AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸೈಮಾನಲ್ಲಿ ಕನ್ನಡಿಗರಿಗೆ ಅವಮಾನ: ನಿಜಕ್ಕೂ ನಡೆದಿದ್ದೇನೆಂದು ವಿವರಿಸಿದ ದುನಿಯಾ ವಿಜಿ

Duniya Vijay about SIIMA: ದುಬೈನಲ್ಲಿ ನಡೆಯುತ್ತಿರುವ ‘ಸೈಮಾ 2025’ನಲ್ಲಿ ಕನ್ನಡದ ಅತ್ಯುತ್ತಮ ಸಿನಿಮಾ, ತಂತ್ರಜ್ಞರಿಗೆ ಪ್ರಶಸ್ತಿ ನೀಡಲಾಗಿದೆ. ಆದರೆ ಕಾರ್ಯಕ್ರಮದಲ್ಲಿ ಕನ್ನಡದ ಸೆಲೆಬ್ರಿಟಿಗಳಿಗೆ ಅವಮಾನ ಮಾಡಲಾಗಿದೆ ಎಂಬ ಆರೋಪ ಕೇಳಿ ಬಂದಿದೆ. ನಟ ದುನಿಯಾ ವಿಜಯ್ ಅವರು ನಿಜಕ್ಕೂ ಸೈಮಾನಲ್ಲಿ ನಡೆದಿದ್ದೇನು ಎಂದು ವಿವರಿಸಿದ್ದಾರೆ.

ಸೈಮಾನಲ್ಲಿ ಕನ್ನಡಿಗರಿಗೆ ಅವಮಾನ: ನಿಜಕ್ಕೂ ನಡೆದಿದ್ದೇನೆಂದು ವಿವರಿಸಿದ ದುನಿಯಾ ವಿಜಿ
Duniya Vijay At Siima
ಮಂಜುನಾಥ ಸಿ.
|

Updated on: Sep 06, 2025 | 4:02 PM

Share

ಸೈಮಾ 2025 ಪ್ರಶಸ್ತಿ ವಿತರಣೆ ಸಮಾರಂಭ ದುಬೈನಲ್ಲಿ ನಡೆಯುತ್ತಿದೆ. ನಿನ್ನೆ (ಸೆಪ್ಟೆಂಬರ್ 05) ನಡೆದ ಕಾರ್ಯಕ್ರಮದಲ್ಲಿ ಕನ್ನಡ ಮತ್ತು ತೆಲುಗು ಭಾಷೆಯ ನಟ-ನಟಿಯರು ಮತ್ತು ತಂತ್ರಜ್ಞರುಗಳಿಗೆ ಪ್ರಶಸ್ತಿ ನೀಡಲಾಗಿದೆ. ಆದರೆ ನಿನ್ನೆ ನಡೆದ ಕಾರ್ಯಕ್ರಮದಲ್ಲಿ ಕನ್ನಡಿಗರಿಗೆ ಅವಮಾನ ಮಾಡಲಾಗಿದೆ ಎಂಬ ಆರೋಪ ಕೇಳಿ ಬಂದಿದೆ. ಅಸಲಿಗೆ ಈ ಹಿಂದೆಯೂ ಸಹ ಕನ್ನಡಿಗರು ಸೈಮಾನಲ್ಲಿ ಅವಮಾನ ಎದುರಿಸಿದ್ದರು. ಆದರೆ ನಿನ್ನೆಯ ಕಾರ್ಯಕ್ರಮದಲ್ಲಿ ನಡೆದ ಅವಮಾನವನ್ನು ನಟ ದುನಿಯಾ ವಿಜಯ್ ನೇರವಾಗಿ ಕಾರ್ಯಕ್ರಮದ ವೇದಿಕೆಯಲ್ಲಿಯೇ ಕಟು ಶಬ್ದಗಳಲ್ಲಿ ಖಂಡಿಸಿದ್ದಾರೆ.

