‘ಠಾಣೆ’ ಕನ್ನಡ ಸಿನಿಮಾ ತಂಡಕ್ಕೆ ಶುಭ ಹಾರೈಸಿದ ಶ್ರೀರವಿಶಂಕರ್ ಗುರೂಜಿ
‘ಈ ಸಿನಿಮಾದ ಪೋಸ್ಟರ್ ನೋಡಿದರೆ ಒಂದು ಉತ್ತಮ ಚಿತ್ರವಾಗುವ ಎಲ್ಲ ಲಕ್ಷಣ ಕಾಣುತ್ತಿದೆ’ ಎಂದು ಶ್ರೀರವಿಶಂಕರ್ ಗುರೂಜಿ ಹೇಳಿದ್ದಾರೆ. ಈ ಸಿನಿಮಾಗೆ ಗಾಯತ್ರಿ ಎಂ. ಅವರು ಬಂಡವಾಳ ಹೂಡಿದ್ದಾರೆ. ಎಸ್. ಭಗತ್ ರಾಜ್ ನಿರ್ದೇಶನ ಮಾಡಿದ್ದಾರೆ. ಪ್ರವೀಣ್ ಅವರು ನಾಯಕನಾಗಿ ನಟಿಸಿದ್ದಾರೆ. ಅವರಿಗೆ ಹರಿಣಾಕ್ಷಿ ಜೋಡಿ ಆಗಿದ್ದಾರೆ. ಸಿನಿಮಾ ಬಗ್ಗೆ ಇಲ್ಲಿದೆ ಮಾಹಿತಿ..
ಗಾಯತ್ರಿ ಎಂ. ಅವರು ‘ಪಿ.ಸಿ.ಡಿ 2 ಫಿಲ್ಮ್ ಫ್ಯಾಕ್ಟರಿ’ ಮೂಲಕ ‘ಠಾಣೆ’ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ‘ದಿ ಸೂಟ್’ ಸಿನಿಮಾದ ಬಳಿಕ ಎಸ್. ಭಗತ್ ರಾಜ್ ಅವರು ‘ಠಾಣೆ’ ಸಿನಿಮಾಗೆ ನಿರ್ದೇಶನ ಮಾಡಿದ್ದಾರೆ. ಚಿತ್ರೀಕರಣ ಮತ್ತು ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಮುಕ್ತಾಯ ಆಗಿದೆ. ಶೀಘ್ರದಲ್ಲೇ ಈ ಸಿನಿಮಾದ ಫಸ್ಟ್ ಕಾಪಿ ಸಿದ್ಧವಾಗಲಿದೆ. ಇನ್ನು ಕೆಲವೇ ದಿನಗಳಲ್ಲಿ ಸಿನಿಮಾವನ್ನು ಸೆನ್ಸಾರ್ ಮಂಡಳಿ ಸದಸ್ಯರು ವೀಕ್ಷಿಸಲಿದ್ದಾರೆ. ಇದೇ ತಿಂಗಳು ಸಿನಿಮಾದ ಸಾಂಗ್ಸ್ ಬಿಡುಗಡೆ ಆಗಲಿದ್ದು, 2025ರ ಆರಂಭದಲ್ಲಿ ಸಿನಿಮಾವನ್ನು ಬಿಡುಗಡೆ ಮಾಡಲು ಚಿತ್ರತಂಡ ತೀರ್ಮಾನಿಸಿದೆ.
‘ಠಾಣೆ’ ಚಿತ್ರದ ಶೀರ್ಷಿಕೆಗೆ ‘C/O ಶ್ರೀರಾಮಪುರ’ ಎಂಬ ಟ್ಯಾಗ್ ಲೈನ್ ಇದೆ. ಇತ್ತೀಚಿಗೆ ‘ಆರ್ಟ್ ಆಫ್ ಲಿವಿಂಗ್’ನ ಶ್ರೀರವಿಶಂಕರ್ ಗುರೂಜಿ ಅವರ ಆಶ್ರಮಕ್ಕೆ ‘ಠಾಣೆ’ ಸಿನಿಮಾದ ತಂಡದವರು ಭೇಟಿ ನೀಡಿದ್ದರು. ಗುರೂಜಿಯ ಆಶೀರ್ವಾದವನ್ನು ತಂಡದವರು ಪಡೆದರು. ನಂತರ ಈ ಸಿನಿಮಾದ ಕೆಲವು ಪೋಸ್ಟರ್ಗಳನ್ನು ಗುರೂಜಿ ವೀಕ್ಷಿಸಿ, ಚಿತ್ರತಂಡಕ್ಕೆ ಆಶೀರ್ವಾದ ಮಾಡಿದರು.
