ರೋಸಿ ಸಿನಿಮಾ ಟೈಟಲ್ ವಿವಾದ: ವಿವರ ನೀಡಿದ ಯೋಗಿ, ಶಿವಣ್ಣ ಹೇಳಿದ್ದೇನು?
Yogi: ರೋಸಿ ಸಿನಿಮಾ ಟೈಟಲ್ ವಿವಾದ ಕುರಿತಂತೆ ಶಿವರಾಜ್ ಕುಮಾರ್ ಜೊತೆ ಮಾತನಾಡಿರುವುದಾಗಿ ಹೇಳಿರುವ ಯೋಗಿ, ಶಿವಣ್ಣ ಏನು ಹೇಳಿದರು ಎಂಬುದನ್ನು ತಿಳಿಸಿದ್ದಾರೆ.
ನಟ ಯೋಗಿ (Yogi) ನಟಿಸುತ್ತಿರುವ ಹೊಸ ಸಿನಿಮಾದ ಟೈಟಲ್ (Movie Title) ಹಾಗೂ ಪೋಸ್ಟರ್ ಇತ್ತೀಚೆಗಷ್ಟೆ ಬಿಡುಗಡೆ ಆಯಿತು. ಆದರೆ ಟೈಟಲ್ ಹಾಗೂ ಪೋಸ್ಟರ್ ಬಿಡುಗಡೆ ಆದ ಬೆನ್ನಲ್ಲೆ ಸಿನಿಮಾಕ್ಕೆ ವಿವಾದವೂ ಬೆನ್ನೇರಿತು. ಯೋಗಿಯ ಹೊಸ ಸಿನಿಮಾಕ್ಕೆ ರೋಸಿ (Rosy) ಹೆಸರನ್ನು ಇಡಲಾಗಿದೆ. ಸಿನಿಮಾದಲ್ಲಿ ನಾಯಕನ ಹೆಸರೂ ಸಹ ರೋಸಿಯೇ ಆಗಿರುವುದರಿಂದ ಇದು ಸೂಕ್ತವಾದ ಹೆಸರು ಎಂಬುದು ನಿರ್ದೇಶಕರ ನಿರ್ಧಾರ. ಆದರೆ ಸಿನಿಮಾದ ಪೋಸ್ಟರ್ ಬಿಡುಗಡೆ ಆದ ಬೆನ್ನಲ್ಲೆ ಸೂರಜ್ ಪ್ರೊಡಕ್ಷನ್ನವರು ಸಿನಿಮಾದ ಟೈಟಲ್ ನಮಗೆ ಸೇರಿದ್ದೆಂದು, ಆ ಟೈಟಲ್ ಅನ್ನು ಇತರರು ಬಳಸಲು ಅವಕಾಶ ನೀಡಬಾರದೆಂದು ತಕರಾರು ಪತ್ರವನ್ನು ಚಲನಚಿತ್ರ ವಾಣಿಜ್ಯ ಮಂಡಳಿಗೆ ಬರೆದಿದ್ದಾರೆ.
ಅರ್ಜುನ್ ಜನ್ಯ (Arjun Janya) ನಿರ್ದೇಶನ ಮಾಡುತ್ತಿರುವ ಮೊತ್ತ ಮೊದಲ ಸಿನಿಮಾಕ್ಕಾಗಿ ರೋಸಿ 45 ಎಂದು ಹೆಸರನ್ನು ನೊಂದಾಯಿಸಲಾಗಿದ್ದು, ರೋಸಿ 45 ನಲ್ಲಿ ಶಿವರಾಜ್ ಕುಮಾರ್, ಉಪೇಂದ್ರ ಹಾಗೂ ರಾಜ್ ಬಿ ಶೆಟ್ಟಿ ನಟಿಸುತ್ತಿದ್ದಾರೆ. ಇದೀಗ ಯೋಗಿಯ ಸಿನಿಮಾಕ್ಕೂ ರೋಸಿ ಟೈಟಲ್ ನಿಗದಿ ಆಗಿರುವುದರಿಂದ ಟೈಟಲ್ ವಿವಾದ ಶುರುವಾಗಿದೆ.
