ಎಸ್.ಕೆ. ಭಗವಾನ್ (SK Bhagavan) ಅವರನ್ನು ಕಳೆದುಕೊಂಡ ಕನ್ನಡ ಚಿತ್ರರಂಗ ಬಡವಾಗಿದೆ. ಕನ್ನಡದಲ್ಲಿ ಹಲವು ಸೂಪರ್ ಹಿಟ್ ಚಿತ್ರಗಳನ್ನು ನೀಡಿದ ಖ್ಯಾತಿ ಭಗವಾನ್ ಅವರಿಗೆ ಸಲ್ಲುತ್ತದೆ. ಬಿ. ದೊರೈ ರಾಜ್ ಹಾಗೂ ಎಸ್.ಕೆ ಭಗವಾನ್ ಒಟ್ಟಾಗಿ ಸಿನಿಮಾ ನಿರ್ದೇಶನ ಮಾಡುತ್ತಿದ್ದರು. ಈ ಜೋಡಿ ದೊರೈ-ಭಗವಾನ್ (Dorai–Bhagavan
) ಎಂದೇ ಈ ಫೇಮಸ್ ಆಗಿತ್ತು. ಇವರ ನಿರ್ದೇಶನದ ಸಿನಿಮಾಗಳೂ ಇಂದಿಗೂ ಫೇಮಸ್.
ಭಗವಾನ್ ಅವರು ಹಿರಣ್ಣಯ್ಯ ಮಿತ್ರ ಮಂಡಳಿಯಲ್ಲಿ ನಾಟಕ ಮಾಡುತ್ತಿದ್ದರು. ನಂತರ ಅವರು ಚಿತ್ರರಂಗದ ಕಡೆ ಹೊರಳಿದರು. ನಟನಾಗಬೇಕು ಎಂಬುದು ಅವರ ಕನಸಾಗಿತ್ತು. ಆದರೆ, ಕೊನೆಗೆ ಅವರು ಖ್ಯಾತಿ ಪಡೆದಿದ್ದು ನಿರ್ದೇಶಕನಾಗಿ. ಪಿವಿ ಬಾಬು ಅವರ ನಿರ್ದೇಶನದ ‘ಭಾಗ್ಯೋದಯ’ ಸಿನಿಮಾಗೆ ಸಹಾಯಕ ನಿರ್ದೇಶಕರಾಗಿ ಭಗವಾನ್ ಕೆಲಸ ಮಾಡಿದರು. ಉದಯ್ ಕುಮಾರ್ ನಟನೆಯ ಈ ಸಿನಿಮಾ 1956ರಲ್ಲಿ ತೆರೆಗೆ ಬಂತು. 1966ರಲ್ಲಿ ರಿಲೀಸ್ ಆದ ‘ಸಂಧ್ಯಾರಾಗ’ ಸಿನಿಮಾ ಮೂಲಕ ಭಗವಾನ್ ನಿರ್ದೇಶಕರಾಗಿ ಬಡ್ತಿ ಪಡೆದರು. ಆದರೆ, ಇದರ ಕ್ರೆಡಿಟ್ನ ಎ.ಸಿ. ನರಸಿಂಹಮೂರ್ತಿಗೆ ನೀಡಲಾಯಿತು.
ಹಾಲಿವುಡ್ನಲ್ಲಿ ಬಾಂಡ್ ಶೈಲಿಯ ಸಿನಿಮಾಗಳು ಫೇಮಸ್ ಆಗಿದ್ದವು. ಇದನ್ನು ಸ್ಯಾಂಡಲ್ವುಡ್ಗೆ ಪರಿಚಯಿಸಿದ್ದು ದೊರೈ-ಭಗವಾನ್. 1968ರಲ್ಲಿ ರಿಲೀಸ್ ಆದ ರಾಜ್ಕುಮಾರ್ ನಟನೆಯ ‘ಜೇಡರ ಬಲೆ’ ಚಿತ್ರಕ್ಕೆ ದೊರೈ-ಭಗವಾನ್ ನಿರ್ದೇಶನ ಮಾಡಿದರು. ಇವರ ಕಾಂಬಿನೇಷನ್ನ ಮೊದಲ ಸಿನಿಮಾ ಯಶಸ್ಸು ಕಂಡಿತು. ಇದು ಕನ್ನಡದ ಮೊದಲ ಬಾಂಡ್ ಶೈಲಿಯ ಸಿನಿಮಾ ಅನ್ನೋದು ವಿಶೇಷ. ನಂತರ ಬಂದ ‘ಗೋವಾದಲ್ಲಿ ಸಿಐಡಿ 999’, ‘ಆಪರೇಷನ್ ಜಾಕ್ಪಾಟ್ನಲ್ಲಿ ಸಿಐಡಿ 999’, ‘ಆಪರೇಷನ್ ಡೈಮಂಡ್ ರಾಕೆಟ್’ ಸಿನಿಮಾಗಳು ಕೂಡ ಬಾಂಡ್ ಶೈಲಿಯಲ್ಲೇ ಮೂಡಿ ಬಂದವು.
