AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಈ ವ್ಯಕ್ತಿ ಕೆಟ್ಟ ಸಿನಿಮಾ ಮಾಡಲು ಸಾಧ್ಯವೇ ಇಲ್ಲ: ನಿರ್ದೇಶಕನ ಹೊಗಳಿದ ಸುದೀಪ್

Sudeep: ಡಾರ್ಲಿಂಗ್ ಕೃಷ್ಣ ನಟನೆಯ 'ಕೌಸಲ್ಯ ಸುಪ್ರಜಾ ರಾಮ' ಸಿನಿಮಾದ ಟ್ರೈಲರ್ ಬಿಡುಗಡೆ ಮಾಡಿದ ಸುದೀಪ್, ಚಿತ್ರತಂಡದ ಕಾಲೆಳಯುವ ಜೊತೆಗೆ ನಿರ್ದೇಶಕರನ್ನು ಬಹುವಾಗಿ ಹೊಗಳಿದರು.

ಈ ವ್ಯಕ್ತಿ ಕೆಟ್ಟ ಸಿನಿಮಾ ಮಾಡಲು ಸಾಧ್ಯವೇ ಇಲ್ಲ: ನಿರ್ದೇಶಕನ ಹೊಗಳಿದ ಸುದೀಪ್
ಸುದೀಪ್ ಸಿನಿಮಾ
ಮಂಜುನಾಥ ಸಿ.
|

Updated on: Jul 14, 2023 | 8:54 PM

Share

ಡಾರ್ಲಿಂಗ್ ಕೃಷ್ಣ (Darling Krishna) ನಟನೆಯ ‘ಕೌಸಲ್ಯ ಸುಪ್ರಜಾ ರಾಮ‘ (Kausalya Supraja Rama) ಸಿನಿಮಾದ ಟ್ರೈಲರ್ ಬಿಡುಗಡೆ ಕಾರ್ಯಕ್ರಮದಲ್ಲಿ ನಟ ಸುದೀಪ್ (Sudeep) ಭಾಗಿಯಾಗಿದ್ದರು. ಟ್ರೈಲರ್ ಬಿಡುಗಡೆ ಬಳಿಕ ಮಾತನಾಡಿದ ಸುದೀಪ್, ಭಾಷಣದ ಆರಂಭದಲ್ಲಿ ಡಾರ್ಲಿಂಗ್ ಕೃಷ್ಣ ಸೇರಿದಂತೆ ಹಲವರ ಕಾಲೆಳೆದರು ಆ ನಂತರ ಸಿನಿಮಾ ಬಗ್ಗೆ ಮಾತು ಹೊರಳಿಸಿ ‘ಕೌಸಲ್ಯ ಸುಪ್ರಜಾ ರಾಮ’ ಸಿನಿಮಾದ ನಿರ್ದೇಶಕ, ತಮ್ಮ ಹಳೆಯ ಮಿತ್ರರೂ ಆಗಿರುವ ಶಶಾಂಕ್ ಅವರನ್ನು ಬಹುವಾಗಿ ಹೊಗಳಿದರು.

”ಒಂದು ಸಿನಿಮಾ ಚೆನ್ನಾಗಿ ಹೋಗುತ್ತದೆ, ಒಂದು ಸಿನಿಮಾ ಚೆನ್ನಾಗಿ ಹೋಗದೆ ಇರಬಹುದು ಆದರೆ ಶಶಾಂಕ್ ಕೆಟ್ಟ ಸಿನಿಮಾ ಅಂತೂ ಮಾಡಲು ಸಾಧ್ಯವೇ ಇಲ್ಲ. ಆ ವ್ಯಕ್ತಿಯ ಮೇಲೆ ನನಗೆ ಅಷ್ಟು ನಂಬಿಕೆ ಇದೆ. ಸ್ವತಃ ಅವರಿಗೆ ಅವರ ಕತೆಯ ಮೇಲೆ ಅಷ್ಟು ನಂಬಿಕೆ ಇರುತ್ತದೆ. ಅವರು ಮಹಾನ್ ಹಠವಾದಿ, ಬಚ್ಚನ್ ಸಿನಿಮಾ ಮಾಡುವಾಗ ಸತತವಾಗಿ ಒಂದೂವರೆ ವರ್ಷಗಳ ಕಾಲ ನನ್ನ ಹಿಂದೆ ಅವರು ಸುತ್ತಿದ್ದರು. ಅವರು ನಂಬಿದ್ದ ಕತೆಯನ್ನು ನನಗೆ ಒಪ್ಪಿಸಿ ಸಿನಿಮಾ ಮಾಡಿದರು. ಅಂದೇ ಅವರ ಸಿನಿಮಾ ಪ್ರೀತಿ ನನಗೆ ಬಹಳ ಹಿಡಿಸಿತ್ತು” ಎಂದು ನೆನಪು ಮಾಡಿಕೊಂಡರು ಸುದೀಪ್.