ವಿವಾದದ ಕುರಿತು ಸ್ಪಷ್ಟನೆ ನೀಡಲೆಂದು ಯೋಗಿ ಹಾಗೂ ನಿರ್ದೇಶಕ ಶೂನ್ಯ ಇತ್ತೀಚೆಗೆ ಸುದ್ದಿಗೋಷ್ಠಿ ಕರೆದಿದ್ದರು. ಈ ಸಂದರ್ಭದಲ್ಲಿ ಟಿವಿ9 ಜೊತೆ ಮಾತನಾಡಿದ ಯೋಗಿ, ”ಇದು ಯಾವುದೇ ವಿವಾದ ಅಲ್ಲ. ನಮ್ಮ ಹಾಗೂ ಆ ನಿರ್ಮಾಣ ಸಂಸ್ಥೆಯ ಮಧ್ಯೆ ಇನ್ನೂ ಸರಿಯಾದ ಮಾತುಕತೆ ಆಗದೇ ಇರುವ ಕಾರಣ ಇದು ವಿವಾದದಂತೆ ಕಾಣುತ್ತಿದೆ. ಆದರೆ ಎರಡೂ ಕಡೆ ಪರಿಚಯದವರೇ ಇರುವ ಕಾರಣ ಇದು ವಿವಾದ ಆಗುವುದಿಲ್ಲ. ಸುಲಭವಾಗಿ ಬಗೆಹರಿಯಲಿದೆ” ಎಂದಿದ್ದಾರೆ.
”ಎರಡೂ ಚಿತ್ರತಂಡಗಳಿಗೆ ಒಂದೇ ಟೈಟಲ್ ನೀಡಿದ ಕೂಡಲೇ ನಾನು ಶಿವಣ್ಣ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದೆ. ನಿನಗಿದು ಐವತ್ತನೇ ಸಿನಿಮಾ ಆರಾಮವಾಗಿ ಕೆಲಸ ಮಾಡು ಹೋಗು ನಿನಗೇ ಟೈಟಲ್ ಸಿಗುತ್ತದೆ. ನಾನು ಮಾತನಾಡುತ್ತೇನೆ ಎಂದು ಅವರು ಭರವಸೆ ಕೊಟ್ಟಿದ್ದಾರೆ” ಎಂದಿದ್ದಾರೆ ಯೋಗಿ.
ಇದೇ ವಿಷಯದ ಬಗ್ಗೆ ಮಾತನಾಡಿದ ನಿರ್ದೇಶಕ ಶೂನ್ಯ, ”ನಾವು ಹಾಗೂ ಅವರು ಇಬ್ಬರೂ ಒಂದೇ ತಿಂಗಳಿನಲ್ಲಿ ಟೈಟಲ್ ರಿಜಿಸ್ಟರ್ ಮಾಡಿಸಿದ್ದೇವೆ. ಆದರೆ ಅವರು ನಮಗಿಂತಲೂ ಒಂದು ವಾರ ಮುಂಚೆ ಮಾಡಿಸಿದ್ದಾರೆ. ಆದರೆ ವಾಣಿಜ್ಯ ಮಂಡಳಿಯವರು ಇಬ್ಬರಿಗೂ ಟೈಟಲ್ ನೀಡಿದ್ದಾರೆ. ಟೈಟಲ್ ನೀಡುವಾಗಲೂ ಚರ್ಚೆ ಮಾಡಿಯೇ ಟೈಟಲ್ ನೀಡಿದ್ದಾರೆ. ನಮ್ಮ ಸಿನಿಮಾದಲ್ಲಿ ನಾಯಕನ ಹೆಸರು ರೋಸಿ ಎಂದೇ ಇದೆ ಹಾಗಾಗಿ ಸಿನಿಮಾಕ್ಕೆ ಇದೇ ಟೈಟಲ್ ಸೂಕ್ತ ಎಂಬುದು ನಮ್ಮ ಮನವಿ ಅಷ್ಟೆ” ಎಂದಿದ್ದಾರೆ.
ಇನ್ನು ಅರ್ಜುನ್ ಜನ್ಯ ನಿರ್ದೇಶನ ಮಾಡುತ್ತಿರುವ ಸಿನಿಮಾದ ಹೆಸರು 45 ಎಂದಿತ್ತು. ಅದೇ ಹೆಸರಿನಲ್ಲಿಯೇ ಪೋಸ್ಟರ್ ಸಹ ಬಿಡುಗಡೆ ಆಗಿತ್ತು. ಆದರೆ ಯೋಗಿಯ ರೋಸಿ ಸಿನಿಮಾ ಟೈಟಲ್ ಘೋಷಣೆ ಆದ ಬಳಿಕ, ತಾವು ರೋಸಿ 45 ಎಂದು ಹೆಸರು ನೊಂದಾಯಿಸಿರುವುದಾಗಿ ನಿರ್ಮಾಣ ಸಂಸ್ಥೆ ಹೇಳಿದೆ ಮಾತ್ರವಲ್ಲದೆ ವಾಣಿಜ್ಯ ಮಂಡಳಿಗೆ ಪತ್ರ ಸಹ ಬರೆದಿದೆ. ಇದೀಗ ನಿರ್ಮಾಣ ಸಂಸ್ಥೆಯನ್ನು ಶಿವಣ್ಣ ಒಪ್ಪಿಸಿ ರೋಸಿ ಟೈಟಲ್ ಅನ್ನು ಯೋಗಿಗೆ ಬಿಟ್ಟು ಕೊಡುತ್ತಾರಾ ಕಾದು ನೋಡಬೇಕಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