ಹರಕೆ ನೇಮೋತ್ಸವದಲ್ಲಿ ‘ಕಾಂತಾರ: ಚಾಪ್ಟರ್ 3’ ಸಿನಿಮಾಗೆ ಸಿಕ್ತು ದೈವದ ಗ್ರೀನ್ ಸಿಗ್ನಲ್
‘ಕಾಂತಾರ’ ಯಶಸ್ಸಿನ ಬಳಿಕ ರಿಷಬ್ ಶೆಟ್ಟಿ ಹಾಗೂ ಹೊಂಬಾಳೆ ಫಿಲ್ಮ್ಸ್ ವತಿಯಿಂದ ಹರಕೆ ನೇಮೋತ್ಸವ ಮಾಡಲಾಗಿದೆ. ಡಿಸೆಂಬರ್ 4ರಂದು ಮಧ್ಯರಾತ್ರಿವರೆಗೂ ವರಾಹ ಪಂಜುರ್ಲಿ-ಜಾರಂದಾಯ, ಬಂಟ ಕೋಲ ನಡೆಯಿತು. ಬಾಕಿ ಇರುವ ಹರಕೆ ತೀರಿಸಿದ ನಂತರ ‘ಕಾಂತಾರ: ಚಾಪ್ಟರ್ 3’ ಚಿತ್ರೀಕರಣ ಶುರು ಆಗುವ ಸಾಧ್ಯತೆ ಇದೆ.

ಗುರುವಾರ (ಡಿಸೆಂಬರ್ 4) ಮದ್ಯರಾತ್ರಿವರೆಗೂ ನಡೆದ ದೈವಕೋಲದಲ್ಲಿ ರಿಷಬ್ ಶೆಟ್ಟಿ (Rishab Shetty) ಭಾಗಿಯಾಗಿದ್ದರು. ‘ಕಾಂತಾರ’ ಸಿನಿಮಾ ಬ್ಲಾಕ್ ಬಸ್ಟರ್ ಹಿಟ್ ಆದ ಬಳಿಕ ‘ಕಾಂತಾರ: ಚಾಪ್ಟರ್ 1’ ಚಿತ್ರತಂಡಕ್ಕೆ ಸಾಕಷ್ಟು ಅಡೆತಡೆಗಳು ಬಂದಿದ್ದವು. ಸಿನಿಮಾ ಚಿತ್ರೀಕರಣಕ್ಕೆ ಹಲವಾರು ತೊಂದರೆಗಳು ಉಂಟಾಗುತ್ತಿತ್ತು. ಈ ವೇಳೆ ನಿರ್ದೇಶಕ ರಿಷಬ್ ಶೆಟ್ಟಿ ಸಾಕಷ್ಟು ಹರಕೆಗಳನ್ನು ಮಾಡಿಕೊಂಡಿದ್ದರು. ಹಾಗಾಗಿ ಮಂಗಳೂರಿಗೆ ಬಂದ ಚಿತ್ರತಂಡ ಹರಕೆ ನೇಮೋತ್ಸವವನ್ನು ನೆರವೇರಿಸಿದೆ. ಈ ವೇಳೆ ‘ಕಾಂತಾರ: ಚಾಪ್ಟರ್ 3’ (Kantara Chapter 3) ಸಿನಿಮಾಗೆ ಗ್ರೀನ್ ಸಿಗ್ನಲ್ ಸಿಕ್ಕಿದೆ.
