ಬರುತ್ತಿದೆ ‘ಮಾರ್ಕ್’ ಟ್ರೈಲರ್: ದಿನಾಂಕ ಘೋಷಿಸಿದ ಚಿತ್ರತಂಡ

Kichcha Sudeep: ದರ್ಶನ್ ಸಿನಿಮಾದ ಟ್ರೈಲರ್ ಬಿಡುಗಡೆ ಆದ ಬೆನ್ನಲ್ಲೆ ಸುದೀಪ್ ಅವರ ಹೊಸ ಸಿನಿಮಾದ ಟ್ರೈಲರ್ ಸಹ ಬಿಡುಗಡೆ ಆಗುತ್ತಿದೆ. ಸುದೀಪ್ ಅವರ ‘ಮಾರ್ಕ್’ ಸಿನಿಮಾ ಕನ್ನಡದ ಬಹು ನಿರೀಕ್ಷಿತ ಸಿನಿಮಾಗಳಲ್ಲಿ ಒಂದಾಗಿದ್ದು, ಇದೀಗ ಸಿನಿಮಾದ ಟ್ರೈಲರ್ ಬಿಡುಗಡೆ ದಿನಾಂಕವನ್ನು ಚಿತ್ರತಂಡ ಘೋಷಣೆ ಮಾಡಿದೆ.

ಬರುತ್ತಿದೆ ‘ಮಾರ್ಕ್’ ಟ್ರೈಲರ್: ದಿನಾಂಕ ಘೋಷಿಸಿದ ಚಿತ್ರತಂಡ
Sudeep

Updated on: Dec 06, 2025 | 8:01 PM

ದರ್ಶನ್ ನಟನೆಯ ‘ಡೆವಿಲ್’ ಸಿನಿಮಾದ ಟ್ರೈಲರ್ ನಿನ್ನೆಯಷ್ಟೆ ಬಿಡುಗಡೆ ಆಗಿದೆ. ಟ್ರೈಲರ್ ಕುತೂಹಲ ಮೂಡಿಸಲು ಯಶಸ್ವಿಯಾಗಿದ್ದು, ಇದೇ ತಿಂಗಳು ಸಿನಿಮಾ ಬಿಡುಗಡೆ ಸಹ ಆಗಲಿದೆ. ದರ್ಶನ್ ಸಿನಿಮಾದ ಟ್ರೈಲರ್ ಬಿಡುಗಡೆ ಆದ ಬೆನ್ನಲ್ಲೆ ಸುದೀಪ್ (Sudeep) ಅವರ ಹೊಸ ಸಿನಿಮಾದ ಟ್ರೈಲರ್ ಸಹ ಬಿಡುಗಡೆ ಆಗುತ್ತಿದೆ. ಸುದೀಪ್ ಅವರ ‘ಮಾರ್ಕ್’ ಸಿನಿಮಾ ಕನ್ನಡದ ಬಹು ನಿರೀಕ್ಷಿತ ಸಿನಿಮಾಗಳಲ್ಲಿ ಒಂದಾಗಿದ್ದು, ಇದೀಗ ಸಿನಿಮಾದ ಟ್ರೈಲರ್ ಬಿಡುಗಡೆ ದಿನಾಂಕವನ್ನು ಚಿತ್ರತಂಡ ಘೋಷಣೆ ಮಾಡಿದೆ.

‘ಮಾರ್ಕ್’ ಸಿನಿಮಾದ ಟ್ರೈಲರ್ ನಾಳೆ ಅಂದರೆ ಡಿಸೆಂಬರ್ 07ರಂದು ಬೆಳಿಗ್ಗೆ 11:58ಕ್ಕೆ ಟ್ರೈಲರ್ ಬಿಡುಗಡೆ ಆಗಲಿದೆ. ಈ ಬಗ್ಗೆ ಚಿತ್ರತಂಡ ಟ್ವೀಟ್ ಮಾಡಿದ್ದು, ‘ನಿರೀಕ್ಷೆಯ ಅವಧಿ ಕಿರಿದಾಗಿದೆ, ಇನ್ನೊಂದು ಸೂರ್ಯೋದಕ್ಕೆ ನಿರೀಕ್ಷೆಗಳು ಅಂತ್ಯವಾಗಲಿವೆ. ಮಾರ್ಕ್’ ಸಿನಿಮಾದ ಟ್ರೈಲರ್, ಆಕ್ಷನ್ ಮತ್ತು ಭಾವನೆಗಳ ಸ್ಪೋಟಕ ಅಲೆಯನ್ನೇ ತರಲಿದೆ ಎಂದಿದೆ. ಸುದೀಪ್ ಅವರು ಕಪ್ಪು ಬಣ್ಣದ ಹುಡಿ ಧರಿಸಿ ಸಿಗರೇಟು ಹಿಡಿದಿರುವ ಪೋಸ್ಟರ್ ಅನ್ನು ಪೋಸ್ಟ್​​ನ ಜೊತೆಗೆ ಹಂಚಿಕೊಂಡಿದೆ ಚಿತ್ರತಂಡ.

