
‘ಸು ಫ್ರಮ್ ಸೋ’ ಸಿನಿಮಾ ಸಾಕಷ್ಟು ಜನಪ್ರಿಯತೆ ಪಡೆದಿದೆ. ಈ ಚಿತ್ರದ ಪ್ರತಿ ಪಾತ್ರಗಳೂ ಹೈಲೈಟ್ ಆಗಿವೆ. ಈ ಸಿನಿಮಾದಿಂದ ನಿರ್ಮಾಪಕ ರಾಜ್ ಬಿ. ಶೆಟ್ಟಿ ಗೆದ್ದು ಬೀಗಿದ್ದಾರೆ. ನಿರ್ದೇಶಕ ಜೆಪಿ ತುಮಿನಾಡ ಅವರು ಮೊದಲ ಪ್ರಯತ್ನದಲ್ಲೇ ಗೆಲುವಿನ ನಗೆ ಬೀರಿದ್ದಾರೆ. ಈಗ ‘ಸು ಫ್ರಮ್ ಸೋ’ (Su From So) ಚಿತ್ರದ ಬಾವ ಅವರು ಸಿನಿಮಾ ಗೆದ್ದ ಖುಷಿಯಲ್ಲಿ ಮಾತನಾಡಿದ್ದಾರೆ. ಆ ಬಗ್ಗೆ ಇಲ್ಲಿದೆ ವಿವರ.
‘ಸು ಫ್ರಮ್ ಸೋ’ ಸಿನಿಮಾದಲ್ಲಿ ಬಾವ ಪಾತ್ರ ಹೈಲೈಟ್ ಆಗಿದೆ. ಈ ಪಾತ್ರ ಮಾಡಿದ್ದು ಪುಷ್ಪರಾಜ್ ಬೋಳಾರ್ ಅವರು. ತುಳು ನಾಟಕ ಹಾಗೂ ಸಿನಿಮಾಗಳಲ್ಲಿ ಪುಷ್ಪರಾಜ್ ನಟಿಸಿ ಗಮನ ಸೆಳೆದಿದ್ದಾರೆ. ಇವರು ಕರಾವಳಿ ಪ್ರತಿಭೆ. ಈ ಮೊದಲು ‘ಕಾಂತಾರ’ ಸಿನಿಮಾದಲ್ಲೂ ಬಣ್ಣ ಹಚ್ಚಿದ್ದರು. ರಿಷಬ್ ಹಾಗೂ ಇತರರು ಜೈಲಿನಲ್ಲಿ ಇದ್ದಾಗ ನಗು ಉಕ್ಕಿಸುವ ಹಾಸ್ಯ ಮಾಡುತ್ತಾರೆ. ‘ಸು ಫ್ರಮ್ ಸೋ’ನಲ್ಲಿ ಅವರು ಮಾಡಿದ ಬಾವನ ಪಾತ್ರಕ್ಕೆ ಸಾಕಷ್ಟು ಜನಪ್ರಿಯತೆ ಸಿಕ್ಕಿದೆ. ಈ ಪಾತ್ರದ ಎಂಟ್ರಿ ವೇಳೆ ವಿಶೇಷ ಹಾಡನ್ನು ಕೂಡ ಹಾಕಲಾಗುತ್ತದೆ. ಈ ಹಾಡು ಕೂಡ ವೈರಲ್ ಆಗಿದೆ.
ಇದನ್ನೂ ಓದಿ: ವಾರದ ಮಧ್ಯವೂ ‘ಸು ಫ್ರಮ್ ಸೋ’ ಅಬ್ಬರದ ಕಲೆಕ್ಷನ್; ಹಲವು ದಾಖಲೆಗಳು ಉಡೀಸ್
‘ಸು ಫ್ರಮ್ ಸೋ’ ಸಿನಿಮಾದಲ್ಲಿ ‘ಬಂದರು ಬಂದರು ಬಾವ ಬಂದರು..’ ಎಂಬ ಹಾಡು ಬಂದರೆ ಪುಷ್ಪರಾಜ್ ಎಂಟ್ರಿ ಆಯಿತು ಎಂದು ತಿಳಿದುಕೊಳ್ಳಬಹುದು. ಅವರಿಗೆ ಸಿಕ್ಕ ಜನಪ್ರಿಯತೆ ಬಗ್ಗೆ ಅವರು ಮಾತನಾಡಿದ್ದಾರೆ. ‘ಒಂದೊಳ್ಳೆಯ ಪಾತ್ರ ಸಿಕ್ಕಿದೆ. ನಾನು ಈ ಪಾತ್ರಕ್ಕೆ ಎಷ್ಟು ಜೀವ ತುಂಬಿಸಿದೆನೋ ಗೊತ್ತಿಲ್ಲ. ಅದು ನಿರ್ದೇಶಕರಿಗೆ ಬಿಟ್ಟಿದ್ದು. ಜನರು ಪಾತ್ರ ಇಷ್ಟಪಡುತ್ತಿದ್ದಾರೆ. ಎಲ್ಲರೂ ಸಿನಿಮಾನ ಸಪೋರ್ಟ್ ಮಾಡಬೇಕು’ ಎಂದು ಪುಷ್ಪರಾಜ್ ಕೋರಿದ್ದಾರೆ.
‘ಸು ಫ್ರಮ್ ಸೋ’ ಸಿನಿಮಾದ ಒಟ್ಟಾರೆ ಕಲೆಕ್ಷನ್ 20 ಕೋಟಿ ರೂಪಾಯಿ ಸಮೀಪಿಸಿದೆ. ಈ ಚಿತ್ರವು ವಾರದ ದಿನವೂ ಹೌಸ್ಫುಲ್ ಪ್ರದರ್ಶನ ಕಾಣುತ್ತಿದೆ. ಒರಾಯ್ನ್, ಮಾಲ್ ಆಫ್ ಏಷ್ಯಾ ಮೊದಲಾದ ಕಡೆಗಳಲ್ಲಿ ಸಿನಿಮಾಗೆ 15-20 ಶೋಗಳನ್ನು ನೀಡಲಾಗುತ್ತಿದೆ. ಈ ಕಾರಣದಿಂದಲೇ ಸಿನಿಮಾದ ಕಲೆಕ್ಷನ್ನಲ್ಲಿ ಗಣನೀಯ ಏರಿಕೆ ಕಾಣುತ್ತಿದೆ. ಇನ್ನೂ ಕೆಲ ವಾರ ಸಿನಿಮಾದ ಅಬ್ಬರ ಮುಂದುವರಿಯಲಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 8:54 am, Thu, 31 July 25