
ರೇಣುಕಾಸ್ವಾಮಿ ಕೊಲೆ ಕೇಸ್ ಆರೋಪಿ ದರ್ಶನ್ (Darshan) ಅವರು ಜಾಮೀನು ಪಡೆದು ಹೊರಗಿದ್ದಾರೆ. ದರ್ಶನ್ ಸೇರಿದಂತೆ ಎಲ್ಲಾ 17 ಆರೋಪಿಗಳಿಗೆ ಕೋರ್ಟ್ ಜಾಮೀನು ನೀಡಿದೆ. ಈ ಆದೇಶವನ್ನು ಕರ್ನಾಟಕ ಸರ್ಕಾರ ಸುಪ್ರೀಂಕೋರ್ಟ್ನಲ್ಲಿ ಪ್ರಶ್ನೆ ಮಾಡಿದೆ. ‘ಜಾಮೀನು ನೀಡುವಲ್ಲಿ ಹೈಕೋರ್ಟ್ ನ್ಯಾಯಾಧೀಶರು ಈ ರೀತಿಯಾದ ಮಿಸ್ಟೇಕ್ ಮಾಡಬಹುದಾ’ ಎಂದು ಸುಪ್ರೀಂಕೋರ್ಟ್ ನೇರವಾಗಿ ಪ್ರಶ್ನೆ ಮಾಡಿದೆ.
ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ ದರ್ಶನ್, ಪವಿತ್ರಾ ಮೊದಲಾದವರಿಗೆ ಜಾಮೀನು ನೀಡಿದ್ದನ್ನು ರಾಜ್ಯ ಸರ್ಕಾರ ಪ್ರಶ್ನೆ ಮಾಡಿತ್ತು. ನ್ಯಾಯಮೂರ್ತಿ ಜೆ.ಬಿ. ಪರ್ದಿವಾಲಾ , ನ್ಯಾಯಮೂರ್ತಿ ಆರ್. ಮಹದೇವನ್ ಅವರಿದ್ದ ಪೀಠದಲ್ಲಿ ಈ ಅರ್ಜಿಯ ವಿಚಾರಣೆ ನಡೆದಿದೆ. ಈ ವೇಳೆ ನ್ಯಾಯಪೀಠ, ಹೈಕೋರ್ಟ್ ಆದೇಶದ ಬಗ್ಗೆ ಅಸಮಾಧಾನ ಹೊರಹಾಕಿದೆ.
‘ಕರ್ನಾಟಕ ಹೈಕೋರ್ಟ್ ಜಾಮೀನು ನೀಡಲು ಹೀಗೂ ಆದೇಶ ಕೊಡಬಹುದೇ? ಎಲ್ಲಾ ಜಾಮೀನು ಪ್ರಕರಣದಲ್ಲಿ ಹೈಕೋರ್ಟ್ ಒಂದೇ ರೀತಿಯ ಆದೇಶ ನೀಡಿದೆ. ಹೈಕೋರ್ಟ್ ತನ್ನ ವಿವೇಚನೆಯನ್ನು ಸರಿಯಾಗಿ ಬಳಸಿದೆಯೇ ಎಂಬುದು ಮುಖ್ಯ. ಘಟನೆ ನಡೆದಿರುವುದು ಸುಳ್ಳೇ? ಟೆಸ್ಟ್ ರಿಪೋರ್ಟ್ ಅನ್ನು ಪರಿಗಣಿಸಬಾರದೇ ಹೇಳಿ’ ಎಂದು ಕೋರ್ಟ್ ದರ್ಶನ್ ಪರ ವಕೀಲರಿಗೆ ಕೇಳಿದೆ.
ಇದನ್ನೂ ಓದಿ: ದರ್ಶನ್ ಕೇಸ್ನಲ್ಲಿ ಆದೇಶ ಕಾಯ್ದಿರಿಸಿದ ಸುಪ್ರೀಂಕೋರ್ಟ್
‘ಹೈಕೋರ್ಟ್ ಆರೋಪಿಗಳನ್ನು ದೋಷಮುಕ್ತಗೊಳಿಸುವಂತೆ ಆದೇಶ ನೀಡಿದೆಯಲ್ಲವೇ? ಹೈಕೋರ್ಟ್ ಆದೇಶ ನೀಡಿರುವ ರೀತಿ ನಮಗೆ ನೋವುಂಟುಮಾಡಿದೆ. ಟ್ರಯಲ್ ಕೋರ್ಟ್ ಜಡ್ಜ್ ತಪ್ಪು ಮಾಡುತ್ತಾರೆಂದರೆ ನಂಬಬಹುದು. ಆದರೆ, ಹೈಕೋರ್ಟ್ ಜಡ್ಜ್ ನೀಡಿರುವ ಕಾರಣಗಳನ್ನು ಒಪ್ಪುವುದು ಹೇಗೆ’ ಎಂದು ಕೋರ್ಟ್ ಪ್ರಶ್ನೆ ಮಾಡಿದೆ.
ಸದ್ಯ ಸುಪ್ರೀಂಕೋರ್ಟ್ ಸರ್ಕಾರಿ ವಕೀಲರು, ದರ್ಶನ್ ಪರ ವಕೀಲರು ಹಾಗೂ ಪವಿತ್ರಾ ಗೌಡ ಪರ ವಕೀಲರ ವಾದವನ್ನು ಆಲಿಸಿದೆ. ಆ ಬಳಿಕ ಕೋರ್ಟ್ ತನ್ನ ಆದೇಶವನ್ನು ಕಾಯ್ದಿರಿಸಿದೆ. 10 ದಿನಗಳ ಬಳಿಕ ತೀರ್ಪನ್ನು ನೀಡುವುದಾಗಿ ಸುಪ್ರೀಂಕೋರ್ಟ್ ಹೇಳಿದೆ. ಸದ್ಯ ಕೋರ್ಟ್ ಅಭಿಪ್ರಾಯ ಸಾಕಷ್ಟು ಚರ್ಚೆಗಳನ್ನು ಹುಟ್ಟುಹಾಕಿದೆ.
(ವರದಿ: ರಮೇಶ್ ಎಂ)
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.