”ಅವರ ಸಿನಿಮಾಗಳಲ್ಲಿ ಕಂಟೆಂಟ್ ಇದ್ದೇ ಇರುತ್ತದೆ. ಒಂದು ವಿಷಯ, ಆಲೋಚನೆ ಇರುತ್ತದೆ. ಪ್ರೇಕ್ಷಕನನ್ನು ಯೋಚನೆಗೆ ಹಚ್ಚುವ ವಿಷಯ ಇರುತ್ತದೆ. ಹೊಸದನ್ನು ಹೇಳುವ ಪ್ರಯತ್ನ ಅವರದ್ದಾಗಿರುತ್ತದೆ. ಅದರಲ್ಲಿಯೂ ಶಶಾಂಕ್ ಅವರು ಭಾವನೆಗಳನ್ನು ಹಿಡಿದಿಡುವ ರೀತಿ ನನಗೆ ಬಹಳ ಇಷ್ಟ. ಅವರ ಕೃಷ್ಣನ್ ಲವ್ ಸ್ಟೋರಿ ಆಗಿರಬಹುದು ಇತರೆ ಸಿನಿಮಾಗಳಾಗಿರಬಹುದು ಭಾವನೆಗಳನ್ನು ಚೆನ್ನಾಗಿ ಪ್ರೆಸೆಂಟ್ ಮಾಡುತ್ತಾರೆ. ಅವರೊಬ್ಬ ನುರಿತ ನಿರ್ದೇಶಕ, ಅವರ ಕೈಯಿಂದ ಒಂದು ಕೆಟ್ಟ ಸಿನಿಮಾ ಹೊರಗೆ ಬರಲು ಸಾಧ್ಯವೇ ಇಲ್ಲ” ಎಂದರು.

ಇದನ್ನೂ ಓದಿ:Kichcha Sudeep: ಎಂ.ಎನ್​. ಕುಮಾರ್​ ಹೊರಿಸಿದ ಆರೋಪದ ಬಗ್ಗೆ ಮೌನ ಮುರಿದ ಸುದೀಪ್​; ಇಲ್ಲಿದೆ ಕಿಚ್ಚನ ಸುದೀರ್ಘ ಪತ್ರ

ಪುರುಷ ಅಹಂಕಾರದ ಕುರಿತಾದ ಕತೆ ಹೊಂದಿರುವ ‘ಕೌಸಲ್ಯ ಸುಪ್ರಜಾ ರಾಮ’ ಸಿನಿಮಾದ ಟ್ರೈಲರ್​ನಲ್ಲಿ ನಟ ಡಾರ್ಲಿಂಗ್ ಕೃಷ್ಣ, ಮಹಿಳೆಯರನ್ನು ಕಾಲ ಬಳಿ ಇರಿಸಿಕೊಳ್ಳಬೇಕು ಎಂದು ಹೊಡೆದ ಡೈಲಾಗ್ ಕುರಿತಾಗಿ ತಮಾಷೆಯಾಗಿ ಮಾತನಾಡಿದ ಸುದೀಪ್, ”ಡಾರ್ಲಿಂಗ್ ಕೃಷ್ಣ ಹೀಗೆ ಡೈಲಾಗ್ ಹೊಡೆದಿದ್ದಾರೆ, ಆದರೆ ಅದೇ ಡೈಲಾಗ್ ಅನ್ನು ಮನೆಯಲ್ಲಿ ಹೊಡೆಯಲಿ ನೋಡೋಣ” ಎಂದು ಎದುರಿಗೇ ಇದ್ದ ಕೃಷ್ಣರ ಪತ್ನಿ ಮಿಲನಾ ಮುಂದೆ ತಮಾಷೆ ಮಾಡಿದರು.

ತಮ್ಮನ್ನು ಎಲ್ಲರೂ ಹಿರಿಯ ನಟ ಎಂದು ಕರೆದ ಬಗ್ಗೆ ತಮಾಷೆಯಾಗಿಯೇ ಆಕ್ಷೇಪ ವ್ಯಕ್ತಪಡಿಸಿದ ನಟ ಸುದೀಪ್, ”ಎಲ್ಲರೂ ಹಿರಿಯ ನಟ, ಹಿರಿಯ ನಟ ಎಂದು ಹೇಳಿ ಬೇಸರ ಮೂಡಿಸಿದ್ದೀರಿ, ನಾನಿನ್ನೂ ಈಗಲೂ ಲವ್ ಸ್ಟೋರಿ ಸಿನಿಮಾಗಳನ್ನು ಮಾಡುತ್ತಿದ್ದೇನೆ” ಎಂದರು. ನಟಿ ಬೃಂದಾ, ”ಸುದೀಪ್ ಅಂಥಹಾ ಬಾಯ್​ಫ್ರೆಂಡ್ ಸಿಗಲಿ” ಎಂದು ಹೇಳಿದ ಬಗ್ಗೆ ಸಂತಸವನ್ನೂ ವ್ಯಕ್ತಪಡಿಸಿ, ”ನೀವೊಬ್ಬರೆ ನೋಡಿ ನನ್ನ ಜೀವ ಉಳಿಸಿದ್ದು” ಎಂದು ತಮಾಷೆ ಮಾಡಿದರು. ”ಶಶಾಂಕ್ ಒಬ್ಬ ನುರಿತ ನಿರ್ದೇಶಕ, ಅವರ ಕೈಯಲ್ಲಿ ಸಿಕ್ಕಿರುವ ನಟರು ಖಂಡಿತಾ ಸೇಫ್ ಆಗುತ್ತಾರೆ. ಅವರ ನಿರ್ಮಾಪಕರು ಸೇಫ್ ಆಗುತ್ತಾರೆ. ಸಿನಿಮಾ ಬಾಕ್ಸ್ ಆಫೀಸ್​ನಲ್ಲಿ ಚೆನ್ನಾಗಿ ಪ್ರದರ್ಶನ ಮಾಡಲಿ, ಎಲ್ಲರೂ ಖುಷಿಯಾಗಿರಿ, ಎಲ್ಲರಿಗೂ ಒಳ್ಳೆಯದಾಗಲಿ” ಎಂದು ಹೇಳಿ ಮಾತು ಮುಗಿಸಿದರು ಸುದೀಪ್.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