಿವಣ್ಣ ಚೆನ್ನಾಗಿ ಇದ್ದಾರೆ. ಜನವರಿ 25ರಂದು ವಾಪಸ್ ಬರುತ್ತಾರೆ. ಮೊದಲಿಗಿಂತಲೂ ಜಾಸ್ತಿ ಜೋಶ್ನಲ್ಲಿ ಬರುತ್ತಾರೆ. ಅಲ್ಲಿ ನಾನು ಮತ್ತು ಅವರು ಪ್ರತಿ ದಿನ 3-4 ಕಿಮೀ ವಾಕಿಂಗ್ ಮಾಡುತ್ತಿದ್ದೆವು. ಅವರು ತುಂಬಾ ಫಿಟ್ ಆಗಿದ್ದಾರೆ’ ಎಂದು ಮಧು ಬಂಗಾರಪ್ಪ ಹೇಳಿದ್ದಾರೆ.
ಇದನ್ನೂ ಓದಿ: ಶಿವಣ್ಣನ ಆಪರೇಷನ್ ಹೇಗಾಯ್ತು? ವೈದ್ಯರೇ ನೀಡಿದ ಮಾಹಿತಿಯ ವಿಡಿಯೋ ನೋಡಿ
‘ಅತ್ಯುತ್ತಮ ಆಸ್ಪತ್ರೆಯಲ್ಲಿ ಸರ್ಜರಿ ಮಾಡಿಸಲು ನಿರ್ಧರಿಸಿದ್ದು ಒಳ್ಳೆಯದೇ ಆಯಿತು. ಶಿವರಾಜ್ಕುಮಾರ್ ಅವರ ಆತ್ಮಸ್ಥೈರ್ಯ ದೊಡ್ಡದು. ಅವರು 36 ವರ್ಷದವರ ರೀತಿ ವಾಪಸ್ ಬರುತ್ತಾರೆ. ಪೂರ್ತಿ ಗುಣಮುಖರಾಗಿ ಅವರು ಬರಲಿದ್ದಾರೆ. ಅಭಿಮಾನಿಗಳು ಹಾಗೂ ತಂದೆ-ತಾಯಿ ಆಶೀರ್ವಾದ ಇದ್ದಿದ್ದರಿಂದ ಶಿವಣ್ಣ ಚೆನ್ನಾಗಿದ್ದಾರೆ’ ಎಂದು ಮಧು ಬಂಗಾರಪ್ಪ ಅವರು ಹೇಳಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.