ಕೇರಳಕ್ಕೆ ಹೊರಟ ‘ಸು ಫ್ರಂ ಸೋ’: ಸ್ಟಾರ್ ನಟನ ಬೆಂಬಲ

Su From So Kannada movie: ರಾಜ್ ಬಿ ಶೆಟ್ಟಿ ನಿರ್ಮಾಣ ಮಾಡಿರುವ ಕನ್ನಡ ಸಿನಿಮಾ ‘ಸು ಫ್ರಂ ಸೋ’ ರಾಜ್ಯದಲ್ಲಿ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಸಿನಿಮಾದ ಟಿಕೆಟ್​ಗಳು ಮುಂಗಡವಾಗಿ ಬುಕಿಂಗ್ ಆಗುತ್ತಿವೆ. ಸಿನಿಮಾ ರಾಜ್ಯದಲ್ಲಿ ಬ್ಲಾಕ್ ಬಸ್ಟರ್ ಆಗುವ ಎಲ್ಲ ನಿರೀಕ್ಷೆಯನ್ನು ಮೂಡಿಸಿದೆ. ಇದೀಗ ರಾಜ್ ಬಿ ಶೆಟ್ಟಿಯವರು ತಮ್ಮ ನಿರ್ಮಾಣದ ಈ ಸಿನಿಮಾವನ್ನು ಕೇರಳಕ್ಕೆ ಕೊಂಡೊಯ್ಯುತ್ತಿದ್ದಾರೆ.

ಕೇರಳಕ್ಕೆ ಹೊರಟ ‘ಸು ಫ್ರಂ ಸೋ’: ಸ್ಟಾರ್ ನಟನ ಬೆಂಬಲ
Su From So

Updated on: Jul 26, 2025 | 8:16 PM

ರಾಜ್ ಬಿ ಶೆಟ್ಟಿ (Raj B Shetty) ನಿರ್ಮಾಣ ಮಾಡಿ, ಜೆಪಿ ತುಮ್ಮಿನಾಡ್ ನಟಿಸಿರುವ ‘ಸು ಫ್ರಂ ಸೋ’ ಸಿನಿಮಾ ನಿನ್ನೆಯಷ್ಟೆ ಬಿಡುಗಡೆ ಆಗಿದ್ದು ಒಂದೇ ದಿನದಲ್ಲಿ ಸೂಪರ್ ಹಿಟ್ ಆಗಿಬಿಟ್ಟಿದೆ. ಮುಗಿಬಿದ್ದು ಜನ ಸಿನಿಮಾ ನೋಡುತ್ತಿದ್ದಾರೆ. ಬೆಂಗಳೂರಿನಲ್ಲಿ ಭಾನುವಾರ ಹಾಕಲಾಗಿರುವ ಬಹುತೇಕ ಎಲ್ಲ ಶೋಗಳ ಟಿಕೆಟ್​ಗಳು ಇಂದೇ ಮುಂಗಡವಾಗಿ ಮಾರಾಟವಾಗಿಬಿಟ್ಟಿವೆ. ಕೆಲವೆಡೆಯಂತೂ ಮುಂದಿನ ಎರಡು ಮೂರು ದಿನಗಳ ಎಲ್ಲ ಶೋಗಳಿಗೂ ಮುಂಗಡ ಟಿಕೆಟ್ ಇದೆ.

ಬಿಡುಗಡೆ ಆಗಿ ಒಂದೇ ದಿನದಲ್ಲಿ ಹಿಟ್ ಆದ ಈ ಸಿನಿಮಾ ಇದೀಗ ಕೇರಳಕ್ಕೆ ಪ್ರಯಾಣ ಬೆಳೆಸಿದೆ. ಹಾರರ್ ಕಾಮಿಡಿ ಸಿನಿಮಾ ಆಗಿರುವ ‘ಸು ಫ್ರಂ ಸೋ’ ಕರಾವಳಿ ಭಾಗದ ಕತೆ ಒಳಗೊಂಡಿದೆ. ಸಿನಿಮಾದ ಕತೆ, ಸಿನಿಮಾ ಒಳಗೊಂಡಿರುವ ನೇಟಿವಿಟಿಗಳು ಕೇರಳಕ್ಕೂ ಚೆನ್ನಾಗಿ ಒಪ್ಪುವ ಕಾರಣದಿಂದಾಗಿ ಇದೀಗ ಸಿನಿಮಾವನ್ನು ಮಲಯಾಳಂಗೆ ಡಬ್ ಮಾಡಿ ಕೇರಳದಾದ್ಯಂತ ಬಿಡುಗಡೆ ಮಾಡಲಾಗುತ್ತಿದೆ.

