ಕಿರುತೆರೆಯಲ್ಲಿ ಮಿಂಚಿದವರ ಮುಂದಿನ ನಿಲ್ದಾಣವೇ ಹಿರಿತೆರೆ. ಯಶ್, ರಾಧಿಕಾ ಪಂಡಿತ್, ಶಾರುಖ್ ಖಾನ್ ಸೇರಿದಂತೆ ಅನೇಕರು ಧಾರಾವಾಹಿಯಲ್ಲಿ ನಟಿಸಿದ ಬಳಿಕ ಸಿನಿಮಾ ಕ್ಷೇತ್ರಕ್ಕೆ ಬಂದು ಯಶಸ್ಸು ಕಂಡರು. ಅದೇ ಹಾದಿಯಲ್ಲಿ ಅನೇಕ ಕಿರುತೆರೆ ಕಲಾವಿದರು ದೊಡ್ಡ ಪರದೆ ಕಡೆಗೆ ಹೆಜ್ಜೆ ಹಾಕುತ್ತಿದ್ದಾರೆ. ನಟಿ ಭೂಮಿ ಶೆಟ್ಟಿ (Bhoomi Shetty) ಕೆಲವು ಧಾರಾವಾಹಿಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಕೆಲವು ಸಿನಿಮಾಗಳಲ್ಲೂ ಅವರು ಬಣ್ಣ ಹಚ್ಚಿದ್ದಾರೆ. ಅವರ ಹೊಸ ಸಿನಿಮಾಗೆ ‘ಸಂಚಿನ ಸುಳಿಯಲಿ’ (Sanchina Suliyali) ಎಂದು ಶೀರ್ಷಿಕೆ ಇಡಲಾಗಿದೆ. ಇತ್ತೀಚೆಗೆ ಈ ಸಿನಿಮಾ ಸೆಟ್ಟೇರಿದೆ. ಭೂಮಿ ಶೆಟ್ಟಿ ಜೊತೆ ‘ಪುಟ್ಟಕ್ಕನ ಮಕ್ಕಳು’ ಸೀರಿಯಲ್ ಖ್ಯಾತಿಯ ನಟ ಪವನ್ ಕುಮಾರ್ ಅಭಿನಯಿಸುತ್ತಿದ್ದಾರೆ. ನಟಿ ಸ್ವಪ್ನಾ ಶೆಟ್ಟಿಗಾರ್ (Swapna Shettigar) ಅವರು ಪ್ರಮುಖ ಪಾತ್ರದಲ್ಲಿ ಇದ್ದಾರೆ. ಅವರ ಅಭಿಮಾನಿಗಳಲ್ಲಿ ಈ ಚಿತ್ರದ ಬಗ್ಗೆ ನಿರೀಕ್ಷೆ ಮೂಡಿದೆ.
‘ಸಂಚಿನ ಸುಳಿಯಲಿ’ ಸಿನಿಮಾಗೆ ಪ್ರಮೋದ್ ಎಸ್. ಆರ್. ಅವರು ನಿರ್ದೇಶನ ಮಾಡುತ್ತಿದ್ದಾರೆ. ‘ಪ್ರೇಮಿಗಳು ನಿರ್ಜನ ಪ್ರದೇಶಕ್ಕೆ ಹೋದಾಗ ಅಪಾಯಕ್ಕೆ ಸಿಲುಕುತ್ತಾರೆ. ಆ ಬಗ್ಗೆ ನಮ್ಮ ಸಿನಿಮಾದ ಮೂಲಕ ಸಂದೇಶ ನೀಡುತ್ತೇವೆ. ಮೈಸೂರಿನಲ್ಲಿ ನಡೆದ ಒಂದು ನೈಜ ಘಟನೆಯ ಎಳೆಯನ್ನು ಇಟ್ಟುಕೊಂಡು ಈ ಕಥೆ ಹೆಣೆದಿದ್ದೇವೆ. ಮನರಂಜನೆಯ ಜೊತೆ ಸಂದೇಶ ಇರಲಿದೆ’ ಎಂದು ನಿರ್ದೇಶಕರು ಹೇಳಿದ್ದಾರೆ. ಉಡುಪಿಯಲ್ಲಿ ಶೇ.90 ಭಾಗ ಚಿತ್ರೀಕರಣ ಮಾಡುವುದಾಗಿ ಅವರು ತಿಳಿಸಿದ್ದಾರೆ.