ಇಡೀ ವಿಶ್ವಾದ್ಯಂತ ಕರಾವಳಿಯ ದೈವ ಹಾಗೂ ಕೋಲ-ನೇಮೋತ್ಸವದ ಬಗ್ಗೆ ಕಾಂತಾರ ಸಿನಿಮಾ ಪರಿಚಯಿಸಿತ್ತು. ಕನ್ನಡ ಸಿನಿಮಾ ಭಾರತದ ಸಿನಿರಂಗದಲ್ಲೇ ಭಾರೀ ಸದ್ದು ಮಾಡಿತ್ತು. ಆಗ ಎಲ್ಲರಿಗೂ ಕುತೂಹಲಕ್ಕೆ ಕಾರಣವಾಗಿದ್ದ ಕಾಂತಾರ ಚಾಪ್ಟರ್ 1. ಅಂದ್ರೆ ಕಾಂತಾರ ಸಿನಿಮಾದ ಎರಡನೇ ಭಾಗ. ಸದ್ದಿಲ್ಲದೇ ಚಿತ್ರೀಕರಣಗೊಂಡು ಭಾರೀ ಜನಮನ್ನಣೆಗೆ ಕಾರಣವಾಗಿದ್ದು ಕಾಂತಾರ. ಆದ್ರೆ ಕಾಂತಾಯ ಚಾಪ್ಟರ್ 1 ಮಾತ್ರ ಸಿನಿಮಾ ಶೂಟಿಂಗ್ ಸಮಯದಲ್ಲಿ ವಿಘ್ನಗಳನ್ನು ಎದುರಿಸಿತ್ತು.
ಚಿತ್ರೀಕರಣದ ವೇಳೆ ನಡೆದ ಅವಘಡಗಳು, ಅವಾಂತರಗಳು ಚಿತ್ರತಂಡದ ಮೇಲೆ ದೈವಗಳ ಕೋಪ ಕಾರಣ ಎಂದು ಬಿಂಬಿತವಾಗಿತ್ತು. ಆ ಸಂದರ್ಭದಲ್ಲಿ ರಿಷಬ್ ಶೆಟ್ಟಿ ಹಾಗೂ ಹೊಂಬಾಳೆ ಪ್ರೊಡಕ್ಷನ್ ಸಾಕಷ್ಟು ಕಡೆ ಹರಕೆಯನ್ನು ಹೊತ್ತಿತ್ತು. ಅದರಲ್ಲಿ ಒಂದು ಮಂಗಳೂರಿನ ಬಾರೆಬೈಲ್ನಲ್ಲಿ ಇರುವ ದೈವಸ್ಥಾನದಲ್ಲಿ ಹೊತ್ತ ಹರಕೆ. ನಿನ್ನೆ ಮೊದಲು ನಡೆದ ಎಣ್ಣೆ ಭೂಳ್ಯ ನೇಮದಲ್ಲಿ ದೈವ ಅಭಯ ನೀಡಿತ್ತು. ‘ನಿನ್ನೆ ಕಣ್ಣೀರು ಒರೆಸುತ್ತೇನೆ. ನನ್ನ ನುಡಿ ಇದೆ. ಧೈರ್ಯವಾಗಿ ಸಾಗು’ ಎಂದು ರಿಷಬ್ ಮಡಿಲಿನಲ್ಲಿ ಮಲಗಿ ಸಂಪೂರ್ಣ ಆಶೀರ್ವಾದವನ್ನು ನೀಡಿತ್ತು.
ಇದೆಲ್ಲಾ ನಡೆದಿದ್ದು ಮಂಗಳೂರಿನ ಬಾರೆಬೈಲ್ನಲ್ಲಿರೋ ವರಾಹ ಪಂಜುರ್ಲಿ, ಜಾರಂದಾಯ ಮತ್ತು ಬಂಟ ದೈವಸ್ಥಾನದ ಹರಕೆ ನೇಮೋತ್ಸವದಲ್ಲಿ. ಚಿತ್ರತಂಡ ವಾರಾಹಿ ಪಂಜುರ್ಲಿ ದೈವದ ನೇಮದಲ್ಲಿ ಭಾಗಿಯಾಗಿತ್ತು. ಪತ್ನಿ-ಮಕ್ಕಳ ಜೊತೆ ರಿಷಬ್ ಶೆಟ್ಟಿ ಭಾಗಿಯಾಗಿದ್ರು. ನಿರ್ಮಾಪಕ ವಿಜಯ್ ಕಿರಗಂದೂರು, ನಿರ್ದೇಶಕ ಸಂತೋಷ್ ಆನಂದ ರಾಮ್ ಸೇರಿದಂತೆ ಚಿತ್ರರಂಗದ ಹಲವರು ಭಾಗಿಯಾಗಿದ್ದರು.