ಆಗಸ್ಟ್ 1 ರಂದು ‘ಸು ಫ್ರಂ ಸೋ’ ಸಿನಿಮಾ ಅದೇ ಹೆಸರಿನಲ್ಲಿ ಮಲಯಾಳಂನಲ್ಲೂ ಬಿಡುಗಡೆ ಆಗುತ್ತಿದೆ. ಸಿನಿಮಾಕ್ಕೆ ಮಲಯಾಳಂ ಸ್ಟಾರ್ ನಟ ದುಲ್ಕರ್ ಸಲ್ಮಾನ್ ಪರೋಕ್ಷವಾಗಿ ಬೆಂಬಲ ನೀಡಿದ್ದಾರೆ. ದುಲ್ಕರ್ ಒಡೆತನದ ವೇಫರಾರ್ ಫಿಲಮ್ಸ್​ ಸಂಸ್ಥೆಯು ‘ಸು ಫ್ರಂ ಸೋ’ ಸಿನಿಮಾ ಅನ್ನು ಕೇರಳ ರಾಜ್ಯದಾದ್ಯಂತ ವಿತರಣೆ ಮಾಡುತ್ತಿದೆ. ಸಿನಿಮಾದ ಪ್ರಚಾರವನ್ನು ರಾಜ್ ಬಿ ಶೆಟ್ಟಿ ಮತ್ತು ತಂಡ ಮಾಡಲಿದೆ.

ಇದನ್ನೂ ಓದಿ:‘ಸು ಫ್ರಮ್ ಸೋ: ಸ್ಯಾಂಡಲ್​ವುಡ್​ನಲ್ಲಿರೋ ಸಂಪ್ರದಾಯ ಬ್ರೇಕ್ ಮಾಡಲು ಮುಂದಾದ ರಾಜ್ ಬಿ ಶೆಟ್ಟಿ

‘ಸು ಫ್ರಂ ಸೋ’ ಸಿನಿಮಾದ ನಿರ್ಮಾಪಕ ರಾಜ್ ಬಿ ಶೆಟ್ಟಿ ಮಲಯಾಳಂ ಸಿನಿಮಾ ಪ್ರೇಮಿಗಳಿಗೆ ಪರಿಚಿತ ಮುಖವೇ. ಮಲಯಾಳಂನ ಸ್ಟಾರ್ ನಟ ಮಮ್ಮುಟಿ ನಟನೆಯ ‘ಟರ್ಬೊ’ ಸಿನಿಮಾದ ವಿಲನ್ ಪಾತ್ರದಲ್ಲಿ ರಾಜ್ ಬಿ ಶೆಟ್ಟಿ ನಟಿಸಿದ್ದರು. ಅದಾದ ಬಳಿಕ ಮತ್ತೊಬ್ಬ ಸ್ಟಾರ್ ನಟಿ ಅಪರ್ಣಾ ಬಾಲಮುರಳಿ ಅವರೊಟ್ಟಿಗೆ ‘ರುಧಿರಂ’ ಮತ್ತು ಆಂಟೊನಿ ವರ್ಗಿಸ್ ಜೊತೆಗೆ ಕೊಂಡಲ್ ಸಿನಿಮಾನಲ್ಲಿಯೂ ನಟಿಸಿದ್ದಾರೆ. ಅವರ ನಿರ್ದೇಶನದ ‘ಟೋಬಿ’ ಸಿನಿಮಾ ಸಹ ಮಲಯಾಳಂನಲ್ಲಿ ಬಿಡುಗಡೆ ಆಗಿತ್ತು.

ಮಲಯಾಳಂ ಸಿನಿಮಾ ಪ್ರೇಮಿಗಳಿಗೆ ಪರಿಚಯ ಇರುವ ಕಾರಣದಿಂದಾಗಿ ರಾಜ್ ಬಿ ಶೆಟ್ಟಿ ತಮ್ಮ ನಿರ್ಮಾಣದ ಸಿನಿಮಾವನ್ನು ಕೇರಳದಲ್ಲಿ ಬಿಡುಗಡೆ ಮಾಡಲು ಮುಂದಾಗಿದ್ದಾರೆ. ಈ ಸಿನಿಮಾ ನಿರ್ಮಾಣ ಮಾಡಿರುವ ಜೊತೆಗೆ ಸಿನಿಮಾದ ಸಣ್ಣ ಪಾತ್ರದಲ್ಲಿ ನಟನೆಯನ್ನೂ ಮಾಡಿದ್ದಾರೆ ರಾಜ್ ಬಿ ಶೆಟ್ಟಿ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 8:14 pm, Sat, 26 July 25