ಕಾಲೇಜು ಹುಡುಗನ ಪಾತ್ರದಲ್ಲಿ ಪವನ್ ಕುಮಾರ್ ಕಾಣಿಸಿಕೊಳ್ಳಲಿದ್ದಾರೆ. ‘ಈ ವಯಸ್ಸಿನ ಹುಡುಗರಿಗೆ ಕೆಲವೊಂದು ಹುಚ್ಚಾಟಗಳು ಇರುತ್ತವೆ. ಅದರಿಂದ ಏನೆಲ್ಲ ತೊಂದರೆ ಆಗುತ್ತದೆ ಎಂಬ ಕಥೆ ಈ ಚಿತ್ರದಲ್ಲಿ ಇದೆ. ನನಗೆ ಎರಡು ಶೇಡ್ನ ಪಾತ್ರ ಇದೆ. ವೃತ್ತಿಜೀವನದ ಆರಂಭದಲ್ಲೇ ಇಂಥ ಅವಕಾಶ ಸಿಕ್ಕಿರುವುದು ಖುಷಿ’ ಎಂದಿದ್ದಾರೆ ಪವನ್ ಕುಮಾರ್.
‘ನಾನು ಮತ್ತು ಪವನ್ ಈ ಹಿಂದೆ ‘ಕಿನ್ನರಿ’ ಸೀರಿಯಲ್ನಲ್ಲಿ ಜೊತೆಯಾಗಿ ನಟಿಸಿದ್ದೆವು. ಈ ಚಿತ್ರದಲ್ಲಿ ಅವರು ಹೀರೋ ಆಗಿದ್ದಾರೆ ಎಂಬುದು ಸಂತಸ ತಂದಿದೆ. ಈಗಿನ ತಲೆಮಾರಿನ ಯುವಜನಾಂಗವನ್ನು ಗಮನದಲ್ಲಿ ಇಟ್ಟುಕೊಂಡು ಈ ಸಿನಿಮಾ ಮೂಡಿಬರುತ್ತಿದೆ’ ಎಂದಿದ್ದಾರೆ ಭೂಮಿ ಶೆಟ್ಟಿ. ‘ಮಾನ್ಯ ಕ್ರಿಯೇಷನ್ಸ್’ ಮೂಲಕ ನಾಗೇಗೌಡ ಅವರು ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಈ ಹಿಂದೆ ‘ಅದೃಷ್ಟವಂತರು’ ಸೀರಿಯಲ್ ನಿರ್ಮಾಣ ಮಾಡಿದ್ದ ಅವರು ಈಗ ಸಿನಿಮಾಗೆ ಬಂಡವಾಳ ಹೂಡುತ್ತಿದ್ದಾರೆ.
ಇದನ್ನೂ ಓದಿ: ಗಾಂಧಿನಗರಕ್ಕೆ ಬಂದ ಹೊಸಬರ ‘ಲೆಕ್ಕಾಚಾರ’ವೇ ಬೇರೆ; ಇದೆಲ್ಲ ‘ಪ್ರೀತಿಯಲ್ಲಿ ಸಹಜ’ ಅಂತಾರೆ
Gym Ravi: 50 ದಿನ ಪೂರೈಸಿದ ‘ಪುರುಷೋತ್ತಮ’ ಸಿನಿಮಾ; ಹೀರೋ ಆಗಿ ಗೆಲುವು ಕಂಡ ಜಿಮ್ ರವಿ