
ಪ್ರಜ್ವಲ್ ದೇವರಾಜ್ (Prajwal Devaraj) ನಟಿಸಿರುವ ‘ಕರಾವಳಿ’ ಸಿನಿಮಾ, ಅದ್ಭುತ ಪೋಸ್ಟರ್ಗಳು, ಪಾತ್ರವರ್ಗ ಮತ್ತು ಟೀಸರ್ನಿಂದ ಈಗಾಗಲೇ ಸಖತ್ ಕುತೂಹಲ ಮೂಡಿಸಿದೆ. ದೀರ್ಘ ಸಮಯದಿಂದ ಚಿತ್ರೀಕರಣ ಆಗುತ್ತಲೇ ಇರುವ ಈ ಸಿನಿಮಾನಲ್ಲಿ ಪ್ರಜ್ವಲ್ ದೇವರಾಜ್, ರಾಜ್ ಬಿ ಶೆಟ್ಟಿ ಇನ್ನೂ ಕೆಲವು ಪ್ರತಿಭಾವಂತ ಕಲಾವಿದರು ನಟಿಸುತ್ತಿದ್ದಾರೆ. ಇದೀಗ ಈ ಪ್ರತಿಭಾವಂತರ ತಂಡಕ್ಕೆ ಮತ್ತೊಬ್ಬ ನಟಿ ಸೇರಿಕೊಂಡಿದ್ದಾರೆ. ಅವರೇ ಸುಷ್ಮಿತಾ ಭಟ್.
ಇತ್ತಿಚಿಗಷ್ಟೇ ‘ಕರಾವಳಿ’ ಸಿನಿಮಾ ತಂಡಕ್ಕೆ ರಾಜ್ ಬಿ ಶೆಟ್ಟಿ ಸೇರಿಕೊಂಡಿದ್ದರು. ಈಗ ರಾಜ್ ಬಿ ಶೆಟ್ಟಿಯವರ ಜೋಡಿಯಾಗಿ ಕನ್ನಡದ ಭರವಸೆಯ ನಟಿ ಸುಷ್ಮಿತಾ ಭಟ್ ನಟಿಸಲಿದ್ದಾರೆ. ಸುಷ್ಮಿತಾ ಭಟ್ ಈಗಾಗಲೇ ಎರಡು ಸಿನಿಮಾದಲ್ಲಿ ನಟಿಸಿದ್ದು ‘ಕರಾವಳಿ’ ಅವರ ಮೂರನೇ ಸಿನಿಮಾ ಆಗಲಿದೆ. ಈ ಸಿನಿಮಾ ಮೂಲಕ ರಾಜ್ ಬಿ ಶೆಟ್ಟಿ ನಟನೆ, ಸಿನಿಮಾ ಕುರಿತಾಗಿ ಹೊಸ-ಹೊಸ ವಿಷಯಗಳ ಕಲಿಯುವ ಉತ್ಸಾಹದಲ್ಲಿ ಸುಷ್ಮಿತಾ ಭಟ್ ಇದ್ದಾರೆ.
ಸೋಷಿಯಲ್ ಮಿಡಿಯಾದಲ್ಲಿ ಸಾಕಷ್ಟು ಸದ್ದು ಮಾಡುತ್ತಿದ್ದ ಸುಷ್ಮಿತಾ ಭಟ್ ಒಂದು ಪ್ರತಿಭಾವಂತ ನಟರ ತಂಡವನ್ನು ಸೇರಿದ್ದಾರೆ. ಮಂಗಳೂರು ಹುಡುಗಿಯ ಪಾತ್ರದಲ್ಲಿ ಸುಷ್ಮಿತಾ ನಟಿಸಲಿದ್ದಾರೆ. ಈ ಸಿನಿಮಾ ಒಪ್ಪಿಕೊಳ್ಳಲು ರಾಜ್ ಬಿ ಶೆಟ್ಟಿಯವರೇ ಕಾರಣ ಎಂದು ಖುಷಿಯಿಂದ ಹೇಳಿದ್ದಾರಂತೆ ನಟಿ ಸುಷ್ಮಿತಾ ಭಟ್. ‘ಕರಾವಳಿ’ ಸಿನಿಮಾನಲ್ಲಿ ಸುಷ್ಮಿತಾ ಅವರ ಪಾತ್ರದ ಹೆಸರು ‘ಭೂಮಿ’. ಸುಷ್ಮಿತಾ ಅವರ ಪಾತ್ರದ ಪೋಸ್ಟರ್ ಬಿಡುಗಡೆ ಆಗಿದ್ದು, ರಾಜ್ ಬಿ ಶೆಟ್ಟಿ ಅವರ ಮೇಲೆ ಬಿಂದಿಗೆಯಿಂದ ನೀರು ಸುರಿಯುತ್ತಿರುವ ದೃಶ್ಯವನ್ನು ಪೋಸ್ಟರ್ ಒಳಗೊಂಡಿದೆ.
