‘ರಾಯಲ್ ಮೆಕ್’ ಸುದ್ದಿಗೋಷ್ಠಿಯಲ್ಲಿ ಹಿರಿಯ ನಟಿ ರೇಖಾ ದಾಸ್ ಕಣ್ಣೀರು ಹಾಕಿದ್ದು ಯಾಕೆ?
ಇಂಜಿನಿಯರಿಂಗ್ ಮಾಡಿಕೊಂಡು ಬಂದಿರುವ ಧನುಶ್ ಅವರು ತಾವು ಲೈಫ್ನಲ್ಲಿ ನೋಡಿದ ಅಂಶಗಳನ್ನೇ ಇಟ್ಟುಕೊಂಡು ‘ರಾಯಲ್ ಮೆಕ್’ ಸಿನಿಮಾ ಮಾಡಿದ್ದಾರೆ. ರೇಖಾ ದಾಸ್ ಬಳಿ ನಟನೆ ಕಲಿತುಕೊಂಡು ಅವರು ಚಿತ್ರರಂಗಕ್ಕೆ ಕಾಲಿಟ್ಟಿದ್ದಾರೆ. ಈ ಸಿನಿಮಾಗೆ ಧನುಶ್ ಅವರೇ ಕಥೆ, ಚಿತ್ರಕಥೆ ಮತ್ತು ಸಂಭಾಷಣೆ ಬರೆದಿದ್ದಾರೆ.
ಖ್ಯಾತ ನಟಿ ರೇಖಾ ದಾಸ್ (Rekha Das) ಅವರು ಹೊಸಬರಿಗೆ ಅಭಿನಯದ ತರಬೇತಿ ನೀಡುತ್ತಾರೆ. ಅವರ ಗರಡಿಯಲ್ಲಿ ಪಳಗಿದ ಅನೇಕರು ಹೀರೋ ಆಗಿದ್ದಾರೆ. ಇನ್ನೂ ಕೆಲವರು ಪೋಷಕ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ. ರೇಖಾ ದಾಸ್ ಬಳಿ ನಟನೆಯ ಪಾಠ ಕಲಿತ ಧನುಶ್ ಅವರು ಈಗ ‘ರಾಯಲ್ ಮೆಕ್’ ಶೀರ್ಷಿಕೆಯಲ್ಲಿ ಸಿನಿಮಾ ಮಾಡಿದ್ದಾರೆ. ಎಂಎನ್ಸಿ ಕಂಪನಿಯಲ್ಲಿ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದ ಅವರು ಚಿತ್ರರಂಗದಲ್ಲಿ ಬೆಳೆಯುವ ಕನಸು ಕಟ್ಟಿಕೊಂಡು ಗಾಂಧಿನಗರಕ್ಕೆ ಬಂದಿದ್ದಾರೆ. ಈ ಸಿನಿಮಾದಲ್ಲಿ ರೇಖಾ ದಾಸ್ ಅವರ ಮಗಳು ಶ್ರಾವ್ಯಾ ರಾವ್ (Shravya Rao) ಅವರು ಹೀರೋಯಿನ್ ಆಗಿ ನಟಿಸುತ್ತಿದ್ದಾರೆ. ಇತ್ತೀಚೆಗೆ ‘ರಾಯಲ್ ಮೆಕ್’ (Royal Mech Movie) ಸಿನಿಮಾದ ಟ್ರೇಲರ್ ಲಾಂಚ್ ಆಯಿತು. ಈ ವೇಳೆ ವೇದಿಕೆ ಮೇಲೆ ಮಾತನಾಡಿದ ರೇಖಾ ದಾಸ್ ಅವರು ಸ್ವಲ್ಪ ಎಮೋಷನಲ್ ಆದರು. ‘ಧನುಶ್ ತುಂಬ ಕಷ್ಟಪಟ್ಟು ಈ ಸಿನಿಮಾ ಮಾಡಿದ್ದಾನೆ. ನನ್ನನ್ನು ಬೆಳೆಸಿದಂತೆಯೇ ನನ್ನ ಶಿಷ್ಯನಿಗೂ ಆಶೀರ್ವಾದ ಮಾಡಿ’ ಎಂದು ಹೇಳುವ ಮೂಲಕ ರೇಖಾ ದಾಸ್ ಅವರು ಕಣ್ಣೀರು ಹಾಕಿದ್ದಾರೆ.
