ಪೊಲೀಸರ ತಿರುಚಿದ ದಾಖಲೆಗಳಿಗೆ ಕೋರ್ಟ್ನಲ್ಲಿ ಮತ್ತಷ್ಟು ಸಾಕ್ಷ್ಯ ಕೊಟ್ಟ ದರ್ಶನ್ ಪರ ವಕೀಲ
ದರ್ಶನ್ ತೂಗುದೀಪ ಜಾಮೀನು ಅರ್ಜಿ ವಿಚಾರಣೆ ಇಂದು ನಡೆದಿದ್ದು, ಹಿರಿಯ ವಕೀಲ ಸಿವಿ ನಾಗೇಶ್ ವಾದ ಮಂಡನೆ ಮಾಡಿದರು. ಪ್ರಕರಣದ ತನಿಖೆಯಲ್ಲಿ ಪೊಲೀಸರು ತಪ್ಪು ಮಾಡಿದ್ದಾರೆಂದು ವಾದಿಸಿದ ನಾಗೇಶ್, ಆರೋಪ ಪಟ್ಟಿಯಲ್ಲಿನ ತಪ್ಪುಗಳನ್ನು ಎತ್ತಿ ತೋರಿಸಿದರು.
ದರ್ಶನ್ ಮತ್ತು ಗ್ಯಾಂಗ್ನಿಂದ ರೇಣುಕಾಸ್ವಾಮಿ ಬರ್ಬರ ಹತ್ಯೆ ನಡೆದಿದೆ ಎನ್ನಲಾದ ಪ್ರಕರಣಕ್ಕೆ ಸಂಬಂಧಿಸಿ ದರ್ಶನ್ ಜಾಮೀನು ಅರ್ಜಿಯ ಎರಡನೇ ದಿನದ ವಾದ ಮಂಡನೆ 57ನೇ ಸಿಸಿಹೆಚ್ ಕೋರ್ಟ್ನಲ್ಲಿ ಇಂದು (ಅಕ್ಟೋಬರ್ 5) ನಡೆದಿದೆ. A2 ದರ್ಶನ್ ಪರ ಹಿರಿಯ ವಕೀಲ ಸಿ.ವಿ.ನಾಗೇಶ್ ವಾದ ಮಂಡನೆ ಮಾಡಿದ್ದಾರೆ. ನಕಲಿ ದಾಖಲೆ ಸೃಷ್ಟಿಸಲಾಗಿದೆ ಎಂದು ಶುಕ್ರವಾರ (ಅಕ್ಟೋಬರ್ 4) ಆರೋಪಿಸಿದ್ದ ಅವರು, ಇಂದು ಕೂಡ ವಾದ ಮುಂದುವರಿಸಿದ್ದಾರೆ.
‘ಸೆಕ್ಯುರಿಟಿ ಗಾರ್ಡ್ ಹೇಳಿಕೆಯಲ್ಲಿ ನಡೆದ ಘಟನೆ ಬಗ್ಗೆ ವಿವರಿಸಲಾಗಿದೆ. ಜೂ 9ರಂದೇ ಕೃತ್ಯದ ಸ್ಥಳವನ್ನು ಸೀಜ್ ಮಾಡಲಾಗಿದೆ. ಜೂ.9 ರಂದೇ ಪೊಲೀಸರು ಸ್ಥಳದಲ್ಲಿ ಇದ್ದಾಗ, ಜೂ. 12ರವರೆಗೆ ಕಾಯುವ ಅವಶ್ಯಕತೆ ಏನಿತ್ತು’ ಎಂದು ದರ್ಶನ್ ಪರ ವಕೀಲ ಸಿವಿ ನಾಗೇಶ್ ವಾದ ಮಂಡನೆ ಮಾಡಿದ್ದಾರೆ. ಜೂನ್ 12ರಂದು ಪೊಲೀಸರು ಒಂದಷ್ಟು ವಸ್ತುಗಳನ್ನು ಪಟ್ಟಣಗೆರೆ ಶೆಡ್ನಿಂದ ಸೀಜ್ ಮಾಡಿದ್ದರು.