ಈ ವೇಳೆ ಮಾತನಾಡಿದ ರವಿಶಂಕರ್ ಗುರೂಜಿ, ‘ಕನ್ನಡ ಚಿತ್ರರಂಗಕ್ಕೆ ಅದರದ್ದೇ ಆದ ಇತಿಹಾಸ ಇದೆ. ಡಾ. ರಾಜ್ಕುಮಾರ್ ಅವರಂತಹ ಕಲಾವಿದರು ಅನೇಕ ಸಮಾಜಮುಖಿ ಸಿನಿಮಾಗಳಲ್ಲಿ ಅಭಿನಯಿಸಿ ಮಾದರಿ ಆಗಿದ್ದಾರೆ. ಪ್ರವೀಣ್ ಈ ಸಿನಿಮಾ ಮೂಲಕ ಹೀರೋ ಆಗಿ ಚಿತ್ರರಂಗಕ್ಕೆ ಪ್ರವೇಶ ಮಾಡುತ್ತಿದ್ದಾರೆ. ಈ ಸಿನಿಮಾದ ಪೋಸ್ಟರ್ ನೋಡಿದಾಗ ಉತ್ತಮ ಚಿತ್ರವಾಗುವ ಎಲ್ಲ ಲಕ್ಷಣ ಕಾಣುತ್ತಿದೆ. ಸಿನಿಮಾ ಯಶಸ್ವಿ ಆಗಲಿ ಮತ್ತು ಚಿತ್ರತಂಡಕ್ಕೆ ಶುಭವಾಗಲಿ’ ಎಂದರು.
ಪ್ರವೀಣ್ ಅವರಿಗೆ ರಂಗಭೂಮಿ ಅನುಭವ ಇದೆ. ಕೆಲವು ಸಾಹಸ ನಿರ್ದೇಶಕರ ಬಳಿ ಕೆಲಸ ಮಾಡಿದ್ದಾರೆ ಕೂಡ. ‘ಠಾಣೆ’ ಸಿನಿಮಾಗೆ ಅವರು ಹೀರೋ ಆಗಿದ್ದಾರೆ. ಮೈಸೂರಿನ ಹರಿಣಾಕ್ಷಿ ಅವರು ಈ ಸಿನಿಮಾಗೆ ನಾಯಕಿ ಆಗಿದ್ದಾರೆ. ಬಿ.ವಿ. ರಾಜರಾಂ, ರೋಹಿತ್ ನಾಗೇಶ್, ಬಾಲ ರಾಜ್ವಾಡಿ, ಕುಲದೀಪ್, ಸಂತೋಷ್ ಕರ್ಕಿ, ನಾಗರಾಜ್, ಭೀಷ್ಮ ರಾಮಯ್ಯ, ಮಂಜುಳಾ, ಪಿ.ಡಿ. ಸತೀಶ್ ಮುಂತಾದರು ಈ ಸಿನಿಮಾದ ಪಾತ್ರವರ್ಗದಲ್ಲಿ ಇದ್ದಾರೆ.
ಇದನ್ನೂ ಓದಿ: ಪುಟ್ಟಣ್ಣ ಕಣಗಾಲ್ ಮಾತೃಭಾಷೆ ತೆಲುಗು; ಆದ್ರೆ ಕನ್ನಡದ ಮೇಲೆ ಅಭಿಮಾನ: ಪುತ್ರಿ ರಾಜೇಶ್ವರಿ
1962ರ ಕಾಲಘಟ್ಟದಲ್ಲಿ ನಡೆಯುವ ಕಥೆಯನ್ನು ‘ಠಾಣೆ’ ಸಿನಿಮಾ ಒಳಗೊಂಡಿದೆ. ನಗರಗಳು ಬೆಳೆದರೂ ಸ್ಲಮ್ ಅಭಿವೃದ್ಧಿ ಆಗಲ್ಲ. ಅದಕ್ಕೆ ಕೆಲವರು ಬಿಡಲ್ಲ. ಸ್ಲಂನಲ್ಲೇ ಹುಟ್ಟಿಬೆಳೆದ ಯುವಕ ಅಲ್ಲಿನ ಜನರಿಗೆ ನ್ಯಾಯ ಕೊಡಿಸಲು ಹೋರಾಡುವ ಕಥೆಯನ್ನು ಈ ಸಿನಿಮಾದಲ್ಲಿ ಹೇಳಲಾಗುತ್ತಿದೆ. ಬೆಂಗಳೂರಿನ ಹಳೆಯ ಬಡಾವಣೆಗಳಲ್ಲಿ ಶೂಟಿಂಗ್ ಮಾಡಲಾಗಿದೆ ಎಂದು ನಿರ್ದೇಶಕರು ಮಾಹಿತಿ ನೀಡಿದ್ದಾರೆ. ಈ ಸಿನಿಮಾಗೆ ಮಾನಸಾ ಹೊಳ್ಳ ಸಂಗೀತ ನೀಡಿದ್ದಾರೆ. ಪ್ರಶಾಂತ್ ಸಾಗರ್ ಛಾಯಾಗ್ರಹಣ ಮಾಡಿದ್ದಾರೆ. ಸುರೇಶ್ ಅರಸ್ ಅವರ ಸಂಕಲನ, ಪ್ರವೀಣ್ ಜಾನ್ ಅವರ ಕಲಾ ನಿರ್ದೇಶನ ಈ ಚಿತ್ರಕ್ಕಿದೆ. ಕೌರವ ವೆಂಕಟೇಶ್ ಮತ್ತು ಟೈಗರ್ ಶಿವ ಅವರು ಸಾಹಸ ನಿರ್ದೇಶನ ಮಾಡಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.