ಬಿಡುಗಡೆಗೆ ಸಜ್ಜಾದ ‘ಸಿಂಹರೂಪಿಣಿ’ ಸಿನಿಮಾ; ಚಿತ್ರಮಂದಿರದಲ್ಲಿ ಮಾರಮ್ಮ ದೇವಿ ದರ್ಶನ

|

Updated on: Oct 06, 2024 | 7:38 PM

ಯಶ್‌ ಶೆಟ್ಟಿ, ಅಂಕಿತಾ ಗೌಡ, ಹರೀಶ್ ರಾಯ್, ನೀನಾಸಂ ಅಶ್ವತ್ಥ್​, ದಿವ್ಯಾ ಆಲೂರು, ವಿಜಯ್‌ ಚೆಂಡೂರು, ಖುಷಿ ಬಸ್ರೂರು ಮುಂತಾದವರು ‘ಸಿಂಹರೂಪಿಣಿ’ ಸಿನಿಮಾದಲ್ಲಿ ನಟಿಸಿದ್ದಾರೆ. ಕಿನ್ನಾಳ್‌ ರಾಜ್ ಅವರು ನಿರ್ದೇಶನ ಮಾಡಿದ್ದಾರೆ. ಕೆ.ಎಂ. ನಂಜುಂಡೇಶ್ವರ ನಿರ್ಮಾಣ ಮಾಡಿದ ಈ ಸಿನಿಮಾ ಶೀಘ್ರದಲ್ಲೇ ಬಿಡುಗಡೆ ಆಗಲಿದೆ. ಸಿನಿಮಾದ ಕುರಿತು ಇಲ್ಲಿದೆ ಮಾಹಿತಿ..

ಬಿಡುಗಡೆಗೆ ಸಜ್ಜಾದ ‘ಸಿಂಹರೂಪಿಣಿ’ ಸಿನಿಮಾ; ಚಿತ್ರಮಂದಿರದಲ್ಲಿ ಮಾರಮ್ಮ ದೇವಿ ದರ್ಶನ
‘ಸಿಂಹ ರೂಪಿಣಿ’ ಸಿನಿಮಾ ತಂಡ
Follow us on

ಕಿನ್ನಾಳ್‌ ರಾಜ್ ನಿರ್ದೇಶನದ ‘ಸಿಂಹರೂಪಿಣಿ’ ಸಿನಿಮಾ ಈಗ ಬಿಡುಗಡೆಗೆ ಸಿದ್ದವಾಗಿದೆ. ಶ್ರೀ ಮಾರಮ್ಮ ದೇವಿ ಕುರಿತ ಸಾಮಾಜಿಕ ಮತ್ತು ಭಕ್ತಿಪ್ರಧಾನ ಕಥೆ ಈ ಸಿನಿಮಾದಲ್ಲಿ ಇದೆ. ಸಿನಿಮಾ ಚೆನ್ನಾಗಿ ಮೂಡಿಬಂದಿದೆ ಎಂದು ಆತ್ಮವಿಶ್ವಾಸ ವ್ಯಕ್ತಪಡಿಸಿದೆ ಚಿತ್ರತಂಡ. ಕೆ.ಎಂ. ನಂಜುಂಡೇಶ್ವರ ಅವರು ಈ ಸಿನಿಮಾಗೆ ಕಥೆ ಬರೆದಿದ್ದಾರೆ. ‘ಶ್ರೀ ಚಕ್ರ ಫಿಲ್ಮ್ಸ್​’ ಬ್ಯಾನರ್​ ಮೂಲಕ ಬಂಡವಾಳ ಹೂಡಿದ್ದಾರೆ. ಕೆಜಿಎಫ್, ಸಲಾರ್ ಮುಂತಾದ ಸಿನಿಮಾಗಳಿಗೆ ಸೂಪರ್​ ಹಿಟ್​ ಹಾಡುಗಳನ್ನು ಬರೆದ ಕಿನ್ನಾಳ್‌ರಾಜ್ ಅವರು ‘ಸಿಂಹರೂಪಿಣಿ’ ಚಿತ್ರಕ್ಕೆ ನಿರ್ದೇಶನ ಮಾಡುವುದರ ಜೊತೆಗೆ ಚಿತ್ರಕಥೆ, ಸಂಭಾಷಣೆ ಮತ್ತು ಸಾಹಿತ್ಯ ಬರೆದಿದ್ದಾರೆ.

‘ಸಿಂಹರೂಪಿಣಿ’ ಸಿನಿಮಾದ ಆಡಿಯೋ ಹಕ್ಕುಗಳು ‘ಮಾಳು ನಿಪನಾಳ್’ ಮ್ಯೂಸಿಕ್ ಸಂಸ್ಥೆಗೆ ಮಾರಾಟ ಆಗಿವೆ. ಈ ಸಿನಿಮಾದಲ್ಲಿ ಹಿರಿಯ ನಟ ಸುಮನ್​ ಅಭಿನಯಿಸಿದ್ದಾರೆ. ‘ಇಷ್ಟು ವರ್ಷಗಳ ವೃತ್ತಿ ಜೀವನದಲ್ಲಿ ಈ ಚಿತ್ರ ನನಗೆ ಬಹಳ ಖುಷಿ ನೀಡಿದೆ. ದೇವಿ ಇದ್ದಾರಾ ಎನ್ನುವ ಪ್ರಶ್ನೆಗೆ ನನ್ನ ಪಾತ್ರ ಉತ್ತರ ನೀಡಲಿದೆ’ ಎಂದು ಅವರು ಹೇಳಿದ್ದಾರೆ.

