ಬಳ್ಳಾರಿಯಿಂದ ಬೆಂಗಳೂರಿಗೆ ಶಿಫ್ಟ್ ಆಗುತ್ತಾರೆಯೇ ನಟ ದರ್ಶನ್
Darshan Thoogudeepa: ಜೈಲು ಸೇರಿದಾಗಿನಿಂದಲೂ ಸೌಲಭ್ಯಗಳಿಗಾಗಿ ಹಪಹಪಿಸುತ್ತಿರುವ, ಅನಾರೋಗ್ಯದ ಕಾರಣಗಳನ್ನು ಪದೇ ಪದೇ ಮುಂದೆ ಮಾಡುತ್ತಿರುವ ದರ್ಶನ್ ತೂಗುದೀಪ, ಇದೀಗ ಅನಾರೋಗ್ಯದ ಕಾರಣವನ್ನೇ ನೀಡಿ ಬಳ್ಳಾರಿಯಿಂದ ಬೆಂಗಳೂರಿಗೆ ಶಿಫ್ಟ್ ಆಗುವ ಸಾಧ್ಯತೆ ಇದೆ.
ರೇಣುಕಾ ಸ್ವಾಮಿ ಕೊಲೆ ಆರೋಪಿ ನಟ ದರ್ಶನ್ ಬಂಧನವಾಗಿ ನಾಲ್ಕು ತಿಂಗಳಾಗುತ್ತಾ ಬಂದಿದೆ. ಜೂನ್ 11 ರಂದು ದರ್ಶನ್, ಪವಿತ್ರಾ ಮತ್ತು ಇತರೆ ಆರೋಪಿಗಳನ್ನು ಈ ಪ್ರಕರಣದಲ್ಲಿ ಬಂಧಿಸಲಾಗಿತ್ತು. ಆರಂಭದ ಸುಮಾರು ಎರಡು ತಿಂಗಳು ಸಮಯವನ್ನು ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ಕಳೆದ ನಟ ದರ್ಶನ್, ಅಲ್ಲಿ ಕೆಲ ಇತರೆ ಆರೋಪಿಗಳೊಟ್ಟಿಗೆ ಸೇರಿ ಹಣ ಕೊಟ್ಟು ರಾಜಾತಿಥ್ಯ ಸ್ವೀಕರಿಸಿದ ಕಾರಣ ಅವರನ್ನು ಬಳ್ಳಾರಿಯ ಕೇಂದ್ರ ಕಾರಾಗ್ರಹಕ್ಕೆ ಸ್ಥಳಾಂತರ ಮಾಡಲಾಗಿದೆ. ಇದೀಗ ದರ್ಶನ್ ಅನ್ನು ಬಳ್ಳಾರಿ ಜೈಲಿನಿಂದ ಮತ್ತೆ ಬೆಂಗಳೂರಿಗೆ ವರ್ಗಾವಣೆ ಮಾಡುವ ಸಾಧ್ಯತೆ ಕಂಡು ಬರುತ್ತಿದೆ.
ದರ್ಶನ್ ಜೈಲು ಸೇರಿದಾಗಿನಿಂದಲೂ, ಜೈಲಿನಲ್ಲಿ ತಮಗೆ ದೊರಕುತ್ತಿರುವ ಸೌಲಭ್ಯಗಳ ಬಗ್ಗೆ ಅಸಮಾಧಾನ ವ್ಯಕ್ತಪಡಿಸುತ್ತಾ, ಜೈಲು ಅಧಿಕಾರಿಗಳ ಜೊತೆಗೆ ವಾದ ಮಾಡುತ್ತಾ, ನ್ಯಾಯಾಲಯದಲ್ಲಿಯೂ ಮನವಿಗಳನ್ನು ಸಲ್ಲಿಸುತ್ತಲೇ ಬಂದಿದ್ದಾರೆ. ಪರಪ್ಪನ ಅಗ್ರಹಾರ ಜೈಲು ಸೇರಿದಾಗಲೇ ದರ್ಶನ್, ತಮಗೆ ಬೆನ್ನು ನೋವು, ಕೈ ನೋವಿದ್ದು ತಮಗೆ ಮಲಗಲು ವಿಶೇಷ ಹಾಸಿಗೆ ಬೇಕೆಂದು ಮನವಿ ಮಾಡಿದ್ದರು. ಆದರೆ ಹೈಕೋರ್ಟ್ ಹಾಗೂ ಸೆಷನ್ಸ್ ಈ ಕೋರ್ಟ್ ಈ ಮನವಿಯನ್ನು ಪುರಸ್ಕರಿಸಲಿಲ್ಲ.
