ವೈರಲ್ ವಿಡಿಯೋ ಮೂಲಕ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಗೆ ಒಳಗಾಗಿದ್ದ ಸೋನು ಶ್ರೀನಿವಾಸ್ ಗೌಡ (Sonu Srinivas Gowda) ಅವರು ನಂತರ ಬಿಗ್ ಬಾಸ್ ರಿಯಾಲಿಟಿ ಶೋನಲ್ಲಿ ಸ್ಪರ್ಧಿಸುವ ಅವಕಾಶ ಪಡೆದರು. ಈಗ ಅವರು ಸಿನಿಮಾ ನಟಿಯಾಗಿಯೂ ಸಕ್ರಿಯರಾಗಿದ್ದಾರೆ. ಅವರು ಅಭಿನಯಿಸುತ್ತಿರುವ ‘ಕ್ಯಾಡ್ಬರಿಸ್’ ಸಿನಿಮಾದಿಂದ ಹೊಸ ಪೋಸ್ಟರ್ ಬಿಡುಗಡೆ ಆಗಿದೆ. ಆ ಖುಷಿಯಲ್ಲಿ ಸೋನು ಗೌಡ (Sonu Gowda) ಅವರು ಸೋಶಿಯಲ್ ಮೀಡಿಯಾ ಮೂಲಕ ಒಂದಷ್ಟು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಅವರ ಪೋಸ್ಟರ್ ನೋಡಿ ನೆಟ್ಟಿಗರು ಬಗೆಬಗೆಯಲ್ಲಿ ಕಮೆಂಟ್ ಮಾಡುತ್ತಿದ್ದಾರೆ. ಅನೇಕರಿಂದ ಅವರಿಗೆ ಅಭಿನಂದನೆ ಸಲ್ಲಿಕೆಯಾಗುತ್ತಿದೆ. ‘ಕ್ಯಾಡ್ಬರಿಸ್’ ಚಿತ್ರಕ್ಕೆ ಶುಭವಾಗಲಿ ಎಂದು ಬಹುತೇಕರು ಹಾರೈಸಿದ್ದಾರೆ. ಇನ್ನೂ ಕೆಲವರು ಎಂದಿನಂತೆ ನೆಗೆಟಿವ್ ಕಮೆಂಟ್ ಮಾಡಿದ್ದಾರೆ. ಈ ಚಿತ್ರದಲ್ಲಿ ಧರ್ಮ ಕೀರ್ತಿರಾಜ್ (Dharma Keerthiraj) ಮತ್ತು ಅದ್ವಿತಿ ಶೆಟ್ಟಿ ಅವರು ಮುಖ್ಯ ಪಾತ್ರ ನಿಭಾಯಿಸುತ್ತಿದ್ದಾರೆ.
‘ಎಲ್ಲರಿಗೂ ನಮಸ್ಕಾರ.. ನಾನು ನಿಮ್ಮ ಮನೆ ಮಗಳು’ ಎನ್ನುವ ಮೂಲಕ ಸೋನು ಗೌಡ ಅವರು ಇನ್ಸ್ಟಾಗ್ರಾಮ್ನಲ್ಲಿ ಬರಹ ಆರಂಭಿಸಿದ್ದಾರೆ. ‘ನಿಮ್ಮೆಲ್ಲರಿಗೂ ತಿಳಿದಿರುವ ಹಾಗೆ ಕನಸು ಪ್ರೊಡಕ್ಷನ್ಸ್ ನಿರ್ಮಾಣದ ಕ್ಯಾಡ್ಬರಿಸ್ ಚಿತ್ರದ ನಾನು ಒಂದು ಮುಖ್ಯ ಪಾತ್ರದಲ್ಲಿ ನಟಿಸುತ್ತಿದ್ದೇನೆ ಅಂತ ತಿಳಿಸಿದ್ದೆ. ಈಗ ಆ ಸಿನಿಮಾದ ಚಿತ್ರೀಕರಣ ಕೊನೆಯ ಹಂತದಲ್ಲಿದೆ. ಈ ವರ್ಷದ ಕೊನೆಯಲ್ಲಿ ನಿಮ್ಮ ಮುಂದೆ ಬರಲಿದ್ದೇವೆ. ಇಂದು ಈ ಚಿತ್ರತಂಡದಿಂದ ನನ್ನ ಮೊದಲ ಪೋಸ್ಟರ್ ಬಿಡುಗಡೆ ಆಗಿದೆ. ನಿಮ್ಮೆಲ್ಲರ ಆಶೀರ್ವಾದ ನನ್ನ ಮೇಲೆ ಮತ್ತು ನಮ್ಮ ತಂಡದ ಮೇಲೆ ಯಾವಾಗಲೂ ಇರಲಿ ಅಂತ ಕೇಳಿಕೊಳ್ಳುತ್ತೇವೆ’ ಎಂದು ಸೋನು ಶ್ರೀನಿವಾಸ್ ಗೌಡ ಪೋಸ್ಟ್ ಮಾಡಿದ್ದಾರೆ.