ಇದೀಗ ಟಿವಿ9 ಜೊತೆಗೆ ಎಕ್ಸ್​ಕ್ಲೂಸಿವ್ ಆಗಿ ಮಾತನಾಡಿರುವ ನಟ ದುನಿಯಾ ವಿಜಯ್, ನಿನ್ನೆ ಸೈಮಾನಲ್ಲಿ ನಡೆದಿದ್ದೇನು ಎಂಬುದನ್ನು ವಿವರವಾಗಿ ವಿವರಿಸಿದ್ದಾರೆ. ಟಿವಿ9 ಜೊತೆಗೆ ಮಾತನಾಡಿದ ದುನಿಯಾ ವಿಜಯ್, ‘ಇನ್ನು ಮುಂದೆ ನಾನು ಸೈಮಾಕ್ಕೆ ಹೋಗಬಾರದು ಎಂದು ನಿರ್ಧರಿಸಿದ್ದೇನೆ. ನಾನು ಮಾತ್ರವಲ್ಲ ನಾಳೆ ನನ್ನ ಮಕ್ಕಳಿಗೆ ಪ್ರಶಸ್ತಿ ಕೊಟ್ಟರೂ ಅದನ್ನೂ ಸ್ವೀಕರಿಸದಿರುವಂತೆ ಹೇಳಲಿದ್ದೇನೆ’ ಎಂದು ಬಲು ಬೇಸರದಿಂದಲೇ ಹೇಳಿದರು.

ನಿಜಕ್ಕೂ ನಿನ್ನೆ ನಡೆದಿದ್ದೇನು? ಎಂಬ ಪ್ರಶ್ನೆಗೆ ಉತ್ತರಿಸಿದ ನಟ ದುನಿಯಾ ವಿಜಯ್, ‘ಮೊದಲು ತೆಲುಗು ನಟರಿಗೆ ಪ್ರಶಸ್ತಿಗಳನ್ನು ನೀಡಲಾಯ್ತು. ಆದರೆ ಕನ್ನಡಿಗರಿಗೆ ಪ್ರಶಸ್ತಿ ನೀಡುವುದನ್ನು ಉದ್ದೇಶಪೂರ್ವಕವಾಗಿ ತಡ ಮಾಡಿದರು. ಉದ್ದೇಶಪೂರ್ವಕವಾಗಿ ಕನ್ನಡಿಗರಿಗೆ ಕೊನೆಯಲ್ಲಿ ಪ್ರಶಸ್ತಿ ವಿತರಣೆ ಮಾಡಲಾಯ್ತು. ಕನ್ನಡದ ಎಲ್ಲ ನಟ-ನಟಿಯರು, ತಂತ್ರಜ್ಞರು ಕೊನೆಯ ವರೆಗೆ ಕಾದು ಕುಳಿತುಕೊಳ್ಳುವಂತಾಯ್ತು. ಕನ್ನಡದ ನಟ-ನಟಿಯರು ವೇದಿಕೆ ಮೇಲೆ ಹೋಗುವವೇಳೆಗೆ ಬೇರೆ ಭಾಷೆಯ ಯಾವೊಬ್ಬ ಕಲಾವಿದರೂ ಅಲ್ಲಿರಲಿಲ್ಲ. ನಾವು ಕೇವಲ ಕ್ಯಾಮೆರಾ ಫುಟೇಜ್​​ಗಾಗಿ ವೇದಿಕೆ ಮೇಲೆ ಹೋದಂತಾಯ್ತು. ಇದು ಸ್ಪಷ್ಟವಾಗಿ ಕನ್ನಡಿಗರಿಗೆ ಮಾಡಿದ ಅವಮಾನ’ ಎಂದರು ದುನಿಯಾ ವಿಜಯ್.

ಇದನ್ನೂ ಓದಿ:ಸೈಮಾನಲ್ಲಿ ಮತ್ತೆ ಕನ್ನಡಿಗರಿಗೆ ಅವಮಾನ, ವೇದಿಕೆ ಮೇಲೆ ಎಚ್ಚರಿಕೆ ಕೊಟ್ಟ ದುನಿಯಾ ವಿಜಿ

