ವಂಚನೆ ಆರೋಪ ಮಾಡಿದ್ದ ನಿರ್ಮಾಪಕರ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದ ಕಿಚ್ಚ ಸುದೀಪ್

|

Updated on: Jul 15, 2023 | 3:31 PM

Sudeep: ತಮ್ಮ ವಿರುದ್ಧ ವಂಚನೆ ಆರೋಪ ಮಾಡಿದ್ದ ನಿರ್ಮಾಪಕರ ವಿರುದ್ಧ ನಟ ಕಿಚ್ಚ ಸುದೀಪ್ ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದಾರೆ.

ವಂಚನೆ ಆರೋಪ ಮಾಡಿದ್ದ ನಿರ್ಮಾಪಕರ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದ ಕಿಚ್ಚ ಸುದೀಪ್
ಸುದೀಪ್
Follow us on

ನಟ ಸುದೀಪ್ (Sudeep), ತಾವು ಹೇಳಿದಂತೆಯೇ ತಮ್ಮ ವಿರುದ್ಧ ಆರೋಪ ಮಾಡಿದವರ ಮೇಲೆ ಮೊಕದ್ದಮೆ ದಾಖಲಿಸಿದ್ದಾರೆ. ಸುದೀಪ್, ವಿರುದ್ಧ ನಿರ್ಮಾಪಕರಾದ (Producer) ಎನ್​ಎಂ ಕುಮಾರ್ (NM Kumar), ಎಂಎನ್ ಸುರೇಶ್ ಅವರುಗಳು ಸುದೀಪ್ ವಿರುದ್ಧ ವಂಚನೆ ಆರೋಪ ಹೊರಿಸಿದ್ದರು. ಸುದೀಪ್ ತಮ್ಮಿಂದ ಅಡ್ವಾನ್ಸ್ ಪಡೆದು ಡೇಟ್ಸ್ ನೀಡದೆ ಸತಾಯಿಸುತ್ತಿದ್ದಾರೆ. ಕೊಟ್ಟಿರುವ ಹಣವನ್ನೂ ವಾಪಸ್ ಕೊಟ್ಟಿಲ್ಲ ಎಂದಿದ್ದರು. ಮಾತ್ರವಲ್ಲದೆ ‘ಹುಚ್ಚ’ ಸಿನಿಮಾದ ನಿರ್ಮಾಪಕ ರೆಹಮಾನ್ ಸಹ ಸುದೀಪ್ ತಮಗೆ 35 ಲಕ್ಷ ರೂಪಾಯಿ ಹಣ ಕೊಡಬೇಕು ಎಂದು ಆರೋಪ ಮಾಡಿದ್ದರು.

ಎನ್​ಎಂ ಕುಮಾರ್, ಎಂಎನ್ ಸುರೇಶ್ ಅವರುಗಳು ಆರೋಪಗಳನ್ನು ಗಂಭೀರವಾಗಿ ಪರಿಗಣಿಸಿದ್ದ ಕಿಚ್ಚು ಸುದೀಪ್ ಇಬ್ಬರೂ ನಿರ್ಮಾಪಕರಿಗೆ ವಕೀಲರ ಮೂಲಕ ನೊಟೀಸ್ ಕಳಿಸಿ ಬೇಷರತ್ ಕ್ಷಮೆ ಕೇಳದಿದ್ದರೆ ಮಾನನಷ್ಟ ಮೊಕದ್ದಮೆ ಹೂಡುವುದಾಗಿ ಎಚ್ಚರಿಕೆ ನೀಡಿದ್ದರು. ಆದರೆ ಅದಕ್ಕೆ ಬಗ್ಗದ ನಿರ್ಮಾಪಕರು ಮತ್ತೊಮ್ಮೆ ಸುದೀಪ್ ವಿರುದ್ಧ ಆರೋಪಗಳನ್ನು ಮುಂದುವರೆಸಿದ್ದರು. ಇದೀಗ ಹೇಳಿದ ಮಾತಿನಂತೆ ಸುದೀಪ್ ಮಾನನಷ್ಟ ಮೊಕದ್ದಮೆ ಹೂಡುತ್ತಿದ್ದಾರೆ.