ಇಂಜಿನಿಯರಿಂಗ್ ಮುಗಿಸಿಕೊಂಡು ಬಂದವರು ಧನುಶ್. ಹಾಗಾಗಿ ತಾವು ಇಂಜಿನಿಯರಿಂಗ್ ಲೈಫ್ನಲ್ಲಿ ನೋಡಿದ ಅಂಶಗಳನ್ನೇ ಇಟ್ಟುಕೊಂಡು ‘ರಾಯಲ್ ಮೆಕ್’ ಸಿನಿಮಾ ಮಾಡಿದ್ದಾರೆ. ರೇಖಾ ದಾಸ್ ಅವರಿಂದ ಸಿಕ್ಕ ಬೆಂಬಲವನ್ನು ಧನುಶ್ ಸ್ಮರಿಸಿಕೊಂಡಿದ್ದಾರೆ. ಈ ಸಿನಿಮಾಗೆ ಧನುಶ್ ಅವರೇ ಕಥೆ, ಚಿತ್ರಕಥೆ ಮತ್ತು ಸಂಭಾಷಣೆ ಬರೆದಿದ್ದಾರೆ. ಹೀರೋ ಆಗಿ ಕೂಡ ನಟಿಸುವ ಮೂಲಕ ಕನ್ನಡ ಚಿತ್ರರಂಗಕ್ಕೆ ಪರಿಚಿತಗೊಳ್ಳುತ್ತಿದ್ದಾರೆ. ಅವರಿಗಾಗಿ ಸ್ನೇಹಿತರೆಲ್ಲ ಸೇರಿಕೊಂಡು ‘ಶಬರಿ ಫಿಲ್ಮ್ಸ್’ ಮೂಲಕ ಬಂಡವಾಳ ಹೂಡಿದ್ದಾರೆ. ನಾಗಭೂಷಣ್ ಜೆ.ಹೆಚ್.ಎಂ. ಹಾಗೂ ಡಾ. ಜಯದೇವ ಹಾಸನ್ ಅವರು ಜಂಟಿಯಾಗಿ ಈ ಸಿನಿಮಾಗೆ ನಿರ್ದೇಶನ ಮಾಡಿದ್ದಾರೆ.
ಇದನ್ನೂ ಓದಿ: ದುನಿಯಾ ವಿಜಯ್ ನಟನೆಯ ‘ಭೀಮ’ ಸಿನಿಮಾ ರಿಲೀಸ್ ಯಾವಾಗ? ತಂಡದಿಂದ ಸಿಕ್ಕಿದೆ ಸುಳಿವು
‘ರಾಯಲ್ ಮೆಕ್’ ಸಿನಿಮಾದ ಶೀರ್ಷಿಕೆಗೆ ‘ಲೈಫ್ ಅಂದ್ಕೊಂಡಷ್ಟು ರಾಯಲ್ ಅಲ್ಲ’ ಎಂಬ ಟ್ಯಾಗ್ ಲೈನ್ ಇದೆ. ಟ್ರೇಲರ್ ಮತ್ತು ಹಾಡುಗಳನ್ನು ರಿಲೀಸ್ ಮಾಡುವ ಮೂಲಕ ಚಿತ್ರದ ಪ್ರಚಾರ ಕಾರ್ಯಕ್ಕೆ ಚಾಲನೆ ನೀಡಲಾಗಿದೆ. ಮಾಜಿ ಸಚಿವ ರೇಣುಕಾಚಾರ್ಯ ಅವರು ಈ ಕಾರ್ಯಕ್ರಮಕ್ಕೆ ಬಂದು ಚಿತ್ರತಂಡಕ್ಕೆ ಶುಭ ಕೋರಿದ್ದಾರೆ. ಧನುಶ್ ಮತ್ತು ಶ್ರಾವ್ಯಾ ರಾವ್ ಜೊತೆ ರಾಘವೇಂದ್ರ ರಾಜ್‌ಕುಮಾರ್, ಗೌತಮಿ ಜಯರಾಂ, ರಮೇಶ್‌ಭಟ್, ವಿನಯಾ ಪ್ರಸಾದ್, ನೀನಾಸಂ ಅಶ್ವಥ್, ಕುರಿಪ್ರತಾಪ್, ಪವನ್, ರೇಖಾ ದಾಸ್ ಮುಂತಾದ ಕಲಾವಿದರು ಈ ಸಿನಿಮಾದಲ್ಲಿ ನಟಿಸಿದ್ದಾರೆ. ಈ ಚಿತ್ರಕ್ಕೆ ಸೆನ್ಸಾರ್ ಪ್ರಕ್ರಿಯೆ ಕೂಡ ಮುಗಿದಿದ್ದು ‘ಯು/ಎ’ ಪ್ರಮಾಣಪತ್ರ ಸಿಕ್ಕಿದೆ. ಸೆಪ್ಟೆಂಬರ್ ವೇಳೆಗೆ ಸಿನಿಮಾ ರಿಲೀಸ್ ಆಗುವ ಸಾಧ್ಯತೆ ಇದೆ.
ಈಗಾಗಲೇ ‘ರಾಯಲ್ ಮೆಕ್’ ಚಿತ್ರಕ್ಕೆ ಶೂಟಿಂಗ್ ಮುಗಿದಿದೆ. ಉಡುಪಿ, ಬೆಂಗಳೂರು, ಕುಂದಾಪುರ, ಚಿಕ್ಕಮಗಳೂರು, ಕಾಪು ಬೀಚ್, ಕ್ಯಾತಮಕ್ಕಿ ಬೆಟ್ಟ ಸೇರಿದಂತೆ ಅನೇಕ ಲೊಕೇಷನ್ಗಳಲ್ಲಿ ಚಿತ್ರೀಕರಣ ಮಾಡಲಾಗಿದೆ. ರಿಜ್ವಾನ್ ಅಹ್ಮದ್ ಅವರು ಈ ಸಿನಿಮಾಗೆ ಸಂಗೀತ ನಿರ್ದೇಶನ ಮಾಡಿದ್ದಾರೆ. ಪ್ರಮೋದ್ ಮರವಂತೆ ಮತ್ತು ದೇವಪ್ಪ ಹಾಸನ್ ಅವರು ಹಾಡುಗಳಿಗೆ ಸಾಹಿತ್ಯ ಬರೆದಿದ್ದಾರೆ. ಚಂದ್ರಮೌಳಿ ಅವರ ಕ್ಯಾಮೆರಾ ವರ್ಕ್, ರುತ್ವಿಕ್ ಶೆಟ್ಟಿ ಹಾಗೂ ನವೀನ್ ಶೆಟ್ಟಿ ಅವರ ಸಂಕಲನದಲ್ಲಿ ಈ ಸಿನಿಮಾ ಮೂಡಿಬರುತ್ತಿದೆ. ಫಯಾಜ್ ಖಾನ್ ಮತ್ತು ಅಶೋಕ್ ಅವರು ಸಾಹಸ ನಿರ್ದೇಶನ ಮಾಡಿದ್ದಾರೆ. ಸ್ಟೀಫನ್ ಅವರ ಡ್ಯಾನ್ಸ್ ಕೊರಿಯೋಗ್ರಫಿ ಮಾಡಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.