Sign In

By signing in or creating an account, you agree with Associated Broadcasting Company's Terms & Conditions and Privacy Policy.

ದರ್ಶನ್ ಮನೆಯಲ್ಲಿ ರಿಕವರಿ ಮಾಡಿದ ಹಣದ ಮೂಲ ಬಿಚ್ಚಿಟ್ಟ ವಕೀಲ ನಾಗೇಶ್

ರೇಣುಕಾ ಸ್ವಾಮಿ ಪ್ರಕರಣದ ಆರೋಪಿ ದರ್ಶನ್ ಜಾಮೀನು ಅರ್ಜಿ ವಿಚಾರಣೆ ಚಾಲ್ತಿಯಲ್ಲಿದ್ದು, ವಾದ ಮಾಡಿದ ಹಿರಿಯ ವಕೀಲ ಸಿವಿ ನಾಗೇಶ್, ದರ್ಶನ್ ಮನೆಯಲ್ಲಿ ಪೊಲೀಸರು ವಶಪಡಿಸಿಕೊಂಡಿರುವ ಹಣದ ಮೂಲ ಏನೆಂದು ಬಿಚ್ಚಿಟ್ಟಿದ್ದಾರೆ.

ದರ್ಶನ್ ಮನೆಯಲ್ಲಿ ರಿಕವರಿ ಮಾಡಿದ ಹಣದ ಮೂಲ ಬಿಚ್ಚಿಟ್ಟ ವಕೀಲ ನಾಗೇಶ್
Follow us
ಮಂಜುನಾಥ ಸಿ.
|

Updated on: Oct 05, 2024 | 2:50 PM

ರೇಣುಕಾ ಸ್ವಾಮಿ ಕೊಲೆ ಆರೋಪಿ ನಟ ದರ್ಶನ್ ಜಾಮೀನು ಅರ್ಜಿ ವಿಚಾರಣೆ ಚಾಲ್ತಿಯಲ್ಲಿದೆ. ಹಿರಿಯ ವಕೀಲ ಸಿವಿ ನಾಗೇಶ್, ದರ್ಶನ್ ಪರವಾಗಿ ವಾದ ಮಂಡಿಸಿದ್ದಾರೆ. ನಿನ್ನೆಯೇ ದರ್ಶನ್ ಪರವಾಗಿ ಸುದೀರ್ಘವಾದ ವಾದ ಮಂಡನೆಯನ್ನು ಸಿವಿ ನಾಗೇಶ್ ಮಾಡಿದ್ದರು. ನಿನ್ನೆ ಸಮಯದ ಅಭಾವದಿಂದಾಗಿ ಇಂದಿಗೆ (ಅಕ್ಟೋಬರ್ 05) ಪ್ರಕರಣ ಮುಂದೂಡಲಾಗಿತ್ತು. ಇಂದು ವಾದ ಮುಂದುವರೆಸಿದ ಸಿವಿ ನಾಗೇಶ್ ಅವರು, ದರ್ಶನ್ ಮನೆಯಲ್ಲಿ ಪೊಲೀಸರು ವಶಪಡಿಸಿಕೊಂಡ ಲಕ್ಷಾಂತರ ರೂಪಾಯಿ ಹಣದ ಮೂಲದ ಬಗ್ಗೆ ನ್ಯಾಯಾಲಕ್ಕೆ ಮಾಹಿತಿ ನೀಡಿದರು.

ಜೂ 18ರಂದು ದರ್ಶನ್‌ ಮನೆಯಲ್ಲಿ 37.5 ಲಕ್ಷ ಹಣವನ್ನು ಪೊಲೀಸರು ವಶಪಡಿಸಿಕೊಂಡಿದ್ದರು. ಅದಾದ ಬಳಿಕ ವಿಜಯಲಕ್ಷ್ಮಿ ಅವರಿಗೆ ದರ್ಶನ್ ಅದೇ ಸಮಯದಲ್ಲಿ ನೀಡಿದ್ದಾರೆ ಎನ್ನಲಾದ ಹಣವನ್ನು ವಿಜಯಲಕ್ಷ್ಮಿ ಅವರೇ ಪೊಲೀಸರ ವಶಕ್ಕೆ ಒಪ್ಪಿಸಿದ್ದರು. ಹಣ ಬರ್ಖಾಸ್ತು ಮಾಡಿರುವ ಬಗ್ಗೆ ಇಂದು ವಾದ ಮಂಡಿಸಿದ ಸಿವಿ ನಾಗೇಶ್, ಹಣದ ಮೂಲದ ಬಗ್ಗೆ ನ್ಯಾಯಾಲಯಕ್ಕೆ ಮಾಹಿತಿ ನೀಡಿದರು.

