ಸುದೀಪ್ (Sudeep) ಆಪ್ತವಲಯದಲ್ಲಿ ಗುರುತಿಸಿಕೊಂಡಿರುವ ನಿರ್ದೇಶಕ ಚಕ್ರವರ್ತಿ ಚಂದ್ರಚೂಡ್ (Chakravarthi Chandrachud), ನಿರ್ಮಾಪಕ ಎಂಎನ್ ಕುಮಾರ್, ಸುದೀಪ್ ವಿರುದ್ಧ ಆರೋಪಗಳನ್ನು ಮಾಡಿದ ಬಳಿಕ ನಿರ್ಮಾಪಕ ಜಾಕ್ ಮಂಜು ಅವರೊಟ್ಟಿಗೆ ಸೇರಿ ಸುದ್ದಿಗೋಷ್ಠಿ ನಡೆಸಿ ಸುದೀಪ್ ಪರವಾಗಿ ಮಾತನಾಡಿದ್ದರು. ಅದರ ಬೆನ್ನಲ್ಲೆ ಯೂಟ್ಯೂಬ್ನಲ್ಲಿ ಈ ವಿವಾದದ ಕುರಿತಾಗಿ ವಿಡಿಯೋ ಅಪ್ಲೋಡ್ ಮಾಡಿ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದು, ಸುದೀಪ್ ವಿರುದ್ಧ ಕುಮಾರ್ ಆರೋಪ ಮಾಡಿರುವ ಘಟನೆ ಹಿಂದೆ ನಿರ್ಮಾಪಕ ಸೂರಪ್ಪ ಬಾಬು (Soorappa Babu) ಕೈವಾಡ ಇದೆಯೆಂದು ಆರೋಪಿಸಿದ್ದಾರೆ.
ಸೂರಪ್ಪ ಬಾಬು ಅವರನ್ನು ಶಿಖಂಡಿ ಎಂದು ಸಂಭೋಧಿಸಿರುವ ಚಕ್ರವರ್ತಿ ಚಂದ್ರಚೂಡ್, ”ಹಲವು ಸಂಪಾದಕರಿಗೆ, ಪತ್ರಕರ್ತರಿಗೆ ಕರೆ ಮಾಡಿ ಹಣದ ಆಮಿಷ ನೀಡಿ ಸುದೀಪ್ ವಿರುದ್ಧ ಸುದ್ದಿ ಮಾಡುವಂತೆ ಒತ್ತಾಯ ಮಾಡಿದ್ದಾರೆ. ಅಲ್ಲದೆ ಕ್ಲಬ್ ಒಂದರಲ್ಲಿ ಸೂರಪ್ಪ ಬಾಬು ಹಾಗೂ ಎಂಎನ್ ಕುಮಾರ್ ಒಟ್ಟಿಗಿದ್ದಿದ್ದನ್ನು ಸ್ವತಃ ನಾನೂ ನೋಡಿದ್ದೇನೆ. ಸುದೀಪ್ ವಿರುದ್ಧ ತೆರೆಮರೆಯಲ್ಲಿ ಸೂರಪ್ಪ ಬಾಬು ಕೆಲಸ ಮಾಡುತ್ತಲೇ ಬಂದಿದ್ದರು. ಅವರಿಗೆ ಸುದೀಪ್ ಸಾಕಷ್ಟು ಸಹಾಯ ಮಾಡಿದ್ದರೂ ಸಹ ಸೂರಪ್ಪ ಬಾಬು, ಬೆನ್ನಿಗೆ ಇರಿಯುವ ಕಾರ್ಯ ಮಾಡಿದ್ದಾರೆ” ಎಂದಿದ್ದಾರೆ.
ಇದನ್ನೂ ಓದಿ:ಸುದೀಪ್ ನನ್ನ ಮಗನಂತೆ, ನನ್ನ ಮಗನನ್ನು ನಾನು ಬಿಟ್ಟುಕೊಡಲ್ಲ: ರವಿಚಂದ್ರನ್
”ಕೋಟಿಗೊಬ್ಬ 2′ ಸಿನಿಮಾದ ಸಂಭಾವನೆ 2.50 ಕೋಟಿ ರೂಪಾಯಿಗಳನ್ನು ಸುದೀಪ್ ಅವರಿಗೆ ಸೂರಪ್ಪ ಬಾಬು ಕೊಡಬೇಕು. ಅದಾದ ಬಳಿಕ ‘ಕೋಟಿಗೊಬ್ಬ 3’ ಸಿನಿಮಾ ಸಹ ಅವರದ್ದೇ ತಪ್ಪಿನಿಂದ ಒಂದು ದಿನ ತಡವಾಗಿ ಬಿಡುಗಡೆ ಆಯ್ತು. ಅಂದು ನಾನು ಸುದೀಪ್ ಅವರ ಜೊತೆಗೇ ಇದ್ದೆ. ಸುದೀಪ್ ಅವರು ಅಂದು ಜಾಕ್ ಮಂಜು ಹಾಗೂ ಸಲಾಂ ಅವರಿಗೆ ಏನು ಹೇಳಿದರು, ಹೈದರಾಬಾದ್ನ ನೆಗೆಟಿವ್ ಫೈನಾನ್ಶಿಯರ್ಗಳಿಗೆ ಏನು ಹೇಳಿ ಕೊನೆಗೆ ಸಿನಿಮಾ ಬಿಡುಗಡೆ ಮಾಡಿಸಿದರು ಎಂಬುದು ನಾನು ನೋಡಿದ್ದೇನೆ” ಎಂದಿದ್ದಾರೆ ಚಕ್ರವರ್ತಿ.
