ಆದಾಯ ತೆರಿಗೆ ಪ್ರಕರಣದಲ್ಲಿ ನಟ ಯಶ್‌ಗೆ ಹೈಕೋರ್ಟ್ ರಿಲೀಫ್
ನಟ ಯಶ್‌ಗೆ ಐಟಿ ಇಲಾಖೆ 2013-19ರ ಅವಧಿಯ ಹಣಕಾಸು ವ್ಯವಹಾರಕ್ಕೆ ಸಂಬಂಧಿಸಿ ನೀಡಿದ್ದ ನೋಟಿಸ್‌ನ್ನು ಹೈಕೋರ್ಟ್ ರದ್ದುಗೊಳಿಸಿದೆ. ಹೊಂಬಾಳೆ ಕನ್ಸ್ಟ್ರಕ್ಷನ್ಸ್ ಸಂಬಂಧಿಸಿದ ಪ್ರಕರಣದಲ್ಲಿ ಯಶ್ ನಿವಾಸ ಶೋಧಿಸಲಾಗಿತ್ತು. ಶೋಧನೆಗೊಳಗಾಗದ ವ್ಯಕ್ತಿಗಳಿಗೆ ನೀಡುವ ನೋಟಿಸ್ ನೀಡಿದ್ದನ್ನು ಯಶ್ ಪ್ರಶ್ನಿಸಿದ್ದರು. ಹೈಕೋರ್ಟ್ ಅವರ ವಾದ ಪುರಸ್ಕರಿಸಿ ನೋಟಿಸ್ ರದ್ದು ಮಾಡಿರುವುದು ಯಶ್‌ಗೆ ದೊಡ್ಡ ರಿಲೀಫ್ ನೀಡಿದೆ.

ನಟ ಯಶ್ (Yash) ಅವರು ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಇದ್ದಾರೆ. ಇದರ ಮಧ್ಯೆ ಅವರಿಗೆ ದೊಡ್ಡ ರಿಲೀಫ್ ಒಂದು ಸಿಕ್ಕಿದೆ. 2013-14ರಿಂದ 2018-19 ಅವಧಿಯ ಹಣಕಾಸು ವ್ಯವಹಾರಕ್ಕೆ ಸಂಬಂಧಿಸಿದಂತೆ ಐಟಿ ಇಲಾಖೆ ನೀಡಿದ್ದ ನೋಟಿಸ್ ಅನ್ನು ಯಶ್ ಹೈಕೋರ್ಟ್ ಅಲ್ಲಿ ಪ್ರಶ್ನೆ ಮಾಡಿದ್ದರು. ನ್ಯಾ.ಎಸ್.ಆರ್.ಕೃಷ್ಣಕುಮಾರ್ ಅವರಿದ್ದ ಹೈಕೋರ್ಟ್ ಪೀಠ ಈ ನೋಟಿಸ್ ರದ್ದು ಮಾಡಿ ಆದೇಶ ನೀಡಿದೆ. ಇದರಿಂದ ಯಶ್ ಅವರಿಗೆ ರಿಲೀಫ್ ಸಿಕ್ಕಂತೆ ಆಗಿದೆ. ಅಷ್ಟಕ್ಕೂ ಏನಿದು ಪ್ರಕರಣ? ಆ ಬಗ್ಗೆ ಇಲ್ಲಿದೆ ಸಂಪೂರ್ಣ ವಿವರ.
ಹೊಂಬಾಳೆ ಕನ್ಸ್ಟ್ರಕ್ಷನ್ಸ್ಗೆ ಸಂಬಂಧಿಸಿ ಐಟಿ ಇಲಾಖೆ ತನಿಖೆ ನಡೆಸಿತ್ತು. ಈ ಪ್ರಕರಣದಲ್ಲಿ ನಟ ಯಶ್ ವಾಸಿಸಿದ್ದ ಹೊಸಕೆರೆಹಳ್ಳಿ ಮನೆ, ಅವರು ಬಾಡಿಗೆ ಪಡೆದು ಉಳಿದುಕೊಂಡಿದ್ದ ತಾಜ್ ವೆಸ್ಟ್ ಎಂಡ್ ರೂಮ್ ಶೋಧಿಸಿತ್ತು. 2021ರಲ್ಲಿ ನಟ ಯಶ್‌ಗೆ ಆದಾಯ ತೆರಿಗೆ ಕಾಯ್ದೆ ಸೆ.153ಸಿ ಅಡಿ ನೋಟಿಸ್ ನೀಡಿತ್ತು. ಇದನ್ನು ಪ್ರಶ್ನಿಸಿ ನಟ ಯಶ್ ಹೈಕೋರ್ಟ್ಗೆ ಅರ್ಜಿ ಸಲ್ಲಿಕೆ ಮಾಡಿದ್ದರು.
