AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಜಯತೀರ್ಥ ಮೆಚ್ಚಿದ ‘ವಿಕಲ್ಪ’ ಸಿನಿಮಾ ಟ್ರೇಲರ್; ಜನವರಿ 30ಕ್ಕೆ ಚಿತ್ರ ರಿಲೀಸ್

ಜನವರಿ 30ರಂದು ಬಿಡುಗಡೆ ಆಗಲಿರುವ ‘ವಿಕಲ್ಪ’ ಸಿನಿಮಾದ ಟ್ರೇಲರ್ ಡಿಫರೆಂಟ್ ಆಗಿದೆ. ಪೃಥ್ವಿರಾಜ್‌ ಪಾಟೀಲ್‌, ನಾಗಶ್ರೀ ಹೆಬ್ಬಾರ್‌, ಹರಿಣಿ ಶ್ರೀಕಾಂತ್‌ ಮುಂತಾದವರು ಈ ಚಿತ್ರದಲ್ಲಿ ನಟಿಸಿದ್ದಾರೆ. ಪೋಸ್ಟ್‌ ಟ್ರಾಮಾಟಿಕ್‌ ಸ್ಟ್ರೆಸ್‌ ಡಿಸಾರ್ಡರ್‌ ಕುರಿತು ಈ ಸಿನಿಮಾದಲ್ಲಿ ತೋರಿಸಲಾಗುತ್ತಿದೆ. ಆ ಬಗ್ಗೆ ಇಲ್ಲಿದೆ ವಿವರ.

ಜಯತೀರ್ಥ ಮೆಚ್ಚಿದ ‘ವಿಕಲ್ಪ’ ಸಿನಿಮಾ ಟ್ರೇಲರ್; ಜನವರಿ 30ಕ್ಕೆ ಚಿತ್ರ ರಿಲೀಸ್
Vikalpa Movie Team
ಮದನ್​ ಕುಮಾರ್​
|

Updated on: Jan 20, 2026 | 3:36 PM

Share

ಖ್ಯಾತ ನಿರ್ದೇಶಕ ಜಯತೀರ್ಥ ಅವರು ‘ವಿಕಲ್ಪ’ ಸಿನಿಮಾದ ಟ್ರೇಲರ್ (Vikalpa Trailer) ಬಿಡುಗಡೆ ಮಾಡಿದ್ದಾರೆ. ಪೃಥ್ವಿರಾಜ್‌ ಪಾಟೀಲ್‌ (Pruthviraj Patil) ಅವರು ಈ ಸಿನಿಮಾಗೆ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಅಲ್ಲದೇ, ಮುಖ್ಯಪಾತ್ರದಲ್ಲಿ ಅಭಿನಯಿಸಿದ್ದಾರೆ. ನಾಗಶ್ರೀ ಹೆಬ್ಬಾರ್‌ (Nagashree Hebbar), ಸಂಧ್ಯಾ ವಿನಾಯಕ್‌, ಹರಿಣಿ ಶ್ರೀಕಾಂತ್‌, ಗಣಪತಿ ವಡ್ಡಿನಗದ್ದೆ, ಸ್ವರೂಪ್‌ ಬಚ್ಚ್‌, ಜಯಂತ್‌ ಡೇವಿಡ್‌, ಪೂಜಾ ಬಚ್ಚ್‌, ಡಾ. ಪ್ರಕೃತಿ, ಗಿರೀಶ್‌ ಹೆಗಡೆ, ಮಾಸ್ಟರ್‌ ಆಯುಷ್ ಸಂತೋಷ್‌ ಕೂಡ ಈ ಸಿನಿಮಾದಲ್ಲಿ ನಟಿಸಿದ್ದಾರೆ. ಜನವರಿ 30ರಂದು ‘ವಿಕಲ್ಪ’ ಸಿನಿಮಾ ಬಿಡುಗಡೆ ಆಗಲಿದೆ.

