ಈ ವಾರ ‘ಕ್ಷೇತ್ರಪತಿ’ ಜೊತೆ ಬರ್ತಿದೆ ‘ಬ್ಯಾಂಗ್’; ಕನ್ನಡದ ಈ ಹೊಸ ಸಿನಿಮಾಗಳು ವಿಶೇಷತೆ ಏನು?
ಕೆಲವು ವಾರಗಳಿಂದೀಚೆಗೆ ಬಿಡುಗಡೆ ಆದ ಸಿನಿಮಾಗಳು ಉತ್ತಮವಾಗಿ ಪ್ರದರ್ಶನ ಕಾಣುತ್ತಿವೆ. ಅವುಗಳ ನಡುವೆಯೇ ಒಂದಷ್ಟು ಹೊಸ ಸಿನಿಮಾಗಳು ಬಿಡುಗಡೆ ಆಗಲು ಸಜ್ಜಾಗಿವೆ. ಈ ವಾರ (ಆಗಸ್ಟ್ 18) ಹಾಲಿವುಡ್ನಲ್ಲೂ ನಿರೀಕ್ಷಿತ ಚಿತ್ರಗಳು ಬರುತ್ತಿವೆ. ಕನ್ನಡದಲ್ಲಿ ‘ಬ್ಯಾಂಗ್’ ಮತ್ತು ‘ಕ್ಷೇತ್ರಪತಿ’ ಸಿನಿಮಾಗಳು ಬಿಡುಗಡೆ ಆಗುತ್ತಿವೆ.
ಸಿನಿಮಾ ಮಂದಿಗೆ ಈಗ ಸುಗ್ಗಿಯ ಕಾಲ. ಬ್ಯಾಕ್ ಟು ಬ್ಯಾಕ್ ಸಿನಿಮಾಗಳು (New Movies) ರಿಲೀಸ್ ಆಗಿ ಯಶಸ್ಸು ಕಾಣುತ್ತಿವೆ. ಬೇರೆ ಬೇರೆ ಪ್ರಕಾರದ ಸಿನಿಮಾಗಳನ್ನು ಜನರು ನೋಡಿ ಎಂಜಾಯ್ ಮಾಡುತ್ತಿದ್ದಾರೆ. ಇತ್ತೀಚಿನ ವಾರಗಳಲ್ಲಿ ರಿಲೀಸ್ ಆದ ‘ಕೌಸಲ್ಯ ಸುಪ್ರಜಾ ರಾಮಾ’, ‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’, ‘ಆಚಾರ್ ಆ್ಯಂಡ್ ಕೋ’, ‘ಜೈಲರ್’, ‘ಗದರ್ 2’, ‘ಒಎಂಜಿ 2’ ಮುಂತಾದ ಸಿನಿಮಾಗಳಿಗೆ ಪ್ರೇಕ್ಷಕರ ಮೆಚ್ಚುಗೆ ಸಿಕ್ಕಿದೆ. ಆ ಪೈಕಿ ಕೆಲವು ಸಿನಿಮಾಗಳು ಉತ್ತಮವಾಗಿ ಪ್ರದರ್ಶನ ಕಾಣುತ್ತಿರುವಾಗಲೇ ಹೊಸ ಹೊಸ ಸಿನಿಮಾಗಳು ಬಿಡುಗಡೆ ಆಗಲು ಸಜ್ಜಾಗಿವೆ. ಈ ವಾರ (ಆಗಸ್ಟ್ 18) ಒಂದಷ್ಟು ನಿರೀಕ್ಷಿತ ಚಿತ್ರಗಳು ಬರುತ್ತಿವೆ. ಕನ್ನಡದಲ್ಲಿ ‘ಬ್ಯಾಂಗ್’ (Baang) ಮತ್ತು ‘ಕ್ಷೇತ್ರಪತಿ’ ಸಿನಿಮಾ (Kshetrapathi Movie) ಬಿಡುಗಡೆ ಆಗುತ್ತಿದೆ. ಬೇರೆ ಬೇರೆ ಕಾರಣಗಳಿಂದ ಈ ಸಿನಿಮಾಗಳ ಮೇಲೆ ನಿರೀಕ್ಷೆ ಮೂಡಿದೆ.
ಹೊಸಬರ-ಹಳಬರ ಸಂಗಮ ‘ಬ್ಯಾಂಗ್’: ಹೊಸ ನಿರ್ದೇಶಕ ಗಣೇಶ್ ಪುರುಷೋತ್ತಮ್ ಅವರು ‘ಬ್ಯಾಂಗ್’ ಸಿನಿಮಾಗೆ ಆ್ಯಕ್ಷನ್-ಕಟ್ ಹೇಳಿದ್ದಾರೆ. ಪೋಸ್ಟರ್, ಟೀಸರ್ ಮತ್ತು ಟ್ರೇಲರ್ ಮೂಲಕ ಈ ಸಿನಿಮಾ ಗಮನ ಸೆಳೆದಿದೆ. ಅನುಭವಿ ಕಲಾವಿದೆ ಶಾನ್ವಿ ಶ್ರೀವಾಸ್ತವ ಅವರು ಈ ಚಿತ್ರದಲ್ಲಿ ಲೇಡಿ ಡಾನ್ ಪಾತ್ರ ಮಾಡಿದ್ದಾರೆ. ಖ್ಯಾತ ಸಂಗೀತ ನಿರ್ದೇಶಕ ರಘು ದೀಕ್ಷಿತ್ ಅವರು ಕೂಡ ಡಾನ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಸಾತ್ವಿಕಾ, ರಿತ್ವಿಕ್ ಮುರಳಿದರ್, ನಾಟ್ಯರಂಗ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಸಸ್ಪೆನ್ಸ್ ಥ್ರಿಲ್ಲರ್ ಕಥೆಯನ್ನು ಈ ಸಿನಿಮಾ ಒಳಗೊಂಡಿದೆ.
