ಸುದೀಪ್ (Sudeep), ಬಿಜೆಪಿಗೆ (BJP) ಸೇರುತ್ತಾರೆಂಬ ಸುದ್ದಿ ಹರಿದಾಡಿದ ಸಂದರ್ಭದಲ್ಲಿ ಸುದೀಪ್ ಅವರ ಖಾಸಗಿ ವಿಡಿಯೋ ಲೀಕ್ ಮಾಡುವುದಾಗಿ ಕೆಲವು ಕಿಡಿಗೇಡಿಗಳು ಬೆದರಿಕೆ ಪತ್ರ ಬರೆದಿದ್ದರು. ಈ ಕುರಿತು ಸುದೀಪ್ ಆಪ್ತ ಜಾಕ್ ಮಂಜು, ಪೊಲೀಸ್ ಆಯುಕ್ತರನ್ನು ಭೇಟಿಯಾಗಿ ದೂರು ನೀಡಿದ್ದರು. ಪ್ರಕರಣವನ್ನು ಸಿಸಿಬಿಯು ತನಿಖೆ ನಡೆಸುತ್ತಿದೆಯಾದರೂ ಈವರೆಗೆ ಆರೋಪಿಗಳ ಪತ್ತೆ ಸಾಧ್ಯವಾಗಿಲ್ಲ.
ಸ್ವಿಫ್ಟ್ ಕಾರಿನಲ್ಲಿ ಬಂದ ಕಿಡಿಗೇಡಿಗಳು ದೊಮ್ಮಲೂರಿನ ಪೋಸ್ಟ್ ಆಫೀಸ್ ಒಂದರಲ್ಲಿ ಪತ್ರವನ್ನು ಪೋಸ್ಟ್ ಮಾಡಿದ್ದನ್ನು ಸಿಸಿಬಿ ಪೊಲೀಸರು ಸಿಸಿಟಿವಿ ಪರಿಶೀಲನೆಯಿಂದ ಪತ್ತೆಹಚ್ಚಿದ್ದರು. ಆದರೆ ಕಿಡಿಗೇಡಿಗಳು ನಕಲಿ ನಂಬರ್ ಪ್ಲೇಟ್ ಬಳಸಿ ಪತ್ರವನ್ನು ಪೋಸ್ಟ್ ಮಾಡಿದ್ದು ಮುಂದಿನ ತನಿಖೆಯಿಂದ ತಿಳಿದು ಬಂತು. ಈಗ ಇದೇ ಪ್ರಕರಣದಲ್ಲಿ ಸುದೀಪ್ ಅವರ ಮಾಜಿ ಕಾರು ಚಾಲಕನನ್ನು ವಿಚಾರಣೆ ನಡೆಸಲಾಗಿದೆ.
ಜಾಕ್ ಮಂಜು ನೀಡಿದ್ದ ದೂರಿನ ಆಧಾರದಲ್ಲಿ ಮಾಜಿ ಕಾರು ಚಾಲಕನನ್ನು ಸಿಸಿಬಿ ಪೊಲೀಸರು ವಿಚಾರಣೆ ನಡೆಸಿದ್ದಾರೆ. ಆತನ ಮೊಬೈಲ್ ಫೋನ್ ಅನ್ನು ಪರಿಶೀಲನೆ ಮಾಡಲಾಗಿದೆ. ಆದರೆ ಆತನಿಗೂ ಈ ಪ್ರಕರಣಕ್ಕೂ ಸಂಬಂಧವಿಲ್ಲ ಎಂಬುದು ಸಿಸಿಬಿ ಪೊಲೀಸರಿಗೆ ತಿಳಿದು ಬಂದಿದೆ. ಆತ ಮೂರು ವರ್ಷಗಳ ಹಿಂದೆಯೇ ಸುದೀಪ್ ಅವರ ಬಳಿ ಕೆಲಸ ತೊರೆದು ಸಂಪರ್ಕ ಕಡಿದುಕೊಂಡಿದ್ದಾನೆ. ದೂರು ನೀಡಿದ್ದ ಜಾಕ್ ಮಂಜು ಮಾಜಿ ಕಾರು ಚಾಲಕನ ವಿರುದ್ಧ ಅನುಮಾನ ವ್ಯಕ್ತಪಡಿಸಿದ್ದರ ಹೊರತಾಗಿ ಇನ್ಯಾವುದೇ ಮಾಹಿತಿ ನೀಡಿಲ್ಲ ಎನ್ನಲಾಗುತ್ತಿದೆ. ಇದು ತನಿಖಾಧಿಕಾರಿಗಳ ತನಿಖೆಯನ್ನು ಇನ್ನಷ್ಟು ಕಠಿಣಗೊಳಿಸಿದೆ.