‘ಜೂನ್ 9ರಂದೇ ಪೊಲೀಸರಿಗೆ ಕೃತ್ಯದ ಸಂಪೂರ್ಣ ಮಾಹಿತಿ ಇತ್ತು. ಹಾಗಿದ್ದಾಗ ದರ್ಶನ್ ಹೇಳಿಕೆ ನೀಡುವವರೆಗೆ ಏಕೆ ಸುಮ್ಮನಿದ್ದರು? ಹೇಳಿಕೆ ನಂತರವೇ ಏಕೆ ವಸ್ತುಗಳನ್ನು ಸೀಜ್ ಮಾಡಿದರು. ವಾಚ್ ಮನ್ ರೂಮ್ನ ಎರಡು ಸಿಸಿಟಿವಿ ವಶಕ್ಕೆ ಪಡೆದಿದ್ದಾರೆ. ಇದನ್ನು ಪಿಎಸ್ಐ ವಿನಯ್ ಹೇಳಿಕೆಯಲ್ಲಿ ಉಲ್ಲೇಖಿಸಲಾಗಿದೆ’ ಎಂದು ನಾಗೇಶ್ ವಾದದಲ್ಲಿ ಹೇಳಿದ್ದಾರೆ.
‘ಡಿವಿಆರ್ ಸಾಕ್ಷ್ಯಾಧಾರ ನಾಶಪಡಿಸಿದ್ದಾರೆಂದು ಆರೋಪಿಸಲಾಗಿದೆ. ಆದರೆ ಜೂ.9ರಂದೇ ಪಿಎಸ್ಐ ವಿನಯ್ ಇದನ್ನು ಆರೋಪಿ ಎ14ಗೆ ಕಳುಹಿಸಿದ್ದಾರೆ. ಇದು ಹೇಗೆ ಸಾಧ್ಯವಾಯಿತು? ವಿಡಿಯೋ ಡಿಲೀಟ್ ಮಾಡಿದ್ದು ಯಾರು? ಅದನ್ನು ಮಾಡಿದ್ದು ಯಾರು ಎಂಬುದು ಮಿಲಿಯನ್ ಡಾಲರ್ ಪ್ರಶ್ನೆ’ ಎಂದಿದ್ದಾರೆ ನಾಗೇಶ್.
‘ಪಿಎಸ್ಐ ವಿನಯ್ ಮೊಬೈಲ್ನ ಏಕೆ ಸೀಜ್ ಮಾಡಿಲ್ಲ? ಅವರ ಮೊಬೈಲ್ನಿಂದ ವಿಡಿಯೋನ ಏಕೆ ರಿಟ್ರೀವ್ ಮಾಡಿಲ್ಲ ಎಂಬ ಪ್ರಶ್ನೆಗೆ ಉತ್ತರವಿಲ್ಲ. ರಕ್ತದ ಕಲೆ ಇರುವ ಎರಡು ಮರದ ಕೊಂಬೆ ವಶಕ್ಕೆ ಪಡೆದಿದ್ದಾರೆ. ಎಫ್ಎಸ್ಎಲ್ ವರದಿಯಲ್ಲಿ ರಕ್ತವೇ ಇಲ್ಲ ಎಂದಿದೆ. ಇಂತಹ ತನಿಖೆ ಆಧಾರದಲ್ಲಿ ಆರೋಪಿಗೆ ಗಲ್ಲುd ಶಿಕ್ಷೆ ವಿಧಿಸಲು ಸಾಧ್ಯವೇ’ ಎಂದು ದರ್ಶನ್ ಪರ ವಕೀಲರು ವಾದ ಮಂಡಿಸಿದ್ದಾರೆ.
‘ಸ್ಥಳದಲ್ಲಿದ್ದ ಮಣ್ಣನ್ನು ಸಂಗ್ರಹಿಸಲಾಗಿದೆ. ಅದನ್ನು ಎಫ್ಎಸ್ಎಲ್ಗೆ ಕಳುಹಿಸಿದಾಗ ಅದರಲ್ಲಿ ರಕ್ತದ ಕಲೆ ಇದೆ ಎಂದಿದೆ. ಪಂಚನಾಮದಲ್ಲಿ ಇಲ್ಲದ್ದು ಎಫ್ಎಸ್ಎಲ್ ವರದಿಯಲ್ಲಿ ಹೇಗೆ ಬಂತು? ಇದೆಲ್ಲವೂ ಪೊಲೀಸರು ಸಾಕ್ಷಿ ತಿರುಚಿರುವುದಕ್ಕೆ ಸಾಕ್ಷಿ. ದರ್ಶನ್ ಚಪ್ಪಲಿಯೇ ಶೂ ಆಗಿರುವಾಗ ಇದರಲ್ಲೇನೂ ವಿಶೇಷವಿಲ್ಲ’ ಎಂದು ವ್ಯಂಗ್ಯವಾಡಿದ್ದಾರೆ. ಶೆಡ್ಗೆ ಹೋಗುವಾಗ ದರ್ಶನ್ ಅವರು ಚಪ್ಪಲ್ಲಿ ಧರಿಸಿದ್ದಾಗಿ ಹೇಳಿಕೆಯಲ್ಲಿ ಇತ್ತು. ಆದರೆ, ಪೊಲೀಸರು ಮನೆಗೆ ಹೋಗಿ ದರ್ಶನ್ ಅವರ ಶೂ ವಶಪಡಿಸಿಕೊಂಡಿದ್ದರು. ಅದರಲ್ಲಿ ರಕ್ತದ ಕಲೆ ಇದೆ ಎಂದಿದ್ದರು. ಈ ಕಾರಣದಿಂದ ವಕೀಲರು ಈ ಮಾತನ್ನು ಹೇಳಿದ್ದಾರೆ.