‘ಸಾಕ್ಷಿಗಳಿಗೆ ಕೊಡಲೆಂದು ದರ್ಶನ್ ಈ ಹಣ ಇಟ್ಟಿದ್ದಾರೆ ಎಂಬುದಾಗಿ ಪೊಲೀಸರು ಹೇಳಿಕೆ ಪಡೆದುಕೊಂಡಿದ್ದಾರೆ. ಆದರೆ ಮೋಹನ್‌ ರಾಜ್ ಎಂಬುವರು ಈ ಹಣವನ್ನು ಮೇ 2ನೇ ತಾರೀಖಿನಂದೇ ದರ್ಶನ್‌ಗೆ ನೀಡಿದ್ದರು. ಅಸಲಿಗೆ ಇವರು ದರ್ಶನ್ ಅವರಿಂದ ಹಣ ಸಾಲ ಪಡೆದಿದ್ದರು. ಆ ಹಣವನ್ನು ಮೇ 2ರಂದೇ ದರ್ಶನ್‌ಗೆ ನೀಡಬೇಕಿದ್ದ ಸಾಲ ವಾಪಸ್ ಮಾಡಿದ್ದರು. ಆಗ ರೇಣುಕಾಸ್ವಾಮಿ ಯಾರೆಂಬುದು ಜಗತ್ತಿಗೇ ಗೊತ್ತಿರಲಿಲ್ಲ’ ಎಂದರು ಸಿವಿ ನಾಗೇಶ್.

ಇದನ್ನೂ ಓದಿ:ಪೊಲೀಸರ ತಿರುಚಿದ ದಾಖಲೆಗಳಿಗೆ ಕೋರ್ಟ್​ನಲ್ಲಿ ಮತ್ತಷ್ಟು ಸಾಕ್ಷ್ಯ ಕೊಟ್ಟ ದರ್ಶನ್ ಪರ ವಕೀಲ

‘ಮೋಹನ್ ರಾಜ್ ಪುತ್ರಿಯ ಡ್ಯಾನ್ಸ್ ಆಲ್ಬಂ ಮಾಡಿಸಬೇಕಿತ್ತು, ದರ್ಶನ್ ಈ ಮುಂಚೆ ಮಾಲೀಕರಾಗಿದ್ದ ಡಿ ಬೀಟ್ಸ್‌ ಅವರ ಕಡೆಯವರಿಗೆ ಹೇಳಿ ಈ ಡ್ಯಾನ್ಸ್ ಆಲ್ಬಂ ಮಾಡಿಸಿಕೊಟ್ಟಿದ್ದರು. ಇದಕ್ಕಾಗಿ ದರ್ಶನ್‌ರಿಂದ 40 ಲಕ್ಷ ರೂಪಾಯಿ ಹಣ ಫೆಬ್ರವರಿಯಲ್ಲಿ ಪಡೆದಿದ್ದೆ, ಅದನ್ನು ಮೇ 2ರಂದು ಹಿಂತಿರುಗಿಸಿದ್ದಾಗಿ ಮೋಹನ್ ರಾಜ್ ಪೊಲೀಸರ ಮುಂದೆ ಹೇಳಿಕೆ ನೀಡಿದ್ದಾರೆ. ಹೀಗಿದ್ದಾಗ ರೇಣುಕಾ ಸ್ವಾಮಿ ಕೊಲೆ ಆದ ಬಳಿಕ ದರ್ಶನ್ ಹಣ ಸಂಗ್ರಹಿಸಿದ್ದರೆಂದು ಹೇಳುವುದು ಹೇಗೆ’ ಎಂದು ನಾಗೇಶ್ ಅನುಮಾನ ವ್ಯಕ್ತಪಸಿದರು.

‘ರೇಣುಕಾ ಸ್ವಾಮಿ ಎಂಬಾತ ಒಬ್ಬ ಮುಂದೊಂದು ದಿನ ಬರುತ್ತಾನೆ, ಅವನನ್ನು ಕೊಲ್ಲುವ ಪ್ರಮೇಯ ಬರುತ್ತದೆ, ನನ್ನ ಮೇಲೆ ಚಾರ್ಜ್‌ಶೀಟ್ ಹಾಕ್ತಾರೆ ಅದಕ್ಕಾಗಿ ನಾನು ಸಾಕ್ಷಿಗಳಿಗೆ ಕೊಡಲು ಹಣ ಪಡೆಯಬೇಕು ಎಂದು ಮೊದಲೇ ಊಹಿಸಲು ಸಾಧ್ಯವೇ? ಎಂದು ಪ್ರಶ್ನಿಸಿದ ವಕೀಲ ಸಿ.ವಿ.ನಾಗೇಶ್, ರೇಣುಕಾ ಸ್ವಾಮಿ ಎಂಬ ಒಬ್ಬ ವ್ಯಕ್ತಿ ಇದ್ದಾನೆ ಎಂಬುದು ಗೊತ್ತಾಗಿದ್ದೆ ಜೂನ್ 6 ರಂದು, ಅಲ್ಲಿಯವರೆಗೆ ಆತನನ್ನು ಗೌತಮ್ ಎಂದೇ ನಂಬಲಾಗಿತ್ತು. ಮಲಗುವಾಗ ಓದಬಹುದಾದ ಅರೇಬಿಯನ್ ನೈಟ್ಸ್ ಕಥೆಯಂತಿದೆ ಪೊಲೀಸರ ತನಿಖಾ ವರದಿ’ ಎಂದು ವ್ಯಂಗ್ಯ ಮಾಡಿದ್ದಾರೆ ವಕೀಲ ಸಿವಿ ನಾಗೇಶ್.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