ಕನ್ನಡ ಚಿತ್ರರಂಗಕ್ಕೆ ನಿರ್ಮಾಪಕ ಕೋಟಿ ರಾಮು (Koti Ramu) ಅವರು ನೀಡಿದ ಕೊಡುಗೆ ದೊಡ್ಡದು. ಆದರೆ ಈ ವರ್ಷ ಅವರು ಕೊರೊನಾ ವೈರಸ್ ತಗುಲಿ ವಿಧಿವಶರಾಗಿದ್ದು ನೋವಿನ ಸಂಗತಿ. ಅವರು ನಿರ್ಮಿಸಿದ ಕೊನೇ ಸಿನಿಮಾ ‘ಅರ್ಜುನ್ ಗೌಡ’ (Arjun Gowda Movie) ಡಿ.31ರಂದು ಬಿಡುಗಡೆ ಆಗಲಿದೆ. ಪ್ರಜ್ವಲ್ ದೇವರಾಜ್ (Prajwal Devaraj) ಮತ್ತು ಪ್ರಿಯಾಂಕಾ ತಿಮ್ಮೇಶ್ (Priyanka Thimmesh) ನಟಿಸಿರುವ ಆ ಸಿನಿಮಾದ ಪ್ರೀ-ರಿಲೀಸ್ ಕಾರ್ಯಕ್ರಮವನ್ನು ಅದ್ದೂರಿಯಾಗಿ ಮಾಡಲಾಗಿದೆ. ರಾಮು ಪತ್ನಿ, ನಟಿ ಮಾಲಾಶ್ರೀ (Malashree) ಅವರು ‘ಅರ್ಜುನ್ ಗೌಡ’ ಚಿತ್ರವನ್ನು ರಿಲೀಸ್ ಮಾಡುತ್ತಿದ್ದಾರೆ. ಆ ಮೂಲಕ ಪತಿಯ ಕೆಲಸವನ್ನು ಅವರು ಮುಂದುವರಿಸಿಕೊಂಡು ಹೋಗುತ್ತಿದ್ದಾರೆ. ಮಾಲಾಶ್ರೀಗೆ ಬೆಂಬಲ ನೀಡಲು ಕನ್ನಡ ಚಿತ್ರರಂಗದ ಅನೇಕ ಸ್ಟಾರ್ ಕಲಾವಿದರು ಈ ಕಾರ್ಯಕ್ರಮಕ್ಕೆ ಆಗಮಿಸಿದ್ದರು.
ಕೋಟಿ ರಾಮು ಅವರ ಜತೆ ಅನೇಕ ಸ್ಟಾರ್ ಕಲಾವಿದರು ಕೆಲಸ ಮಾಡಿದ್ದಾರೆ. ಸಿನಿಮಾ ಮೇಲೆ ರಾಮು ಅವರಿಗೆ ಇದ್ದ ಪ್ರೀತಿಯನ್ನು ಎಲ್ಲರೂ ಕೊಂಡಾಡುತ್ತಾರೆ. ಈ ಬಗ್ಗೆ ಮಾತನಾಡಿದ ಶಿವರಾಜ್ಕುಮಾರ್, ‘ಕನ್ನಡ ಚಿತ್ರರಂಗ ಉದ್ದಾರ ಆಗಬೇಕು ಎಂದರೆ ರಾಮು ಅವರಂಥ ನಿರ್ಮಾಪಕರು ನೂರು ವರ್ಷ ಬದುಕಬೇಕಿತ್ತು. ಅವರ ನಿರ್ಮಾಣದಲ್ಲಿ ನಾನು 6 ಸಿನಿಮಾ ಮಾಡಿದ್ದೇನೆ. ಮಾಲಾಶ್ರೀ ಅವರು ಸಿನಿಮಾ ನಿರ್ಮಾಣವನ್ನು ಮುಂದುವರಿಸಬೇಕು. ನಾವು ಜೊತೆಯಲ್ಲಿ ಇರುತ್ತೇವೆ’ ಎಂದು ಹೇಳಿದರು.
