ಚಂದನ್ ಶೆಟ್ಟಿ ಬಿಡುಗಡೆ ಮಾಡಿದ ‘ಸಿಂಹರೂಪಿಣಿ’ ಸಿನಿಮಾ ಹಾಡು; ಮಾರಮ್ಮ ದೇವಿಯ ಗುಣಗಾನ
‘ಸಿಂಹರೂಪಿಣಿ’ ಸಿನಿಮಾದ ಹೊಸ ಹಾಡನ್ನು ಚಂದನ್ ಶೆಟ್ಟಿ ರಿಲೀಸ್ ಮಾಡಿ, ಚಿತ್ರತಂಡಕ್ಕೆ ವಿಶ್ ಮಾಡಿದ್ದಾರೆ. ರವಿ ಬಸ್ರೂರು, ಸಂತೋಷ್ ವೆಂಕಿ, ಆಕಾಶ್ ಪರ್ವ ಅವರು ಹಾಡಿಗೆ ಧ್ವನಿ ನೀಡಿದ್ದಾರೆ. ಕಿನ್ನಾಳ್ ರಾಜ್ ನಿರ್ದೇಶನ ಮಾಡುತ್ತಿರುವ ಈ ಸಿನಿಮಾದಲ್ಲಿ ಭಕ್ತಿಪ್ರಧಾನ ಕಥಾಹಂದರ ಇದೆ. ಮಾರಮ್ಮ ದೇವಿಯ ಪಾತ್ರವನ್ನು ಯಶಸ್ವಿನಿ ಅವರು ಮಾಡಿದ್ದಾರೆ.
ಕನ್ನಡದಲ್ಲಿ ಭಕ್ತಿ ಪ್ರಧಾನ ಸಿನಿಮಾಗಳು ಗಮನ ಸೆಳೆದಿವೆ. ಈಗ ಶ್ರೀ ಮಾರಮ್ಮ ದೇವಿ ಕುರಿತ ಕಥೆ ಇರುವ ‘ಸಿಂಹರೂಪಿಣಿ’ ಸಿನಿಮಾ ಮೂಡಿಬರುತ್ತಿದೆ. ಚಿತ್ರತಂಡದ ಪ್ಲ್ಯಾನ್ ಪ್ರಕಾರವೇ ನಿಗದಿತ ಸಮಯದಲ್ಲಿ ಈ ಸಿನಿಮಾದ ಶೂಟಿಂಗ್ ಮುಗಿದಿದೆ ಎಂಬುದು ವಿಶೇಷ. ಜೊತೆ ಜೊತೆಯಲ್ಲಿ ಪ್ರಮೋಷನ್ ಮಾಡಲಾಗುತ್ತಿದೆ. ಸದ್ಯಕ್ಕೆ ಡಬ್ಬಿಂಗ್ ಕೆಲಸ ಭರದಿಂದ ಸಾಗುತ್ತಿದೆ. ಲೂಪ್ ಸ್ಟುಡಿಯೋದಲ್ಲಿ ಕೆಲಸ ನಡೆಯುತ್ತಿದೆ. ಈ ಸಿನಿಮಾ ತಂಡದಿಂದ ಗೌರಿ ಗಣೇಶ ಹಬ್ಬದ ಪ್ರಯುಕ್ತ ಹೊಸ ಹಾಡನ್ನು ಬಿಡುಗಡೆ ಮಾಡಲಾಗಿದೆ. ಚಂದನ್ ಶೆಟ್ಟಿ ಅವರು ಈ ಹಾಡನ್ನು ಬಿಡುಗಡೆ ಮಾಡಿಕೊಟ್ಟಿದ್ದಾರೆ.
‘ಸಿಂಹರೂಪಿಣಿ’ ಚಿತ್ರತಂಡದ ಬಗ್ಗೆ ಹೇಳುವುದಾದರೆ, ‘ಕೆಜಿಎಫ್’, ‘ಸಲಾರ್’ ಮುಂತಾದ ಬ್ಲಾಕ್ ಬಸ್ಟರ್ ಸಿನಿಮಾಗಳ ಹಾಡುಗಳಿಗೆ ಸಾಹಿತ್ಯ ಬರೆದು ಜನಮೆಚ್ಚುಗೆ ಗಳಿಸಿದ ಕಿನ್ನಾಳ್ ರಾಜ್ ಅವರು ‘ಸಿಂಹರೂಪಿಣಿ’ ಸಿನಿಮಾಗೆ ನಿರ್ದೇಶನ ಮಾಡುತ್ತಿದ್ದಾರೆ. ಅವರೇ ಚಿತ್ರಕಥೆ ಮತ್ತು ಸಾಹಿತ್ಯ ಬರೆದಿದ್ದಾರೆ. ಮಾರಮ್ಮ ದೇವಿಯ ಭಕ್ತರಾದ ಕೆ.ಎಂ. ನಂಜುಂಡೇಶ್ವರ ಅವರು ಈ ಸಿನಿಮಾಗೆ ಕಥೆ ಬರೆದಿದ್ದಾರೆ. ಅಲ್ಲದೇ, ‘ಶ್ರೀ ಚಕ್ರ ಫಿಲ್ಸ್ಮ್’ ಸಂಸ್ಥೆಯ ಮೂಲಕ ಅವರೇ ನಿರ್ಮಾಣ ಕೂಡ ಮಾಡುತ್ತಿದ್ದಾರೆ.
