ಗಾಂಧಿನಗರಕ್ಕೆ ಬಂದ ಹೊಸಬರ ‘ಲೆಕ್ಕಾಚಾರ’ವೇ ಬೇರೆ; ಇದೆಲ್ಲ ‘ಪ್ರೀತಿಯಲ್ಲಿ ಸಹಜ’ ಅಂತಾರೆ
ಪ್ರೀತಿ ಮಾಡುವವರು ಲೆಕ್ಕಾಚಾರ ಹಾಕುವುದಿಲ್ಲವೇ? ಒಂದು ವೇಳೆ ಲೆಕ್ಕಾಚಾರ ಹಾಕಿದರೆ ಅದು ನಿಜವಾದ ಪ್ರೀತಿಯೇ? ಈ ಪ್ರಶ್ನೆಗೆ ಹುಡುಕಾಟ ‘ಲೆಕ್ಕಾಚಾರ’ ಸಿನಿಮಾದಲ್ಲಿದೆ.
ಚಿತ್ರರಂಗ ಎಂದರೆ ಅದು ಕೇವಲ ಹೈ ಬಜೆಟ್ನ ಸಿನಿಮಾಗಳಿಗೆ ಸೀಮಿತವಲ್ಲ. ಬಣ್ಣದ ಲೋಕ ಬರೀ ಸ್ಟಾರ್ ನಟ-ನಟಿಯರ ಆಳ್ವಿಕೆಗೆ ಸಿಲುಕಿಲ್ಲ. ಇಲ್ಲಿ ಹೊಸಬರಿಗೂ ಕನ್ನಡ ಚಿತ್ರರಂಗದಲ್ಲಿ (Sandalwood) ಅವಕಾಶ ಇದೆ. ಯಾರೇ ಬಂದರೂ ಗಾಂಧಿನಗರ ಕೈ ಬೀಸಿ ಕರೆಯುತ್ತದೆ. ತಮ್ಮ ತಮ್ಮ ಪ್ರತಿಭೆ, ಸಾಮರ್ಥ್ಯವನ್ನು ಸಾಬೀತು ಮಾಡಿಕೊಳ್ಳಲು ಬೇಕಾದಷ್ಟು ಅವಕಾಶವನ್ನೂ ಈ ಕ್ಷೇತ್ರ ನೀಡುತ್ತದೆ. ಚಿತ್ರರಂಗಕ್ಕೆ ಕಾಲಿಡುವ ಪ್ರತಿ ಹೊಸಬರ ತಂಡವೂ ತನ್ನದೇ ಆದಂತಹ ಲೆಕ್ಕಾಚಾರ ಹಾಕಿಕೊಂಡಿರುತ್ತದೆ. ಇಲ್ಲೊಂದು ತಂಡ ‘ಲೆಕ್ಕಾಚಾರ’ (Lekkachara) ಎಂಬುದನ್ನೇ ಶೀರ್ಷಿಕೆ ಮಾಡಿಕೊಂಡು ಸಿನಿಮಾ ನಿರ್ಮಿಸಿದೆ. ಇತ್ತೀಚೆಗೆ ಈ ಸಿನಿಮಾದ ಆಡಿಯೋ ಬಿಡುಗಡೆ ಮಾಡಲಾಗಿದೆ. ‘ಪ್ರೀತಿಯಲ್ಲಿ ಸಹಜ’ ಎಂದು ಟ್ಯಾಗ್ಲೈನ್ ಈ ಸಿನಿಮಾಗೆ ಇದೆ. ಹೊಸಬರೇ ಸೇರಿಕೊಂಡು ಈ ಪ್ರಯತ್ನ ಮಾಡಿದ್ದಾರೆ. ಇದೊಂದು ಮ್ಯೂಸಿಕಲ್ ಮತ್ತು ರೊಮ್ಯಾಂಟಿಕ್ ಸಿನಿಮಾ ಎಂದು ತಂಡ ಹೇಳಿಕೊಂಡಿದೆ.