ಇದನ್ನೂ ಓದಿ: ಐದು ದಿನಕ್ಕೆ 229 ಕೋಟಿ ರೂಪಾಯಿ ಗಳಿಸಿದ ಸನ್ನಿ ಸಿನಿಮಾ; ಈ ಚಿತ್ರದಲ್ಲಿ ಅಂಥದ್ದೇನಿದೆ?
ರೈತರ ಕಥೆ ಹೇಳುವ ‘ಕ್ಷೇತ್ರಪತಿ’: ನಟ ನವೀನ್ ಶಂಕರ್ ಅವರು ‘ಗುಳ್ಟು’ ಸಿನಿಮಾ ಮೂಲಕ ಸಾಕಷ್ಟು ಖ್ಯಾತಿ ಪಡೆದುಕೊಂಡರು. ಒಂದೇ ಬಗೆಯ ಸಿನಿಮಾಗಳಿಗೆ ಅವರು ಸೀಮಿತರಾಗಿಲ್ಲ. ‘ಹೊಂದಿಸಿ ಬರೆಯಿರಿ’, ‘ಹೊಯ್ಸಳ’ ಮುಂತಾದ ಸಿನಿಮಾಗಳಲ್ಲಿ ಅವರ ಅಭಿನಯಕ್ಕೆ ಮೆಚ್ಚುಗೆ ಸಿಕ್ಕಿದೆ. ಈಗ ಅವರು ಪಕ್ಕಾ ಹಳ್ಳಿ ಹೈದನಾಗಿ ರಂಜಿಸಲು ಬರುತ್ತಿದ್ದಾರೆ. ‘ಕ್ಷೇತ್ರಪತಿ’ ಸಿನಿಮಾದಲ್ಲಿ ನವೀನ್ ಶಂಕರ್ ಅವರು ರೈತ ಯುವಕನ ಪಾತ್ರ ಮಾಡಿದ್ದಾರೆ. ಅನ್ಯಾಯದ ವಿರುದ್ಧ ಸಿಡಿದೇಳುವ ಹುಡುಗನಾಗಿ ಅವರು ಕಾಣಿಸಿಕೊಂಡಿದ್ದಾರೆ. ಈ ಸಿನಿಮಾಗೆ ಶ್ರೀಕಾಂತ್ ಕಟಗಿ ನಿರ್ದೇಶನ ಮಾಡಿದ್ದಾರೆ. ಅರ್ಚನಾ ಜೋಯಿಸ್, ಕೃಷ್ಣ ಹೆಬ್ಬಾಳೆ, ಅಚ್ಯುತ್ ಕುಮಾರ್ ಮುಂತಾದ ಪ್ರತಿಭಾವಂತ ಕಲಾವಿದರು ಈ ಸಿನಿಮಾದಲ್ಲಿ ಅಭಿನಯಿಸಿದ್ದಾರೆ. ಈ ಚಿತ್ರದ ಟ್ರೇಲರ್ ಗಮನ ಸೆಳೆಯುವಂತಿದ್ದು, ಪ್ರೇಕ್ಷಕರಲ್ಲಿ ನಿರೀಕ್ಷೆ ಮೂಡಿಸಿದೆ.
ಇದನ್ನೂ ಓದಿ: ಈ ಹಬ್ಬಕ್ಕೆ ಉಡುಗೊರೆಯಾಗಿ ಒಟಿಟಿಯಲ್ಲಿ ಬರಲಿದೆ ‘ಜೈಲರ್’ ಸಿನಿಮಾ?
‘ಬ್ಲ್ಯೂ ಬೀಟಲ್’ ಮತ್ತು ‘ದಿ ಕ್ವೀನ್ ಮೇರಿ’: ಭಾರತದಲ್ಲಿ ಹಾಲಿವುಡ್ ಸಿನಿಮಾಗಳಿಗೆ ಯಾವಾಗಲೂ ಒಳ್ಳೆಯ ಮಾರುಕಟ್ಟೆ ಇರುತ್ತದೆ. ಕೆಲವೇ ವಾರಗಳ ಹಿಂದೆ ಬಿಡುಗಡೆಯಾದ ‘ಮಿಷನ್ ಇಂಪಾಸಿಬಲ್ 7’, ‘ಆಪನ್ಹೈಮರ್’ ಮತ್ತು ‘ಬಾರ್ಬಿ’ ಚಿತ್ರಗಳು ಉತ್ತಮವಾಗಿ ಕಲೆಕ್ಷನ್ ಮಾಡಿವೆ. ಈಗ ಸೂಪರ್ ಹೀರೋ ಕಾನ್ಸೆಪ್ಟ್ನ ‘ಬ್ಲ್ಯೂ ಬೀಟಲ್’ ಸಿನಿಮಾ ರಿಲೀಸ್ ಆಗುತ್ತಿದೆ. ಹಾರರ್ ಕಥಾಹಂದರ ಹೊಂದಿರುವ ‘ದಿ ಕ್ವೀನ್ ಮೇರಿ’ ಕೂಡ ತೆರೆಗೆ ಬರುತ್ತಿದೆ. ಈ ಎರಡೂ ಸಿನಿಮಾಗಳು ಆಗಸ್ಟ್ 18ರಂದು ತೆರೆಕಾಣುತ್ತಿವೆ. ಈ ಚಿತ್ರಗಳು ಎಷ್ಟು ಕಲೆಕ್ಷನ್ ಮಾಡಲಿವೆ ಎಂಬುದನ್ನು ತಿಳಿಯುವ ಕೌತುಕ ಮೂಡಿದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.