ಈಗ ಎಲ್ಲೆಲ್ಲೂ ‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ (Hostel Hudugaru Bekagiddare) ಸಿನಿಮಾದ್ದೇ ಸುದ್ದಿ. ಜುಲೈ 21ರಂದು ಬಿಡುಗಡೆ ಆಗಿರುವ ಈ ಸಿನಿಮಾ ಜನಮೆಚ್ಚುಗೆ ಗಳಿಸಿದೆ. ಹಲವು ದಿನಗಳಿಂದ ಹೌಸ್ಫುಲ್ ಬೋರ್ಡ್ ಕಾಣದೇ ಸೈಲೆಂಟ್ ಆಗಿದ್ದ ಚಂದನವನಕ್ಕೆ (Sandalwood) ಈ ಸಿನಿಮಾದಿಂದ ಹೊಸ ಚೈತನ್ಯ ಬಂದಿದೆ. ಹಾಸ್ಟೆಲ್ ಹುಡುಗರ ಕಥೆಯನ್ನೇ ಇಟ್ಟುಕೊಂಡು ಮೂಡಿಬಂದಿರುವ ಈ ಸಿನಿಮಾಗೆ ಪ್ರೇಕ್ಷಕರು ಫಿದಾ ಆಗಿದ್ದಾರೆ. ಕೇವಲ ಕರ್ನಾಟಕದಲ್ಲಿ ಮಾತ್ರವಲ್ಲದೇ ಬೇರೆ ರಾಜ್ಯಗಳಲ್ಲೂ ಈ ಸಿನಿಮಾ ಪ್ರದರ್ಶನ ಕಾಣುತ್ತಿದೆ. ಈಗ ವಿದೇಶದಲ್ಲೂ ಸದ್ದು ಮಾಡಲು ‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಸಿನಿಮಾ ಸಜ್ಜಾಗಿದೆ. ಈ ಬಗ್ಗೆ ಇಲ್ಲಿದೆ ಮಾಹಿತಿ…
ರಾಜ್ಯಾದ್ಯಂತ ಪ್ರೇಕ್ಷಕರಿಂದ ಸಿಕ್ಕ ಪ್ರಶಂಸೆಯಿಂದಾಗಿ ‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಚಿತ್ರತಂಡಕ್ಕೆ ಖುಷಿ ಆಗಿದೆ. ತುಂಗಾ ಬಾಯ್ಸ್ ಹಾಸ್ಟೆಲ್ ಹುಡುಗರ ತರಲೆ, ತಮಾಷೆ, ಕೀಟಲೆಗೆ ಜನರು ಬಿದ್ದು ಬಿದ್ದು ನಕ್ಕಿದ್ದಾರೆ. ಜನಸಾಮಾನ್ಯರು ಮಾತ್ರವಲ್ಲದೇ ಸೆಲೆಬ್ರಿಟಿಗಳು ಕೂಡ ಫಿದಾ ಆಗಿದ್ದಾರೆ. ಶಿವರಾಜ್ಕುಮಾರ್ ಅವರು ಈ ಚಿತ್ರಕ್ಕೆ ಫುಲ್ ಮಾರ್ಕ್ಸ್ ನೀಡಿದ್ದಾರೆ. ಇಷ್ಟೆಲ್ಲ ಮೆಚ್ಚುಗೆಗೆ ಪಾತ್ರವಾಗಿರುವ ಈ ಸಿನಿಮಾವನ್ನು ವಿದೇಶದ ಪ್ರೇಕ್ಷಕರಿಗೂ ತೋರಿಸಲು ಸಿದ್ಧತೆ ನಡೆದಿದೆ.