ಇದನ್ನೂ ಓದಿ: ದರ್ಶನ್ಗೆ ಮಿತಿಮೀರಿದ ಬೆನ್ನು ನೋವು; ನಿಲ್ಲೋಕೂ ಆಗ್ತಿಲ್ಲ, ಕೂರೋಕು ಆಗ್ತಿಲ್ಲ
‘ಎ14 ಮೊಬೈಲ್ನಲ್ಲಿ ಮೃತನ ಫೋಟೋ ಇತ್ತೆಂದು ಹೇಳಲಾಗಿದೆ. ಆ ಫೋಟೋವನ್ನು ರಿಟ್ರೀವ್ ಮಾಡಿದ್ದಾಗಿ ಪೊಲೀಸರು ಹೇಳಿದ್ದಾರೆ. ಪಿಎಸ್ಐ ವಿನಯ್ ಹೇಳಿಕೆಯಲ್ಲಿ ಅಂದು ತಾನು ಕೇರಳದಲ್ಲಿದ್ದೆ ಎಂದು ಹೇಳಿಕೆ ನೀಡಿದ್ದಾರೆ. ಆದರೆ, ಮೃತನ ಫೋಟೋವನ್ನು ಕಳುಹಿಸಿದ್ದೇ ಪಿಎಸ್ಐ ವಿನಯ್. ಆದರೆ ವಿನಯ್ ಮೊಬೈಲ್ನ ಸೀಜ್ ಮಾಡಿ ಫೋಟೋ ರಿಟ್ರೀವ್ ಮಾಡಿಲ್ಲ. ಹೀಗಿದ್ದಾಗ ಇದೊಂದು ಕ್ಲಾಸಿಕ್ ತನಿಖೆ ಎಂದು ಹೇಳಲು ಸಾಧ್ಯವೇ’ ಎಂದು ನಾಗೇಶ್ ಪ್ರಶ್ನೆ ಮಾಡಿದ್ದಾರೆ.
‘ರಸ್ತೆಬದಿಯಲ್ಲಿ ರೇಣುಕಾಸ್ವಾಮಿ ಮೃತದೇಹವನ್ನು ಬಿಸಾಡಲಾಗಿತ್ತು. ಜೂ.9ರ ಬೆಳಿಗ್ಗ 10 ಗಂಟೆಗೆ ದೂರನ್ನು ರಿಜಿಸ್ಟರ್ ಮಾಡಲಾಗಿದೆ. ತಕ್ಷಣವೇ ದೇಹದ ಮಹಜರು, ಪಂಚನಾಮೆ ಮಾಡಬೇಕಿತ್ತು. ಆದರೆ ಜೂ. 11ರ ಮಧ್ಯಾಹ್ನ ದೇಹದ ಮಹಜರು ಮಾಡಲಾಗಿದೆ. ಹೀಗೇಕೆ ಮಾಡಿದರು ಎಂಬುದೂ ಮಿಲಿಯನ್ ಡಾಲರ್ ಪ್ರಶ್ನೆ. ಪೋಸ್ಟ್ಮಾರ್ಟಂ ಕೂಡ ಜೂ. 11ರ ಮಧ್ಯಾಹ್ನ 2.45ಕ್ಕೆ ಮಾಡಲಾಗಿದೆ. ದೇಹದ ಐಡೆಂಟಿಟಿ ಆಗಿರಲಿಲ್ಲ ಎಂಬ ಸಬೂಬು ನೀಡಲಾಗಿದೆ. ಆದರೆ ಮಹಜರು ಮಾಡಲು ದೇಹದ ಐಡೆಂಟಿಟಿ ಏಕೆ ಬೇಕು’ ಎಂದು ನಾಗೇಶ್ ವಾದ ಮಂಡನೆ ಮಾಡಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 1:25 pm, Sat, 5 October 24