
ಇತ್ತೀಚೆಗೆ ದುಬೈನಲ್ಲಿ ನಡೆದ ಸೈಮಾ ಪ್ರಶಸ್ತಿ (SIIMA Awards) ಪ್ರದಾನ ಸಮಾರಂಭದಲ್ಲಿ ನಟ ದುನಿಯಾ ವಿಜಯ್ (Duniya Vijay) ಅವರು ಗರಂ ಆಗಿದ್ದರು. ಕನ್ನಡ ಚಿತ್ರರಂಗದವರನ್ನು ಸರಿಯಾಗಿ ಗೌರವಿಸಿಲ್ಲ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದರು. ಅವರು ಮಾತನಾಡಿದ ವಿಡಿಯೋ ಸಖತ್ ವೈರಲ್ ಆಯಿತು. ಸೋಶಿಯಲ್ ಮೀಡಿಯಾದಲ್ಲಿ ನೆಟ್ಟಿಗರು ಹಲವು ಬಗೆಯ ಕಮೆಂಟ್ ಮಾಡಿದರು. ಈಗ ಸೈಮಾ ಸಂಸ್ಥಾಪಕ ವಿಷ್ಣುವರ್ಧನ್ ಇಂದೂರಿ (Vishnu Vardhan Induri) ಅವರು ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ಸೈಮಾದಲ್ಲಿ ಮೊದಲಿನಿಂದಲೂ ಕನ್ನಡ ಚಿತ್ರರಂಗವನ್ನು ಯಾವ ರೀತಿ ನಡೆಸಿಕೊಳ್ಳಲಾಗಿದೆ ಎಂಬುದರ ಬಗ್ಗೆ ಅವರು ಸ್ಪಷ್ಟನೆ ನೀಡಿದ್ದಾರೆ.
‘ಕನ್ನಡ ಚಿತ್ರರಂಗವನ್ನು ಸೈಮಾ ನಡೆಸಿಕೊಳ್ಳುವ ರೀತಿಗೆ ಸಂಬಂಧಿಸಿದಂತೆ ಸಾಮಾಜಿಕ ಮಾಧ್ಯಮ ಮತ್ತು ಸುದ್ದಿ ಮಾಧ್ಯಮಗಳಲ್ಲಿ ಕೆಲವು ಪೋಸ್ಟ್‌ಗಳನ್ನು ನಾನು ನೋಡಿದ್ದೇನೆ. ಸೈಮಾದಲ್ಲಿ ನಾವು ಯಾವಾಗಲೂ ದಕ್ಷಿಣ ಭಾರತದ ನಾಲ್ಕು ಚಿತ್ರರಂಗಗಳ ಬಗ್ಗೆ ಅಪಾರ ಗೌರವ ಮತ್ತು ಪ್ರೀತಿಯನ್ನು ಹೊಂದಿದ್ದೇವೆ. ಕಳೆದ 13 ಆವೃತ್ತಿಗಳಲ್ಲಿ ಅವರನ್ನು ಸಮಾನವಾಗಿ ನಡೆಸಿಕೊಂಡಿದ್ದೇವೆ ಎಂಬುದನ್ನು ನಾನು ಸ್ಪಷ್ಟಪಡಿಸಲು ಬಯಸುತ್ತೇನೆ’ ಎಂದು ವಿಷ್ಣುವರ್ಧನ್ ಇಂದೂರಿ ಅವರು ಹೇಳಿಕೆ ಬಿಡುಗಡೆ ಮಾಡಿದ್ದಾರೆ.
