ದಕ್ಷಿಣ ಭಾರತದ ಪ್ರತಿಷ್ಠಿತ ಪ್ರಶಸ್ತಿ ಸೈಮಾ ಸಮಾರಂಭದ 2024ನೇ ವರ್ಷದ ಆವೃತ್ತಿ ಶೀಘ್ರವೇ ನಡೆಯಲಿದೆ. 2024ರ ಸೈಮಾ ಪ್ರಶಸ್ತಿ ಸಮಾರಂಭ ದುಬೈನಲ್ಲಿ ಸೆಪ್ಟಂಬರ್ 14 ಮತ್ತು 15ರಂದು ನಡೆಯಲಿದೆ. ಇದರ ಭಾಗವಾಗಿ ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ಇತ್ತೀಚೆಗೆ ಸುದ್ದಿಗೋಷ್ಠಿ ಆಯೋಜಿಸಲಾಗಿತ್ತು. ನಟ ಡಾಲಿ ಧನಂಜಯ್, ಬೃಂದಾ ಪ್ರಸಾದ್ ಸೇರಿದಂತೆ ಕೆಲವು ನಟಿಯರು, ಸೈಮಾನ ಆಯೋಜಕರು ಸಹ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನಟ ಡಾಲಿ ಧನಂಜಯ್, ‘ಸೈಮಾ ಎಂದರೆ ನಮಗೆ ಖುಷಿ. ಈ ಬಾರಿ ದುಬೈನಲ್ಲಿ ಮತ್ತೆ ಸೈಮಾ ಆಗುತ್ತಿದೆ. ಸೈಮಾ ನನಗೆ ಅದ್ಭುತ ಮೆಮೋರಿ ಕ್ರಿಯೇಟ್ ಮಾಡುವ ಜಾಗ. ಕಳೆದ ವರ್ಷ ನನ್ನ ಹುಟ್ಟುಹಬ್ಬಕ್ಕೆ ಇಂಡಸ್ಟ್ರೀಗೆಲ್ಲಾ ನಾನು ಪಾರ್ಟಿ ಕೊಟ್ಟಿದೆ. ಈ ಬಾರಿ ನನಗೆ ಸೈಮಾದಿಂದ ಪಾರ್ಟಿ ಕೊಡುತ್ತಿದ್ದಾರೆ. ಎಲ್ಲಾ ಇಂಡಸ್ಟ್ರೀಯ ಕಲಾವಿದರು, ನಿರ್ದೇಶಕರನ್ನು ನೋಡುವ ಒಳ್ಳೆ ವೇದಿಕೆ. ಈ ರೀತಿಯ ಇವೆಂಟ್ ಚೆನ್ನಾಗಿರುತ್ತವೆ, ಸೈಮಾ ಎಂದಾಗ ನಮ್ಮ ಪ್ರೆಸೆಂಟ್ ಇರುತ್ತದೆ. ಲಿರಿಕ್ಸ್ ಕೆಟಗರಿಯಲ್ಲಿ ನಾನು ನಾಮಿನೇಟ್ ಮಾಡಲಾಗಿದೆ. ಸೈಮಾ ಅನ್ನುವುದು ಸೆಲೆಬ್ರೆಷನ್ ಎಂದರು.
ಬೃಂದಾ ಪ್ರಸಾದ್ ಮಾತನಾಡಿ, ಈ ಬಾರಿ ನಡೆಯುತ್ತಿರುವುದು 12ನೇ ಆವೃತ್ತಿ ಸೈಮಾ. 12 ಬರೀ ನಂಬರ್ ಅಲ್ಲ. ಅದೊಂದು ಸುಂದರ ಪಯಣ. ದಕ್ಷಿಣ ಭಾರತದಲ್ಲಿ ಪ್ರತಿ ವರ್ಷ ನಡೆಯುವ ಪ್ರತಿಷ್ಠಿತ ಪ್ರಶಸ್ತಿ ಎಂಬ ಹೆಗ್ಗಳಿಕೆಗೆ ಸೈಮಾ ಭಾಜನವಾಗಿದೆ. ದಕ್ಷಿಣ ಸಿನಿರಂಗದ ಪ್ರತಿಭೆಗಳನ್ನು ಗುರುತಿಸಿ ಅಂತರಾಷ್ಟ್ರೀಯ ಮಟ್ಟದಲ್ಲಿ ಸಂಭ್ರಮಿಸುವ ಸೈಮಾದಲ್ಲಿ ನಾಲ್ಕು ಇಂಡಸ್ಟ್ರೀಗಳು ಒಂದೇ ಕುಟುಂಬದಂತೆ ಭಾಗಿಯಾಗುತ್ತಾರೆ ಎಂದು ತಿಳಿಸಿದರು.