ಗಗ್ಗರ ಸೇವೆ ಜೊತೆಗೆ ಅನ್ನಸಂತರ್ಪಣೆ ಕಾರ್ಯದಲ್ಲಿ ಕಾಂತಾರ ಚಿತ್ರತಂಡ ಭಾಗಿಯಾಗಿತ್ತು. ಕಳೆದ ಎಪ್ರಿಲ್ನಲ್ಲಿ ಇದೇ ದೈವಸ್ಥಾನದ ನೇಮೋತ್ಸವದಲ್ಲಿ ರಿಷಬ್ ಶೆಟ್ಟಿ ಹಾಗೂ ಕುಟುಂಬ ಭಾಗಿಯಾಗಿತ್ತು. ಮಗನ ಹುಟ್ಟುಹಬ್ಬದ ದಿನ ಬಾರೆಬೈಲು ದೇವಸ್ಥಾನಕ್ಕೆ ರಿಷಬ್ ಆಗಮಿಸಿದ್ದರು. ಈಗ ಅದೇ ದೇವಸ್ಥಾನದಲ್ಲಿ ಹರಕೆ ನೇಮೋತ್ಸವ ಸಲ್ಲಿಸಿದ್ದಾರೆ. ಕಳೆದ ಬಾರಿ ‘ಸಿನಿಮಾ ಸಂಸಾರ’ದಲ್ಲಿ ಜಾಗರೂಕತೆಯಿಂದ ಇರುವಂತೆ ದೈವ ಎಚ್ಚರಿಕೆ ನೀಡಿತ್ತು. ಸಿನಿಮಾ ಕ್ಷೇತ್ರ ಅಂದಾಗ ಅಲ್ಲಿ ದುಷ್ಮನ್ಗಳು ಇರ್ತಾರೆ, ಈ ವಿಚಾರದಲ್ಲಿ ಎಚ್ಚರಿಕೆ ಇರಲಿ ಎಂಬ ಸೂಚನೆ ಕೊಟ್ಟಿತ್ತು. ಹರಕೆ ಕಟ್ಟಿಕೊಂಡಿದ್ದರೆ ಅದನ್ನು ಕೊಟ್ಟು ಬಿಡು ಎಂದು ರಿಷಬ್ ಶೆಟ್ಟಿಗೆ ದೈವ ಸೂಚಿಸಿತ್ತು. ಅದರಂತೆ ರಿಷಬ್ ಬಂದು ಹರಕೆ ತೀರಿಸಿದ್ದಾರೆ.
ಇದನ್ನೂ ಓದಿ: ಕಣ್ಣೀರು ಸುರಿಸಬೇಡ, ನಿನ್ನ ಹಿಂದೆ ನಾನಿದ್ದೇನೆ; ರಿಷಬ್ಗೆ ಅಭಯ ನೀಡಿದ ದೈವ
ಇನ್ನು, ಈ ಹರಕೆ ನೇಮೋತ್ಸವದಲ್ಲಿ ‘ಕಾಂತಾರ ಚಾಪ್ಟರ್ 3’ ಬಗ್ಗೆ ಕೂಡ ರಿಷಬ್ ಕೇಳಿದ್ದು ಅದಕ್ಕೂ ಕೂಡ ದೈವ ಗ್ರೀನ್ ಸಿಗ್ನಲ್ ಕೊಟ್ಟಿದೆ. ‘ನಾನಿದ್ದೇನೆ ಮುಂದೆ ಸಾಗು’ ಅಂತ ಹೇಳಿದೆ. ದೈವದ ಅಭಯ ಸಿಕ್ಕಿರೋ ಖುಷಿಯಲ್ಲಿ ನಿರ್ಮಾಪಕ ವಿಜಯ್ ಕಿರಗಂದೂರು ಮತ್ತು ರಿಷಬ್ ಶೆಟ್ಟಿ ವಾಪಸ್ ಆಗಿದ್ದಾರೆ. ಬಾಕಿ ಇರುವ ಹರಕೆಗಳನ್ನು ತೀರಿಸಿ ನಂತರ ಕಾಂತಾರ ಸಿನಿಮಾದ ಮುಂದಿನ ಭಾಗದ ಚಿತ್ರೀಕರಣ ಆರಂಭವಾಗುವ ಸಾಧ್ಯತೆ ಇದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.