‘ಹಾಸ್ಟೆಲ್ ಹುಡುಗರ ಬೇಕಾಗಿದ್ದಾರೆ’ ಚಿತ್ರವು ಆಸ್ಟ್ರೇಲಿಯಾ, ಕೆನಡಾ, ಸೌತ್ ಆಫ್ರಿಕಾ, ಯುಕೆ ಮತ್ತು ಇತರೆ ದೇಶಗಳಲ್ಲಿ ಇದೇ ವಾರಾಂತ್ಯದಿಂದ ಪ್ರದರ್ಶನ ಆರಂಭಿಸಲಿದೆ. ಈ ಮೂಲಕ ವಿಶ್ವಾದ್ಯಂತ ಇರುವ ಕನ್ನಡ ಸಿನಿಪ್ರಿಯರನ್ನು ಹಾಸ್ಟೆಲ್ ಹುಡುಗರು ತಲುಪಲಿದ್ದಾರೆ. ಅಲ್ಲಿನ ಪ್ರೇಕ್ಷಕರಿಂದಲೂ ಮೆಚ್ಚುಗೆ ಸಿಗುತ್ತದೆ ಎಂಬ ಭರವಸೆ ಇದೆ. ನಿತಿನ್ ಕೃಷ್ಣಮೂರ್ತಿ ಅವರು ಈ ಸಿನಿಮಾಗೆ ನಿರ್ದೇಶನ ಮಾಡಿದ್ದಾರೆ. ಬಿಡುಗಡೆಗೆ ಮುನ್ನ ರಮ್ಯಾ ಅವರು ಈ ಚಿತ್ರದ ವಿರುದ್ಧ ಕೇಸ್ ಹಾಕಿದ್ದರು. ಆ ಕಿರಿಕ್ ನಡುವೆ ಚಿತ್ರತಂಡಕ್ಕೆ ಪ್ರೇಕ್ಷಕರ ಆಶೀರ್ವಾದ ಸಿಕ್ಕಿದೆ.
ಕರ್ನಾಟಕ ಮಾತ್ರವಲ್ಲದೇ ಇತರೆ ರಾಜ್ಯಗಳ ಪ್ರಮುಖ ನಗರಗಳಲ್ಲಿ ‘ಹಾಸ್ಟೆಲ್ ಹುಡುಗರ ಬೇಕಾಗಿದ್ದಾರೆ’ ಸಿನಿಮಾ ಈಗಾಗಲೇ ಉತ್ತಮವಾಗಿ ಪ್ರದರ್ಶನ ಕಾಣುತ್ತಿದೆ. ಹೈದರಾಬಾದ್, ಕೊಚ್ಚಿ, ಚೆನ್ನೈ ಸೇರಿದಂತೆ ಹಲವು ನಗರಗಳಲ್ಲಿ ಮೆಚ್ಚುಗೆ ಪಡೆದುಕೊಂಡಿದೆ. ವರುಣ್ ಗೌಡ, ಪ್ರಜ್ವಲ್ ಬಿ.ಪಿ, ನಿತಿನ್ ಕೃಷ್ಣಮೂರ್ತಿ, ಅರವಿಂದ್ ಎಸ್. ಕಶ್ಯಪ್ ಅವರು ಈ ಸಿನಿಮಾಗೆ ಬಂಡವಾಳ ಹೂಡಿದ್ದಾರೆ. ನಟ ರಕ್ಷಿತ್ ಶೆಟ್ಟಿ ಅವರು ‘ಪರಂವಾ ಪಿಕ್ಚರ್ಸ್’ ಮೂಲಕ ಪ್ರಸ್ತುತ ಪಡಿಸಿದ್ದಾರೆ. ರಂಗಭೂಮಿ ಹಿನ್ನೆಲೆಯ ಕಲಾವಿದರ ತಂಡದ ಜೊತೆ ರಿಷಬ್ ಶೆಟ್ಟಿ, ಪವನ್ ಕುಮಾರ್, ರಮ್ಯಾ, ಶೈನ್ ಶೆಟ್ಟಿ, ದಿಗಂತ್ ಮಂಚಾಲೆ ಕೂಡ ನಟಿಸಿದ್ದಾರೆ. ಅಜನೀಶ್ ಲೋಕನಾಥ್ ಸಂಗೀತ ನೀಡಿದ ಹಾಡುಗಳು ಸೂಪರ್ ಹಿಟ್ ಆಗಿವೆ. ಅರವಿಂದ್ ಕಶ್ಯಪ್ ಅವರ ಛಾಯಾಗ್ರಹಣಕ್ಕೆ ಮೆಚ್ಚಿಗೆ ಸಿಕ್ಕಿದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.