ದರ್ಶನ್ ಕೇಸ್ ಬಗ್ಗೆ ಡಾಲಿ ಸೈಲೆಂಟ್ ಆಗಿದ್ದು ಯಾಕೆ? ಕೊನೆಗೂ ಉತ್ತರಿಸಿದ ನಟ
‘ನಮಗೆ ತುಂಬ ಹತ್ತಿರದಲ್ಲಿ ಇದ್ದವರು ಈ ಕೇಸ್ನಲ್ಲಿ ಇದ್ದಾರೆ ಎಂದಾಗ ತುಂಬ ಬೇಸರ ಆಗುತ್ತದೆ. ಹಾಗೆಯೇ, ಅಲ್ಲೊಂದು ಜೀವ ಹೋಗಿದೆ ಅಂದಾಗ ಕಾನೂನಿ ಪ್ರಕಾರ ಆಗಬೇಕಾದ್ದು ಖಂಡಿತವಾಗಿ ಆಗುತ್ತದೆ. ಘಟನೆಯನ್ನು ನಾವು ಯಾರೂ ನೋಡಿಲ್ಲ. ಎಲ್ಲವೂ ಕೇಳಿರುವ ಮಾಹಿತಿ ಅಷ್ಟೇ. ತಪ್ಪು ಮಾಡಿದವರಿಗೆ ಖಂಡಿತಾ ಶಿಕ್ಷೆ ಆಗಲಿ’ ಎಂದು ನಟ ಡಾಲಿ ಧನಂಜಯ ಅವರು ಹೇಳಿದ್ದಾರೆ.
ದರ್ಶನ್ ಅವರು ಕೊಲೆ ಆರೋಪದಲ್ಲಿ ಆರೆಸ್ಟ್ ಆಗಿದ್ದು ಇಡೀ ಚಿತ್ರರಂಗಕ್ಕೆ ಆಘಾತ ಉಂಟು ಮಾಡಿತು. ಈ ಘಟನೆ ಬಗ್ಗೆ ಹಲವರು ಪ್ರತಿಕ್ರಿಯಿಸಿದ್ದಾರೆ. ಆದರೆ ಆರಂಭದಲ್ಲಿ ಈ ಕುರಿತು ಮಾತನಾಡಲು ಕೆಲವರು ಹಿಂದೇಟು ಹಾಕಿದ್ದರು. ನಟ ಡಾಲಿ ಧನಂಜಯ್ ಕೂಡ ದರ್ಶನ್ ಪ್ರಕರಣದ ಬಗ್ಗೆ ಮಾತನಾಡಲು ಸಿದ್ಧರಿರಲಿಲ್ಲ. ಹಾಗಾಗಿ ಸೋಶಿಯಲ್ ಮೀಡಿಯಾದಲ್ಲಿ ಕೆಲವರು ಅವರನ್ನು ಟ್ರೋಲ್ ಮಾಡಿದ್ದರು. ಈಗ ಡಾಲಿ ಅವರು ರೇಣುಕಾ ಸ್ವಾಮಿ ಕೊಲೆ ಕೇಸ್ ಬಗ್ಗೆ ಮೌನ ಮುರಿದಿದ್ದಾರೆ. ಇಷ್ಟು ದಿನ ತಾವು ಯಾಕೆ ಮಾತನಾಡಲಿಲ್ಲ ಎಂಬುದನ್ನು ಅವರು ವಿವರಿಸಿದ್ದಾರೆ.