ಬೆದರಿಕೆ ಪತ್ರ ಬಂದ ದಿನ ಮಾಧ್ಯಮಗಳೊಟ್ಟಿಗೆ ಮಾತನಾಡಿದ್ದ ಸುದೀಪ್, ಈ ಘಟನೆಯ ಹಿಂದೆ ಯಾರಿದ್ದಾರೆಂದು ಗೊತ್ತಿದೆ, ಇದನ್ನು ರಾಜಕೀಯ ರಂಗದವರು ಮಾಡಿಸಿರುವುದಲ್ಲ, ಸಿನಿಮಾ ರಂಗದವರೇ ಮಾಡಿಸಿದ್ದಾರೆ. ಅವರಿಗೆ ಕಾನೂನು ಮೂಲಕವೇ ಉತ್ತರ ಕೊಡುತ್ತೀವಿ ಎಂದಿದ್ದರು. ಯಾರು ಮಾಡಿದ್ದಾರೆಂದು ಗೊತ್ತಿದ್ದರೆ ಏಕೆ ಪೊಲೀಸರಿಗೆ ಮಾಹಿತಿ ನೀಡುತ್ತಿಲ್ಲ ಎಂಬ ಪ್ರಶ್ನೆಯೂ ಉದ್ಭುವಿಸಿದೆ.
ಇದನ್ನೂ ಓದಿ: ಮಾಧ್ಯಮಗಳ ವಿರುದ್ಧ ಪ್ರತಿಬಂಧಕಾಜ್ಞೆ ತಂದ ಸುದೀಪ್, ಅಪಪ್ರಚಾರದ ವಿರುದ್ಧ ಮುನ್ನೆಚ್ಚರಿಕೆ ಎಂದ ನಟ
ನಟ ಸುದೀಪ್ ಬಿಜೆಪಿಗೆ ಸೇರ್ಪಡೆಗೊಳ್ಳುತ್ತಾರೆ ಎಂಬ ಸುದ್ದಿ ಹರಿದಾಡಿದಾಗ ಈ ಬೆದರಿಕೆ ಪತ್ರ ಬಂದಿದ್ದವು. ಮೊದಲಿಗೆ ಬಂದಿದ್ದ ಪತ್ರವನ್ನು ಸುದೀಪ್ ಅಲಕ್ಷಿಸಿದ್ದರು ಎನ್ನಲಾಗಿದೆ. ಆದರೆ ಎರಡನೇ ಪತ್ರ ಬಂದಾಗ ಜಾಕ್ ಮಂಜು ದೂರು ದಾಖಲಿಸಿದ್ದಾರೆ. ಇನ್ನು ಸುದೀಪ್ ಅವರು ಬಿಜೆಪಿ ಸೇರಿಲ್ಲವಾದರೂ ಈ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಪರವಾಗಿ ಚುನಾವಣೆ ಪ್ರಚಾರದಲ್ಲಿ ಭಾಗಿಯಾಗಿದ್ದಾರೆ. ಈಗಾಗಲೇ ಸಿಎಂ ಬಸವರಾಜ ಬೊಮ್ಮಾಯಿ ಹಾಗೂ ಬಿಜೆಪಿ ರಾಷ್ಟ್ರಾಧ್ಯಕ್ಷ ಜೆಪಿ ನಡ್ಡಾ ಅವರೊಟ್ಟಿಗೆ ಬೃಹತ್ ರ್ಯಾಲಿಯಲ್ಲಿ ಭಾಗವಹಿಸಿ ಬೊಮ್ಮಾಯಿ ಅವರ ಪರವಾಗಿ ಮತಯಾಚನೆ ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ಇನ್ನೂ ಕೆಲವು ಬಿಜೆಪಿ ಅಭ್ಯರ್ಥಿಗಳ ಪರವಾಗಿ ಮತಯಾಚನೆ ಮಾಡಲಿದ್ದಾರೆ.
ವಿಕ್ರಾಂತ್ ರೋಣ ಸಿನಿಮಾದ ಬಳಿಕ ತುಸು ಬ್ರೇಕ್ ಪಡೆದಿರುವ ನಟ ಸುದೀಪ್, ಚುನಾವಣೆ ಮುಗಿದ ಬಳಿಕ ತಮಿಳು ನಿರ್ದೇಶಕನ ಜೊತೆ ಹೊಸ ಸಿನಿಮಾ ಪ್ರಾರಂಭ ಮಾಡಲಿದ್ದಾರೆ. ಅದಾದ ಬಳಿಕ ಅನುಪ್ ಭಂಡಾರಿ ಜೊತೆಗೆ ಹೊಸ ಸಿನಿಮಾ ಆರಂಭಿಸುವ ಸಾಧ್ಯತೆ ಇದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 4:06 pm, Fri, 21 April 23