ಗಣೇಶ್ ನಟನೆಯ ‘99’ ಚಿತ್ರವನ್ನು ರಾಮು ನಿರ್ಮಾಣ ಮಾಡಿದ್ದರು. ಆ ದಿನಗಳನ್ನು ಗಣೇಶ್ ಮೆಲುಕು ಹಾಕಿದರು. ‘ನಾನು ರಾಮು ಸರ್ ಜತೆ ಹೆಚ್ಚು ಸಿನಿಮಾ ಮಾಡಿಲ್ಲ. ‘99’ ಚಿತ್ರದ ಬಗ್ಗೆ ಅವರು ನನ್ನ ಬಳಿ ಮಾತನಾಡಿದಾಗ ಈ ಚಿತ್ರ ವರ್ಕೌಟ್ ಆಗುತ್ತಾ ಅಂತ ನಾನು ಪ್ರಶ್ನೆ ಕೇಳಿದ್ದೆ. ಒಂದು ಪ್ರಯೋಗದ ರೀತಿ ಮಾಡೋಣ ಅಂತ ಅವರು ಹೇಳಿದ್ದರು. ನಾನು ಮಾಲಾಶ್ರೀ ಮೇಡಂ ಅವರ ದೊಡ್ಡ ಫ್ಯಾನ್’ ಎಂದರು ಗಣೇಶ್.
‘ಮಾಲಾಶ್ರೀ ಮತ್ತು ರಾಮು ಬಗ್ಗೆ ಎಷ್ಟೇ ಮಾತಾಡಿದರೂ ಮುಗಿಯಲ್ಲ’ ಎನ್ನುತ್ತ ಮಾತು ಆರಂಭಿಸಿದರು ಉಪೇಂದ್ರ. ‘ರಾಮು ಅವರ ಬ್ಯಾನರ್ ಎಂದರೆ ಒಂದು ಆಕರ್ಷಣೆ ಇರುತ್ತಿತ್ತು. ರಾಮು ಕೋಟಿ ನಿರ್ಮಾಪಕ ಆಗಿದ್ದರು. ಮಾಲಾಶ್ರೀ ಶತಕೋಟಿ ನಿರ್ಮಾಪಕಿ ಆಗಬೇಕು. 100 ಕೋಟಿ ರೂ. ಬಜೆಟ್ ಸಿನಿಮಾ ನೀವು ಮಾಡಬೇಕು. ಯಾಕೆಂದರೆ, ನಾವೆಲ್ಲ ನಿಮ್ಮ ಜೊತೆ ಇದ್ದೇವೆ’ ಎಂದು ಮಾಲಾಶ್ರೀಗೆ ಉಪೇಂದ್ರ ಭರವಸೆ ನೀಡಿದರು.
ಮಾಲಾಶ್ರೀ ಮತ್ತು ರವಿಚಂದ್ರನ್ ಅವರದ್ದು ಹಲವು ವರ್ಷಗಳ ಸ್ನೇಹ. ‘ರಾಮು ಹೆಚ್ಚು ಮಾತನಾಡುತ್ತ ಇರಲಿಲ್ಲ. ಅವರ ಕೆಲಸವೇ ಮಾತಾಡುತ್ತಿತ್ತು. ಮಾಲಾಶ್ರೀ ಅವರು ನನಗಾಗಿ ‘ರಾಮಾಚಾರಿ’ ಸಿನಿಮಾದಲ್ಲಿ ನಟಿಸುವ ಮೂಲಕ ಸಹಾಯ ಮಾಡಿದ್ದರು. ನಾನು ಆ ಋಣ ತೀರಿಸಲು ‘ಮಲ್ಲ’ ಸಿನಿಮಾ ಕಾರಣ ಆಯ್ತು’ ಎಂದರು ರವಿಚಂದ್ರನ್.
ಇದನ್ನೂ ಓದಿ:
‘ಅರ್ಜುನ್ ಗೌಡ’ ಸುದ್ದಿಗೋಷ್ಠಿಯಲ್ಲಿ ಪತಿ ಕೋಟಿ ರಾಮು ನೆನೆದು ಕಣ್ಣೀರು ಹಾಕಿದ ಮಾಲಾಶ್ರೀ
ಕೋಟಿ ರಾಮು ಹುಟ್ಟುಹಬ್ಬ; ಕಣ್ಣೀರು ತುಂಬಿಕೊಂಡು ಭಾವುಕ ಪತ್ರ ಬರೆದ ನಟಿ ಮಾಲಾಶ್ರೀ
Published On - 8:52 am, Wed, 29 December 21