ಇದನ್ನೂ ಓದಿ:ಪ್ರಜ್ವಲ್ ದೇವರಾಜ್, ರಾಗಿಣಿ ಅವರ ಭಾನುವಾರ ಹೀಗಿತ್ತು
ಈಗಾಗಲೇ ಸಿನಿಮಾದ ಚಿತ್ರೀಕರಣ ಮುಗಿಸಿರುವ ಸುಷ್ಮಿತಾ ಭಟ್, ‘ಚಿತ್ರೀಕರಣ ಮಾಡಿದ್ದು ಕಡಿಮೆ ದಿನಗಳು ಆದರೂ ಕೂಡ ಸಾಕಷ್ಟು ಕಲಿತಿದ್ದೇನೆ .. ರಾಜ್ ಬಿ ಶೆಟ್ಟಿ ಪವರ್ ಹೌಸ್ ಇದ್ದಂತೆ, ಅವರಿಗೆ ಸಖತ್ ಎನರ್ಜಿ ಇದೆ ಸೆಟ್ ನಲ್ಲಿ ಯಾವಾಗಲೂ ಆಕ್ಟಿವ್ ಆಗಿರ್ತಾರೆ ಅವರ ಜೊತೆ ಕೆಲಸ ಮಾಡಿದ್ದು ತುಂಬಾ ಖುಷಿ ಇದೆ’ ಎಂದಿದ್ದಾರೆ.
‘ಕರಾವಳಿ’ ಸಿನಿಮಾನಲ್ಲಿ ಪ್ರಜ್ವಲ್ ದೇವರಾಜ್, ಸಂಪದಾ ಹಾಗೂ ರಾಜ್ ಬಿ ಶೆಟ್ಟಿ ಸೇರಿದಂತೆ ಸಿನಿಮಾದ ಪವರ್ ಫುಲ್ ಪಾತ್ರದಲ್ಲಿ ನಟ ಮಿತ್ರ, ರಮೇಶ್ ಇಂದಿರ, ಶ್ರೀಧರ್ ಕಾಣಿಸಿಕೊಂಡಿದ್ದಾರೆ. ಕರಾವಳಿ ಗುರುದತ್ ಗಾಣಿಗ ನಿರ್ದೇಶನದ ಜೊತೆಗೆ ವಿಕೆ ಫಿಲ್ಮಂ ಅಸೋಸಿಯೇಷನ್ ನಲ್ಲಿ ಗಾಣಿಗ ಫಿಲ್ಮ್ಸ್‌ನಲ್ಲಿ ನಿರ್ಮಾಣ ಕೂಡ ಮಾಡುತ್ತಿದ್ದಾರೆ. ಕರಾವಳಿ ಮನುಷ್ಯ ಹಾಗೂ ಪ್ರಾಣಿ ಮಧ್ಯೆ ನಡೆಯುವ ಸಂಘರ್ಷದ ಕಥೆ. ಪಕ್ಕಾ ಹಳ್ಳಿ ಬ್ಯಾಕ್ ಡ್ರಾಪ್ ನಲ್ಲಿ ಸಿನಿಮಾ ಮೂಡಿ ಬರಲಿದೆ. ಈ ಚಿತ್ರಕ್ಕೆ ಸಚಿನ್ ಬಸ್ರೂರು ಸಂಗೀತ ಸಂಯೋಜನೆ ಮಾಡಿದ್ದಾರೆ. ಅಭಿಮನ್ಯೂ ಸದಾನಂದನ್ ಕ್ಯಾಮರ ಕೆಲಸ ಚಿತ್ರಕ್ಕಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