ಹಿರಿಯ ನಟ ಶಿವರಾಂ ಅವರು ಕೋಮಾ ಸ್ಥಿತಿಗೆ ಹೋಗಿದ್ದಾರೆ ಎನ್ನುವ ಸುದ್ದಿ ಸಾಕಷ್ಟು ಆತಂಕ ಮೂಡಿಸಿತ್ತು. ಇಂದು (ಡಿಸೆಂಬರ್ 3) ಮುಂಜಾನೆವರೆಗೂ ಅವರು ಚಿಕಿತ್ಸೆಗೆ ಸ್ಪಂದಿಸುತ್ತಿರಲಿಲ್ಲ. ಆದರೆ, ಮಧ್ಯಾಹ್ನದ ವೇಳೆಗೆ ಅವರು ಚಿಕಿತ್ಸೆಗೆ ಸ್ಪಂದಿಸಿದ್ದಾರೆ. ಈ ವಿಚಾರ ಕೇಳಿ ಅವರ ಅಭಿಮಾನಿಗಳು ಹಾಗೂ ಚಿತ್ರರಂಗದವರು ಖುಷಿಪಟ್ಟಿದ್ದಾರೆ. ಅವರು ಚೇತರಿಕೆ ಕಂಡು, ಆಸ್ಪತ್ರೆಯಿಂದ ಬೇಗ ಬಿಡುಗಡೆಯಾಗಲಿ ಎಂದು ಅಭಿಮಾನಿಗಳು ಕೋರುತ್ತಿದ್ದಾರೆ.
ಕೆಲ ದಿನಗಳ ಹಿಂದೆ ಶಿವರಾಂ ಅವರನ್ನು ಬೆಂಗಳೂರಿನ ಬ್ಯಾಂಕ್ ಕಾಲೋನಿಯಲ್ಲಿ ಇರುವ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಶಿವರಾಂ ಅವರು ಮನೆಯಲ್ಲಿ ಅಯ್ಯಪ್ಪ ಸ್ವಾಮಿ ಪೂಜೆ ಮಾಡಲು ಟೆರೆಸ್ನಲ್ಲಿ ವ್ಯವಸ್ಥೆ ಮಾಡಿಕೊಂಡಿದ್ದಾರೆ. ಅಲ್ಲಿಗೆ ತೆರಳಿದ್ದಾಗ ಪ್ರಜ್ಞೆ ತಪ್ಪಿ ಬಿದ್ದರು. ಒಂದೂವರೆ ಗಂಟೆ ಬಳಿಕ ಅದು ತಿಳಿದುಬಂದಿತ್ತು. ನಂತರ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಎಂಆರ್ಐ ಸ್ಕ್ಯಾನ್ ಮಾಡಿದಾಗ ತಲೆ ಒಳಗೆ ಪೆಟ್ಟು ಬಿದ್ದಿರುವುದು ತಿಳಿದಿತ್ತು. ಅವರ ಆರೋಗ್ಯ ಇನ್ನಷ್ಟು ಗಂಭೀರ ಪರಿಸ್ಥಿತಿ ತಲುಪಿದೆ. ಅವರ ಮಿದುಳು ನಿಷ್ಕ್ರಿಯಗೊಂಡಿದ್ದು, ಕೋಮಾ ಹಂತ ತಲುಪಿದ್ದಾರೆ ಎಂದು ಇಂದು ಮುಂಜಾನೆ ವರದಿ ಆಗಿತ್ತು. ಆದರೆ, ಮಧ್ಯಾಹ್ನದ ವೇಳೆಗೆ ಅವರ ಆರೋಗ್ಯದಲ್ಲಿ ಚೇತರಿಕೆ ಕಂಡಿದೆ. ‘ಹಿರಿಯ ನಟ ಶಿವರಾಂ ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ’ ಎಂದು ಆಸ್ಪತ್ರೆಯ ವೈದ್ಯ ಡಾ.ಮೋಹನ್ ಮಾಹಿತಿ ನೀಡಿದ್ದಾರೆ. ಈ ಮೂಲಕ ಅವರು ಮತ್ತೆ ಚೇತರಿಕೆ ಕಾಣಬಹುದು ಎನ್ನುವ ಆಶಾಭಾವನೆ ತುಂಬಿದ್ದಾರೆ.
ಶಿವರಾಂ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಚಂದನವನದ ಅನೇಕ ಹಿರಿಯ ನಟ-ನಟಿಯರು ಬಂದು ಅವರನ್ನು ನೋಡಿಕೊಂಡು ಹೋಗುತ್ತಿದ್ದಾರೆ. ಅವರು ಬೇಗ ಗುಣಮುಖರಾಗಲಿ ಎಂದು ಪ್ರಾರ್ಥಿಸುತ್ತಿದ್ದಾರೆ. ಅವರ ಮಿದುಳು ನಿಷ್ಕ್ರಿಯಗೊಂಡಿದ್ದು, ಕೋಮಾ ಹಂತ ತಲುಪಿರೋದು ಅವರ ಕುಟುಂಬದವರು, ಸ್ನೇಹಿತರು ಮತ್ತು ಅಭಿಮಾನಿಗಳಲ್ಲಿ ಆತಂಕ ಮೂಡಿಸಿತ್ತು. ಈಗ ಅವರು ಚಿಕಿತ್ಸೆಗೆ ಸ್ಪಂದಿಸುತ್ತಿರುವುದು ಅಭಿಮಾನಿಗಳಿಗೆ ಖುಷಿ ನೀಡಿದೆ.
ಇದನ್ನೂ ಓದಿ: ಹಿರಿಯ ನಟ ಶಿವರಾಂ ಅವರಿಗೆ ಆಗಿದ್ದೇನು? ಇಂಚಿಂಚೂ ವಿವರ ನೀಡಿದ ವೈದ್ಯರು