ಮನೆ ಶೋಧಿಸಿದ ಬಳಿಕವೂ ‘ಶೋಧನೆ ನಡೆಸದ ವ್ಯಕ್ತಿ’ ಎಂದು ಪರಿಗಣಿಸಿ ಐಟಿ ನೋಟಿಸ್ ನೀಡಿದ್ದು ಏಕೆ ಎಂಬುದು ಯಶ್ ಪ್ರಶ್ನೆ ಆಗಿತ್ತು. ‘ತಮ್ಮ ನಿವಾಸ ಶೋಧಿಸಲಾಗಿದೆ. ಆದರೂ ಶೋಧ ನಡೆಸದೇ ಇರುವವರಿಗೆ ನೀಡುವ 153ಸಿ ನೋಟಿಸ್ ನೀಡಲಾಗಿದೆ. ಇದು ಕಾನೂನು ಬಾಹಿರವೆಂದು’ ಯಶ್ ಪರ ವಕೀಲರು ವಾದಿಸಿದ್ದಾರೆ.
‘ಹೊಂಬಾಳೆ ಕನ್ಸ್ಟ್ರಕ್ಷನ್ನ ವಿಜಯ್ ಕುಮಾರ್ ವಿರುದ್ಧ ಶೋದನೆ ವಾರಂಟ್ ಪಡೆಯಲಾಗಿತ್ತು. ಹೊಂಬಾಳೆಗೆ ಸಂಬಂಧಪಟ್ಟಂತೆ ಮಾತ್ರ ಯಶ್ ನಿವಾಸದಲ್ಲಿ ಶೋಧಿಸಲಾಗಿದೆ. ಹೀಗಾಗಿ ಯಶ್ ಶೋಧನೆಗೊಳಗಾದ ವ್ಯಕ್ತಿಯಲ್ಲ’ ಎಂದು ಐಟಿ ವಾದ ಮಾಡಿದೆ. ವಾದ ಪ್ರತಿವಾದ ಗಮನಿಸಿದ ಕೋರ್ಟ್ ಯಶ್‌ಗೆ ಐಟಿ ಇಲಾಖೆ ಜಾರಿಗೊಳಿಸಿದ್ದ ನೋಟಿಸ್ನ ರದ್ದು ಮಾಡಿದೆ.
ಇದನ್ನೂ ಓದಿ: ಆದಾಯ ತೆರಿಗೆ ಪ್ರಕರಣದಲ್ಲಿ ನಟ ಯಶ್‌ಗೆ ಹೈಕೋರ್ಟ್ ರಿಲೀಫ್
ಸಿನಿಮಾ ಬಗ್ಗೆ
ಯಶ್ ಅವರು ‘ಟಾಕ್ಸಿಕ್’ ಹಾಗೂ ‘ರಾಮಾಯಣ’ ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಇದ್ದಾರೆ. ಈ ಎರಡೂ ಸಿನಿಮಾಗಳ ಬಗ್ಗೆ ನಿರೀಕ್ಷೆ ಹೆಚ್ಚಿದೆ. ‘ಟಾಕ್ಸಿಕ್’ ಸಿನಿಮಾ ಶೂಟಿಂಗ್ ಇತ್ತೀಚೆಗೆ ಪೂರ್ಣಗೊಂಡಿದೆ ಎನ್ನಲಾಗಿದೆ. ಮಾರ್ಚ್ 19ರಂದು ಸಿನಿಮಾ ವಿಶ್ವ ಮಟ್ಟದಲ್ಲಿ ರಿಲೀಸ್ ಆಗಲಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 9:05 am, Sat, 6 December 25



