‘ಕೊರಗಜ್ಜ’ ಸಿನಿಮಾ ಹಾಡುಗಳಿಗೆ ಶ್ರೇಯಾ ಘೋಷಾಲ್, ಶಂಕರ್ ಮಹಾದೇವನ್ ಧ್ವನಿ

ಒಂದಷ್ಟು ಕಾರಣಗಳಿಂದ ‘ಕೊರಗಜ್ಜ’ ಸಿನಿಮಾ ಮೇಲೆ ಕುತೂಹಲ ಮೂಡಿದೆ. ಈ ಸಿನಿಮಾದ ಹಾಡುಗಳಿಗೆ ದೇಶದ ಖ್ಯಾತ ಗಾಯಕರು ಧ್ವನಿ ನೀಡಿದ್ದಾರೆ. ಈ ಬಗ್ಗೆ ಚಿತ್ರತಂಡದವರು ಮಾಹಿತಿ ನೀಡಿದ್ದಾರೆ. ಈ ಚಿತ್ರದ ಪ್ರಚಾರ ಕಾರ್ಯಕ್ಕೆ ಚಾಲನೆ ನೀಡಲಾಗಿದೆ. ಸುಧೀರ್ ಅತ್ತಾವರ್ ಅವರ ನಿರ್ದೇಶನದಲ್ಲಿ ‘ಕೊರಗಜ್ಜ’ ಸಿನಿಮಾ ಮೂಡಿಬರುತ್ತಿದೆ.

‘ಕೊರಗಜ್ಜ’ ಸಿನಿಮಾ ಹಾಡುಗಳಿಗೆ ಶ್ರೇಯಾ ಘೋಷಾಲ್, ಶಂಕರ್ ಮಹಾದೇವನ್ ಧ್ವನಿ
Shreya Ghoshal With Koragajja Movie Team

Updated on: Jan 05, 2025 | 5:42 PM

‘ಕೊರಗಜ್ಜ’ ಸಿನಿಮಾ ಸೆಟ್ಟೇರಿದ ದಿನದಿಂದಲೂ ಒಂದಲ್ಲಾ ಒಂದು ಕಾರಣಕ್ಕೆ ಸುದ್ದಿ ಆಗುತ್ತಿದೆ. ಕುತೂಹಲ ಮೂಡಿಸಿರುವ ಈ ಚಿತ್ರಕ್ಕೆ ಸುಧೀರ್ ಅತ್ತಾವರ್ ಅವರು ನಿರ್ದೇಶನ ಮಾಡುತ್ತಿದ್ದಾರೆ. ‘ಕೊರಗಜ್ಜ’ ಸಿನಿಮಾದಲ್ಲಿ ಶ್ರೇಯಾ ಘೋಷಾಲ್, ಶಂಕರ್ ಮಹಾದೇವನ್ ಅವರಂತಹ ಖ್ಯಾತ ಗಾಯಕರ ಹಾಡುಗಳು ಇರಲಿವೆ. ‘ತ್ರಿವಿಕ್ರಮ ಸಿನಿಮಾಸ್’ ಹಾಗೂ ‘ಸಕ್ಸಸ್ ಫಿಲ್ಮ್ಸ್​’ ಬ್ಯಾನರ್ ಮೂಲಕ ಮೂಡಿಬರುತ್ತಿರುವ ಈ ಸಿನಿಮಾಗೆ ಕಳೆದ ವಾರವಷ್ಟೇ ಶ್ರೇಯಾ ಘೋಷಾಲ್ ಅವರು ಎರಡು ಹಾಡುಗಳ ರೆಕಾರ್ಡಿಂಗ್ ಮುಗಿಸಿಕೊಟ್ಟಿದ್ದಾರೆ.

‘ಕೊರಗಜ್ಜ’ ಸಿನಿಮಾದ ಹಾಡಿನ ಸಾಹಿತ್ಯಕ್ಕೆ ಮಾರುಹೋದ ಶ್ರೇಯಾ ಘೋಷಾಲ್ ಅವರು ಕನ್ನಡ ಹಾಡುಗಳ ಸೊಬಗನ್ನು ಸಂಭ್ರಮಿಸಿದರು. ‘ಕನ್ನಡ ಸಿನಿಮಾ ಸಾಹಿತ್ಯ ಉತ್ಕ್ರಷ್ಟ ಮಟ್ಟದಲ್ಲಿ ಇರುತ್ತದೆ . ಆದ್ದರಿಂದ ಕನ್ನಡದ ಸಿನಿಮಾ ಗೀತೆಗಳಿಗೆ ಹೆಚ್ಚು ಆದ್ಯತೆ ನೀಡುತ್ತೇನೆ’ ಎಂದು ಶ್ರೇಯಾ ಘೋಷಾಲ್ ಹೇಳಿರುವುದಾಗಿ ‘ಕೊರಗಜ್ಜ’ ಚಿತ್ರತಂಡದವರು ತಿಳಿಸಿದ್ದಾರೆ.