ರಾಜ್ಕುಮಾರ್ ಹಾಗೂ ದೊರೈ-ಭಗವಾನ್ ಕಾಂಬಿನೇಷನ್ ಸಾಕಷ್ಟು ಫೇಮಸ್ ಆಗಿತ್ತು. ಇವರ ನಿರ್ದೇಶನದಲ್ಲಿ ಮೂಡಿಬರುವ ಸಿನಿಮಾಗಳಿಗೆ ಸಾಕಷ್ಟು ಬೇಡಿಕೆ ಇತ್ತು. 1971ರಲ್ಲಿ ರಿಲೀಸ್ ಆದ ‘ಕಸ್ತೂರಿ ನಿವಾಸ’ ಚಿತ್ರ ಅಂದಿನ ಕಾಲಕ್ಕೆ ದೊಡ್ಡ ಮಟ್ಟದ ಯಶಸ್ಸು ಕಂಡಿತು. ರಾಜ್ಕುಮಾರ್ ಅವರ ಹಲವು ಚಿತ್ರಕ್ಕೆ ಭಗವಾನ್ ನಿರ್ದೇಶನ ಮಾಡಿದ್ದರು. 1994ರಲ್ಲಿ ಬಂದ ‘ಒಡಹುಟ್ಟಿದವರು’ ರಾಜ್ಕುಮಾರ್ ಜೊತೆ ದೊರೈ-ಭಗವಾನ್ ಮಾಡಿದ ಕೊನೆಯ ಸಿನಿಮಾ.
ರಾಜ್ಕುಮಾರ್ ಮಾತ್ರವಲ್ಲದೆ ಅನಂತ್ ನಾಗ್, ಶಂಕರ್ನಾಗ್, ಕುಮಾರ್ ಬಂಗಾರಪ್ಪ, ಸಾಯಿ ಕುಮಾರ್ ಮೊದಲಾದವರ ಸಿನಿಮಾಗಳಿಗೆ ಭಗವಾನ್ ನಿರ್ದೇಶನ ಮಾಡಿದ್ದರು. ರಾಜ್ಕುಮಾರ್ ಬಳಿಕ ಅವರು ಅತಿ ಹೆಚ್ಚು ನಿರ್ದೇಶನ ಮಾಡಿದ್ದು ಅನಂತ್ನಾಗ್ ಅವರಿಗೆ ಅನ್ನೋದು ವಿಶೇಷ.
ಕಾದಂಬರಿ ಆಧಾರಿತ ಸಿನಿಮಾಗಳನ್ನು ದೊರೈ-ಭಗವಾನ್ ಮಾಡುತ್ತಿದ್ದರು. ತರಾಸು ಅವರ ಸಾಕಷ್ಟು ಕಾದಂಬರಿಗಳನ್ನು ದೊರೈ-ಭಗವಾನ್ ಬೆಳ್ಳಿಪರದೆಗೆ ತಂದಿದ್ದಾರೆ. ಎರಡು ಕನಸು, ಗಿರಿ ಕನ್ಯೆ, ವಸಂತ ಗೀತ, ಗಾಳಿ ಮಾತು, ಬೆಂಕಿಯ ಬಲೆ ಮೊದಲಾದ ಸಿನಿಮಾಗಳು ದೊರೈ ಭಗವಾನ್ ನಿರ್ದೇಶನದಲ್ಲಿ ಮೂಡಿ ಬಂದವು. 1995ರಲ್ಲಿ ಬಂದ ‘ಬಾಳೊಂದು ಚದುರಂಗ’ ಸಿನಿಮಾ ದೊರೈ-ಭಗವಾನ್ ಕಾಂಬಿನೇಷನ್ನ ಕೊನೆಯ ಸಿನಿಮಾ. ನಂತರ ಅವರು ನಿರ್ದೇಶನದಿಂದ ದೂರ ಉಳಿದರು. 2019ರಲ್ಲಿ ರಿಲೀಸ್ ಆದ ‘ಆಡುವ ಗೊಂಬೆ’ ಚಿತ್ರಕ್ಕೆ ಭಗವಾನ್ ನಿರ್ದೇಶನ ಮಾಡಿದ್ದರು. ಇದು ಅವರ ನಿರ್ದೇಶನದ ಕೊನೆಯ ಸಿನಿಮಾ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 9:42 am, Mon, 20 February 23