ಇತ್ತೀಚೆಗೆ ‘ಸಿಂಹರೂಪಿಣಿ’ ಸಿನಿಮಾದ ಪಾತ್ರಗಳ ಪರಿಚಯದ ಮಾಡಿಕೊಂಡುವ ಟೀಸರ್ ರಿಲೀಸ್ ಮಾಡಲಾಗಿತ್ತು. ಇದರ ಬೆನ್ನಲ್ಲೇ ಹೊಸ ಹಾಡು ಬಂದಿದೆ. ‘ಮಾ ರುದ್ರಯಾ ರುದ್ರಾಣಿ, ಶ್ರೀ ಮಹಾಲಕ್ಷೀ ಮಾಂಕಾಳಿ, ಜೈ ಜಯದುರ್ಗೆ ಶಿವದೂತೆ ಸರ್ವಶಕ್ತಿಯೇ ಓಂ ಕಾಳಿ..’ ಎಂಬ ಸಾಲುಗಳನ್ನು ಹೊಂದಿರುವ ಈ ಹಾಡನ್ನು ಚಂದನ್ ಶೆಟ್ಟಿ ರಿಲೀಸ್ ಮಾಡಿದ್ದಾರೆ.
ರವಿ ಬಸ್ರೂರು, ಸಂತೋಷ್‌ವೆಂಕಿ ಹಾಗೂ ಸಂಗೀತ ನಿರ್ದೇಶಕ ಆಕಾಶ್ ಪರ್ವ ಅವರು ಈ ಹೊಸ ಹಾಡಿಗೆ ಧ್ವನಿಯಾಗಿದ್ದಾರೆ. ಹಾಡನ್ನು ಬಿಡುಗಡೆ ಮಾಡಿದ ಚಂದನ್ ಶೆಟ್ಟಿ ಅವರು ಚಿತ್ರತಂಡಕ್ಕೆ ಶುಭ ಕೋರಿದ್ದಾರೆ. ಈ ಸಿನಿಮಾದ ಆಡಿಯೋ ಹಕ್ಕುಗಳನ್ನು ‘ಮಾಲು ನಿಪ್ನಾಳ್ ಮ್ಯೂಸಿಕ್ ಸಂಸ್ಥೆ’ ದೊಡ್ಡ ಮೊತ್ತ ನೀಡಿ ಖರೀದಿಸಿದೆ ಎಂದು ಚಿತ್ರತಂಡ ಮಾಹಿತಿ ಹಂಚಿಕೊಂಡಿದೆ.
ಇದನ್ನೂ ಓದಿ: ಮುದ್ದು ರಾಕ್ಷಸಿ ನಿವೇದಿತಾ ಗೌಡ ಎದುರು ಮತ್ತೆ ಗುಲಾಬಿ ಹಿಡಿದ ಚಂದನ್ ಶೆಟ್ಟಿ
ಈ ಸಿನಿಮಾದಲ್ಲಿ ನಟಿ ಯಶಸ್ವಿನಿ ಅವರು ಮಾರಮ್ಮ ದೇವಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಅಂಕಿತಾ ಗೌಡ ನಾಯಕಿಯಾಗಿದ್ದಾರೆ. ಯಶ್ ಶೆಟ್ಟಿ, ದಿವ್ಯಾ ಆಲೂರು, ಸುಮನ್, ಪುನೀತ್ ರುದ್ರನಾಗ್, ದಿನಾ, ನೀನಾಸಂ ಅಶ್ವಥ್, ಹರೀಶ್ ರಾಯ್, ತಬಲಾ ನಾಣಿ, ಭಜರಂಗಿ ಪ್ರಸನ್ನ, ದಿನೇಶ್ ಮಂಗಳೂರು, ವಿಜಯ್ ಚೆಂಡೂರು, ಸಾಗರ್, ವರ್ಧನ್ ತೀರ್ಥಹಳ್ಳಿ, ನವಾಜ್, ಮನಮೋಹನ ರೈ, ಲೋಹಿತ್, ಉಮೇಶ್, ಪಿಳ್ಳಪ್ಪ, ವಿಜಯ್ ಬಸ್ರೂರು, ವೇದಾ ಹಾಸನ್, ರಾಧಾ ರಾಮಚಂದ್ರ, ಸುನಂದಾಕಲ್ಬುರ್ಗಿ, ಯುವರಾಜ್, ಗುರುಮೂರ್ತಿ, ವೈಭವ್ ನಾಗರಾಜ್, ಶಶಿಕುಮಾರ್ ಮುಂತಾದ ಕಲಾವಿದರು ಈ ಸಿನಿಮಾದ ಪಾತ್ರವರ್ಗದಲ್ಲಿ ಇದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.