ಆ ನಂತರ ಬಳ್ಳಾರಿ ಜೈಲಿಗೆ ಶಿಫ್ಟ್ ಆದ ದರ್ಶನ್ಗೆ ಇಲ್ಲಿ ಇನ್ನಷ್ಟು ಕಠಿಣ ನಿಯಮಗಳನ್ನು ಪಾಲಿಸಬೇಕಾಗಿ ಬಂತು. ಇಲ್ಲಿಗೆ ಬಂದಾಗಿನಿಂದಲೂ ಜೈಲು ಅಧಿಕಾರಿಗಳಿಗಳೊಟ್ಟಿಗೆ ಸೌಲಭ್ಯಗಳಿಗಾಗಿ ತಿಕ್ಕಾಟ ನಡೆಸುತ್ತಲೇ ಇದ್ದಾರೆ ದರ್ಶನ್, ಮಾತ್ರವಲ್ಲದೆ ಬಳ್ಳಾರಿಗೆ ಬಂದ ಬಳಿಕ ಅವರ ದೇಹಾರಾಗೋದ್ಯಲ್ಲಿಯೂ ವ್ಯತ್ಯಾಸವಾಗಿದೆ. ಬಳ್ಳಾರಿ ಜೈಲಿಗೆ ಶಿಫ್ಟ್ ಆದ ಬಳಿಕ ದರ್ಶನ್ಗೆ ಬೆನ್ನು ನೋವು ಉಲ್ಬಣಗೊಂಡಿದ್ದು, ಈಗಾಗಲೇ ಜೈಲು ವೈದ್ಯರು ಹಾಗೂ ಹೊರಗಿನಿಂದಲೂ ಬಂದಿದ್ದ ವೈದ್ಯರು ತಪಾಸಣೆ ನಡೆಸಿದ್ದಾರೆ.
ಇದನ್ನೂ ಓದಿ:ದರ್ಶನ್ಗೆ ಏಕೆ ಜಾಮೀನು ನೀಡಬೇಕು? ವಕೀಲರು ಮುಂದಿಟ್ಟ ಎಂಟು ಕಾರಣ
ದರ್ಶನ್ ಅನ್ನು ತಪಾಸಣೆ ಮಾಡಿರುವ ವೈದ್ಯರು, L1 , L5 ಭಾಗದಲ್ಲಿ ಊತ ಇದೆಯೆಂದು ವರದಿ ನೀಡಿದ್ದು, ಸ್ಕ್ಯಾನಿಂಗ್ ಹಾಗೂ ಮುಂದಿನ ಚಿಕಿತ್ಸೆ ಪಡೆದುಕೊಳ್ಳುವಂತೆ ದರ್ಶನ್ಗೆ ಸೂಚನೆ ನೀಡಿದ್ದಾರೆ. ಆದರೆ ದರ್ಶನ್, ತಾವು ಬಳ್ಳಾರಿಯಲ್ಲಿ ಯಾವುದೇ ಕಾರಣಕ್ಕೂ ಚಿಕಿತ್ಸೆ ಪಡೆಯುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ. ಮಾತ್ರವಲ್ಲದೆ ಬಳ್ಳಾರಿಯಲ್ಲಿ ಸ್ಕ್ಯಾನಿಂಗ್ ಸಹ ಮಾಡಿಸುವುದಿಲ್ಲ ಎಂದು ದರ್ಶನ್ ಹಠ ಹಿಡಿದಿದ್ದು, ಬೆಂಗಳೂರಿನ ವೈದ್ಯರ ಬಳಿಯೇ, ಬೆಂಗಳೂರಿನ ಆಸ್ಪತ್ರೆಯಲ್ಲಿಯೇ ಚಿಕಿತ್ಸೆ ನೀಡುವುದಾಗಿ ಹಠ ಹಿಡಿದಿದ್ದಾರೆ.
ಸೋಮವಾರ ದರ್ಶನ್ ಅನ್ನು ಕಾಣಲು ವಕೀಲರು ಬರುವವರಿದ್ದು, ಅವರ ಮೂಲಕ ಮೆಡಿಕಲ್ ಬೆಡ್ ಮತ್ತು ಕುರ್ಚಿಗಾಗಿ ಹೈಕೋರ್ಟ್ಗೆ ಅರ್ಜಿ ಹಾಕಿಸುವ ಸಾಧ್ಯತೆ ಇದೆ. ಅಲ್ಲದೆ ಮಂಗಳವಾರದಂದು (ಅಕ್ಟೋಬರ್ 08) ಜಾಮೀನು ಅರ್ಜಿ ವಿಚಾರಣೆ ಇದ್ದು, ಒಂದೊಮ್ಮೆ ಅದು ಸಿಗದೇ ಇದ್ದರೆ ಮೆಡಿಕಲ್ ಎಮರ್ಜೆನ್ಸಿ ಹೆಸರಿನಲ್ಲಿ ಬೆಂಗಳೂರಿಗೆ ಸ್ಥಳಾಂತರಗೊಳ್ಳುವ ಸಾಧ್ಯತೆ ಇದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