AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹಾರರ್ ಕಥೆ ಇರುವ ‘ಸೀಟ್‌ ಎಡ್ಜ್‌’ ಸಿನಿಮಾದ ಟ್ರೇಲರ್ ನೋಡಿದ್ರಾ?

ಟ್ರೇಲರ್ ಬಿಡುಗಡೆ ಮಾಡುವ ಮೂಲಕ ‘ಸೀಟ್ ಎಡ್ಜ್’ ಸಿನಿಮಾದ ಪ್ರಚಾರ ಕಾರ್ಯಕ್ಕೆ ಚುರುಕು ಮುಟ್ಟಿಸಲಾಗಿದೆ. ಈ ಟ್ರೇಲರ್ ಅನ್ನು ‘ವ್ಲಾಗ್ 2’ ಎಂದು ಕರೆಯಲಾಗಿದೆ. ಸಿನಿಮಾದ ಹಾರರ್ ಕಥೆಯ ಝಲಕ್ ಇದರಲ್ಲಿ ಕಾಣಿಸಿದೆ. ಜನವರಿ 30ರಂದು ಈ ಸಿನಿಮಾ ಬಿಡುಗಡೆ ಆಗಲಿದೆ. ಸುದ್ದಿಗೋಷ್ಟಿಯಲ್ಲಿ ಚಿತ್ರತಂಡದವರು ಮಾತನಾಡಿದ್ದಾರೆ.

ಹಾರರ್ ಕಥೆ ಇರುವ ‘ಸೀಟ್‌ ಎಡ್ಜ್‌’ ಸಿನಿಮಾದ ಟ್ರೇಲರ್ ನೋಡಿದ್ರಾ?
Seat Edge Movie Poster
ಮದನ್​ ಕುಮಾರ್​
|

Updated on: Jan 20, 2026 | 9:00 PM

Share

ಸಿದ್ದು ಮೂಲಿಮನಿ ನಟನೆಯ ‘ಸೀಟ್ ಎಡ್ಜ್’ (Seat Edge Movie) ಸಿನಿಮಾದಲ್ಲಿ ವ್ಲಾಗರ್ ಹುಡುಗನೊಬ್ಬನ ಕಥೆ ಇದೆ. ಘೋಸ್ಟ್ ಹಂಟಿಂಗ್ ಕುರಿತ ಕಥೆಯನ್ನು ಈ ಸಿನಿಮಾದಲ್ಲಿ ತೋರಿಸಲಾಗುತ್ತಿದೆ. ಹಾಗಾಗಿ ಕನ್ನಡದ ಪ್ರಮುಖ ವ್ಲಾಗರ್​ಗಳ ಕೈಯಿಂದಲೇ ಈ ಸಿನಿಮಾದ ಟ್ರೇಲರ್ ಬಿಡುಗಡೆ ಮಾಡಿಸಲಾಗಿದೆ. ಈ ಚಿತ್ರದಲ್ಲಿ ಸಿದ್ದು ಮೂಲಿಮನಿ (Siddu Moolimani) ಅವರು ಹೀರೋ ಆಗಿ ನಟಿಸಿದ್ದು, ರವೀಕ್ಷಾ ಶೆಟ್ಟಿ ನಾಯಕಿ ಆಗಿದ್ದಾರೆ. ⁠ರಘು ರಾಮನಕೊಪ್ಪ, ಮಿಮಿಕ್ರಿ ಗೋಪಿ, ಲಕ್ಷ್ಮಿ ಸಿದ್ದಯ್ಯ, ಗಿರೀಶ್ ಶಿವಣ್ಣ, ಕಿರಣ್, ತೇಜು ಪೊನ್ನಪ್ಪ, ಪುನೀತ್ ಬಾಬು, ಮನಮೋಹನ್ ರೈ ಮುಂತಾದವರು ಪಾತ್ರವರ್ಗದಲ್ಲಿ ಇದ್ದಾರೆ. ಜನವರಿ 30ರಂದು ‘ಸೀಟ್ ಎಡ್ಜ್’ ಸಿನಿಮಾ ರಿಲೀಸ್ ಆಗಲಿದೆ.

‘ಸೀಟ್ ಎಡ್ಜ್’ ಸಿನಿಮಾದಲ್ಲಿ ಡಾರ್ಕ್‌ ಕಾಮಿಡಿ ಕಥೆಯ ಜೊತೆಗೆ ಹಾರರ್‌ ಮತ್ತು ಥ್ರಿಲ್ಲರ್‌ ಅಂಶಗಳು ಇರಲಿವೆ. ಈ ಮೊದಲು ‘ಕೆಮಿಸ್ಟ್ರೀ ಆಫ್ ಕರಿಯಪ್ಪ’, ‘ಕ್ರಿಟಿಕಲ್ ಕೀರ್ತನೆಗಳು’ ಸಿನಿಮಾಗಳಿಗೆ ಸಹ-ನಿರ್ದೇಶಕನಾಗಿ ಕೆಲಸ ಮಾಡಿದ ಚೇತನ್ ಶೆಟ್ಟಿ ಅವರು ಈಗ ‘ಸೀಟ್‌ ಎಡ್ಜ್‌’ ಸಿನಿಮಾಗೆ ನಿರ್ದೇಶನ ಮಾಡಿದ್ದಾರೆ. ಕಥೆ, ಚಿತ್ರಕಥೆ ಕೂಡ ಅವರದ್ದೇ. ‘ಎನ್‌.ಆರ್‌. ಸಿನಿಮಾ ಪ್ರೊಡಕ್ಷನ್ಸ್‌’ ಮೂಲಕ ಗಿರಿಧರ ಟಿ. ವಸಂತಪುರ ಅವರು ನಿರ್ಮಾಣ ಮಾಡಿದ್ದಾರೆ.