ಇದನ್ನೂ ಓದಿ: ಮಾಲ್ಡೀವ್ಸ್ನಲ್ಲಿ ಸೋನು ಶ್ರೀನಿವಾಸ್ ಗೌಡ; ಇಲ್ಲಿವೆ ಹಾಟ್ ಫೋಟೋಗಳು
‘ಈ ಚಿತ್ರವು ರೆಟ್ರೋ ಶೈಲಿಯಲ್ಲಿದೆ ಹಾಗೂ ನನ್ನ ಪಾತ್ರ ತುಂಬಾ ಚೆನ್ನಾಗಿ ಮೂಡಿಬಂದಿದೆ. ಈ ಸಿನಿಮಾದಲ್ಲಿ ಧರ್ಮ ಕೀರ್ತಿರಾಜ್ ಹಾಗೂ ಅದ್ವಿತಿ ಶೆಟ್ಟಿ ಅವರು ಮುಖ್ಯ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಹಲವಾರು ದೊಡ್ಡ ದೊಡ್ಡ ಕಲಾವಿದರು ನಟಿಸುತ್ತಿದ್ದಾರೆ. ಅವರೆಲ್ಲರ ಜೊತೆ ನಟಿಸಿದ್ದು ನನಗೆ ಸಂತಸ ತಂದಿದೆ. ಈ ಚಿತ್ರವನ್ನು ರಮೇಶ್ ಯಾದವ್ ಅವರು ನಿರ್ದೇಶನ ಮಾಡುತ್ತಿದ್ದು, ಡಾ. ಶಿವರಾಜ್ ಜಾಣಗೆರೆ ಅವರು ಕಥೆ, ಚಿತ್ರಕಥೆ, ಸಂಭಾಷಣೆ, ಸಾಹಿತ್ಯ ಬರೆದು ಸಂಗೀತ ಸಂಯೋಜನೆಯನ್ನೂ ಮಾಡಿದ್ದಾರೆ’ ಎಂದು ಸೋನು ಗೌಡ ಮಾಹಿತಿ ಹಂಚಿಕೊಂಡಿದ್ದಾರೆ.
‘ಶರತ್ ಕುಮಾರ್ ಅವರ ಛಾಯಾಗ್ರಹಣ ಈ ಚಿತ್ರಕ್ಕಿದೆ. ಸಿನಿಮಾ ತುಂಬಾ ಸೊಗಸಾಗಿ ಮೂಡಿಬಂದಿದೆ. ನನಗೆ ಕ್ಯಾಡ್ಬರಿಸ್ ಚಿತ್ರದಲ್ಲಿ ನಟಿಸಲು ಅವಕಾಶ ಮಾಡಿಕೊಟ್ಟ ನಿರ್ಮಾಪಕರಿಗೆ, ನಿರ್ದೇಶಕರಿಗೆ ಹಾಗೂ ಚಿತ್ರತಂಡದ ಎಲ್ಲರಿಗೂ ನನ್ನ ಧನ್ಯವಾದಗಳನ್ನು ತಿಳಿಸುತ್ತಾ ಸಮಸ್ತ ಕನ್ನಡ ನಾಡಿನ ಜನರ ಆಶೀರ್ವಾದ ಬಯಸುತ್ತಿರುವ ನಿಮ್ಮ ಪ್ರೀತಿಯ ಸೋನು ಶ್ರೀನಿವಾಸ್ ಗೌಡ’ ಎಂದು ಅವರು ಪೋಸ್ಟ್ ಪೂರ್ಣಗೊಳಿಸಿದ್ದಾರೆ. ಪೋಸ್ಟರ್ ಜೊತೆಯಲ್ಲಿ ಶೂಟಿಂಗ್ ಸಂದರ್ಭದ ಒಂದು ಪೋಟೋವನ್ನು ಕೂಡ ಸೋನು ಗೌಡ ಹಂಚಿಕೊಂಡಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.