ಸುದೀಪ್ ನಟನೆಯ ಸೂಪರ್ ಹಿಟ್ ಸಿನಿಮಾ ‘ಮ್ಯಾಕ್ಸ್’ನ ತಂಡವೇ ‘ಮಾರ್ಕ್’ ಸಿನಿಮಾಕ್ಕೂ ಕೆಲಸ ಮಾಡಿದೆ. ‘ಮ್ಯಾಕ್ಸ್’ ಸಿನಿಮಾ ನಿರ್ದೇಶಿಸಿದ್ದ ವಿಜಯ್ ಕಾರ್ತಿಕೇಯ ಅವರೇ ‘ಮಾರ್ಕ್’ ಸಿನಿಮಾಕ್ಕೂ ಆಕ್ಷನ್ ಕಟ್ ಹೇಳಿದ್ದಾರೆ. ‘ಮ್ಯಾಕ್ಸ್’ ಸಿನಿಮಾವನ್ನು ತಮಿಳಿನ ಕಲೈಪುಲಿ ಎಸ್ ತನು ಹಾಗೂ ಸುದೀಪ್ ಅವರು ಜಂಟಿಯಾಗಿ ನಿರ್ಮಾಣ ಮಾಡಿದ್ದರು. ಆದರೆ ‘ಮಾರ್ಕ್’ ಸಿನಿಮಾವನ್ನು ಸತ್ಯಜ್ಯೋತಿ ಫಿಲಮ್ಸ್ ಮತ್ತು ಸುದೀಪ್ ಅವರು ಜಂಟಿಯಾಗಿ ನಿರ್ಮಿಸುತ್ತಿದ್ದಾರೆ.

ಇದನ್ನೂ ಓದಿ:ಸುದೀಪ್ ಮನೆಯಲ್ಲಿ ಮದುವೆ ಸಂಭ್ರಮ; ಇಲ್ಲಿವೆ ಫೋಟೋಸ್

ಪಾತ್ರವರ್ಗ ತುಸು ಬದಲಾಗಿದೆ ಹೊರತಾಗಿ ತಂತ್ರಜ್ಞರು ಬಹುತೇಕ ‘ಮ್ಯಾಕ್ಸ್​’ಗೆ ಕೆಲಸ ಮಾಡಿದವರೇ ಇದ್ದಾರೆ. ಅಜನೀಶ್ ಲೋಕನಾಥ್ ಸಂಗೀತ ನೀಡಿದ್ದಾರೆ. ಎಸ್​​ಆರ್ ಗಣೇಶ್ ಬಾಬು ಸಂಕಲನ ಮಾಡಿದ್ದಾರೆ. ಸಿನಿಮಾಟೊಗ್ರಫಿ ಶೇಖರ್ ಚಂದ್ರ ಅವರದ್ದಾಗಿದೆ. ‘ಮ್ಯಾಕ್ಸ್’ಗೂ ಇವರೇ ಸಿನಿಮಾಟೊಗ್ರಫಿ ಮಾಡಿದ್ದರು. ‘ಮಾರ್ಕ್’ ಸಿನಿಮಾನಲ್ಲಿ ಸುದೀಪ್ ಜೊತೆಗೆ ನಿಶ್ವಿಕಾ ನಾಯ್ಡು, ರೋಹಿಣಿ ಪ್ರಕಾಶ್ ನಟಿಸಿದ್ದಾರೆ. ಇನ್ನಿತರೆ ಕಲಾವಿದರು ಯಾರ್ಯಾರು ಎಂಬುದು ನಾಳೆ (ಡಿಸೆಂಭರ್ 07) ತಿಳಿಯಲಿದೆ. ‘ಮಾರ್ಕ್’ ಸಿನಿಮಾ ಡಿಸೆಂಬರ್ 25ಕ್ಕೆ ಬಿಡುಗಡೆ ಆಗಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 3:08 pm, Sat, 6 December 25