ಸಿನಿಮಾ ಮಾಡಲು ಕಥೆಗಳಿಗೆ ಬರಗಾಲ ಇಲ್ಲ. ಹಳೇ ಪುರಾಣವನ್ನೇ ಹೇಳುವ ಸವಕಲು ಕಥೆಗಿಂತ ಡಿಫರೆಂಟ್ ಆದ ಕಹಾನಿ ಹೇಳಿದರೆ ಪ್ರೇಕ್ಷಕರಿಗೆ ಆಸಕ್ತಿ ಹೆಚ್ಚುತ್ತದೆ. ಆ ವಿಚಾರದಲ್ಲಿ ಸ್ಯಾಂಡಲ್ವುಡ್ ನಿರ್ದೇಶಕ ಕಮ್ ನಿರ್ಮಾಪಕ ಶಶಿಧರ್ ಕೆ.ಎಂ. (Shashidhar KM) ಅವರು ವಿಶೇಷವಾಗಿ ಗುರುತಿಸಿಕೊಳ್ಳುತ್ತಾರೆ. ಈ ಹಿಂದೆ ಅವರು ‘ಶುಗರ್ಲೆಸ್’ (Sugarless) ಸಿನಿಮಾವನ್ನು ನಿರ್ದೇಶಿಸಿ ಗಮನ ಸೆಳೆದಿದ್ದರು. ಸಕ್ಕರೆ ಕಾಯಿಲೆ ಬಗ್ಗೆ ಮಾಡಿದ ಮೊದಲ ಸಿನಿಮಾ ಎಂಬ ಖ್ಯಾತಿ ಆ ಚಿತ್ರಕ್ಕಿತ್ತು. ಹೀಗೆ ಜನಸಾಮಾನ್ಯರ ಬದುಕಿನ ಕಥೆಯನ್ನೇ ಇಟ್ಟುಕೊಂಡು ಮತ್ತೊಂದು ಸಿನಿಮಾ ಮಾಡಲು ಶಶಿಧರ್ ಕೆ.ಎಂ. ಅವರು ಸಜ್ಜಾಗಿದ್ದಾರೆ. ಅವರ ಹೊಸ ಚಿತ್ರಕ್ಕೆ ‘ಸಿಬಿಲ್ ಸ್ಕೋರ್’ (Cibil Score) ಎಂದು ಹೆಸರು ಇಡಲಾಗಿದೆ. ಈ ಸಿನಿಮಾದ ಟೈಟಲ್ ಪೋಸ್ಟರ್ ಬಿಡುಗಡೆ ಮಾಡಲಾಗಿದೆ. ಶೀರ್ಷಿಕೆ ಮೂಲಕ ಗಮನ ಸೆಳೆದಿರುವ ಈ ಸಿನಿಮಾದ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದುಕೊಳ್ಳಲು ಸಿನಿಪ್ರಿಯರು ಕಾದಿದ್ದಾರೆ.
‘ಎಎಫ್ಜಿ’ ಸಂಸ್ಥೆ ಮೂಲಕ ನಿರ್ಮಾಣ ಆಗುತ್ತಿರುವ ‘ಸಿಬಿಲ್ ಸ್ಕೋರ್’ ಸಿನಿಮಾಗೆ ಕ್ರಿಯೇಟಿವ್ ಪ್ರೊಡ್ಯೂಸರ್ ಆಗಿ ವಿವೇಕ್ ಶ್ರೀಕಂಠಯ್ಯ ಕೆಲಸ ಮಾಡುತ್ತಿದ್ದಾರೆ. ವಿಕ್ರಂ ಶಂಕರ್ ಅವರು ಎಕ್ಸಿಕ್ಯೂಟಿವ್ ಪ್ರೊಡ್ಯೂಸರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇದು ಪ್ಯಾನ್ ಇಂಡಿಯಾ ಸಿನಿಮಾಗಳ ಜಮಾನಾ. ಹಾಗಾಗಿ ‘ಸಿಬಿಲ್ ಸ್ಕೋರ್’ ಸಿನಿಮಾ ಕೂಡ ಬಹುಭಾಷೆಯಲ್ಲಿ ಮೂಡಿಬರಲಿದೆ. ಆ ಬಗ್ಗೆ ಪೋಸ್ಟರ್ನಲ್ಲಿ ಸುಳಿವು ನೀಡಲಾಗಿದೆ.
ಇದನ್ನೂ ಓದಿ: ‘ರಾಯಲ್ ಮೆಕ್’ ಸುದ್ದಿಗೋಷ್ಠಿಯಲ್ಲಿ ಹಿರಿಯ ನಟಿ ರೇಖಾ ದಾಸ್ ಕಣ್ಣೀರು ಹಾಕಿದ್ದು ಯಾಕೆ?