ಹೊಸ ಕಲಾವಿದರಾದ ನಟ ಕಾರ್ತಿಕ್ ಮತ್ತು ನಟಿ ಯಶಸ್ವಿ ಅವರು ‘ಲೆಕ್ಕಚಾರ’ ಸಿನಿಮಾದಲ್ಲಿ ಜೋಡಿಯಾಗಿ ನಟಿಸಿದ್ದಾರೆ. ಗ್ಯಾರೇಜ್ನಲ್ಲಿ ಕೆಲಸ ಮಾಡುವ ನಾಲ್ಕು ಹುಡುಗರ ಕಥೆ ಈ ಸಿನಿಮಾದಲ್ಲಿದೆ. ಆ ಪೈಕಿ ಒಬ್ಬನ ಲವ್ ಸ್ಟೋರಿ ಇಲ್ಲಿನ ಹೈಲೈಟ್. ನಾಯಕಿ ಯಶಸ್ವಿ ಅವರಿಗೆ ಇದು ಮೊದಲ ಸಿನಿಮಾ. ಕಾಲೇಜಿಗೆ ಹೋಗುತ್ತ, ಗ್ಯಾರೇಜ್ ಹುಡುಗನ ಪ್ರೀತಿಯಲ್ಲಿ ಬೀಳುವ ಹುಡುಗಿ ಪಾತ್ರ ಅವರದ್ದು. ‘ಆಡಿಷನ್ ಮೂಲಕ ನನಗೆ ಈ ಪಾತ್ರ ಸಿಕ್ಕಿತು. ಸ್ಟೋರಿಯೂ ತುಂಬ ಇಷ್ಟ ಆಗಿದ್ದರಿಂದ ನಟಿಸಿದ್ದೇನೆ’ ಎಂದಿದ್ದಾರೆ ಯಶಸ್ವಿ.
ಪ್ರೀತಿಯಲ್ಲಿ ಲೆಕ್ಕಾಚಾರ ಸಹಜ. ಆದರೆ ಲೆಕ್ಕಾಚಾರ ಇಲ್ಲದ ಪ್ರೀತಿಯೇ ನಿಜವಾದ ಪ್ರೀತಿ. ಅದೇ ನಿಷ್ಕಲ್ಮಶ ಪ್ರೀತಿ ಎಂಬ ಒನ್ಲೈನ್ ಕಥೆ ಈ ಚಿತ್ರದಲ್ಲಿ ಇದೆ. ‘ಎಸ್. ಸೀಮಾ ಪಿಕ್ಚರ್ಸ್’ ಬ್ಯಾನರ್ ಮೂಲಕ ‘ಲೆಕ್ಕಾಚಾರ’ ಸಿನಿಮಾ ನಿರ್ಮಾಣ ಆಗುತ್ತಿದೆ. ಎಂ.ಜಿ. ರಾಜ್ ನಿರ್ದೇಶನ ಮಾಡಿದ್ದಾರೆ. ಆರ್. ಚಂದ್ರು ಮತ್ತು ಕುಮಾರ್ ಅವರು ನಿರ್ಮಾಣ ಮಾಡಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ನಿರ್ದೇಶಕ ಆರ್. ಚಂದ್ರು ಈಗಾಗಲೇ ಫೇಮಸ್ ಆಗಿದ್ದಾರೆ. ಆದರೆ ‘ಲೆಕ್ಕಾಚಾರ’ ಚಿತ್ರವನ್ನು ನಿರ್ಮಾಣ ಮಾಡಿರುವ ಈ ಚಂದ್ರು ಬೇರೆ. ಗೊಂದಲವೇ ಬೇಡ ಅಂತ ಇನ್ಮುಂದೆ ‘ಚಂದ್ರು ಲೆಕ್ಕಾಚಾರ’ ಎಂದು ತಮ್ಮ ಹೆಸರಿನ ಜೊತೆ ಸಿನಿಮಾದ ಹೆಸರನ್ನೂ ಸೇರಿಸಿಕೊಳ್ಳಲು ತೀರ್ಮಾನಿಸಿದ್ದಾರೆ ನಿರ್ಮಾಪಕ ಚಂದ್ರು.
ಕಾರ್ತಿಕ್ ಅವರು ಸಂಗೀತ ನಿರ್ದೇಶನ ಮಾಡಿದ್ದು, ಈ ಸಿನಿಮಾದಲ್ಲಿ ನಾಲ್ಕು ಹಾಡುಗಳಿವೆ. ಈ ಗೀತೆಗಳಿಗೆ ರಾಜೇಶ್ ಕೃಷ್ಣನ್, ಅನುರಾಧಾ ಭಟ್, ಸಮನ್ವಿತಾ ಶರ್ಮಾ, ಸಮೀರ್ ಮುಡಿಪು ಅವರು ಧ್ವನಿ ನೀಡಿದ್ದಾರೆ. ಸಿರಿ ಮ್ಯೂಸಿಕ್ ಮೂಲಕ ಹಾಡುಗಳು ಹೊರಬಂದಿವೆ.
ಇದನ್ನೂ ಓದಿ: Gym Ravi: 50 ದಿನ ಪೂರೈಸಿದ ‘ಪುರುಷೋತ್ತಮ’ ಸಿನಿಮಾ; ಹೀರೋ ಆಗಿ ಗೆಲುವು ಕಂಡ ಜಿಮ್ ರವಿ
ಸಾಯಿ ಬಾಬಾ ಭಕ್ತಿಗೀತೆಗೆ 7 ಸಂಗೀತ ನಿರ್ದೇಶಕರ ಧ್ವನಿ; ಪ್ರತಿ ಗುರುವಾರ ಒಂದೊಂದು ಗೀತೆ ರಿಲೀಸ್