‘ವಿಕಲ್ಪ’ ಸಿನಿಮಾದ ಟ್ರೇಲರ್ ಗಮನ ಸೆಳೆಯುವಂತಿದೆ. ಸಿನಿಮಾದ ಥೀಮ್ ಏನು ಎಂಬುದು ಟ್ರೇಲರ್​​ನಲ್ಲಿ ಕಾಣಿಸಿದೆ. ಪೋಸ್ಟ್‌ ಟ್ರಾಮಾಟಿಕ್‌ ಸ್ಟ್ರೆಸ್‌ ಡಿಸಾರ್ಡರ್‌ (PTSD) ಎಂಬ ಮಾನಸಿಕ ಸಮಸ್ಯೆಯ ಎಳೆಯನ್ನು ಆಧರಿಸಿ ಈ ಸಿನಿಮಾ ಸಿದ್ಧವಾಗಿದೆ. ಇದು ಸೈಕಾಲಜಿಕಲ್‌, ಥ್ರಿಲ್ಲರ್‌ ಕಥಾಹಂದರ ಇರುವ ಸಿನಿಮಾ. ‘ಸುರೂಸ್‌ ಟಾಕೀಸ್‌’ ಬ್ಯಾನರ್ ಮೂಲಕ ಇಂದಿರಾ ಶಿವಸ್ವಾಮಿ ಅವರು ಈ ಸಿನಿಮಾವನ್ನು ನಿರ್ಮಿಸಿದ್ದಾರೆ.

ಟ್ರೇಲರ್ ಬಿಡುಗಡೆ ಮಾಡಿ ಜಯತೀರ್ಥ ಅವರು ಮಾತನಾಡಿದರು. ‘ಕನ್ನಡ ಚಿತ್ರರಂಗಕ್ಕೆ ಹೊಸ ಪ್ರತಿಭೆಗಳು ಬರುತ್ತಿರುವುದು ಖುಷಿಯ ವಿಷಯ. ಹೊಸಬರ ಮೂಲಕ ಹೊಸ ಕಲ್ಪನೆ, ಆಲೋಚನೆಗಳು ಸಿನಿಮಾವಾಗಿ ತೆರೆಮೇಲೆ ಅನಾವರಣ ಆಗುತ್ತದೆ. ಹೊಸಬರು ಯಾವಾಗಲೂ ಚಿತ್ರರಂಗಕ್ಕೆ ಜೀವಂತಿಕೆಯನ್ನು ತರುತ್ತಾರೆ. ಈ ಸಿನಿಮಾದ ಕಲಾವಿದರು, ತಂತ್ರಜ್ಞರು ಯಾರೂ ನನಗೆ ಮೊದಲಿನಿಂದ ಪರಿಚಿತರಲ್ಲ. ಆದರೆ ಒಳ್ಳೆಯ ಕಂಟೆಂಟ್‌ ಇರುವ ಸಿನಿಮಾ ಮಾಡುವ ಅವರ ಪ್ರಾಮಾಣಿಕ ಪ್ರಯತ್ನ ನನಗೆ ಇಷ್ಟ ಆಗಿದ್ದರಿಂದ ಟ್ರೇಲರ್‌ ಬಿಡುಗಡೆ ಮಾಡಲು ಒಪ್ಪಿಕೊಂಡೆ. ಕಥಾಹಂದರ, ಮೇಕಿಂಗ್‌, ಟೀಸರ್‌, ಹಾಡುಗಳು ಎಲ್ಲವೂ ಭರವಸೆ ಮೂಡಿಸಿವೆ’ ಎಂದು ಜಯತೀರ್ಥ ಅವರು ಹೇಳಿದರು.

