Kantara Hindi Collection: ಹಿಂದಿಯಲ್ಲಿ 70 ಕೋಟಿ ರೂಪಾಯಿ ಗಡಿ ಮುಟ್ಟಿದ ‘ಕಾಂತಾರ’ ಕಲೆಕ್ಷನ್
Kantara | Rishab Shetty: ಉತ್ತರ ಭಾರತದ ಪ್ರೇಕ್ಷಕರಿಗೆ ‘ಕಾಂತಾರ’ ಸಿನಿಮಾ ಸಖತ್ ಇಷ್ಟ ಆಗಿದೆ. ನಟ, ನಿರ್ದೇಶಕ ರಿಷಬ್ ಶೆಟ್ಟಿ ಅವರು ಪ್ಯಾನ್ ಇಂಡಿಯಾ ಸ್ಟಾರ್ ಆಗಿದ್ದಾರೆ.
ಕನ್ನಡದ ‘ಕಾಂತಾರ’ (Kantara) ಸಿನಿಮಾ ದೇಶಾದ್ಯಂತ ಅಬ್ಬರಿಸಿದೆ. ಈ ಚಿತ್ರಕ್ಕೆ ಕೋಟ್ಯಂತರ ಮಂದಿ ಮರುಳಾಗಿದ್ದಾರೆ. ಬಿಡುಗಡೆಯಾಗಿ 41 ದಿನಗಳು ಕಳೆದಿದ್ದರೂ ಈ ಚಿತ್ರದ ಹವಾ ಕಡಿಮೆ ಆಗಿಲ್ಲ. ಬಾಕ್ಸ್ ಆಫೀಸ್ ಕಲೆಕ್ಷನ್ ವಿಚಾರದಲ್ಲಿ ಈ ಸಿನಿಮಾ ಅನೇಕ ದಾಖಲೆಗಳನ್ನು ಮಾಡಿದೆ. ಕನ್ನಡದಿಂದ ಹಿಂದಿಗೆ ಡಬ್ ಆದ ಈ ಚಿತ್ರ ಉತ್ತರ ಭಾರತದಲ್ಲಿ ಮೋಡಿ ಮಾಡಿದೆ. ಪ್ರತಿ ದಿನ ಕೋಟ್ಯಂತರ ರೂಪಾಯಿ ಗಳಿಸುವ ಮೂಲಕ ಹೊಸ ಮೈಲಿಗಲ್ಲುಗಳನ್ನು ಮುಟ್ಟುತ್ತಿದೆ. ಈವರೆಗೂ ಹಿಂದಿಯಲ್ಲಿ ‘ಕಾಂತಾರ’ ಸಿನಿಮಾದ ಕಲೆಕ್ಷನ್ (Kantara Hindi Box Office collection) 70 ಕೋಟಿ ರೂಪಾಯಿ ಆಗಿದೆ. ಇದು ಕನ್ನಡ ಚಿತ್ರರಂಗದ ಪಾಲಿಗೆ ಹೆಮ್ಮೆಯೇ ಸರಿ. ಇದಕ್ಕಾಗಿ ನಟ, ನಿರ್ದೇಶಕ ರಿಷಬ್ ಶೆಟ್ಟಿ (, Rishab Shetty) ಅವರಿಗೆ ಎಲ್ಲರಿಂದ ಮೆಚ್ಚುಗೆ ಕೇಳಿಬರುತ್ತಿದೆ.
ಸೆ.30ರಂದು ಕನ್ನಡದಲ್ಲಿ ‘ಕಾಂತಾರ’ ಬಿಡುಗಡೆ ಆಯಿತು. ಪರಭಾಷೆ ಮಂದಿ ಕೂಡ ಕನ್ನಡ ವರ್ಷನ್ನಲ್ಲೇ ಸಿನಿಮಾ ನೋಡಿ ವಾವ್ ಎಂದರು. ಈ ಚಿತ್ರವನ್ನು ಡಬ್ ಮಾಡಬೇಕು ಎಂಬ ಒತ್ತಾಯ ಕೇಳಿಬಂತು. ಬಳಿಕ ತಮಿಳು, ತೆಲುಗು, ಮಲಯಾಳಂ ಹಾಗೂ ಹಿಂದಿಗೆ ಡಬ್ ಮಾಡಿ ಬಿಡುಗಡೆ ಮಾಡಲಾಯಿತು. ಮೊದಲ ದಿನವೇ (ಅ.14) ಹಿಂದಿಯಲ್ಲಿ ಈ ಚಿತ್ರಕ್ಕೆ 1.27 ಕೋಟಿ ರೂಪಾಯಿ ಆದಾಯ ಹರಿದುಬಂತು. ಎರಡನೇ ದಿನ 2.75 ಕೋಟಿ ಹಾಗೂ 3ನೇ ದಿನ 3.50 ಕೋಟಿ ರೂಪಾಯಿ ಕಲೆಕ್ಷನ್ ಆಯಿತು.