ಇದನ್ನೂ ಓದಿ:‘ಶಾಂತಿಯ ತೋಟದ ಹಣ್ಣಿಗೆ ಬೆಲೆ ಇಲ್ಲ’; ಕ್ರಾಂತಿಯ ಕಥೆ ಹೇಳಲು ಬಂದ ಡಾಲಿ ಧನಂಜಯ್
ನಿಧಿ ಅಗರ್ವಾಲ್ ಮಾತನಾಡಿ, ನಾನು ಇಲ್ಲಿ ಭಾಗಿಯಾಗಿರುವುದಕ್ಕೆ ಬಹಳಷ್ಟು ಖುಷಿಯಾಗಿದೆ. ಪ್ರತಿ ವರ್ಷ ನಡೆಯುವ ಸೈಮಾ ಸಂಭ್ರಮದಲ್ಲಿ ನಾನು ಭಾಗಿಯಾಗುತ್ತಿದ್ದೇನೆ. ಸೈಮಾ ಎನ್ನುವುದು ಅಮೇಜಿಂಗ್ ಶೋ. ಸೈಮಾದಲ್ಲಿ ಎಲ್ಲರನ್ನೂ ನೋಡುವುದು ಖುಷಿ ಎಂದರು. ನಟಿ ಶಾನ್ವಿ ಶ್ರೀವಾಸ್ತವ್ ಮಾತನಾಡಿ, ಸೈಮಾ ಎನ್ನುವುದು ಹೋಳಿ, ದೀಪಾವಳಿ ರೀತಿ ಹಬ್ಬ. ಪ್ರತಿ ವರ್ಷದಂತೆ ಈ ವರ್ಷ ಸೈಮಾ ಮತ್ತೆ ಬಂದಿದೆ. ನಾನು ಸೆಲೆಬ್ರೆಟ್ ಮಾಡಲು ಕಾಯುತ್ತಿದ್ದೇವೆ. ಎಲ್ಲಾ ಇಂಡಸ್ಟ್ರೀಯ ಕಲಾವಿದರು ಒಂದು ಜಾಗದಲ್ಲಿ ಒಂದು ಸಮಾರಂಭದಲ್ಲಿ ಭಾಗಿಯಾಗಿ ಸಿನಿಮಾವನ್ನು ಸಂಭ್ರಮಿಸುತ್ತೇವೆ ಎಂದರು.
ಈಗಾಗಲೇ ಸೈಮಾ ಪ್ರಶಸ್ತಿಗೆ ನಾಮಿನೇಷನ್ಸ್ ಆರಂಭವಾಗಿದೆ. ‘ಕಾಟೇರ’ ಹಾಗೂ ಸಪ್ತಸಾಗರದಾಚೆ ಎಲ್ಲೋ ಸೈಡ್-ಎ ಸಿನಿಮಾಗಳು ಸೈಮಾ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿವೆ. ತರುಣ್ ಸುಧೀರ್ ನಿರ್ದೇಶನದ ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ಕಾಟೇರ ಚಿತ್ರ 8 ವಿಭಾಗಗಳಲ್ಲಿ ನಾಮಿನೇಟ್ ಆಗಿದೆ. ಅತ್ತ ರಕ್ಷಿತ್ ಶೆಟ್ಟಿ ನಟನೆಯ, ಹೇಮಂತ್ ರಾವ್ ನಿರ್ದೇಶನದ ಸಪ್ತಸಾಗರದಾಚೆ ಎಲ್ಲೋ ಸೈಡ್-ಎ ಚಿತ್ರ 7 ವಿಭಾಗಗಳಲ್ಲಿ ನಾಮನಿರ್ದೇಶನಗೊಂಡಿದೆ.
ಇದನ್ನೂ ಓದಿ:ತಮಿಳು, ತೆಲುಗು ಚಿತ್ರರಂಗದಿಂದ ಇಲಿಯಾನಾ ಬ್ಯಾನ್ ಆಗಿದ್ದು ಏಕೆ?