‘ಸೈಮಾದಲ್ಲಿ ಮೊದಲ ದಿನ ತೆಲುಗು ಮತ್ತು ಕನ್ನಡಕ್ಕೆ, ಎರಡನೇ ದಿನ ತಮಿಳು ಮತ್ತು ಮಲಯಾಳಂಗೆ ಮೀಸಲಾಗಿರುತ್ತದೆ. ಛಾಯಾಗ್ರಹಣದಿಂದ ಹಿಡಿದು ಅತ್ಯುತ್ತಮ ನಟನವರೆಗೆ ಎಲ್ಲಾ ಭಾಷೆಗಳಲ್ಲಿ ಪ್ರತಿಯೊಂದು ಪ್ರಶಸ್ತಿ ವಿಭಾಗವನ್ನು ಅನುಕ್ರಮವಾಗಿ ವಿತರಿಸಲಾಗುತ್ತದೆ. ಅಪಾರ ಸವಾಲುಗಳ ಹೊರತಾಗಿಯೂ, ವರ್ಷದಿಂದ ವರ್ಷಕ್ಕೆ ನಾಲ್ಕು ದಕ್ಷಿಣ ಭಾರತದ ಭಾಷೆಗಳನ್ನು ನಿರಂತರವಾಗಿ ಗೌರವಿಸುತ್ತಿರುವ ಏಕೈಕ ಪ್ರಶಸ್ತಿ ವೇದಿಕೆ ಸೈಮಾ ಆಗಿದೆ’ ಎಂದು ವಿಷ್ಣುವರ್ಧನ್ ಇಂದೂರಿ ಹೇಳಿದ್ದಾರೆ.
‘ಅನೇಕ ವರ್ಷಗಳಿಂದ ಕನ್ನಡ ಚಿತ್ರರಂಗವನ್ನು ಸೈಮಾ ಹಲವು ವಿಧಗಳಲ್ಲಿ ಬೆಂಬಲಿಸಿದೆ. ‘ಸೈಮಾದಲ್ಲಿ ಮೊಟ್ಟಮೊದಲ ಜೀವಮಾನ ಸಾಧನೆ ಪ್ರಶಸ್ತಿಯನ್ನು ನಮ್ಮ ಪ್ರೀತಿಯ ಅಂಬರೀಷ್ ಅವರಿಗೆ ನೀಡಲಾಯಿತು. ನಮ್ಮ ಆರಂಭಿಕ ದಿನಗಳಲ್ಲಿ ಅವರ ಆಶೀರ್ವಾದ ಮತ್ತು ಬೆಂಬಲವನ್ನು ಪಡೆಯುವ ಅದೃಷ್ಟ ನಮ್ಮದಾಗಿತ್ತು. ಪುನೀತ್ ರಾಜ್‌ಕುಮಾರ್ ಯಾವಾಗಲೂ ಆಧಾರಸ್ತಂಭವಾಗಿದ್ದರು. ಅವರಿಗೆ ಗೌರವ ಸೂಚಿಸಲು, ಅವರ ನಿಧನದ ನಂತರ ನಾವು ಬೆಂಗಳೂರಿನಲ್ಲಿ ಸೈಮಾ ಆಯೋಜಿಸಿದ್ದೆವು’ ಎಂದಿದ್ದಾರೆ ವಿಷ್ಣುವರ್ಧನ್ ಇಂದೂರಿ.
‘ಯಶ್ ಆರಂಭದ ದಿನಗಳಿಂದಲೂ ಸೈಮಾದ ಭಾಗವಾಗಿದ್ದಾರೆ. ನಾವು ಸೈಮಾದಲ್ಲಿ ಕೆಜಿಎಫ್ ಸಿನಿಮಾ ಹೆಮ್ಮೆಯಿಂದ ಪ್ರಚಾರ ಮಾಡಿದ್ದೇವೆ. ಬಿಡುಗಡೆಗೂ ಮುಂಚೆಯೇ ಅದನ್ನು ಜಗತ್ತಿಗೆ ಪ್ರದರ್ಶಿಸಲು ಒಂದು ವೇದಿಕೆಯನ್ನು ಸೃಷ್ಟಿಸಿದ್ದೆವು. ಬೇರೆ ಯಾವುದೇ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾಗವಹಿಸದ ದರ್ಶನ್ ಅವರು ಸೈಮಾಗೆ ಮಾತ್ರ ಹಾಜರಾಗಿದ್ದರು’ ಎಂದು ವಿಷ್ಣುವರ್ಧನ್ ಇಂದೂರಿ ತಿಳಿಸಿದ್ದಾರೆ.
