Shivani song: ‘ಎಣ್ಣೆ ಬೇಡ.. ಈಗಲೇ ಕಿಕ್ನಲ್ಲಿದೀನಿ’: ಶಿವಾನಿ ನೋಡಿ ತಲೆ ಕೆಡಿಸಿಕೊಂಡ ‘ಕೌಸಲ್ಯ ಸುಪ್ರಜಾ ರಾಮ’
Darling Krishna: ಅರ್ಜುನ್ ಜನ್ಯ ಅವರು ‘ಕೌಸಲ್ಯ ಸುಪ್ರಜಾ ರಾಮ’ ಸಿನಿಮಾಗೆ ಸಂಗೀತ ನಿರ್ದೇಶನ ಮಾಡಿದ್ದಾರೆ. ‘ಶಿವಾನಿ..’ ಹಾಡಿಗೆ ನಿರ್ದೇಶಕ ಶಶಾಂಕ್ ಸಾಹಿತ್ಯ ಬರೆದಿದ್ದಾರೆ.
ನಟ ಡಾರ್ಲಿಂಗ್ ಕೃಷ್ಣ (Darling Krishna) ಅವರು ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ಬ್ಯುಸಿ ಆಗಿದ್ದಾರೆ. ಅವುಗಳ ಪೈಕಿ ‘ಕೌಸಲ್ಯ ಸುಪ್ರಜಾ ರಾಮ’ ಸಿನಿಮಾ ಸಾಕಷ್ಟು ಹೈಪ್ ಸೃಷ್ಟಿ ಮಾಡಿದೆ. ಸ್ಯಾಂಡಲ್ವುಡ್ನ ಅನುಭವಿ ನಿರ್ದೇಶಕ ಶಶಾಂಕ್ ಅವರು ಈ ಚಿತ್ರಕ್ಕೆ ಆ್ಯಕ್ಷನ್-ಕಟ್ ಹೇಳಿದ್ದಾರೆ. ಅವರ ಸಿನಿಮಾಗಳಲ್ಲಿ ಹಾಡುಗಳಿಗೆ ವಿಶೇಷ ಸ್ಥಾನ ಇರುತ್ತದೆ. ‘ಮೊಗ್ಗಿನ ಮನಸು’ ಚಿತ್ರದಿಂದ ಹಿಡಿದು, ಕಳೆದ ವರ್ಷ ತೆರೆಕಂಡ ‘ಲವ್ 360’ ಸಿನಿಮಾದವರೆಗೂ ಈ ಮಾತು ಸಾಬೀತಾಗಿದೆ. ಈಗ ‘ಕೌಸಲ್ಯ ಸುಪ್ರಜಾ ರಾಮ’ (Kausalya Supraja Rama) ಚಿತ್ರದಲ್ಲೂ ಅದು ಮುಂದುವರಿದಿದೆ. ಈ ಸಿನಿಮಾದ ಮೊದಲ ಸಾಂಗ್ ರಿಲೀಸ್ ಆಗಿದೆ. ‘ಶಿವಾನಿ..’ ಎಂಬ ಈ ಹಾಡಿನಲ್ಲಿ ಡಾರ್ಲಿಂಗ್ ಕೃಷ್ಣ ಮತ್ತು ಬೃಂದಾ ಆಚಾರ್ಯ (Brinda Acharya) ಅವರು ಮಿಂಚಿದ್ದಾರೆ. ಬಿಡುಗಡೆಯಾದ ಕೆಲವೇ ನಿಮಿಷಗಳಲ್ಲಿ ಈ ಹಾಡು ಕೇಳುಗರಿಗೆ ಗುಂಗು ಹಿಡಿಸಲು ಆರಂಭಿಸಿದೆ.
ಅರ್ಜುನ್ ಜನ್ಯ ಅವರು ‘ಕೌಸಲ್ಯ ಸುಪ್ರಜಾ ರಾಮ’ ಸಿನಿಮಾಗೆ ಸಂಗೀತ ನಿರ್ದೇಶನ ಮಾಡಿದ್ದಾರೆ. ಅವರ ಸಂಗೀತ ಸಂಯೋಜನೆಯಲ್ಲಿ ‘ಶಿವಾನಿ..’ ಹಾಡು ಮೂಡಿಬಂದಿದ್ದು, ನಿರ್ದೇಶಕ ಶಶಾಂಕ್ ಅವರೇ ಸಾಹಿತ್ಯ ಬರೆದಿದ್ದಾರೆ. ನಟ ನಾಗಭೂಷಣ್ ಕೂಡ ಈ ಹಾಡಿನಲ್ಲಿ ಕಾಣಿಸಿಕೊಂಡಿದ್ದಾರೆ.