ತೆಲುಗಿನಲ್ಲಿ, ನಾನಿ ಮತ್ತು ಕೀರ್ತಿ ಸುರೇಶ್ ಅಭಿನಯದ ಶ್ರೀಕಾಂತ್ ಒಡೆಲಾ ನಿರ್ದೇಶನದ ‘ದಸರಾ’ ಚಿತ್ರ 11 ವಿಭಾಗಗಳಲ್ಲಿ ನಾಮನಿರ್ದೇಶನಗೊಂಡಿದ್ದು, ನಾನಿ ಮತ್ತು ಮೃಣಾಲ್ ಠಾಕೂರ್ ಅಭಿನಯದ ‘ಹಾಯ್ ನನ್ನಾ’ 10 ವಿಭಾಗಗಳಲ್ಲಿ ನಾಮಿನೇಷನ್ ಗೊಂಡಿದೆ. ತಮಿಳಿನಲ್ಲಿ, ರಜನಿಕಾಂತ್ ಅಭಿನಯದ ನೆಲ್ಸನ್ ದಿಲೀಪ್‌ಕುಮಾರ್ ನಿರ್ದೇಶನದ ‘ಜೈಲರ್’ 11 ವಿಭಾಗದಲ್ಲಿ ನಾಮನಿರ್ದೇಶನಗಳೊಂದಿಗೆ ಮುಂಚೂಣಿಯಲ್ಲಿದ್ದರೆ, ಉದಯನಿಧಿ ಸ್ಟಾಲಿನ್ ಮತ್ತು ಕೀರ್ತಿ ಸುರೇಶ್ ಅಭಿನಯದ ‘ಮಾಮಣ್ಣನ್’ ಸಿನಿಮಾ 9 ವಿಭಾಗಗಳಲ್ಲಿ ನಾಮನಿರ್ದೇಶನಗೊಂಡಿದೆ. ಮಲಯಾಳಂನಲ್ಲಿ, ಟೊವಿನೋ ಥಾಮಸ್ ಮತ್ತು ಆಸಿಫ್ ಅಲಿ ಅಭಿನಯದ ಜೂಡ್ ಆಂಥನಿ ಜೋಸೆಫ್ ನಿರ್ದೇಶನದ ‘2018’ ಸಿನಿಮಾ 8 ವಿಭಾಗಗಳಲ್ಲಿ ನಾಮನಿರ್ದೇಶನಗೊಂಡಿದೆ, ಮಮ್ಮುಟ್ಟಿ ಮತ್ತು ಜ್ಯೋತಿಕಾ ಅಭಿನಯದ ‘ಕಾತಲ್ – ದಿ ಕೋರ್’ 7 ವಿಭಾಗಗಳಲ್ಲಿ ನಾಮಿನೇಷನ್ ಆಗಿದೆ. ಆನ್‌ಲೈನ್ ವೋಟಿಂಗ್ ಮೂಲಕ ವಿಜೇತರನ್ನು ಆಯ್ಕೆ ಮಾಡಲಾಗುತ್ತದೆ.
ಸೈಮಾ ಅಧ್ಯಕ್ಷರಾದ ಬೃಂದಾ ಪ್ರಸಾದ್, ನಟರಾದ ಡಾಲಿ ಧನಂಜಯ್, ರಿಷಿ, ನಟಿಯರಾದ ನೇಹಾ ಶೆಟ್ಟಿ, ನಿಧಿ ಅಗರ್ವಾಲ್, ಅವಿಕಾ ಗೋರ್, ಶಾನ್ವಿ ಶ್ರೀವಾಸ್ತವ್, ಶುಭ್ರ ಅಯ್ಯಪ್ಪ, ಮಾರುತಿ ಸುಜುಕಿ ಇಂಡಿಯಾಲಿಮಿಟೆಡ್ ಸೀನಿಯರ್ ಎಕ್ಸಿಕ್ಯೂಟಿವ್ ಆಫೀಸರ್ ನೊಬುಟಾಕಾ ಸುಜುಕಿ, ಕಾನ್ಫಿಡೆಂಟ್ ಗ್ರೂಪ್ ಅಧ್ಯಕ್ಷ ರಾಯ್ ಸಿಜೆ ಸೇರಿದಂತೆ ಹಲವರು ಭಾಗಿಯಾಗಿದ್ದರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