”ಸೂರಪ್ಪ ಬಾಬು, ಅವರ ಮಗಳ ಕೈಯಲ್ಲಿ ಸುದೀಪ್ಗೆ ಮನವಿಗಳನ್ನು ಮಾಡಿಸಿದರು. ಸುದೀಪ್ ಅವರು ಎರಡೆರಡು ಸಿನಿಮಾಗಳನ್ನು ಸೂರಪ್ಪ ಬಾಬುಗೆ ಮಾಡಿಕೊಟ್ಟರು. ಸ್ವತಃ ಸೂರಪ್ಪ ಬಾಬು ಅವರೇ ಸುದೀಪ್ ಮಾಡಿದ ಸಹಾಯವನ್ನು ವೇದಿಕೆಯಲ್ಲಿ ಮೆಚ್ಚಿ ಕೊಂಡಾಡಿದ್ದರು. ಸೂರಪ್ಪ ಬಾಬು ಅವರು ಜಾಕ್ ಮಂಜು ಅವರಿಗೆ ಒಂದೂವರೆ ಕೋಟಿ ರೂಪಾಯಿ ಹಣ ಕೊಡಬೇಕು, ಕೋಟಿಗೊಬ್ಬ 3 ಸಿನಿಮಾದ 3.5 ಕೋಟಿ ಬಾಕಿ ಉಳಿಸಿಕೊಂಡಿದ್ದಾರೆ. ‘ಕೋಟಿಗೊಬ್ಬ 2’ ಸಿನಿಮಾದ್ದು 2.5 ಕೋಟಿ ಬಾಕಿ ಉಳಿಸಿಕೊಂಡಿದ್ದೀರಿ. ಸುಮಾರು ಏಳು ಕೋಟಿ ಹಣ ಬ್ಯಾಲೆನ್ಸ್ ಉಳಿಸಿಕೊಂಡಿದ್ದೀರಿ” ಎಂದು ಚಕ್ರವರ್ತಿ ಚಂದ್ರಚೂಡ್ ಲೆಕ್ಕ ಕೊಟ್ಟಿದ್ದಾರೆ. ಆದರೆ ಅವರು ಯಾವುದೇ ದಾಖಲೆಗಳನ್ನು ಅವರು ವಿಡಿಯೋದಲ್ಲಿ ತೋರಿಸಿಲ್ಲ.
”ಸೂರಪ್ಪ ಬಾಬು ಅವರು ಕಷ್ಟದಲ್ಲಿದ್ದಾಗೆಲ್ಲ ಸುದೀಪ್ ಕೈಹಿಡಿದಿದ್ದಾರೆ. ಅವರ ಮನೆಯ ಋಣದಲ್ಲಿ ಸೂರಪ್ಪ ಬಾಬು ಇದ್ದಾರೆ. ‘ಕೋಟಿಗೊಬ್ಬ’ ಟೈಟಲ್ಗೆ ಅನ್ವರ್ಥನಾಮ ಸುದೀಪ್ ಎಂದು ಅವರೇ ಹೇಳಿಕೊಂಡಿದ್ದಾರೆ. ಆದರೆ ಬೆನ್ನ ಹಿಂದೆ ಇಷ್ಟೋಂದು ಪಿತೂರಿಗಳನ್ನು ಮಾಡುತ್ತಿದ್ದೀರಿ. ನಿಮಗೆ ಎಲ್ಲ ವಿಧದಲ್ಲಿಯೂ ಸುದೀಪ್ ಸಹಾಯ ಮಾಡಿದ್ದರು ಹಾಗಿದ್ದರೂ ಏಕೆ ಅವರ ಬೆನ್ನ ಹಿಂದೆ ಪಿತೂರಿ ಮಾಡುವ ಕಾರ್ಯ ಮಾಡುತ್ತಿದ್ದೀರಿ” ಎಂದು ಪ್ರಶ್ನೆ ಮಾಡಿದ್ದಾರೆ.
ವಿಡಿಯೋದಲ್ಲಿ ಎಂಎನ್ ಕುಮಾರ್, ಸೂರಪ್ಪ ಬಾಬು, ಟೆಶಿ ವೆಂಕಟೇಶ್ ಇನ್ನೂ ಕೆಲವರ ವಿರದ್ಧವಾಗಿ ಚಕ್ರವರ್ತಿ ಚಂದ್ರಚೂಡ್ ಮಾಡಿದ್ದಾರೆ. ಅಲ್ಲದೆ, ಕೆಲವು ನಿರ್ಮಾಪಕರು, ಯಾವಾಗಲೋ ಅಡ್ವಾನ್ಸ್ ಕೊಟ್ಟು ಸಿನಿಮಾ ಪ್ರಾರಂಭ ಮಾಡದೆ, ಇನ್ಯಾವಗಲೋ ಅಡ್ವಾನ್ಸ್ ವಾಪಸ್ ಕೇಳುತ್ತಾರೆ ಅದಕ್ಕೆ ಬಡ್ಡಿ ಸೇರಿಸಿ ಕೊಡುವಂತೆ ಕೇಳುತ್ತಾರೆ ಎಂದು ಕೆಲವು ಉದಾಹರಣೆಗಳನ್ನು ಚಕ್ರವರ್ತಿ ಚಂದ್ರಚೂಡ್ ನೀಡಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 8:00 pm, Tue, 18 July 23