‘ಎಣ್ಣೆ ಬೇಕಾ’ ಎಂದು ನಾಗಭೂಷಣ್ ಕೇಳುತ್ತಾರೆ. ಅದಕ್ಕೆ ಉತ್ತರಿಸುವ ಡಾರ್ಲಿಂಗ್ ಕೃಷ್ಣ, ‘ಬೇಡ.. ಈಗಾಗಲೇ ಕಿಕ್ನಲ್ಲಿದೀನಿ’ ಎಂದು ಹೇಳುತ್ತಾರೆ. ಆ ಡೈಲಾಗ್ ಬಳಿಕ ‘ಶಿವಾನಿ..’ ಹಾಡು ಶುರುವಾಗುತ್ತದೆ. ಸುಮಧುರ ಸಂಗೀತ ಮತ್ತು ಕ್ಯಾಚಿ ಆದಂತಹ ಸಾಹಿತ್ಯದಿಂದಾಗಿ ಈ ಹಾಡು ಗಮನ ಸೆಳೆಯುತ್ತಿದೆ. ಬೃಂದಾ ಆಚಾರ್ಯ ಅವರು ಶಿವಾನಿ ಪಾತ್ರದಲ್ಲಿ ಸಖತ್ ಕ್ಯೂಟ್ ಆಗಿ ಕಾಣಿಸಿಕೊಂಡಿದ್ದಾರೆ.
‘ಸರೆಗಮ ಕನ್ನಡ’ ಮೂಲಕ ‘ಶಿವಾನಿ..’ ಹಾಡು ಬಿಡುಗಡೆ ಆಗಿದೆ. ಸಾಂಗ್ ನೋಡಿದ ಸಿನಿಪ್ರಿಯರು ಪಾಸಿಟಿವ್ ಆಗಿ ಕಮೆಂಟ್ ಮಾಡುತ್ತಿದ್ದಾರೆ. ಈ ಹಾಡಿನಿಂದಾಗಿ ‘ಕೌಸಲ್ಯ ಸುಪ್ರಜಾ ರಾಮ’ ಚಿತ್ರದ ಮೇಲಿನ ನಿರೀಕ್ಷೆ ಹೆಚ್ಚಾಗಿದೆ. ‘ಶಶಾಂಕ್ ಸಿನಿಮಾಸ್’ ಮತ್ತು ‘ಕೌರವ ಪ್ರೊಡಕ್ಷನ್ ಹೌಸ್’ ಜಂಟಿಯಾಗಿ ಈ ಸಿನಿಮಾ ನಿರ್ಮಾಣ ಮಾಡಿವೆ.
ಇದನ್ನೂ ಓದಿ: Love Mocktail 3: ‘ಲವ್ ಮಾಕ್ಟೇಲ್ 3’ ಕೆಲಸ ಆರಂಭಿಸಿದ ಡಾರ್ಲಿಂಗ್ ಕೃಷ್ಣ; ಮುಂದುವರಿಯಲಿದೆ ಆದಿ-ನಿಧಿ ಕಥೆ
‘ಕೌಲಸ್ಯ ಸುಪ್ರಜಾ ರಾಮ’ ಸಿನಿಮಾದ ಕೆಲಸಗಳು ಬಹುತೇಕ ಮುಗಿದಿದ್ದು ಬಿಡುಗಡೆಗೆ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಈಗಾಗಲೇ ಪ್ರಚಾರ ಕಾರ್ಯಕ್ಕೆ ಚಾಲನೆ ನೀಡಲಾಗಿದೆ. ಕೆಲವೇ ದಿನಗಳ ಹಿಂದೆ ಸಾಂಗ್ ಟೀಸರ್ ರಿಲೀಸ್ ಮಾಡಲಾಗಿತ್ತು. ಸಿನಿಪ್ರಿಯರಿಂದ ಅದಕ್ಕೆ ಉತ್ತಮ ರೆಸ್ಪಾನ್ಸ್ ಸಿಕ್ಕಿತ್ತು. ಅದರ ಬೆನ್ನಲೇ ಪೂರ್ತಿ ಸಾಂಗ್ ಬಿಡುಗಡೆ ಆಗಿದ್ದು, ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 7:29 pm, Fri, 21 April 23