ಹಿಂದಿಯಲ್ಲಿ 26 ದಿನಗಳಲ್ಲಿ (ನ.8) ‘ಕಾಂತಾರ’ ಚಿತ್ರದ ಒಟ್ಟು ಕಲೆಕ್ಷನ್ 67 ಕೋಟಿ ರೂಪಾಯಿ ಆಗಿದೆ. ನ.9 ಮತ್ತು ನ.10ರ ಕಲೆಕ್ಷನ್ ಕೂಡ ಸೇರಿಸಿದರೆ ಒಟ್ಟು 70 ಕೋಟಿ ರೂಪಾಯಿ ಆಗಲಿದೆ. ಆ ಮೂಲಕ ‘ಕಾಂತಾರ’ ಚಿತ್ರ ಹಿಂದಿಯಲ್ಲಿ ಭರ್ಜರಿಯಾಗಿಯೇ ಧೂಳೆಬ್ಬಿಸಿದಂತಾಗಿದೆ. ತೆಲುಗು ಪ್ರೇಕ್ಷಕರು ಕೂಡ ಈ ಸಿನಿಮಾವನ್ನು ಬಹುವಾಗಿ ಮೆಚ್ಚಿಕೊಂಡಿದ್ದಾರೆ. ಎಲ್ಲ ಭಾಷೆಯ ಕಲೆಕ್ಷನ್ ಸೇರಿ 350 ಕೋಟಿ ರೂಪಾಯಿ ಸಮೀಪಿಸುತ್ತಿದೆ.
‘ಕಾಂತಾರ’ ಚಿತ್ರಕ್ಕೆ ‘ಹೊಂಬಾಳೆ ಫಿಲ್ಮ್ಸ್’ ಸಂಸ್ಥೆ ಬಂಡವಾಳ ಹೂಡಿದೆ. ರಿಷಬ್ ಶೆಟ್ಟಿ ಜೊತೆ ಸಪ್ತಮಿ ಗೌಡ, ಅಚ್ಯುತ್ ಕುಮಾರ್, ಪ್ರಮೋದ್ ಶೆಟ್ಟಿ, ಮಾನಸಿ ಸುಧೀರ್, ಕಿಶೋರ್ ಮುಂತಾದವರು ನಟಿಸಿದ್ದಾರೆ. ಎಲ್ಲರಿಗೂ ಈ ಸಿನಿಮಾದಿಂದ ಜನಪ್ರಿಯತೆ ಹೆಚ್ಚಾಗಿದೆ. ಕರ್ನಾಟಕದಲ್ಲಿ ಒಂದು ಕೋಟಿ ಟಿಕೆಟ್ಸ್ ಸೇಲ್ ಆಗಿದೆ.
ಚಿತ್ರಮಂದಿರದಲ್ಲಿ ಅಬ್ಬರಿಸಿದ ಈ ಸಿನಿಮಾ ಇನ್ನೇನು ಕೆಲವೇ ದಿನಗಳಲ್ಲಿ ಒಟಿಟಿ ಅಂಗಳಕ್ಕೆ ಕಾಲಿಡಲಿದೆ. ಮನೆಯಲ್ಲೇ ಕುಳಿತು ‘ಕಾಂತಾರ’ ನೋಡಿ ಎಂಜಾಯ್ ಮಾಡಲು ಪ್ರೇಕ್ಷಕರು ಕಾದಿದ್ದಾರೆ. ಒಟಿಟಿ ರಿಲೀಸ್ ದಿನಾಂಕದ ಬಗ್ಗೆ ಶೀಘ್ರದಲ್ಲೇ ಮಾಹಿತಿ ಹೊರಬೀಳಲಿದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.