ಹೆಸರೇ ಹೇಳುವಂತೆ ‘ಸಿಬಿಲ್ ಸ್ಕೋರ್’ ಸಿನಿಮಾದಲ್ಲಿ ಬ್ಯಾಂಕಿಂಗ್ಗೆ ಸಂಬಂಧಿಸಿದ ವಿಷಯ ಇರಲಿದೆ. ಈ ಬಗ್ಗೆ ನಿರ್ದೇಶಕ ಶಶಿಧರ್ ಕೆ.ಎಂ. ಅವರು ಮಾಹಿತಿ ಹಂಚಿಕೊಂಡಿದ್ದಾರೆ. ‘ಇಂದು ಜನರು ಸಿಬಿಲ್ ಸ್ಕೋರ್ ಎಂದರೆ ಕೇವಲ ಒಂದು ನಂಬರ್ ಎಂದುಕೊಂಡಿದ್ದಾರೆ. ಅದು ಜನರು ಜೀವನವನ್ನೇ ಬದಲಿಸುವಂಥದ್ದು. ಆ ಬಗ್ಗೆ ಅನೇಕರಿಗೆ ಕಾಳಜಿ ಇಲ್ಲ. ಈಗಿನ ಕಾಲದಲ್ಲಿ ಹಣಕಾಸಿನ ವ್ಯವಹಾರ ಆನ್ಲೈನ್ ಮೂಲಕ ವೇಗ ಪಡೆದುಕೊಂಡಿದೆ. ಇಂಥ ಸಮಯದಲ್ಲಿ ಹಣಕಾಸಿನ ವಿಚಾರದಲ್ಲಿ ಶಿಸ್ತು ಮತ್ತು ಎಚ್ಚರಿಕೆ ಇರಬೇಕು. ಅಂಥ ಅಂಶಗಳನ್ನು ನಾವು ಈ ಸಿನಿಮಾ ಮೂಲಕ ಹೇಳಲಿದ್ದೇವೆ’ ಎಂದಿದ್ದಾರೆ ನಿರ್ದೇಶಕರು.
ಇದನ್ನೂ ಓದಿ: CIBIL Score: ಸಿಬಿಲ್ ಸ್ಕೋರ್ ಬಗ್ಗೆ ನಿಮ್ಮಲ್ಲಿ ಈ ತಪ್ಪು ಕಲ್ಪನೆ ಇದೆಯೇ? ಚಿಂತಿಸಬೇಕಾದ ಅಗತ್ಯವಿಲ್ಲ
‘ಶುಗರ್ಲೆಸ್’ ಸಿನಿಮಾವನ್ನು ಶಶಿಧರ್ ಕೆ.ಎಂ. ಅವರು ಹಾಸ್ಯದ ಶೈಲಿಯಲ್ಲಿ ಕಟ್ಟಿಕೊಟ್ಟಿದ್ದರು. ಈಗ ತಾವು ನಿರ್ದೇಶಿಸಲಿರುವ ‘ಸಿಬಿಲ್ ಸ್ಕೋರ್’ ಸಿನಿಮಾ ಕೂಡ ಪ್ರೇಕ್ಷಕರನ್ನು ನಗಿಸಲಿದೆ ಎಂದು ಅವರು ಭರವಸೆ ನೀಡಿದ್ದಾರೆ. ಈ ಸಿನಿಮಾದಲ್ಲಿ ಯಾರು ಮುಖ್ಯಭೂಮಿಕೆ ನಿಭಾಯಿಸುತ್ತಾರೆ ಎಂಬುದು ಇನ್ನೂ ಬಹಿರಂಗ ಆಗಿಲ್ಲ. ತಾಂತ್ರಿಕ ವರ್ಗದ ಬಗ್ಗೆಯೂ ಮಾಹಿತಿ ಹೊರಬಿದ್ದಿಲ್ಲ. ಇನ್ನೊಂದು ವಾರದಲ್ಲಿ ಆ ಬಗ್ಗೆ ಸುದ್ದಿ ನೀಡುವುದಾಗಿ ಶಶಿಧರ್ ತಿಳಿಸಿದ್ದಾರೆ. ಒಟ್ಟಿನಲ್ಲಿ ಈ ಚಿತ್ರದ ಬಗ್ಗೆ ಸಿನಿಪ್ರಿಯರಲ್ಲಿ ಆಸಕ್ತಿ ಮೂಡುವಂತಾಗಿದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.