‘ಇದು ಮೊದಲೇನೂ ಅಲ್ಲ, ಹಲವು ಕಡೆಗಳಲ್ಲಿ ಕನ್ನಡಿಗರಿಗೆ ಹೀಗೆ ಅವಮಾನ ಮಾಡಲಾಗಿದೆ. ಉಪೇಂದ್ರ ಅವರು ಎಂಥಹಾ ಲಿಜೆಂಡ್ ಅವರೂ ಸಹ ಪಾಪ ಕೊನೆಯ ವರೆಗೆ ಕಾದು ಕೂತಿದ್ದರು, ಅವರೂ ಸಹ ಆಯೋಜಕರ ಈ ದುರ್ವರ್ತನೆ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದರು. ನಾನು ವೇದಿಕೆ ಮೇಲೆ ಮಾತುಗಳಿಗೆ ಅವರು ಪ್ರಶಂಸೆ ವ್ಯಕ್ತಪಡಿಸಿದರು. ಸರಿಯಾಗಿ ಮಾತನಾಡಿದಿರಿ ಎಂದು ಬೆನ್ನು ತಟ್ಟಿದರು’ ಎಂದರು ವಿಜಿ.

ಪ್ರಶಸ್ತಿಯ ಆಯ್ಕೆಯ ಬಗ್ಗೆಯೂ ಅಸಮಾಧಾನ ವ್ಯಕ್ತಪಡಿಸಿದ ನಟ ದುನಿಯಾ ವಿಜಿ, ‘ನಾಮ್​​ಕೇವಾಸ್ತೆ ಪ್ರಶಸ್ತಿಗಳನ್ನು ಇಲ್ಲಿ ಕೊಡಲಾಗುತ್ತಿದೆ ಎನಿಸಿತು. ಹಲವು ಅರ್ಹರಿಗೆ ಪ್ರಶಸ್ತಿ ನೀಡಲಾಗಿದೆ ಎಂಬುದರಲ್ಲಿ ಅನುಮಾನವಿಲ್ಲ ಆದರೆ ಇನ್ನೂ ಕೆಲವು ಅರ್ಹರನ್ನು ಗುರುತಿಸಿಲ್ಲ ಎಂಬ ಬಗ್ಗೆ ಬೇಸರ ಇದೆ. ನಾನು ಈ ಹಿಂದೆ ‘ಸಲಗ’ ಮಾಡಿದಾಗ ಒಂದೇ ಒಂದು ಪ್ರಶಸ್ತಿಯನ್ನು ಸಹ ಕೊಟ್ಟಿರಲಿಲ್ಲ. ಯಾರೋ, ಮೊದಲೇ ನಿರ್ಧರಿಸಿ ಯಾರ್ಯಾರಿಗೋ ಪ್ರಶಸ್ತಿಗಳನ್ನು ಕೊಡುತ್ತಾರೆ. ನಾನು ಮುಂದಿನ ಬಾರಿ ಇಲ್ಲಿಗೆ ಬರುವುದೇ ಇಲ್ಲ’ ಎಂದಿದ್ದಾರೆ.

‘ಇಲ್ಲಿ ಮುಖ್ಯವಾದ ಸಮಸ್ಯೆ ಇರುವುದು ಆಯೋಜಕರದ್ದು. ಯಾರನ್ನು ಹೇಗೆ ನಡೆಸಿಕೊಳ್ಳಬೇಕು ಎಂಬ ಕನಿಷ್ಠ ಮಾಹಿತಿ ಅವರಿಗೆ ಇಲ್ಲ. ತೆಲುಗಿಗೆ ಒಂದು ಪ್ರಶಸ್ತಿ, ಕನ್ನಡಕ್ಕೆ ಒಂದು ಪ್ರಶಸ್ತಿ ಕೊಡುತ್ತಾ ಹೋಗಬಹುದು ಆದರೆ ಅದರ ಬದಲು ಕನ್ನಡಕ್ಕೆ ಕೊನೆಯದಾಗಿ ಕೊಟ್ಟರು. ಸುದೀಪ್ ಅವರ ಹೆಸರು ಹೇಳುವ ಸಂದರ್ಭದಲ್ಲಿ ಆಡಿಟೋರಿಯಂನಲ್ಲಿ ಒಬ್ಬರು ಸಹ ಇರಲಿಲ್ಲ. ಈಗ ನಾವು ಕನ್ನಡಿಗರು ಒಟ್ಟಾಗಿ ಒಂದು ನಿರ್ಣಯ ತೆಗೆದುಕೊಂಡು ಮುಂದಿನ ವರ್ಷ ಸೈಮಾ ಅನ್ನು ಬಾಯ್​​ಕಾಟ್ ಮಾಡಬೇಕು’ ಎಂದಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