ಖುದ್ದಾಗಿ ಜೆಎಂಎಫ್​ಸಿ ನ್ಯಾಯಾಲಯಕ್ಕೆ ಆಗಮಿಸಿದ ಸುದೀಪ್, ತಮ್ಮ ವಿರುದ್ಧ ಆರೋಪ ಮಾಡಿರುವ ನಿರ್ಮಾಪಕರಾದ ಎನ್​ಎಂ ಕುಮಾರ್, ಎಂಎನ್ ಸುರೇಶ್ ಹಾಗೂ ರೆಹಮಾನ್ ಅವರುಗಳ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ. ನಿರ್ಮಾಪಕರು ತಮ್ಮ ವಿರುದ್ಧ ಮಾಡಿರುವ ಆರೋಪಗಳು ಸುಳ್ಳು ಎಂದು ನಿರೂಪಿಸಲು ಕೆಲ ಸಾಕ್ಷ್ಯಗಳನ್ನು ಸಹ ನೀಡಿದ್ದಾರೆ ಎನ್ನಲಾಗಿದೆ. ವಕೀಲ ಅಜಯ್ ಕಡಕೋಳ್ ಮೂಲಕ ಎನ್​ಎಂ ಕುಮಾರ್, ಎಂಎನ್ ಸುರೇಶ್ ಅವರುಗಳ ಮೇಲೆ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯನ್ನು ಸುದೀಪ್ ದಾಖಲಿಸಿದ್ದಾರೆ. ಸುದೀಪ್ ಅವರ ಅರ್ಜಿಯನ್ನು ಸ್ವೀಕರಿಸಿದ ನ್ಯಾಯಾಲಯ ಅರ್ಜಿಯ ವಿಚಾರಣೆಯನ್ನು ಆಗಸ್ಟ್ 17ಕ್ಕೆ ಮುಂದೂಡಿದೆ.

ಇದನ್ನೂ ಓದಿ:‘ಸುದೀಪ್ ಅವರಿಂದ 35 ಲಕ್ಷ ರೂಪಾಯಿ ಲಾಸ್ ಆಗಿದೆ’; ‘ಹುಚ್ಚ’ ನಿರ್ಮಾಪಕ ರೆಹಮಾನ್ ಆರೋಪ

ಇತ್ತೀಚೆಗೆ ಸುದ್ದಿಗೋಷ್ಟಿ ನಡೆಸಿದ್ದ ನಿರ್ಮಾಪಕರಾದ ಎನ್​ಎಂ ಕುಮಾರ್, ”ಸುದೀಪ್ ಅವರು ಸಿನಿಮಾ ಮಾಡಿಕೊಡುವುದಾಗಿ ಅಡ್ವಾನ್ಸ್ ಪಡೆದು ಹಲವು ವರ್ಷಗಳಾಗಿವೆ. ಈವರೆಗೆ ಸಿನಿಮಾ ಮಾಡಲು ಡೇಟ್ಸ್ ನೀಡಿಲ್ಲ ಅಲ್ಲದೆ ಕೊಟ್ಟಿರುವ ಹಣವನ್ನೂ ವಾಪಸ್ ಕೊಟ್ಟಿಲ್ಲ” ಎಂದಿದ್ದರು. ಮುಂದುವರೆದು, ನಾನು ಕೊಟ್ಟಿರುವ ಹಣದಿಂದಲೇ ಸುದೀಪ್ ಆರ್​ಆರ್​ ನಗರದಲ್ಲಿ ಮನೆ ಕಟ್ಟಿಕೊಂಡಿದ್ದಾರೆ. ವಿಕ್ರಾಂತ್ ರೋಣ ಸಿನಿಮಾವನ್ನು ನಾನೇ ನಿರ್ಮಾಣ ಮಾಡಬೇಕಿತ್ತು ಅದನ್ನೂ ತಡೆದರು ಎಂದು ಆರೋಪಗಳನ್ನು ಮಾಡಿದ್ದರು.

ನಿರ್ಮಾಪಕರ ಆರೋಪಗಳಿಗೆ ಸಾಮಾಜಿಕ ಜಾಲತಾಣದ ಮೂಲಕ ಪ್ರತಿಕ್ರಿಯಿಸಿದ್ದ ಸುದೀಪ್, ”ನನ್ನ ತಾಳ್ಮೆಯನ್ನು, ಒಳ್ಳೆಯತನವನ್ನು ದುರುಪಯೋಗ ಮಾಡಿಕೊಳ್ಳಬೇಡಿ” ಎಂದು ಎಚ್ಚರಿಕೆ ನೀಡಿದ್ದರು. ಅಲ್ಲದೆ ಕುಮಾರ್ ಹಾಗೂ ಸುರೇಶ್ ಅವರಿಗೆ ವಕೀಲರ ಮೂಲಕ ನೊಟೀಸ್ ಕಳಿಸಿ ಕೂಡಲೇ ಕ್ಷಮೆ ಕೋರದಿದ್ದರೆ ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ಹೂಡುವುದಾಗಿ ಹೇಳಿದ್ದರು. ಅದರಂತೆ ಇಂದು (ಜುಲೈ 15) ರಂದು ಜೆಎಂಎಫ್​ಸಿ ನ್ಯಾಯಾಲಯದಲ್ಲಿ ಕ್ರಿಮಿನಲ್ ಮೊಕದ್ದಮೆ ಹೂಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 3:29 pm, Sat, 15 July 23