ನಟ ಹಾಗೂ ನಿರ್ದೇಶಕ ಪೃಥ್ವಿರಾಜ್‌ ಪಾಟೀಲ್‌ ಮಾತನಾಡಿ, ‘ಒಬ್ಬ ವ್ಯಕ್ತಿಯ ಭ್ರಮೆ ಮತ್ತು ವಾಸ್ತವದ ನಡುವಿಣ ಚಿತ್ರಣ ಈ ಸಿನಿಮಾದಲ್ಲಿದೆ. ವೈಜ್ಞಾನಿಕ ಅಂಶಗಳನ್ನು ಆಧರಿಸಿ ತಜ್ಞರ ಸಲಹೆಯ ಮೇರೆಗೆ ಈ ಸಿನಿಮಾದ ಪಾತ್ರಗಳನ್ನು ಹೆಣೆದು ಸನ್ನಿವೇಶಗಳನ್ನು ಚಿತ್ರಿಸಿದ್ದೇವೆ. ಮನುಷ್ಯನ ಮನಸ್ಸಿನ ಸುಪ್ತ ಭಾವನೆಗಳು, ತುಮುಲ ತಲ್ಲಣಗಳನ್ನು ಈ ಸಿನಿಮಾ ಮೂಲಕ ಪ್ರೇಕ್ಷಕರ ಮುಂದೆ ತರುತ್ತಿದ್ದೇವೆ’ ಎಂದರು.

‘ವಿಕಲ್ಪ’ ಸಿನಿಮಾದ ಟ್ರೇಲರ್:

ರಂಗಭೂಮಿ ಹಿನ್ನೆಲೆಯಿಂದ ಬಂದಿರುವ ನಾಗಶ್ರೀ ಹೆಬ್ಬಾರ್‌ ಅವರು ಈ ಚಿತ್ರಕ್ಕೆ ನಾಯಕಿ ಆಗಿದ್ದಾರೆ. ಇದು ಅವರ ಮೊದಲ ಸಿನಿಮಾ. ಇದರಲ್ಲಿ ಸಮುದ್ಯತಾ ಎಂಬ ಹೆಸರಿನ ಪಾತ್ರವನ್ನು ಅವರು ಮಾಡಿದ್ದಾರೆ. ಈ ಸಿನಿಮಾ ಮೇಲೆ ಅವರು ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಈ ಸಿನಿಮಾದಲ್ಲಿ ನಟಿ ಹರಿಣಿ ಶ್ರೀಕಾಂತ್‌ ಅವರು ಮನಶಾಸ್ತ್ರಜ್ಞೆಯ ಪಾತ್ರ ಮಾಡಿದ್ದಾರೆ.

ಇದನ್ನೂ ಓದಿ: ನಿರೀಕ್ಷೆ ಮೂಡಿಸಿದ ‘ವಿಕಲ್ಪ’ ಟೀಸರ್; ಇದು ವಾಸ್ತವ ಮತ್ತು ಭ್ರಮೆಯ ನಡುವಿನ ಕಥೆ

‘ಖಂಡಿತವಾಗಿಯೂ ಇಂಥ ಸಿನಿಮಾಗಳು ಕನ್ನಡ ಪ್ರೇಕ್ಷಕರಿಗೆ ಇಷ್ಟವಾಗುತ್ತದೆ. ಇಂಥ ಹೊಸಬರ ಪ್ರಯತ್ನಗಳಿಗೆ ಎಲ್ಲರ ಬೆಂಬಲ, ಸಹಕಾರವಿರಲಿ’ ಎಂದು ಹರಿಣಿ ಶ್ರೀಕಾಂತ್‌ ಅವರು ಹೇಳಿದ್ದಾರೆ. ಬೆಂಗಳೂರು, ಕುಂದಾಪುರ, ತೀರ್ಥಹಳ್ಳಿ, ಸಾಗರ, ಶಿರಸಿ, ಯಲ್ಲಾಪುರ ಹಾಗೂ ವಿದೇಶದಲ್ಲೂ ಈ ಸಿನಿಮಾದ ಚಿತ್ರೀಕರಣ ಮಾಡಲಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.