‘ನಮ್ಮ ಪರಿಸ್ಥಿತಿಯನ್ನೂ ಅರ್ಥ ಮಾಡಿಕೊಳ್ಳಬೇಕು. ಆಗ ನಮ್ಮ ‘ಕೋಟಿ’ ಸಿನಿಮಾದ ರಿಲೀಸ್ ಸಂದರ್ಭವಾಗಿತ್ತು. ಅದರ ಮಧ್ಯ ನಡೆದ ಘಟನೆ ಇದು. ಅದನ್ನು ಬಿಟ್ಟುಬಿಡೋಣ. ಆದರೆ, ಏನು ಮಾತನಾಡೋದು ಅಂತ? ಅಲ್ಲಿ ಒಂದು ಜೀವ ಹೋಗಿದೆ, ಒಂದು ತಪ್ಪು ಆಗಿದೆ ಎಂದಾಗ ಆ ಮನುಷ್ಯನ ತಂದೆ-ತಾಯಿ ಮುಖ ನೋಡಿದಾಗ ಆತನ ಹೆಂಡತಿ ಹಾಗೂ ಮಗುವಿನ ಭವಿಷ್ಯ ನೋಡಿದಾಗ ಯಾರಿಗಾದರೂ ಖಂಡಿತಾ ಬೇಜಾರಾಗುತ್ತದೆ’ ಎಂದು ಡಾಲಿ ಧನಂಜಯ್ ಹೇಳಿದ್ದಾರೆ.
ಇದನ್ನೂ ಓದಿ: ಜೈಲಿಂದಲೇ ಫ್ಯಾನ್ಸ್ ಬಗ್ಗೆ ವಿಚಾರಿಸಿದ ನಟ ದರ್ಶನ್; ಎಲ್ಲರಿಗೂ ಒಂದು ಮನವಿ
‘ಕಾನೂನಿಗಿಂತ ದೊಡ್ಡವರು ಯಾರೂ ಇಲ್ಲ. ಆ ಜೀವಕ್ಕೆ ಸಿಗಬೇಕಾದ ನ್ಯಾಯ ಸಿಗಲೇಬೇಕು. ಸಂತ್ರಸ್ಥರು ನಮ್ಮ ಮನೆಯವರಾಗಿದ್ದರೆ ಏನು ಅನಿಸುತ್ತದೆ ಎಂಬುದು ಮುಖ್ಯ. ಅದೇ ವೇಳೆಗೆ, ಆರೋಪ ಬಂದಿರುವುದು ಕೂಡ ನಮ್ಮ ಮನೆಯವರ ಮೇಲೆ ಆಗಿದ್ದರೆ ನಮಗೆ ಏನು ಅನಿಸುತ್ತದೆ? ಅದು ಕೂಡ ಬೇಜಾರರಾಗುತ್ತದೆ. ಮೊದಲಿಗೆ ವಿಷಯ ಗೊತ್ತಾದಾಗ ನನಗೂ ತುಂಬ ಬೇಸರ ಆಗಿತ್ತು’ ಎಂದು ಡಾಲಿ ಹೇಳಿದ್ದಾರೆ.
‘ಒಂದು ಕಡೆ ಹತ್ಯೆಯಾದ ಜೀವಕ್ಕೆ ಸ್ಪಂದಿಸಬೇಕು. ಇನ್ನೊಂದು ಕಡೆ ನಾವು ತುಂಬ ಪ್ರೀತಿಸಿದವರು. ಅವರ ಹೆಸರು ಈ ಪ್ರಕರಣದಲ್ಲಿ ಕೇಳಿಬಂದಾಗ ಅದು ಕೂಡ ನಮಗೆ ಬೇಸರವಾಗಿರುತ್ತದೆ. ಇಲ್ಲಿ ಯಾವುದನ್ನೂ ನಾವು ಸಮರ್ಥನೆ ಮಾಡೋಕೆ ಆಗಲ್ಲ. ಎಲ್ಲದಕ್ಕೂ ಕಾನೂನು ಇದೆ. ಕಾನೂನಿಗಿಂತ ದೊಡ್ಡವರು ಯಾರೂ ಇಲ್ಲ. ಅದರ ಮೂಲಕ ಏನು ಆಗಬೇಕೋ ಅದು ಆಗುತ್ತದೆ. ಅದನ್ನು ಬಿಟ್ಟು ನಾವು ಏನೇ ಮಾತಾಡಿದರೂ ಪ್ರಯೋಜನ ಇಲ್ಲ’ ಎಂದಿದ್ದಾರೆ ಡಾಲಿ ಧನಂಜಯ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.