ಕೋಟ್ಯಂತರ ಹಣ ವಂಚನೆ, ನಿರ್ಮಾಪಕನ ವಿರುದ್ಧ ದೂರು ದಾಖಲು
producer: ರಾಷ್ಟ್ರಪ್ರಶಸ್ತಿ ವಿಜೇತ ತುಳು ಸಿನಿಮಾ ನಿರ್ಮಾಪಕ ಅರುಣ್ ರೈ ವಿರುದ್ಧ 9 ಕೋಟಿ ರೂಪಾಯಿ ಹಣ ವಂಚನೆ ಪ್ರಕರಣ ದಾಖಲಾಗಿದೆ. ಅರುಣ್ ರೈ ಕನ್ನಡ ಸಿನಿಮಾವನ್ನೂ ನಿರ್ಮಾಣ ಮಾಡಿದ್ದಾರೆ.
ರಾಷ್ಟ್ರಪ್ರಶಸ್ತಿ ವಿಜೇತ ಸಿನಿಮಾ ನಿರ್ಮಾಣ ಮಾಡಿರುವ ನಿರ್ಮಾಪಕನೊಬ್ಬನ ವಿರುದ್ಧ ವಂಚನೆ ಪ್ರಕರಣ ದಾಖಲಾಗಿದೆ. ತುಳುವಿನ ‘ಜೀಟಿಗೆ’ ಹೆಸರಿನ ರಾಷ್ಟ್ರಪ್ರಶಸ್ತಿ ವಿಜೇತ ಸಿನಿಮಾ ನಿರ್ಮಾಣ ಮಾಡಿದ್ದ ಅರುಣ್ ರೈ ವಿರುದ್ಧ ಆರ್.ಎಂ.ಸಿ ಯಾರ್ಡ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಕನ್ನಡದ ವೀರಕಂಬಳ ಸಿನಿಮಾವನ್ನು ಸಹ ಅರುಣ್ ನಿರ್ಮಾಣ ಮಾಡುತ್ತಿದ್ದರು. ದೂರು ದಾಖಲಾದ ಬೆನ್ನಲ್ಲೆ ನಿರ್ಮಾಪಕ ಪರಾರಿ ಆಗಿದ್ದಾರೆ.
ಬಂಟ್ವಾಳ ಮೂಲದ ಉದ್ಯಮಿಯೊಬ್ಬರನ್ನು ಬೆಂಗಳೂರಿನ ತಾಜ್ ಹೋಟೆಲ್ನಲ್ಲಿ ಪರಿಚಯ ಮಾಡಿಕೊಂಡಿದ್ದ ನಿರ್ಮಾಪಕ ಅರುಣ್ ರೈ, ತಾನು ‘ವೀರಕಂಬಳ’ ಸಿನಿಮಾ ನಿರ್ಮಾಣ ಮಾಡುತ್ತಿದ್ದು ಅದರ ಲಾಭಾಂಶದಲ್ಲಿ 60 ಲಕ್ಷ ರೂಪಾಯಿ ಕೊಡುವುದಾಗಿ ಹೇಳಿ ಹಣ ಪಡೆದುಕೊಂಡಿದ್ದಾನೆ. ಕೋವಿಡ್ ವೇಳೆ ಬಂಟ್ವಾಳ ಮೂಲದ ಉದ್ಯಮಿಗೆ ಗೇರು ಬೀಜಾ ಸಂಸ್ಕರಣಾ ಘಟಕದಲ್ಲಿ 25 ಕೋಟಿ ನಷ್ಟವಾಗಿತ್ತು, ಅದನ್ನೇ ಬಂಡವಾಳವಾಗಿ ಬಳಸಿದ ಅರುಣ್, ತಾನು ಹಣವನ್ನು ಮತ್ತೆ ಗಳಿಸಿಕೊಡುವುದಾಗಿ ಹೇಳಿ ಆಸೆ ಹುಟ್ಟಿಸಿದ್ದಾನೆ.
