ದರ್ಶನ್​ಗೆ ಏಕೆ ಜಾಮೀನು ನೀಡಬೇಕು? ವಕೀಲರು ಮುಂದಿಟ್ಟ ಎಂಟು ಕಾರಣ

Renuka Swamy: ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್​ಗೆ ಜಾಮೀನು ಏಕೆ ಕೊಡಬೇಕು? ಹಿರಿಯ ವಕೀಲ ಸಿವಿ ನಾಗೇಶ್, ದರ್ಶನ್​ಗೆ ಏಕೆ ಜಾಮೀನು ಕೊಡಬೇಕು ಎಂದು ಎಂಟು ಪ್ರಮುಖ ಕಾರಣಗಳನ್ನು ನೀಡಿದ್ದಾರೆ.

ದರ್ಶನ್​ಗೆ ಏಕೆ ಜಾಮೀನು ನೀಡಬೇಕು? ವಕೀಲರು ಮುಂದಿಟ್ಟ ಎಂಟು ಕಾರಣ
Follow us
|

Updated on: Oct 05, 2024 | 6:44 PM

ರೇಣುಕಾ ಸ್ವಾಮಿ ಕೊಲೆ ಪ್ರಕರಣದ ಆರೋಪಿ ನಟ ದರ್ಶನ್ ಬಂಧನಕ್ಕೆ ಒಳಗಾಗಿ ನಾಲ್ಕು ತಿಂಗಳಾಗುತ್ತಾ ಬಂದಿದೆ. ಆರೋಪಿ ದರ್ಶನ ಪ್ರಸ್ತುತ ಬಳ್ಳಾರಿ ಜೈಲಿನಲ್ಲಿದ್ದು ಜಾಮೀನಿಗಾಗಿ ಅರ್ಜಿ ಸಲ್ಲಿಸಿದ್ದಾರೆ. ಜನಪ್ರಿಯ ವಕೀಲ ಸಿವಿ ನಾಗೇಶ್, ದರ್ಶನ್ ಪರ ವಾದ ಮಂಡಿಸುತ್ತಿದ್ದಾರೆ. ನಿನ್ನೆ 57ನೇ ಸಿಸಿಹೆಚ್ ನ್ಯಾಯಾಲಯದಲ್ಲಿ ನಿನ್ನೆಯಿಂದಲೇ ದರ್ಶನ್​ಗೆ ಜಾಮೀನು ಕೊಡಿಸಲು ವಾದ ಮಂಡಿಸುತ್ತಿದ್ದಾರೆ. ನಿನ್ನೆ ಹಾಗೂ ಇಂದು ಎರಡೂ ದಿನ ವಾದ ಮಂಡಿಸಿದ ಸಿವಿ ನಾಗೇಶ್ ಇಂದು, ತಮ್ಮ ವಾದ ಅಂತ್ಯ ಮಾಡುವ ಮುನ್ನ ಕೆಲವು ಮುಖ್ಯ ಅಂಶಗಳನ್ನು ನ್ಯಾಯಾಲಯದ ಗಮನಕ್ಕೆ ತಂದು ಇವುಗಳ ಆಧಾರದಲ್ಲಿ ದರ್ಶನ್​ಗೆ ಜಾಮೀನು ನೀಡಬೇಕು ಎಂದು ವಾದಿಸಿದರು.

* ಸಾಕ್ಷಿ ನಂಬರ್ 69 ಬಿಟ್ಟರೆ ಈ ಪ್ರಕರಣದಲ್ಲಿ ಬೇರೆ ಸಾಕ್ಷಿಗಳೇ ಇರಲಿಲ್ಲ, ಹೀಗಾಗಿ ಈ ಕೇಸಿನಲ್ಲಿ ಸಾಕ್ಷಿಗಳ ಹೇಳಿಕೆ ದಾಖಲಿಸಲು ವಿಳಂಬವಾಗಿದೆ. ಕೆಲವು ಸಾಕ್ಷ್ಯಗಳನ್ನು ಪೊಲೀಸರೆ ಸೃಷ್ಟಿಮಾಡಿದ್ದಾರೆ.

