ಯುವ ರಾಜ್ಕುಮಾರ್ (Yuva Rajkumar) ಮೊದಲ ಸಿನಿಮಾದ ಮುಹೂರ್ತ ಆದ ಬೆನ್ನಲ್ಲೆ ಅವರ ಸಹೋದರ ವಿನಯ್ ರಾಜ್ಕುಮಾರ್ (Vinay Rajkumar) ಅವರ ಹೊಸ ಸಿನಿಮಾವೊಂದು ಸೆಟ್ಟೇರಿದೆ. ಪುನೀತ್ಗಾಗಿ ಸಂತೋಷ್ ಆನಂದ್ ರಾಮ್ ಮಾಡಿದ್ದ ಕತೆಯಲ್ಲಿ ಯುವ ರಾಜ್ಕುಮಾರ್ ನಟಿಸುತ್ತಿದ್ದರೆ, ಅಪ್ಪುಗಾಗಿ ನಿರ್ದೇಶಕ ಸಿಂಪಲ್ ಸುನಿ (Simple Suni) ಮಾಡಿದ್ದ ಕತೆಯಲ್ಲಿ ಈಗ ವಿನಯ್ ನಟಿಸುತ್ತಿದ್ದಾರೆ.
ಸಿಂಪಲ್ ಸುನಿ, ಪುನೀತ್ ರಾಜ್ಕುಮಾರ್ಗಾಗಿ ಕತೆಯೊಂದನ್ನು ಮಾಡಿದ್ದರು ಅದು ಪುನೀತ್ ರಾಜ್ಕುಮಾರ್ಗೆ ಇಷ್ಟವಾಗಿತ್ತು, ಕತೆಯನ್ನು ಚಿತ್ರಕತೆಯನ್ನಾಗಿ ಬದಲಾಯಿಸುವ ವೇಳೆಗೆ ಅಪ್ಪು ನಿಧನ ಹೊಂದಿದರು. ಈಗ ಅದೇ ಕತೆಯನ್ನು ಒಂದು ಸರಳ ಪ್ರೇಮಕತೆ ಹೆಸರಿನಲ್ಲಿ ತೆರೆಗೆ ತರಲು ಸಿಂಪಲ್ ಸುನಿ ಮುಂದಾಗಿದ್ದು ಸಿನಿಮಾದಲ್ಲಿ ವಿನಯ್ ರಾಜ್ಕುಮಾರ್ ನಾಯಕರಾಗಿ ನಟಿಸುತ್ತಿದ್ದಾರೆ.
ಸಿನಿಮಾದ ಚಿತ್ರೀಕರಣ ಮೈಸೂರಿನಲ್ಲಿ ಚಿತ್ರೀಕರಣ ನಡೆಯುತ್ತಿದ್ದು, ಇಂದು (ಮಾರ್ಚ್ 08) ಸಿನಿಮಾದ ಪೋಸ್ಟರ್ ರಿಲೀಸ್ ಮಾಡಲಾಗಿದೆ. ಸಿಂಪಲ್ ಸುನಿ ನಿರ್ದೇಶನದ ಸಿಂಪಲ್ ಆಗ್ ಒಂದ್ ಲವ್ ಸ್ಟೋರಿ ಸಿನಿಮಾ ಬಿಡುಗಡೆ ಆಗಿ ಹತ್ತು ವರ್ಷವಾದ ಹಿನ್ನೆಲೆಯಲ್ಲಿ ಒಂದು ಸರಳ ಪ್ರೇಮ ಕತೆ ಸಿನಿಮಾದ ಪೋಸ್ಟರ್ ಅನ್ನು ಬಿಡುಗಡೆ ಮಾಡಲಾಗಿದೆ.
ಈ ಸಿನಿಮಾದ ಕತೆಯನ್ನು ಪುನೀತ್ ರಾಜ್ಕುಮಾರ್ ಇಷ್ಟಪಟ್ಟಿದ್ದರು. ಮೊದಲು ನಾಲ್ಕು ಸಾಲಲ್ಲಿ ಕತೆ ಹೇಳಿದ್ದೆ ಆಗ ಪುನೀತ್ ರಾಜ್ಕುಮಾರ್ ಒಪ್ಪಿದ್ದರು ಕತೆಯನ್ನು ಡೆವೆಲಪ್ ಮಾಡಬೇಕಿತ್ತು ಆದರೆ ಅಷ್ಟರಲ್ಲಿ ದುರ್ಘಟನೆ ಸಂಭವಿಸಿತು ಈಗ ಅದೇ ಕತೆಯಲ್ಲಿ ವಿನಯ್ ರಾಜ್ಕುಮಾರ್ ನಟಿಸುತ್ತಿದ್ದಾರೆ ಎಂದಿದ್ದಾರೆ ನಿರ್ದೇಶಕ ಸಿಂಪಲ್ ಸುನಿ.
