‘ಟಗರು ಪಲ್ಯ’ ಹೀರೋ ನಾಗಭೂಷಣ ಈಗ ‘ವಿದ್ಯಾಪತಿ’; ಡಾಲಿ ಧನಂಜಯ ನಿರ್ಮಾಣ

|

Updated on: Aug 20, 2024 | 8:44 PM

‘ಟಗರು ಪಲ್ಯ’ ಸಿನಿಮಾದ ನಟ ನಾಗಭೂಷಣ ಹಾಗೂ ನಿರ್ಮಾಪಕ ಡಾಲಿ ಧನಂಜಯ ಅವರ ಕಾಂಬಿನೇಷನ್​ನಲ್ಲಿ ಹೊಸ ಸಿನಿಮಾ ‘ವಿದ್ಯಾಪತಿ’ ಮೂಡಿಬರುತ್ತಿದೆ. ಈ ಸಿನಿಮಾದಲ್ಲಿ ನಾಗಭೂಷಣ ಅವರಿಗೆ ಮಲೈಕಾ ವಸೂಪಾಲ್ ಜೋಡಿಯಾಗಿದ್ದಾರೆ. ಚಿತ್ರದ ಪ್ರೋಮೋ ಗಮನ ಸೆಳೆಯುತ್ತಿದೆ. ಇದು ಕೂಡ ಕಾಮಿಡಿ ಸಿನಿಮಾ ಆಗಿರಲಿದ್ದು, ಒಂದಷ್ಟು ಮಾಹಿತಿ ಇಲ್ಲಿದೆ..

‘ಟಗರು ಪಲ್ಯ’ ಹೀರೋ ನಾಗಭೂಷಣ ಈಗ ‘ವಿದ್ಯಾಪತಿ’; ಡಾಲಿ ಧನಂಜಯ ನಿರ್ಮಾಣ
ನಾಗಭೂಷಣ
Follow us on

ನಟ ನಾಗಭೂಷಣ ಅವರು ಕಾಮಿಡಿ ಪಾತ್ರಗಳ ಮೂಲಕ ಜನರನ್ನು ರಂಜಿಸುತ್ತಿದ್ದಾರೆ. ಮುಖ್ಯ ಭೂಮಿಕೆಯಲ್ಲಿ ನಟಿಸುವ ಮೂಲಕವೂ ಅವರು ಸೈ ಎನಿಸಿಕೊಂಡಿದ್ದಾರೆ. ಈಗಾಗಲೇ ಅವರು ತಮ್ಮ ಛಾಪು ಮೂಡಿಸಿದ್ದಾರೆ. ‘ಡಾಲಿ ಪಿಕ್ಚರ್ಸ್’ ನಿರ್ಮಾಣ ಮಾಡಿದ್ದ ‘ಟಗರು ಪಲ್ಯ’ ಸಿನಿಮಾದಲ್ಲಿ ನಾಗಭೂಷಣ್​ ಅವರು ಹೀರೋ ಆಗಿ ಮನರಂಜನೆ ನೀಡಿದ್ದರು. ಈಗ ಮತ್ತೆ ಅವರು ‘ಡಾಲಿ ಪಿಕ್ಚರ್ಸ್​’ ಜೊತೆ ಕೈ ಜೋಡಿಸಿದ್ದಾರೆ. ಹೌದು, ಡಾಲಿ ಧನಂಜಯ ನಿರ್ಮಾಣ ಮಾಡಲಿರುವ ಹೊಸ ಸಿನಿಮಾದಲ್ಲಿ ನಾಗಭೂಷಣ ಅವರು ಹೀರೋ ಆಗಿದ್ದಾರೆ. ಈ ಸಿನಿಮಾಗೆ ‘ವಿದ್ಯಾಪತಿ’ ಎಂದು ಶೀರ್ಷಿಕೆ ಇಡಲಾಗಿದೆ.

