ಸ್ಪಂದನಾ ಅಂತಿಮ ದರ್ಶನಕ್ಕೆ ವ್ಯವಸ್ಥೆ; ಭಾವುಕರಾಗಿ ನಿಂತಿರುವ ವಿಜಯ್ ರಾಘವೇಂದ್ರ

|

Updated on: Aug 09, 2023 | 7:28 AM

ಮುಂಜಾನೆ ಹಲವು ಪೂಜಾ ಕಾರ್ಯಗಳನ್ನು ಮಾಡಲಾಗಿದೆ. ಮಧ್ಯಾಹ್ನದ ವೇಳೆಗೆ ಅಂತ್ಯ ಸಂಸ್ಕಾರ ನೆರವೇರಲಿದೆ. ಈಡಿಗ ಸಮುದಾಯದ ಪ್ರಕಾರ ಅಂತ್ಯ ಸಂಸ್ಕಾರ ನಡೆಯಲಿದೆ.

ಸ್ಪಂದನಾ ಅಂತಿಮ ದರ್ಶನಕ್ಕೆ ವ್ಯವಸ್ಥೆ; ಭಾವುಕರಾಗಿ ನಿಂತಿರುವ ವಿಜಯ್ ರಾಘವೇಂದ್ರ
ವಿಜಯ್ ರಾಘವೇಂದ್ರ
Follow us on

ವಿಜಯ್ ರಾಘವೇಂದ್ರ ಅವರ ಪತ್ನಿ ಸ್ಪಂದನಾ ಅವರ ಪಾರ್ಥಿವ ಶರೀರವನ್ನು ಬೆಂಗಳೂರಿಗೆ ತರಲಾಗಿದೆ. ಬ್ಯಾಂಕಾಕ್​​ನಲ್ಲಿ ಹೃದಯಾಘಾತದಿಂದ ಮೃತಪಟ್ಟ ಅವರ ದೇಹವನ್ನು ಕುಟುಂಬಸ್ಥರು ವಿಮಾನದಲ್ಲಿ ಕರೆತಂದಿದ್ದಾರೆ. ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದೆ. ವಿಜಯ್ ರಾಘವೇಂದ್ರ (Vijay Raghavendra) ಅವರು ಮೌನವಾಗಿ ಪಾರ್ಥಿವ ಶರೀರದ ಎದುರು ನಿಂತಿದ್ದಾರೆ. ಬೆಂಗಳೂರಿನ ಮಲ್ಲೇಶ್ವರದಲ್ಲಿರುವ ಸ್ಪಂದನಾ ತಂದೆ ಶಿವರಾಂ ಅವರ ಮನೆಯಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಸ್ಯಾಂಡಲ್​ವುಡ್​ನ ಹಲವು ಸೆಲೆಬ್ರಿಟಿಗಳು ಆಗಮಿಸಿ ಸ್ಪಂದನಾ ಅವರ ಅಂತಿಮ ದರ್ಶನ ಪಡೆಯಲಿದ್ದಾರೆ.

ಥೈಲೆಂಡ್​​ನಲ್ಲಿ ಮೃತಪಟ್ಟಿದ್ದರಿಂದ ಮೃತದೇಹ ತರಲು ಹಲವು ಪ್ರಕ್ರಿಯೆಗಳನ್ನು ಫಾಲೋ ಮಾಡಬೇಕಿತ್ತು. ಅದನ್ನು ಕುಟುಂಬದವರು ಮುಂದೆ ನಿಂತು ಮಾಡಿದ್ದಾರೆ. ಮಂಗಳವಾರ ರಾತ್ರಿ ವೇಳೆಗೆ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಪಾರ್ಥಿವ ಶರೀರವನ್ನು ಕರೆತರಲಾಯಿತು. ಈ ವೇಳೆ ವಿಜಯ್ ರಾಘವೇಂದ್ರ ಹಾಗೂ ಸ್ಪಂದನಾ ಕುಟುಂಬದವರು ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದರು.