* ಪ್ರತ್ಯಕ್ಷದರ್ಶಿ ಪಟ್ಟಣಗೆರೆ ಶೆಡ್​ನ ವಾಚ್ ಮನ್ ಹೇಳಿಕೆಯನ್ನು ಕೊಲೆಯಾದ ಐದು ದಿನದ ಬಳಿಕ ಅಂದರೆ ಜೂನ್ 13 ರಂದು ದಾಖಲಿಸಲಾಗಿದೆ. ಇತರರ ಹೇಳಿಕೆಯನ್ನು ಜೂ 15 ರಂದು ದಾಖಲಿಸಲಾಗಿದೆ. ಈ ವಿಳಂಬಕ್ಕೆ ಕಾರಣಗಳನ್ನು ತನಿಖಾಧಿಕಾರಿ ನೀಡಿಲ್ಲ.

* ಜೂನ್ 8 ರಂದು ಸಾವು ಸಂಭವಿಸಿದೆ, ಜೂನ್ 11 ರಂದು ಪೋಸ್ಟ್ ಮಾರ್ಟಮ್ ಮಾಡಲಾಗಿದೆ. ಈ ವಿಳಂಬಕ್ಕೆ ಸೂಕ್ತ ಕಾರಣವನ್ನು ನೀಡಿಲ್ಲ. 2.5 X 1 ಸೆಂಟಿ ಮೀಟರ್ ಅಳತೆಯ ಒಂದೇ ಗಾಯವಾಗಿದೆ. ಉಳಿದ ಗಾಯಗಳು ಮೂಗೇಟುಗಳಾಗಿವೆ.

* ಸಾವಿನ ಸಮಯ ಅಂದಾಜು ಮಾಡಲು ಸಾಧ್ಯವಿಲ್ಲವೆಂದು ಹೇಳಲಾಗಿದೆ. ಪೋಸ್ಟ್ ಮಾರ್ಟಮ್ ರಿಪೋರ್ಟ್ ನಲ್ಲಿ ಹೀಗೆಂದು ಹೇಳಲಾಗಿದೆ. ಶವವನ್ನು ಕೋಲ್ಡ್ ಸ್ಟೋರೇಜ್ ನಲ್ಲಿರಿಸಿದ್ದರಿಂದ ಸಮಯ ಅಂದಾಜಿಸಲಾಗಲ್ಲ. ಹೀಗಾಗಿ ನಿಖರ ಮಾಹಿತಿ ನೀಡಲಾಗುವುದಿಲ್ಲವೆಂದು ವರದಿಯಿದೆ. ಫೋಟೊ ನೋಡಿ ಸಾವಿನ ಸಮಯ ಅಂದಾಜಿಸುವುದು ಸರಿಯಲ್ಲ. ಜುಲೈ 7 ರಂದು ನೀಡಿರುವ ವರದಿಯಲ್ಲಿ ಫೋಟೊ ನೋಡಿ ಸಾವಿನ ಸಮಯ ಅಂದಾಜು ಮಾಡಲಾಗಿದೆ. ಇದು ಸೂಕ್ತವಾದ ಕ್ರಮ ಅಲ್ಲ.

ಇದನ್ನೂ ಓದಿ:http://ದರ್ಶನ್ ಪ್ರಕರಣ: ಪೊಲೀಸರೇ ಸಾಕ್ಷ್ಯಗಳನ್ನು ಸೃಷ್ಟಿಸಿದ್ದಾರೆಂದ ವಕೀಲ ಸಿವಿ ನಾಗೇಶ್

* 161 ಹಾಗೂ 164ರ ಅಡಿಯಲ್ಲಿ ದಾಖಲಿಸಿರುವ ಸಾಕ್ಷ್ಯಗಳ ಹೇಳಿಕೆಯಲ್ಲಿ ವೈರುಧ್ಯ ಇದೆ. ಚಿಕ್ಕಣ್ಣನ ಹೇಳಿಕೆ ಸೇರಿದಂತೆ ಇನ್ನೂ ಕೆಲವರ ಹೇಳಿಕೆಯಲ್ಲಿ ಸಾಮ್ಯತೆ ಇಲ್ಲ. ಕೆಲವು ಸಾಕ್ಷ್ಯಗಳಿಗಂತೂ ಮಾಧ್ಯಮದ ಮೂಲಕವೇ ಕೊಲೆ ಪ್ರಕರಣದ ವರದಿ ಗೊತ್ತಾಗಿದೆ.