2023ರಲ್ಲಿ ‘ಟಗರು ಪಲ್ಯ’ ಚಿತ್ರವು ಫ್ಯಾಮಿಲಿ ಪ್ರೇಕ್ಷಕರಿಗೆ ಮನರಂಜನೆ ನೀಡಿತ್ತು. ಈಗ ‘ವಿದ್ಯಾಪತಿ’ ಸಿನಿಮಾದಲ್ಲಿ ಬೇರೊಂದು ಬಗೆಯ ಪಾತ್ರದ ಮೂಲಕ ನಾಗಭೂಷಣ ಅವರು ಜನರನ್ನು ರಂಜಿಸಲು ಸಜ್ಜಾಗಿದ್ದಾರೆ. ವಿದ್ಯಾಪತಿಯ ಮೇಕಿಂಗ್ ವಿಡಿಯೋ, ಫೋಟೋಗಳನ್ನು ನೋಡಿ ಸಿನಿಪ್ರಿಯರಿಗೆ ಕೌತುಕ ಮೂಡಿದೆ. ಈ ಸಿನಿಮಾದ ಹೊಸ ಪೋಸ್ಟರ್​ ಮತ್ತು ಪ್ರೋಮೋ ಬಿಡುಗಡೆ ಮಾಡುವ ಮೂಲಕ ನಿರೀಕ್ಷೆ ಹೆಚ್ಚಿಸಲಾಗಿದೆ. ಈ ಸಿನಿಮಾದಲ್ಲಿ ನಾಗಭೂಷಣ ಅವರಿಗೆ ಜೋಡಿಯಾಗಿ ‘ಉಪಾಧ್ಯಕ್ಷ’ ಖ್ಯಾತಿಯ ನಟಿ ಮಲೈಕಾ ವಸೂಪಾಲ್ ಅಭಿನಯಿಸಲಿದ್ದಾರೆ. ರಂಗಾಯಣ ರಘು ಅವರಿಗೂ ಒಂದು ಪ್ರಮುಖ ಪಾತ್ರವಿದೆ. ಶೂಟಿಂಗ್ ಪ್ರಗತಿಯಲ್ಲಿದೆ.

ಇತ್ತೀಚೆಗೆ ನಾಗಭೂಷಣ್ ಅವರು ಹುಟ್ಟುಹಬ್ಬ ಆಚರಿಸಿಕೊಂಡರು. ಆ ಪ್ರಯುಕ್ತ ‘ವಿದ್ಯಾಪತಿ’ ಸಿನಿಮಾದ ಪ್ರೋಮೋ ಅನಾವರಣ ಮಾಡಲಾಯಿತು. ‘ಜೇಬು ತುಂಬ ಕಾಸಿರೋನು ಕೊಟ್ಯಾಧಿಪತಿ, ನಿಮ್ಮನ್ನೆಲ್ಲ ಹೊಟ್ಟೆ ತುಂಬ ನಗಿಸುವವನೇ ನಮ್ಮ ವಿದ್ಯಾಪತಿ’ ಎಂದು ಹೀರೋ ಪಾತ್ರವನ್ನು ಪರಿಚಯಿಸಲಾಗಿದೆ. ‘ಕರಾಟೆ ಕಿಂಗ್’ ವೇಷ ಧರಿಸಿರುವ ನಾಗಭೂಷಣ ಅವರು ಮಾಡುವ ಕಿತಾಪತಿ ಏನು ಎಂಬುದರ ಝಲಕ್​ ತೋರಿಸುವ ತುಣುಕು ಇದಾಗಿದೆ.

ಇದನ್ನೂ ಓದಿ: ಕೆಂಪೇಗೌಡ ಪಾತ್ರದಲ್ಲಿ ಡಾಲಿ ಧನಂಜಯ್, ನಾಗಾಭರಣ ನಿರ್ದೇಶಕ

ಕರಾಟೆ ಕಲಿಯುವ ಸಮಯದಲ್ಲಿ ‘ವಿದ್ಯಾಪತಿ’ ಮಾಡುವ ಯಡವಟ್ಟು ಕಂಡು ಪ್ರೇಕ್ಷಕರಿಗೆ ನಗು ಮೂಡಿದೆ. ‘ಇಕ್ಕಟ್’ ಸಿನಿಮಾದ ನಿರ್ದೇಶಕರಾದ ಇಶಾಂ ಮತ್ತು ಹಸೀಂ ಖಾನ್ ಅವರು ಈಗ ‘ವಿದ್ಯಾಪತಿ’ ಸಿನಿಮಾವನ್ನು ನಿರ್ದೇಶಿಸಿದ್ದಾರೆ. ಜೊತೆಗೆ ಸಿನಿಮಾಗೆ ಅವರೇ ಸಂಕಲನ ಮಾಡುತ್ತಿದ್ದಾರೆ. ನಾಗಭೂಷಣ ಅವರು ಈ ಸಿನಿಮಾದಲ್ಲಿ ಹಲವು ಗೆಟಪ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಲವಿತ್ ಅವರು ಛಾಯಾಗ್ರಹಣ ಮಾಡುತ್ತಿದ್ದಾರೆ. ಡಾಸ್ ಮೋಡ್ ಅವರ ಸಂಗೀತ, ಮುರಳಿ ಅವರ ನೃತ್ಯ ನಿರ್ದೇಶನ, ಅರ್ಜುನ್ ಅವರ ಸಾಹಸ ನಿರ್ದೇಶನ ‘ವಿದ್ಯಾಪತಿ’ ಸಿನಿಮಾಗೆ ಇರಲಿದೆ. ಸುಜಿತ್ ವೆಂಕಟರಾಮಯ್ಯ ಅವರು ಸಾಹಿತ್ಯ ಬರೆದಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 8:12 pm, Tue, 20 August 24