ಮುಂಜಾನೆ ಹಲವು ಪೂಜಾ ಕಾರ್ಯಗಳನ್ನು ಮಾಡಲಾಗಿದೆ. ಮಧ್ಯಾಹ್ನದ ವೇಳೆಗೆ ಅಂತ್ಯ ಸಂಸ್ಕಾರ ನೆರವೇರಲಿದೆ. ಈಡಿಗ ಸಮುದಾಯದ ಪ್ರಕಾರ ಅಂತ್ಯ ಸಂಸ್ಕಾರ ನಡೆಯಲಿದೆ. ಸದ್ಯ ವಿಜಯ್ ರಾಘವೇಂದ್ರ ಮನೆಯಲ್ಲಿ ನೀರವ ಮೌನ ಆವರಿಸಿದೆ.

ವಿಜಯ್ ರಾಘವೇಂದ್ರ ಅವರದ್ದು ಲವ್ ಮ್ಯಾರೇಜ್. ಸ್ಪಂದನಾ ಅವರನ್ನು ಪ್ರೀತಿಸಿ, ಕುಟುಂಬದವರನ್ನು ಒಪ್ಪಿಸಿ ಮದುವೆ ಆದರು. ಅವರಿಗೆ ಪತ್ನಿಯ ಬಗ್ಗೆ ಅಪಾರ ಪ್ರೀತಿ ಇತ್ತು. ಈಗ ಪ್ರೀತಿಯ ಪತ್ನಿಯನ್ನು ಕಳೆದುಕೊಂಡು ಅವರು ದುಃಖಕ್ಕೆ ಒಳಗಾಗಿದ್ದಾರೆ. ಅವರಿಗೆ ಈಗ ಮಾತೇ ಬಾರದಂತಾಗಿದೆ. ಈ ಕಾರಣಕ್ಕೆ ವಿಜಯ್ ರಾಘವೇಂದ್ರ ಅವರನ್ನು ಸಂತೈಸುವ ಕೆಲಸ ಎಲ್ಲರಿಂದಲೂ ಆಗುತ್ತಿದೆ. ಅವರಿಗೆ ದುಃಖ ಭರಿಸುವ ಶಕ್ತಿಯನ್ನು ಆ ದೇವರು ನೀಡಲಿ ಎಂದು ಎಲ್ಲರೂ ಕೋರುತ್ತಿದ್ದಾರೆ.


ಇದನ್ನೂ ಓದಿ: ಪತ್ನಿ ಸ್ಪಂದನಾ ಮೃತದೇಹದೊಂದಿಗೆ ಬೆಂಗಳೂರಿಗೆ ಬಂದ ವಿಜಯ್ ರಾಘವೇಂದ್ರ

ರಾಜ್​ಕುಮಾರ್ ಕುಟುಂಬದ ಜೊತೆಗೆ ವಿಜಯ್ ರಾಘವೇಂದ್ರ ಕುಟುಂಬಕ್ಕೆ ನಂಟಿದೆ. ಈ ಕಾರಣಕ್ಕೆ ಶಿವರಾಜ್​​ಕುಮಾರ್, ಅಶ್ವಿನಿ ಪುನೀತ್ ರಾಜ್​ಕುಮಾರ್ ಸೇರಿದಂತೆ ರಾಜ್​ ಕುಟುಂಬದ ಅನೇಕರು ಇಂದು ಸ್ಪಂದನಾ ಅಂತ್ಯ ಸಂಸ್ಕಾರದಲ್ಲಿ ಭಾಗಿ ಆಗುವ ಸಾಧ್ಯತೆ ಇದೆ. ಈಗಾಗಲೇ ಅಂತ್ಯ ಸಂಸ್ಕಾರಕ್ಕೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಈಡಿಗ ಸಮುದಾಯದ ಪ್ರಕಾರ ಅಂತ್ಯಕ್ರಿಯೆ ನೆರವೇರಲಿದೆ. ಮುಂಜಾನೆ ರಾಘವೇಂದ್ರ ರಾಜ್​ಕುಮಾರ್, ಕೋಮಲ್ ಸೇರಿದಂತೆ ಅನೇಕರು ಆಗಮಿಸಿ ಸಂತಾಪ ಸೂಚಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 7:03 am, Wed, 9 August 23