ಮನ್ವಿತ್-ಶ್ರಾವ್ಯಾ ಹೊಸ ಸಿನಿಮಾ ‘ಸಂಜು’; ಇದಕ್ಕೆ ನಟ-ಪತ್ರಕರ್ತ ಯತಿರಾಜ್ ಸಾರಥ್ಯ
Sanju Kannada Movie: ಸಡನ್ ನಿರ್ಧಾರಗಳು ನಮ್ಮ ಜೀವನದ ಮೇಲೆ ಏನೆಲ್ಲ ಪ್ರಭಾವ ಬೀರುತ್ತವೆ ಎಂಬುದು ಈ ಚಿತ್ರದ ಕಥೆಯ ಒಂದೆಳೆ. ಮಡಿಕೇರಿ ಮತ್ತು ವಿರಾಜಪೇಟೆ ಸುತ್ತಮುತ್ತ ಶೂಟಿಂಗ್ ನಡೆಯಲಿದೆ.
ಪತ್ರಕರ್ತನಾಗಿ, ನಟನಾಗಿ ಗುರುತಿಸಿಕೊಂಡ ಯತಿರಾಜ್ (Yathiraj) ಅವರು ನಿರ್ದೇಶಕನಾಗಿಯೂ ಸಕ್ರಿಯರಾಗಿದ್ದಾರೆ. ಈಗ ಅವರು ಹೊಸ ಸಿನಿಮಾ ಶುರು ಮಾಡಿದ್ದಾರೆ. ಅವರ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಈ ಚಿತ್ರಕ್ಕೆ ‘ಸಂಜು’ (Sanju Movie) ಎಂದು ಶೀರ್ಷಿಕೆ ಇಡಲಾಗಿದೆ. ಇತ್ತೀಚೆಗೆ ಈ ಸಿನಿಮಾ ಬಗ್ಗೆ ಮಾಹಿತಿ ಹಂಚಿಕೊಳ್ಳಲು ಸುದ್ದಿಗೋಷ್ಠಿ ಕರೆಯಲಾಗಿತ್ತು. ‘ಪ್ರೀತಿಯ ಚೌಕಟ್ಟಿನೊಳಗೆ ಸಂಬಂಧಗಳ ಪಯಣ. ಆ ಪಯಣದ ದಾರಿಯಲ್ಲಿ ಬದುಕಿನ ಮೌಲ್ಯಗಳ ಅನಾವರಣ’ ಎನ್ನುತ್ತಲೇ ಸಿನಿಮಾದ ಕಥೆಯ ಎಳೆ ವಿವರಿಸಲು ಆರಂಭಿಸಿದರು ಯತಿರಾಜ್. ಮೈಸೂರಿನ ಸಂತೋಷ್ ಡಿ.ಎಂ. ಅವರು ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಮನ್ವಿತ್ ಮತ್ತು ಶ್ರಾವ್ಯಾ (Shravya) ಪ್ರಮುಖ ಪಾತ್ರಗಳಲ್ಲಿ ನಟಿಸಲಿದ್ದಾರೆ.
ನವೆಂಬರ್ 14ರಂದು ‘ಸಂಜು’ ಸಿನಿಮಾಗೆ ಶೂಟಿಂಗ್ ಆರಂಭ ಆಗಲಿದೆ. ‘ಇಲ್ಲಿ ಕಥಾನಾಯಕ ಸಾಮಾನ್ಯ ಜನರ ಪ್ರತಿನಿಧಿಯಾಗಿ ಕಾಣಿಸಿಕೊಳ್ಳುತ್ತಾನೆ. ಆತನ ಬದುಕಿನಲ್ಲೂ ಸಾಕಷ್ಟು ಏರಿಳಿತಗಳಿವೆ. ಕಥಾನಾಯಕಿ ಸರಸ್ವತಿ ಬದುಕು ಕೂಡ ಇದಕ್ಕೆ ಹೊರತಾಗಿಲ್ಲ. ಸಡನ್ ನಿರ್ಧಾರಗಳು ನಮ್ಮ ಜೀವನದ ಮೇಲೆ ಏನೆಲ್ಲ ಪ್ರಭಾವ ಬೀರುತ್ತವೆ ಎಂಬುದು ಈ ಕಥೆಯಲ್ಲಿದೆ’ ಎಂದಿದ್ದಾರೆ ಯತಿರಾಜ್. ಮಡಿಕೇರಿ ಮತ್ತು ವಿರಾಜಪೇಟೆ ಸುತ್ತಮುತ್ತಲಿನ ಹಸಿರಿನ ಪರಿಸರದಲ್ಲಿ ಸಿನಿಮಾವನ್ನು ಕಟ್ಟಿಕೊಡುವ ಪ್ಲ್ಯಾನ್ ಮಾಡಿಕೊಳ್ಳಲಾಗಿದೆ. ಅದಕ್ಕೆ ಬೇಕಾದ ಸೆಟ್ ನಿರ್ಮಾಣದ ಕಾರ್ಯಗಳು ಸಹ ಪ್ರಗತಿಯಲ್ಲಿವೆ.
