ನಟ ಪುನೀತ್‌ಗೆ ಪದ್ಮ ಪ್ರಶಸ್ತಿ ನೀಡುವಂತೆ ಒತ್ತಾಯ ಬಂದಿರುವ ಹಿನ್ನೆಲೆಯಲ್ಲಿ, ಸರ್ಕಾರ ಅಗತ್ಯ ಕ್ರಮಕ್ಕೆ ಮುಂದಾಗಿದೆ. ಈ ನಿಟ್ಟಿನಲ್ಲಿ ಸದ್ಯದಲ್ಲೇ ಕೇಂದ್ರಕ್ಕೆ ನಟ ಪುನೀತ್ ಹೆಸರಿನ ಶಿಫಾರಸು ಪತ್ರ ಕಳಿಸಲು ಕ್ರಮ ಕೈಗೊಳ್ಳಲಾಗುತ್ತದೆ. ಈ ಕುರಿತು ನವೆಂಬರ್ 16ರ ಬಳಿಕ ಸರ್ಕಾರದ ಮಟ್ಟದಲ್ಲಿ ಹಾಗೂ ಪುನೀತ್ ಕುಟುಂಬದ ಜತೆ ಚರ್ಚಿಸಿ ಹೆಸರು ಶಿಫಾರಸು ಮಾಡುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ. ಅಭಿಮಾನಿಗಳು ಪುನೀತ್ ಅವರಿಗೆ ಪದ್ಮಶ್ರೀ ಪ್ರಶಸ್ತಿಗೆ ಒತ್ತಾಯಿಸಿದ್ದರು. ಈ ನಿಟ್ಟಿನಲ್ಲಿ ಸರ್ಕಾರ ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ. ಇತ್ತೀಚೆಗೆ ಸಿಎಂ ಕೂಡ ಪುನೀತ್‌ಗೆ ಪದ್ಮಶ್ರೀ ನೀಡುವ ವಿಚಾರಕ್ಕೆ ಸಮ್ಮತವಿದೆ ಎಂಬ ಸುಳಿವು ಬಿಟ್ಟುಕೊಟ್ಟಿದ್ದರು.
ಪುನೀತ್ ಪುತ್ಥಳಿ ಪ್ರತಿಷ್ಠಾಪಿಸುವ ಮುನ್ನ ಅನುಮತಿ ಪಡೆಯುವಂತೆ ಬಿಬಿಎಂಪಿ ಕೋರಿಕೆ
ಬೆಂಗಳೂರಿನಲ್ಲಿ ನಟ ಪುನೀತ್ ಪುತ್ಥಳಿ ಪ್ರತಿಷ್ಠಾಪನೆಗೆ ಸಿದ್ಧತೆ ಅಭಿಮಾನಿಗಳು ಸಿದ್ಧತೆ ನಡೆಸಿದ್ದು, ಪುತ್ಥಳಿ ಪ್ರತಿಷ್ಠಾಪನೆಗೆ ಸ್ಥಳ ಗುರುತು ಮಾಡಿದ್ದಾರೆ. ಈ ನಡುವೆ ಬಿಬಿಎಂಪಿ ಫ್ಯಾನ್ಸ್ ಬಳಿ ಮನವಿ ಮಾಡಿಕೊಂಡಿದ್ದು, ಅನಧಿಕೃತವಾಗಿ ಪುತ್ಥಳಿ ಪ್ರತಿಷ್ಠಾಪಿಸದಂತೆ ಕೋರಿಕೊಂಡಿದೆ. ಅನಧಿಕೃತ ಪುತ್ಥಳಿ ತೆರವಿಗೆ ಹೈಕೋರ್ಟ್ ಸೂಚನೆ ಹಿನ್ನೆಲೆಯಲ್ಲಿ , ಅನುಮತಿ ಪಡೆಯದೆ ಯಾವುದೇ ಪುತ್ಥಳಿ ಸ್ಥಾಪಿಸುವಂತಿಲ್ಲ. ಹೀಗಾಗಿ ಬಿಬಿಎಂಪಿ ಅನುಮತಿ ಪಡೆಯುವಂತೆ ಸೂಚನೆ ನೀಡಲಾಗಿದೆ. ಸಾರ್ವಜನಿಕ ಸ್ಥಳದಲ್ಲಿ ಪುತ್ಥಳಿ ಇಡದಂತೆ ಸೂಚನೆ ನೀಡಲಾಗಿದ್ದು, ಫುಟ್ ಪಾತ್, ಸಾರ್ವಜನಿಕರು ಓಡಾಡೋ ಸ್ಥಳ, ವಾಹನ ಸಂಚಾರಕ್ಕೆ ಅಡ್ಡಿಯಾಗದಂತಹ ಸ್ಥಳ ಗುರುತಿಸಲು ಸೂಚನೆ ನೀಡಲಾಗಿದೆ.
ರಾಜ್ಯದ 550 ಚಿತ್ರಮಂದಿರಗಳಲ್ಲಿ ನಾಳೆ ಪುನೀತ್ ರಾಜಕುಮಾರ್ ಅವರಿಗೆ ವಿಶೇಷ ನಮನ:
ಅಕಾಲಿಕ ನಿಧನದಿಂದ ದೂರವಾದ ನಟ ಪುನೀತ್ ರಾಜಕುಮಾರ್ ಅವರಿಗೆ ರಾಜ್ಯದ 550ಕ್ಕೂ ಅಧಿಕ ಚಿತ್ರಮಂದಿರಗಳು ನಮನ ಸಲ್ಲಿಸಲಿವೆ. ನಾಳೆ ಸಂಜೆ 6ಕ್ಕೆ ರಾಜ್ಯದ ಚಿತ್ರಮಂದಿರಗಳಲ್ಲಿ ಕಾರ್ಯಕ್ರಮ ಏರ್ಪಡಿಸಲಾಗಿದ್ದು, ಗೀತಾಂಜಲಿ, ಪುಷ್ಪಾಂಜಲಿ, ದೀಪಾಂಜಲಿ ಮೂಲಕ ಚಿತ್ರ ಪ್ರದರ್ಶಕರಿಂದ ಪುನೀತ್‌ಗೆ ನಮನ ಸಲ್ಲಿಸಲಾಗುವುದು. ನಾಗೇಂದ್ರ ಪ್ರಸಾದ್ ರಚಿಸಿದ ಹಾಡಿನ ಮೂಲಕ ಗೀತಾಂಜಲಿ, ನಟ ಪುನೀತ್ ಭಾವಚಿತ್ರಕ್ಕೆ ಪುಷ್ಪನಮನ ಹಾಗೂ ಚಿತ್ರಮಂದಿರಗಳಲ್ಲಿ ಮೊಂಬತ್ತಿ ಹಚ್ಚಿ ಪುನೀತ್‌ಗೆ ದೀಪಾಂಜಲಿ ನಡೆಸಲಾಗುವುದು. ನಂತರ ಮೌನಾಚರಣೆ ಮೂಲಕ ಪುನೀತ್ ರಾಜ್‌ಕುಮಾರ್‌ಗೆ ನಮನ ಸಲ್ಲಿಸಲಾಗುವುದು. ಈ ಮೂಲಕ ಥಿಯೇಟರ್ ಸಿಬ್ಬಂದಿ, ಅಭಿಮಾನಿಗಳು ನೆಚ್ಚಿನ ನಟನಿಗೆ ಶ್ರದ್ಧಾಂಜಲಿ ಸಲ್ಲಿಸಲಿದ್ದಾರೆ.
ಇದನ್ನೂ ಓದಿ:
ಪುನೀತ್ ರಾಜಕುಮಾರ್ ಅವರ ಆದರ್ಶ ಮತ್ತು ಸಮಾಜಮುಖಿ ಚಿಂತನೆ ನನ್ನ ಮೇಲೆ ಅಗಾಧ ಪ್ರಭಾವ ಬೀರಿದೆ: ಎಮ್ ಪಿ ರೇಣುಕಾಚಾರ್ಯ
Published On - 10:00 am, Sat, 6 November 21