* ಮಹಜರು ಹಾಗೂ ಆರೋಪಿಗಳ ಹೇಳಿಕೆಗಳಲ್ಲಿ ಸಹ ವ್ಯತ್ಯಾಸವಿದೆ. ಮಹಜರಿನಲ್ಲಿ ಕೊಲೆಯಾದ ದಿನ ದರ್ಶನ್ ಚಪ್ಪಲಿ ಧರಿಸಿದ್ದ ಎಂದಿದೆ ಆದರೆ ಪೊಲೀಸರು ದರ್ಶನ್ ಮನೆಯಿಂದ ಶೂ ಅನ್ನು ವಶಪಡಿಸಿಕೊಂಡಿದ್ದಾರೆ. ಅದರ ಮೇಲೆ ರಕ್ತದ ಕಲೆ ಇದೆ ಎಂದಿದ್ದಾರೆ. ಬಟ್ಟೆಗಳ ಮೇಲೂ ರಕ್ತದ ಕಲೆ ಇದೆ ಎಂದಿದ್ದಾರೆ. ಚೆನ್ನಾಗಿ ಒಗೆದು ಒಣಹಾಕಿದ್ದ ಬಟ್ಟೆಯಲ್ಲಿ ರಕ್ತದ ಕಲೆ ಇರಲು ಸಾಧ್ಯವಿಲ್ಲ.

* ದರ್ಶನ್ ಮನೆಯಲ್ಲಿ 37 ಲಕ್ಷ ರೂಪಾಯಿ ಹಣವನ್ನು ವಶಪಡಿಸಿಕೊಳ್ಳಲಾಗಿದ್ದು, ಆ ಹಣ ಪ್ರಕರಣ ಮುಚ್ಚಿಹಾಕಲು ಬಳಸಿದ್ದು ಎನ್ನಲಾಗಿದೆ. ಆದರೆ ಆ ಹಣ ದರ್ಶನ್​ಗೆ ಮೇ 2 ರಂದೇ ಬಂದಿತ್ತು. ಇನ್ನು ಸ್ಟೋನಿ ಬ್ರೂಕ್​ನಲ್ಲಿ ಕೊಲೆಯ ಸಂಚು ಮಾಡಲಾಯ್ತು ಎಂದಿದ್ದಾರೆ. ಆದರೆ ಯಾವುದೇ ಸಾಕ್ಷ್ಯಗಳ ಹೇಳಿಕೆಯಲ್ಲಿಯೂ ಈ ಮಾತು ಇಲ್ಲ. ಅವರೆಲ್ಲ ಅಂದು ಊಟಕ್ಕೆ ಸೇರಿದ್ದರು, ಸಿನಿಮಾದ ಬಗ್ಗೆ ಮಾತನಾಡಿದರು.

* ರೇಣುಕಾ ಸ್ವಾಮಿ ನಿಧನವಾದ ಮಾರನೇಯ ದಿನ ಜೂನ್ 9 ರಂದೇ ಪೊಲೀಸರು ಶೆಡ್​ಗೆ ತೆರಳಿ ಕೆಲವು ವಸ್ತುಗಳನ್ನು ವಶಕ್ಕೆ ತೆಗೆದುಕೊಂಡಿದ್ದರು. ಆದರೆ ದರ್ಶನ್ ಅನ್ನು ಜೂನ್ 11 ರಂದು ಬಂಧಿಸಿ ಅದಾದ ಒಂದು ದಿನ ಬಳಿಕ ಜೂನ್ 12 ರಂದು ಮತ್ತೆ ಅದೇ ವಸ್ತುಗಳನ್ನು ಮರಳಿ ವಶ ಪಡಿಸಿಕೊಳ್ಳಲಾಗಿದೆ. ಒಟ್ಟಾರೆ ಇಲ್ಲಿ ಸಾಕ್ಷ್ಯಗಳನ್ನು ತಿರುಚುವ ಪ್ರಯತ್ನ ಮಾಡಿರುವ ಅನುಮಾನ ಮೂಡಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