‘ನನ್ನ ಕಂಪೆನಿಯಲ್ಲಿ ಹೂಡಿಕೆ ಮಾಡಿ ನಾನು ನಿಮಗೆ ಲಾಭ ಮಾಡಿಕೊಡುತ್ತೇನೆ ಎಂದಿದ್ದ ಅರುಣ್, ತಾನು ದೆಹಲಿಯಲ್ಲಿ 400 ಕೋಟಿ ಹೂಡಿಕೆ ಮಾಡಿರುವುದಾಗಿ ಸುಳ್ಳು ಹೇಳಿದ್ದಾನೆ. ತಮಿಳುನಾಡಿನ ದಿಂಡಿಗಲ್ ಕಾಳಿ ಸ್ವಾಮಿಯಿಂದ 50 ಕೋಟಿ ಹಣ ಬರಲಿಕ್ಕೆ ಇದೆ, ಪಳನಿ ದೇವಾಲಯದ ಟ್ರಸ್ಟ್ ನಿಂದಲೂ ಸಾಲ ಕೊಡಿಸ್ತೇನೆ, ಜಾರ್ಖಂಡ್ ಸರ್ಕಾರದಿಂದ 50 ಕೋಟಿ ಕೆಲಸದ ಬಿಲ್ ಬಾಕಿ ಇದೆ, ಮಂಗಳೂರಿನ ಗೋಡೌನ್ ನಲ್ಲಿ 40 ಕೋಟಿ ಮೌಲ್ಯದ ಕ್ಯಾಶ್ಯೂ ನಟ್ಸ್ (ಗೋಡಂಬಿ )ಇದೆ ಅದನ್ನು 25 ಕೋಟಿಗೆ ನೀಡ್ತೇನೆ ಎಂದೆಲ್ಲ ಸುಳ್ಳು ಹೇಳಿದ್ದ ನಿರ್ಮಾಪಕ.
ಇದನ್ನೂ ಓದಿ:ಸಣ್ಣ ವಯಸ್ಸಿಗೆ ಖ್ಯಾತ ನಿರ್ಮಾಪಕನ ಮಗಳ ಸಾವು; ಶಾಕಿಂಗ್ ವಿಚಾರ ರಿವೀಲ್ ಮಾಡಿದ ತಾಯಿ
ಬೆಂಗಳೂರಿನ ಹಲವು ಕಂಪನಿ ಹಾಗೂ ಕಟ್ಟಡಗಳನ್ನ ತೋರಿಸಿ ಇದೆಲ್ಲವೂ ತನ್ನದೇ ಎಂದು ಹೇಳಿದ್ದ ನಿರ್ಮಾಪಕರ ಅರುಣ್, HSR ಲೇಔಟ್, ಎಲೆಕ್ಟ್ರಾನಿಕ್ ಸಿಟಿ, ರಾಜಾಜಿನಗರ, ತುಮಕೂರು ಮೈಸೂರಿನ ಹಲವು ಕಡೆ ಕಚೇರಿಗಳಿಗೆ ಕರೆದೊಯ್ದಿದ್ದ ಅವೆಲ್ಲವೂ ತನ್ನದೇ ಎಂದು ಹೇಳಿಕೊಂಡಿದ್ದ. ದುಬೈ, ಗಾಂಬಿಯಾ, ಘಾನ, ಉದುಬಿತ್ಥಾನ, ಮಲೇಷ್ಯಾಗಳಲ್ಲಿ ಅಂತರಾಷ್ಟ್ರೀಯ ವ್ಯವಹಾರ ನನಗೆ ಇದೆ, ಟೆಸ್ಲಾ ಸಂಸ್ಥೆಯ ಮಾಲೀಕ ಎಲಾನ್ ಮಸ್ಕ್ರ ಆಪ್ತ ಸಹ ತನ್ನ ಕಂಪೆನಿಯಲ್ಲಿ ಹೂಡಿಕೆ ಮಾಡಿದ್ದಾನೆ ಎಂದು ಸುಳ್ಳಿನ ಮೇಲೆ ಸುಳ್ಳು ಹೇಳಿದ್ದ ಅರುಣ್.
ನಿರ್ಮಾಪಕನ ಬಣ್ಣದ ಮಾತುಗಳನ್ನು ನಂಬಿದ ಉದ್ಯಮಿ ಬೇರೆ ಬೇರೆ ಕಡೆಗಳಿಂದ ಸಾಲ ಮಾಡಿ ಸುಮಾರು 9 ಕೋಟಿ ಹಣವನ್ನು ಕಂಪೆನಿಯ ಷೇರು ಖರೀದಿಗಾಗಿ ನೀಡಿದ್ದಾರೆ. ಉದ್ಯಮಿಗೆ ಕೆಲ ನಕಲಿ ಕರಾರು ಪತ್ರಗಳನ್ನು ನಿರ್ಮಾಪಕ ಅರುಣ್ ಮತ್ತು ಆತನ ಕೆಲವು ಸಹಚರರು ನೀಡಿದ್ದಾರೆ. ತಾನು ಮೋಸ ಹೋಗಿರುವುದು ತಿಳಿದ ಮೇಲೆ ಬಂಟವಾಳದ ಉದ್ಯಮಿ ನಿರ್ಮಾಪಕ ಅರುಣ್ ರೈ, ಆತನ ಸಹೋದರ ಅರ್ಜುನ್ ರೈ, ಬನಶಂಕರಿ ರಘು, ಮುಳಬಾಗಿಲು ಗೋವಿಂದಪ್ಪ, ಕೆ.ಪಿ.ಶ್ರೀನಿವಾಸ್ ಎಂಬುವವರ ವಿರುದ್ದ ದೂರು ನೀಡಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 10:24 am, Sun, 1 December 24