ಈ ಮೊದಲು ಸಿನಿಮಾದ ಪಾತ್ರಗಳ ಪರಿಚಯ ಮಾಡಿರುವ ಟೀಸರ್ ಬಿಡುಗಡೆ ಆಗಿತ್ತು. ನವರಾತ್ರಿ ಹಬ್ಬದ 2ನೇ ದಿನದಂದು ಸಾಂಗ್ಸ್​ ಬಿಡುಗಡೆ ಕಾರ್ಯಕ್ರಮ ಅದ್ದೂರಿಯಾಗಿ ನಡೆಯಿತು. ಈ ಪ್ರಯುಕ್ತ ಸುಮನ್‌ ಅವರು ಹೈದರಾಬಾದ್​​ನಿಂದ ಆಗಮಿಸಿದ್ದರು. ‘120ಕ್ಕೂ ಅಧಿಕ ಕಲಾವಿದರು ಚೆನ್ನಾಗಿ ಅಭಿನಯಿಸಿದ್ದಾರೆ. ಪ್ರೇಕ್ಷಕರು ಅಮ್ಮನ ಮಕ್ಕಳಾಗಿ ಚಿತ್ರಮಂದಿರಕ್ಕೆ ಬರಬೇಕು’ ಎಂದು ನಿರ್ಮಾಪಕ ಕೆ.ಎಂ. ನಂಜುಡೇಶ್ವರ ಹೇಳಿದ್ದಾರೆ.

ಕಿನ್ನಾಳ್ ರಾಜ್​ ಅವರು ಸಿನಿಮಾ ಬಗ್ಗೆ ಮಾತನಾಡಿದ್ದಾರೆ. ‘ಗ್ರಾಮೀಣ ಪ್ರದೇಶದಲ್ಲಿ ಏನೇ ಕಷ್ಟ ಬಂದರೂ ಜನರು ದೇವರಿಗೆ ಮೊರೆ ಹೋಗ್ತಾರೆ. ಜಾತ್ರೆ, ಉತ್ಸವದಲ್ಲಿ ಇನ್ನು ನಂಬಿಕೆ ಉಳಿದಿದೆ ಎಂಬಂತಹ ವಿಷಯಗಳನ್ನು ಪಾತ್ರಗಳ ಮೂಲಕ ತೋರಿಸುತ್ತಿದ್ದೇವೆ. ಎಲ್ಲ ದೇವರಿಗೂ ಹಿನ್ನಲೆ ಇರುತ್ತದೆ. ಅದೇ ರೀತಿ, ದೇವಿಯು ಮಹಾಲಕ್ಷೀ ರೂಪದಲ್ಲಿ ಭೂಮಿಗೆ ಬಂದು, ನಂತರ ಮಾರಮ್ಮ ಆಗುತ್ತಾಳೆ. ರಾಕ್ಷಸರ ಸಂಹಾರಕ್ಕೆ ಪಾರ್ವತಿದೇವಿ 7 ಅವತಾರದಲ್ಲಿ ಬರುತ್ತಾಳೆ. ಅದರಲ್ಲಿ ಕೊನೆಯ ಅವತಾರವೇ ಮಾರಮ್ಮ ದೇವಿ. ಇವುಗಳ ಜತೆಗೆ ಒಂದಷ್ಟು ಕಮರ್ಷಿಯಲ್ ಅಂಶಗಳನ್ನೂ ಸೇರಿಸಿದ್ದೇವೆ’ ಎಂದು ಅವರು ಮಾಹಿತಿ ನೀಡಿದರು.

ಇದನ್ನೂ ಓದಿ: ‘ಸಿಂಹರೂಪಿಣಿ’ ಸಿನಿಮಾದಲ್ಲಿ ‘ಕಾಟೇರ’ ಕೋಣ ಹೇಗೆ ಬಂತು? ಮೂಡಿತು ಪ್ರಶ್ನೆ

ಅಂಕಿತಾ ಗೌಡ, ಯಶ್‌ ಶೆಟ್ಟಿ, ದಿವ್ಯಾ ಆಲೂರು, ಹರೀಶ್ ರಾಯ್, ನೀನಾಸಂ ಅಶ್ವತ್ಥ್​, ವಿಜಯ್‌ ಚೆಂಡೂರು, ಆರವ್‌ ಲೋಹಿತ್, ಯಶಸ್ವಿನಿ, ಖುಷಿ ಬಸ್ರೂರು, ಮನಮೋಹನ್‌ ರೈ, ಸಾಗರ್ ಮುಂತಾದವರು ಈ ಸಿನಿಮಾದಲ್ಲಿ ನಟಿಸಿದ್ದಾರೆ. ಆಕಾಶ್‌ ಪರ್ವ ಅವರು ಸಂಗೀತ ನಿರ್ದೇಶನ ಮಾಡಿದ್ದಾರೆ. ಕಲರಿಸ್ಟ್ ಆಗಿ ಕಿಶೋರ್ ಕೆಲಸ ಮಾಡಿದ್ದಾರೆ. ಕಿರಣ್ ಅವರು ಛಾಯಾಗ್ರಾಹಕ ಮಾಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.