ನಟ ವಿನಯ್ ರಾಜ್ಕುಮಾರ್ ಮಾತನಾಡಿ, ಮೊದಲಿನಿಂದಲೂ ನನಗೆ ರೊಮ್ಯಾಂಟಿಕ್ ಕಾಮಿಡಿ ಸಿನಿಮಾಗಳೆಂದರೆ ಬಹಳ ಇಷ್ಟ. ಇದೂ ಸಹ ಅದೇ ಜಾನರ್ನ ಸಿನಿಮಾ. ಈ ಸಿನಿಮಾದಲ್ಲಿ ಅತಿಶಯ್ ಹೆಸರಿನ ಪಾತ್ರದಲ್ಲಿ ನಟಿಸುತ್ತಿದ್ದೀನಿ. ಸಂಗೀತ ನಿರ್ದೇಶಕ ಆಗುವ ಕನಸು ಹೊತ್ತಿರುವ ಯುವಕನ ಕತೆಯನ್ನು ಈ ಸಿನಿಮಾ ಒಳಗೊಂಡಿದೆ ಎಂದರು. ಸಿನಿಮಾದಲ್ಲಿ ಮಲ್ಲಿಕಾ ಹಾಗೂ ಸ್ವಾತಿಷ್ಟಾ ಹೆಸರಿನ ಇಬ್ಬರು ನಾಯಕಿಯರಿದ್ದಾರೆ.
ಸಿಂಪಲ್ ಸುನಿ ಈಗಾಗಲೇ ನಾಲ್ಕು ಸಿನಿಮಾಗಳನ್ನು ನಿರ್ದೇಶನ ಮಾಡುತ್ತಿದ್ದಾರೆ. ರಾಬಿನ್ ಹುಡ್, ಸ್ಟೋರಿ ಆಫ್ ರಾಯಘಡ, ಗತವೈಭವ ಜೊತೆಗೆ ಅವತಾರ ಪುರುಷ 2 ಸಿನಿಮಾವನ್ನು ಘೋಷಿಸಿದ್ದಾರೆ. ಇದರ ನಡುವೆ ಒಂದು ಸರಳ ಪ್ರೇಮಕತೆ ಸಿನಿಮಾ ಸಹ ಪ್ರಾರಂಭಿಸಿದ್ದಾರೆ. ಒಂದರ ಹಿಂದೊಂದು ಸಿನಿಮಾವನ್ನು ಸಿಂಪಲ್ ಸುನಿ ತೆರೆಗೆ ತರಲು ಹೊರಟಿದ್ದಾರೆ.
ಇನ್ನು ನಟ ವಿನಯ್ ರಾಜ್ಕುಮಾರ್ ಸಹ ಬ್ಯುಸಿ ನಟರೇ ಆಗಿದ್ದಾರೆ. ಅವರ ನಟನೆಯ ಅಂದೊಂದಿತ್ತು ಕಾಲ ಹಾಗೂ ಪೆಪೆ ಸಿನಿಮಾಗಳು ತೆರೆಗೆ ಬರಬೇಕಿದೆ. ಗ್ರಾಮಾಯಣ ಹೆಸರಿನ ಸಿನಿಮಾದ ಶೂಟಿಂಗ್ ಅರ್ಧ ಮುಗಿಸಿದ್ದರು ಆ ವೇಳೆಗೆ ನಿರ್ಮಾಪಕ ನಿಧನರಾದರು. ಆ ಸಿನಿಮಾ ಸಹ ಇನ್ನೂ ಬಿಡುಗಡೆ ಆಗಬೇಕಿದೆ. ಇದೀಗ ಒಂದು ಸರಳ ಪ್ರೇಮ ಕತೆ ಸಿನಿಮಾ ಸೆಟ್ಟೇರಿದೆ.