ಸಿಹಿ ಕಹಿ ಚಂದ್ರು ಚಿತ್ರರಂಗದ ಹಿರಿಯ ನಟ, ಟಿವಿ ಲೋಕದ ಜನಪ್ರಿಯ ತಾರೆ. ಸಿಹಿ ಕಹಿ ಚಂದ್ರು ಅವರಿಗೆ ಕನ್ನಡ ಮನರಂಜನಾ ಕ್ಷೇತ್ರದೊಂದಿಗೆ ದಶಕಗಳ ನಂಟಿದೆ. ಇಂದು ಸ್ಟಾರ್ ಗಳಾಗಿರುವ ಹಲವರು ಸಿಹಿ ಕಹಿ ಚಂದ್ರು ಅವರ ಯೌವ್ವನದ ಗೆಳೆಯರು. ಈಗಿನ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಸಹ ಸಿಹಿ ಕಹಿ ಚಂದ್ರು ಅವರು ಬಲು ಹಳೆಯ ಮಿತ್ರರು. ನಟ ಪ್ರಕಾಶ್ ರೈ ಅಂತೂ ಸಿಹಿ ಕಹಿ ಚಂದ್ರು ಅವರೊಟ್ಟಿಗೆ ಒಂದೇ ರೂಂನಲ್ಲಿ ನೆಲೆಸಿದ್ದವರು. ಪ್ರಕಾಶ್ ರೈ ಜೊತೆಗೆ ಕಳೆದ ದಿನಗಳನ್ನು ಸಿಹಿ ಕಹಿ ಚಂದ್ರು ಸಂದರ್ಶನವೊಂದರಲ್ಲಿ ವಿವರಿಸಿದ್ದಾರೆ.
ಪ್ರಕಾಶ್ ರೈ, ಸಿಹಿ ಕಹಿ ಚಂದ್ರು ಮತ್ತು ಗ್ರಾಫ್ ಎಂಬ ಮೂವರು ಒಂದೇ ರೂಂನಲ್ಲಿ ಇರುತ್ತಿದ್ದರಂತೆ. ಆಗ ಅವರಿಗೆ ರೇಷನ್ ಖರೀದಿಸಲು ಸಹ ಹಣ ಇರುತ್ತಿರಲಿಲ್ಲವಂತೆ. ಬಹಳ ಕಷ್ಟದ ಜೀವನ ಅದು, ಯಾರಿಗೂ ಕೆಲಸ ಇರಲಿಲ್ಲ. ಇರುವುದರಲ್ಲಿ ಸಿಹಿ ಕಹಿ ಚಂದ್ರು ಆಗೊಮ್ಮೆ ಈಗೊಮ್ಮೆ 100-200 ದುಡಿಯುತ್ತಿದ್ದರಂತೆ. ಆಗ ರೂಂಗೆ ರೇಷನ್ ತರುತ್ತಿದ್ದರಂತೆ. ಯಾವಾಗ ಹಣ ಇರುತ್ತಿರಲಿಲ್ಲವೊ, ಸಿಹಿ-ಕಹಿ ಚಂದ್ರು, ತಮ್ಮ ರೂಂ ಅನ್ನು ಆ ಏರಿಯಾದ ಕುಡುಕರಿಗೆ ಬಾಡಿಗೆಗೆ ಕೊಟ್ಟು ಬಿಡುತ್ತಿದ್ದರಂತೆ!
ಹೌದು, ಏರಿಯಾದ ಕುಡುಕ ಗೆಳೆಯರಿಗೆ ಹೇಳಿ, ಇವತ್ತು ನಮ್ಮ ರೂಂನಲ್ಲಿ ಪಾರ್ಟಿ ಮಾಡಿಕೊಳ್ಳಿ ಎನ್ನುತ್ತಿದ್ದರಂತೆ. ಎಲ್ಲರೂ ಬಂದು ಪಾರ್ಟಿ ಮಾಡಿ ಎಣ್ಣೆ ಹೊಡೆದು ಹೋಗುತ್ತಿದ್ದರಂತೆ. ಕೊನೆಗೆ 20-25 ಬಾಟಲಿಗಳು ಖಾಲಿ ಆಗುತ್ತಿದ್ದವಂತೆ, ಆ ಬಾಟಲಿಗಳನ್ನು ಸಂಗ್ರಹಿಸಿ ಅವನ್ನು ಮಾರಾಟ ಮಾಡಿ ರೇಷನ್ ಖರೀದಿ ಮಾಡಿದ ದಿನಗಳು ಸಹ ಇವೆಯಂತೆ.
ಇದನ್ನೂ ಓದಿ:ನಟಿಗೂ ಕಿರುಕುಳ ಕೊಟ್ಟಿದ್ದ, ಸಂಬರ್ಗಿಯನ್ನು ಸುಮ್ಮನೆ ಬಿಡಲ್ಲ: ಪ್ರಕಾಶ್ ರೈ
ಒಮ್ಮೆ ಪ್ರಕಾಶ್ ರೈ, ಸಿಹಿ ಕಹಿ ಚಂದ್ರು ಬಳಿ ನಾನು ಒಮ್ಮೆಯೂ ಸಹ ಜೀವನದಲ್ಲಿ ಫೈವ್ ಸ್ಟಾರ್ ಹೋಟೆಲ್ಗೆ ಹೋಗಿಲ್ಲ ಅಂದರಂತೆ. ಕೂಡಲೇ ಸಿಹಿ ಕಹಿ ಚಂದ್ರು, ಸರಿ ಎಲ್ಲರೂ ನಿಮ್ಮ ಬಳಿ ಹಣ ಎಷ್ಟಿದೆ ಹುಡುಕಿ ಎಂದು ಹೇಳಿದ್ದಾರೆ, ಎಲ್ಲವನ್ನೂ ತಡಕಾಡಿದರೆ 25 ರೂಪಾಯಿ ಸಿಕ್ಕಿದೆ. ಸರಿ ಎಂದು ರಾಜಾಜಿನಗರದಿಂದ ವಿಂಡ್ಸರ್ಮ್ಯಾನರ್ ಹೋಟೆಲ್ಗೆ ನಡೆದುಕೊಂಡೇ ಬಂದರಂತೆ. ಬಂದು ಅಲ್ಲಿ ಬೈಟು ಕಾಫಿ ಆರ್ಡರ್ ಮಾಡಿದರಂತೆ. ಬೈಟು ಕಾಫಿಯ ಬೆಲೆ ಆಗಲೇ 25 ರೂಪಾಯಿಗಳಿತ್ತಂತೆ. ಬಂದ ಕಾಫಿಯನ್ನು ಮೂವರೂ ಕುಡಿದು, ಖುಷಿಯಿಂದ ರೂಂಗೆ ನಡೆಯುತ್ತಲೇ ಹೊರಟರಂತೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