ಈ ಸಿನಿಮಾದ ಹೀರೋ ಮನ್ವಿತ್ ಅವರಿಗೆ ಇದು ಎರಡನೇ ಚಿತ್ರ. ಈ ಮೊದಲು ‘ಆ್ಯಂಗರ್’ ಸಿನಿಮಾದಲ್ಲಿ ನಟಿಸಿದ್ದ ಅವರು ಈಗ ‘ಸಂಜು’ ಚಿತ್ರಕ್ಕಾಗಿ ಸಾಕಷ್ಟು ತಯಾರಿ ನಡೆಸಿಕೊಂಡು ಕ್ಯಾಮೆರಾ ಎದುರಿಸಲು ಸಜ್ಜಾಗಿದ್ದಾರೆ. ರಂಗಭೂಮಿಯ ನಂಟು ಹೊಂದಿದ್ದರೂ ಕೂಡ ಮತ್ತೊಮ್ಮೆ ರಿಹರ್ಸಲ್ ನಡೆಸಿ ಸಿದ್ಧವಾಗುತ್ತಿದ್ದಾರೆ.
ಖ್ಯಾತ ಕಲಾವಿದೆ ರೇಖಾ ದಾಸ್ ಅವರ ಪುತ್ರಿ ಶ್ರಾವ್ಯಾ ಅವರು ‘ಸಂಜು’ ಚಿತ್ರದಲ್ಲಿ ಸರಸ್ವತಿ ಎಂಬ ಪಾತ್ರ ಮಾಡುತ್ತಿದ್ದಾರೆ. ‘ಮೊದಲ ಹದಿನೈದು ದೃಶ್ಯಗಳಲ್ಲಿ ನನ್ನ ಪಾತ್ರಕ್ಕೆ ಮಾತುಗಳು ಇರುವುದಿಲ್ಲ. ಕೇವಲ ಭಾವನೆಗಳನ್ನು ಮಾತ್ರ ವ್ಯಕ್ತಪಡಿಸಬೇಕಿದೆ. ಇದೊಂಥರ ವಿಭಿನ್ನ ಪ್ರಯೋಗ’ ಎಂದು ಅವರು ಮಾಹಿತಿ ಹಂಚಿಕೊಂಡಿದ್ದಾರೆ.
ವಿಜಯ್ ಹರಿತ್ಸ ಸಂಗೀತ ನಿರ್ದೇಶನ, ವಿದ್ಯಾ ನಾಗೇಶ್ ಛಾಯಾಗ್ರಹಣ, ಥ್ರಿಲ್ಲರ್ ಮಂಜು ಸಾಹಸ ನಿರ್ದೇಶನ ಈ ಚಿತ್ರಕ್ಕೆ ಇರಲಿದೆ. ಕಥಾನಾಯಕನ ತಾಯಿಯಾಗಿ ಸಂಗೀತಾ, ಕಥಾನಾಯಕಿಯ ತಂದೆಯಾಗಿ ಬಾಲರಾಜ್ ವಾಡಿ ನಟಿಸುತ್ತಿದ್ದಾರೆ. ಕಾಮಿಡಿ ಕಿಲಾಡಿಗಳು ಸಂತು, ಕುರಿ ರಂಗ, ಬೌ ಬೌ ಜಯರಾಮ್, ಶಂಕರ್ ಭಟ್, ಕಾತ್ಯಾಯಿನಿ, ಮಿಥಾಲಿ, ಪ್ರಕಾಶ್ ಶಣೈ, ಚೇತನ್ ರಾಜ್, ಮಂಜು ಕವಿ, ನಾಗರತ್ನ, ಫ್ರೆಂಚ್ ಬಿರಿಯಾನಿ ಖ್ಯಾತಿಯ ಮಹಾಂತೇಶ್ ಸೇರಿದಂತೆ ಅನೇಕರು ಪಾತ್ರವರ್ಗದಲ್ಲಿ ಇದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.