ಇದನ್ನೂ ಓದಿ: ಸೈಮಾನಲ್ಲಿ ಕನ್ನಡಿಗರಿಗೆ ಅವಮಾನ: ನಿಜಕ್ಕೂ ನಡೆದಿದ್ದೇನೆಂದು ವಿವರಿಸಿದ ದುನಿಯಾ ವಿಜಿ
‘ಶಿವಣ್ಣನ ಬಗ್ಗೆ ನಮಗೆ ಅಪಾರ ಪ್ರೀತಿ ಮತ್ತು ಗೌರವವಿದೆ. ಎಲ್ಲರಿಗಿಂತ ಮೊದಲೇ ಶಿವಣ್ಣ ಅವರ 50 ವರ್ಷಗಳ ಸಂಭ್ರಮವನ್ನು ಆಚರಿಸಿದ ಕಾರ್ಯಕ್ರಮ ನಮ್ಮದಾಗಿತ್ತು. ಸುದೀಪ್ ಅವರಿಗೆ ಸೈಮಾದಲ್ಲಿ ಅನೇಕ ಬಾರಿ ಅತ್ಯುತ್ತಮ ನಟ ಪ್ರಶಸ್ತಿ ನೀಡಲಾಗಿದೆ. ಇತ್ತೀಚೆಗೆ ಉಪೇಂದ್ರ ಅವರು ಕಾರ್ಯಕ್ರಮದ ನಂತರ ವೈಯಕ್ತಿಕವಾಗಿ ನನ್ನೊಂದಿಗೆ ಮಾತನಾಡಿದರು ಮತ್ತು ಕನ್ನಡ ಉದ್ಯಮದ ಪರವಾಗಿ ತಮ್ಮ ಸಂಪೂರ್ಣ ಬೆಂಬಲವನ್ನು ನೀಡಿದರು’ ಎಂದಿದ್ದಾರೆ ವಿಷ್ಣುವರ್ಧನ್ ಇಂದೂರಿ.
ಇದನ್ನೂ ಓದಿ: ಸೈಮಾ ವೇದಿಕೆಯಲ್ಲಿ ದುನಿಯಾ ವಿಜಿ ಕೋಪ ಮಾಡಿಕೊಂಡಿದ್ದು ತಪ್ಪಲ್ಲ: ಜಾಕ್ ಪ್ರತಿಕ್ರಿಯೆ
‘ದುನಿಯಾ ವಿಜಯ್ ಅವರಿಗೆ ಗೌರವ ಸಲ್ಲಿಸುತ್ತ, ನಾನು ಈಗಾಗಲೇ ಪ್ರಸಾರ ವಾಹಿನಿಯಲ್ಲಿ ಅವರ ಭಾಷಣ ಮತ್ತು ನಿರೂಪಕರ ಸಂಭಾಷಣೆಯನ್ನು ಯಾವುದೇ ಕಡಿತಗಳಿಲ್ಲದೆ ಸಂಪೂರ್ಣವಾಗಿ ಪ್ರಸಾರ ಮಾಡುವಂತೆ ವಿನಂತಿಸಿದ್ದೇನೆ. ಇದರಿಂದ ಅವರ ಅಭಿಪ್ರಾಯ ಪೂರ್ಣವಾಗಿ ಕೇಳಿಸುತ್ತದೆ. ಸೈಮಾ ಕೇವಲ ಪ್ರಶಸ್ತಿ ಪ್ರದಾನ ಸಮಾರಂಭವಲ್ಲ. ಇದು ದಕ್ಷಿಣ ಭಾರತದ 4 ಉದ್ಯಮಗಳನ್ನು ಒಟ್ಟಿಗೆ ಬೆಸೆಯುವ ಒಂದು ಕುಟುಂಬ. ಪ್ರತಿ ವರ್ಷ ಇಂತಹ ಪ್ರದರ್ಶನವನ್ನು ಆಯೋಜಿಸುವುದು ಒತ್ತಡದ ಮತ್ತು ಸವಾಲಿನ ಸಂಗತಿಯಾಗಿದೆ. ಆದರೆ ನಾವು ಅದನ್ನು ಸಿನಿಮಾದ ಮೇಲಿನ ಪ್ರೀತಿ ಮತ್ತು ಹೆಮ್ಮೆಯಿಂದ ಮಾಡುತ್ತೇವೆ’ ಎಂದು ವಿಷ್ಣುವರ್ಧನ್ ಇಂದೂರಿ ಹೇಳಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.