ಟ್ರೇಲರ್ ಬಿಡುಗಡೆ ವೇಳೆ ಸಿದ್ದು ಮೂಲಿಮನಿ ಮಾತಾಡಿದರು. ‘ಇದು ಸಸ್ಪೆನ್ಸ್‌-ಥ್ರಿಲ್ಲರ್‌ ಶೈಲಿಯ ಸಿನಿಮಾ. ಮೊದಲ ಬಾರಿಗೆ ನಾನು ಯೂಟ್ಯೂಬ್‌ ವ್ಲಾಗರ್‌ ಪಾತ್ರ ಮಾಡಿದ್ದೇನೆ. ಯಾರೂ ಹೋಗದ ಭಯಾನಕ್ಕೆ ಜಾಗವನ್ನು ಪ್ರೇಕ್ಷಕರಿಗೆ ಪರಿಚಯಿಸಬೇಕು ಎಂದು ಹಠಕ್ಕೆ ಬಿದ್ದ ನಾನು ಘೋಸ್ಟ್ ಟೌನ್​ಗೆ ಹೋಗಿ ಘೋಸ್ಟ್ ಹಂಟಿಂಗ್ ವೀಡಿಯೋ ಮಾಡಲು ನಿರ್ಧರಿಸುತ್ತೇನೆ’ ಎಂದು ಕಥೆಯ ಬಗ್ಗೆ ಅವರು ಮಾಹಿತಿ ನೀಡಿದರು.

Seat Edge Movie Team (1)

Seat Edge Movie Team

ನಟಿ ರವೀಕ್ಷಾ ಶೆಟ್ಟಿ ಕೂಡ ಮಾತನಾಡಿದರು. ‘ಘೋಸ್ಟ್‌ ಹಂಟಿಂಗ್‌ಗೆ ಹೋಗುವ ಯೂಟ್ಯೂಬರ್‌ ಜೊತೆಗೆ ನಾನು ಸಹ ತೊಂದರೆಗೆ ಸಿಲುಕಿಕೊಳ್ಳುತ್ತೇನೆ. ಎರಡು ಶೇಡ್‌ಗಳಿರುವ ಪಾತ್ರ ನನ್ನದು. ಈ ಸಿನಿಮಾದಲ್ಲಿ ನಟಿಸಿದ್ದು ನನಗೆ ಒಳ್ಳೆಯ ಅನುಭವಗಳನ್ನು ನೀಡಿದೆ. ಹೆಸರಿಗೆ ತಕ್ಕಂತೆ ಇದು ಪ್ರೇಕ್ಷಕರನ್ನು ಸೀಟಿನ ತುದಿಗೆ ತಂದು ಕೂರಿಸುವಂತಹ ಸಿನಿಮಾ’ ಎಂದು ಅವರು ಹೇಳಿದರು.

ಇದನ್ನೂ ಓದಿ: ಸಿದ್ದು ಮೂಲಿಮನಿ ಹೊಸ ಹಾಡು ‘ಹಂಗೋ ಹಿಂಗೋ’: ಸೀಟ್ ಎಡ್ಜ್ ಚಿತ್ರದಲ್ಲಿ ರವೀಕ್ಷಾ ಜೋಡಿ

ನಿರ್ದೇಶಕ ಚೇತನ್‌ ಶೆಟ್ಟಿ ಮಾತನಾಡಿ, ‘ಇತ್ತೀಚಿನ ದಿನಗಳಲ್ಲಿ ಸೋಶಿಯಲ್‌ ಮೀಡಿಯಾದಲ್ಲಿ ವೀವ್ಸ್‌ ಪಡೆಯಲು, ಫೇಮಸ್ ಆಗಲು ಜನರು ಏನೇನೋ ಸಾಹಸಗಳನ್ನು ಮಾಡುತ್ತಾರೆ. ಆ ಎಳೆಯನ್ನೇ ಇಟ್ಟುಕೊಂಡೆ ಸಿನಿಮಾ ಮಾಡಿದ್ದೇವೆ’ ಎಂದರು. ನಿರ್ಮಾಪಕ ಗಿರಿಧರ ಅವರು ಮಾತನಾಡಿ, ‘ಎಲ್ಲಾ ವರ್ಗದ ಪ್ರೇಕ್ಷಕರಿಗೂ ಇಷ್ಟ ಆಗುವಂತಹ, ಮನೆಮಂದಿ ಒಟ್ಟಾಗಿ ಕುಳಿತು ನೋಡುವಂತಹ ಸಿನಿಮಾ ಮಾಡಿದ್ದೇವೆ’ ಎಂದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.