ಈ ಚಿತ್ರದ ‘ಗಾಳಿಗಂಧ’ ಎಂಬ ಹಾಡನ್ನು ಶ್ರೇಯಾ ಅವರ ಜೊತೆ ಅದರ ಸೋನು ನಿಗಮ್ ಮತ್ತು ಶಾನ್ ಹಾಡಲಿದ್ದಾರೆ. ಉಳಿದಂತೆ ‘ಪೋರ್ಕುಳಿ ಪೆರತದಲಿ’ ಎಂಬ ಹಾಡನ್ನು ಸುನಿಧಿ ಚೌಹಾಣ್ ಕನ್ನಡ ಹಾಗೂ ಹಿಂದಿ ಭಾಷೆಗಳಲ್ಲಿ ಹಾಡಿದ್ದಾರೆ. ‘ವಾಜೀ ಸವಾರಿಯಲಿ’ ಹಾಗೂ ‘ಜಾವಂದ ಕುಲದ..’ ಎಂಬ ಹಾಡುಗಳನ್ನು ಜಾವೆದ್ ಆಲಿ ಹಾಡಿದ್ದಾರೆ.

‘ತೌಳವ ದೇಶೇ…’ ಎಂಬ 7 ನಿಮಿಷಗಳ ವಿಶೇಷವಾದ ಸಂಸ್ಕ್ರತ ಹಾಡನ್ನು ಶಂಕರ್ ಮಹದೇವನ್ ಹಾಡಿದ್ದಾರೆ. ‘ಪಿಕೆ’, ‘ಪದ್ಮಾವತ್’ ಸಿನಿಮಾಗಳ ಹಿನ್ನೆಲೆ ಗಾಯಕ ಸ್ವರೂಪ್ ಖಾನ್ ಹಾಗೂ ಪಾಪ್ ಗಾಯಕಿ ಶರೋನ್ ಪ್ರಭಾಕರ್ ಅವರು ‘ತೆಲ್ಲಂಟಿ.. ತೆಲ್ಲಂಟಿ…’ ಗೀತೆಗೆ ಧ್ವನಿ ಆಗಿದ್ದಾರೆ. ಪ್ರತಿಮಾ ಭಟ್, ರಮೇಶ್ ಚಂದ್ರ, ಸನ್ನಿಧಾನಂದನ್, ಕಾಂಜನ ಶ್ರೀರಾಂ, ಅನಿಲ ರಾಜಿವ, ಸೌಮ್ಯ ರಾಮಕೃಷ್ಣನ್, ವಿಜೇಶ್ ಗೋಪಾಲ್ ಅವರು ಸಹ ಹಾಡುಗಳನ್ನು ಹಾಡಿದ್ದಾರೆ.

ಇದನ್ನೂ ಓದಿ: ಕೊರಗಜ್ಜನ ಕೃಪೆ: ಮಣ್ಣಿನ ರಾಶಿಯಲ್ಲಿ ಚೈತ್ರಾ ಕಳೆದುಕೊಂಡ ಚಿನ್ನದ ಉಂಗುರ ಕೂಡಲೇ ಪತ್ತೆ

ದಕ್ಷಿಣದ ಖ್ಯಾತ ಗೋಪಿ ಸುಂದರ್ ಅವರು ಈ ಸಿನಿಮಾಗೆ ಸಂಗೀತ ನಿರ್ದೇಶನ ಮಾಡುತ್ತಿದ್ದಾರೆ. ಎಲ್ಲಾ ಗೀತೆಗಳನ್ನು ಸುಧೀರ್ ಅತ್ತಾವರ್ ಅವರು ರಚಿಸಿದ್ದಾರೆ. ಚಿತ್ರದ ಆಡಿಯೋ ಲಾಂಚ್, ಫಸ್ಟ್ ಲುಕ್ ಮತ್ತು ಟ್ರೇಲರ್ ಬಿಡುಗಡೆ ಕಾರ್ಯಕ್ರಮವನ್ನು ಡಿಫರೆಂಟ್​ ಆಗಿ ಮಾಡಲು ಪ್ಲ್ಯಾನ್ ನಡೆಯುತ್ತಿದೆ ಎಂದು ‘ಕೊರಗಜ್ಜ’ ಚಿತ್ರತಂಡ ಮಾಹಿತಿ ಹಂಚಿಕೊಂಡಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.