ನಟ ತನುಷ್ ಶಿವಣ್ಣ (Tanush Shivanna) ಅವರು ನಿರ್ಮಾಪಕನಾಗಿಯೂ ಚಂದನವನದಲ್ಲಿ ಸಕ್ರಿಯರಾಗಿದ್ದಾರೆ. ‘ತನುಷ್ ಸಿನಿಮಾಸ್’ ಮೂಲಕ ಅವರು ಈಗ ‘ಮಿಸ್ಟರ್ ನಟ್ವರ್ಲಾಲ್’ (Mr Natwarlal) ಸಿನಿಮಾಗೆ ಬಂಡವಾಳ ಹೂಡಿದ್ದಾರೆ. ಈ ಚಿತ್ರದಲ್ಲಿ ಹೀರೋ ಆಗಿಯೂ ಅವರು ನಟಿಸಿದ್ದಾರೆ. ಇತ್ತೀಚೆಗೆ ಈ ಸಿನಿಮಾದ ಟ್ರೇಲರ್ ಬಿಡುಗಡೆ ಮಾಡಲಾಯಿತು. ಅನೇಕ ಗಣ್ಯರು ಬಂದು ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ. ‘ಆನಂದ್ ಆಡಿಯೋ’ ಮೂಲಕ ‘ನಟ್ವರ್ಲಾಲ್’ ಸಿನಿಮಾದ ಟ್ರೇಲರ್ ಅನಾವರಣ ಆಗಿದೆ. ಈ ಸಿನಿಮಾಗೆ ವಿ. ಲವ ಅವರು ನಿರ್ದೇಶನ ಮಾಡಿದ್ದಾರೆ. ಟ್ರೇಲರ್ (Mr Natwarlal Trailer) ನೋಡಿದ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ. ಫೆಬ್ರವರಿ 23ರಂದು ‘ನಟ್ವರ್ಲಾಲ್’ ಸಿನಿಮಾ ರಾಜ್ಯಾದ್ಯಂತ ರಿಲೀಸ್ ಆಗಲಿದೆ.
ಕುಣಿಗಲ್ ಶಾಸಕ ರಂಗನಾಥ್, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಎನ್.ಎಂ. ಸುರೇಶ್, ನಿರ್ಮಾಪಕರಾದ ಶಿಲ್ಪ ಶ್ರೀನಿವಾಸ್, ಭಾ.ಮ. ಹರೀಶ್, ಚಿಂಗಾರಿ ಮಹದೇವ್, ಟಿ.ಪಿ. ಸಿದ್ದರಾಜು, ಕುಶಾಲ್, ಭಾ.ಮ. ಗಿರೀಶ್, ವಿತರಕರ ವಲಯದ ಅಧ್ಯಕ್ಷ ವೆಂಕಟೇಶ್, ನಿರ್ದೇಶಕ-ಗೀತರಚನಕಾರ ‘ಭರ್ಜರಿ’ ಚೇತನ್ ಕುಮಾರ್ ಮುಂತಾದವರು ‘ನಟ್ವರ್ಲಾಲ್’ ಸಿನಿಮಾದ ಟ್ರೇಲರ್ ಬಿಡುಗಡೆ ಸಮಾರಂಭಕ್ಕೆ ಆಗಮಿಸಿ ಶುಭ ಕೋರಿದ್ದಾರೆ.
ಇದನ್ನೂ ಓದಿ: ‘ಪುಷ್ಪ 2’ ಚಿತ್ರದ ಶೂಟಿಂಗ್ ಮಧ್ಯೆ ರಶ್ಮಿಕಾ ಮಂದಣ್ಣ ಮಾಡಿದ ಕೆಲಸ ಇದು
ನಿರ್ದೇಶಕ ವಿ. ಲವ ಅವರು ‘ನಟ್ವರ್ಲಾಲ್’ ಸಿನಿಮಾದ ಬಗ್ಗೆ ಮಾಹಿತಿ ನೀಡಿದ್ದಾರೆ. ‘ಇದೊಂದು ಕ್ರೈಂ-ಥ್ರಿಲ್ಲರ್ ಮತ್ತು ಆ್ಯಕ್ಷನ್ ಶೈಲಿಯ ಸಿನಿಮಾ. ಬೆಂಗಳೂರಿನಲ್ಲಿ ನಡೆದ ನೈಜ ಘಟನೆಯೇ ಈ ಸಿನಿಮಾಗೆ ಸ್ಫೂರ್ತಿ. ಟ್ರೇಲರ್ನಲ್ಲಿ ಎರಡನೇ ಭಾಗದ ಸುಳಿವು ಸಹ ನೀಡಿದ್ದೇವೆ’ ಎಂದು ಅವರು ಹೇಳಿದ್ದಾರೆ. ‘ಬಹದ್ದೂರ್’ ಚೇತನ್ ಕುಮಾರ್ ಅವರು ಎರಡು ಹಾಡುಗಳನ್ನು ಬರೆದಿದ್ದಾರೆ.
ತನುಷ್ ಶಿವಣ್ಣ ಅವರು ಹೀರೋ ಆಗಿ ನಟಿಸಿದ 4ನೇ ಸಿನಿಮಾ ‘ನಟ್ವರ್ಲಾಲ್’. ‘ನಾನು ಈ ಚಿತ್ರದಲ್ಲಿ 8 ವಿವಿಧ ಗೆಟಪ್ಗಳಲ್ಲಿ ಕಾಣಿಸಿಕೊಂಡಿದ್ದೇನೆ. ಇದು ಈ ಸಿನಿಮಾದ ವಿಶೇಷ. ನಿರ್ಮಾಣದ ಜವಾಬ್ದಾರಿ ಸಹ ನನ್ನದು. ಹಣದ ಸಮಸ್ಯೆಯಿಂದಾಗಿ ನಡುವೆ ಒಂದು ಹಂತದಲ್ಲಿ ಸಿನಿಮಾದ ಕೆಲಸ ನಿಲ್ಲಿಸೋಣ ಎಂದುಕೊಂಡೆ. ಆದರೆ, ನಾನು ನಂಬಿರುವ ದೇವರ ದಯೆಯಿಂದ ಸ್ನೇಹಿತರು ಸಹಾಯಕ್ಕೆ ಬಂದರು. ಅವರ ಸಹಾಯ ಮತ್ತು ನನ್ನ ತಂಡದ ಸಹಕಾರದಿಂದ ಸಿನಿಮಾ ಚೆನ್ನಾಗಿ ಮೂಡಿಬಂದಿದೆ’ ಎಂದು ಅವರು ಹೇಳಿದ್ದಾರೆ.
ಈ ಸಿನಿಮಾದಲ್ಲಿ ಸೋನಾಲ್ ಮೊಂತೆರೋ ಅವರು ನಾಯಕಿಯಾಗಿ ನಟಿಸಿದ್ದಾರೆ. ಕಾಕ್ರೋಜ್ ಸುಧಿ, ನಾಗಭೂಷಣ, ಯಶ್ ಶೆಟ್ಟಿ, ರಘು ರಾಮನಕೊಪ್ಪ, ರಾಜೇಶ್ ನಟರಂಗ, ಹರಿಣಿ ಶ್ರೀಕಾಂತ್, ಕಾಂತರಾಜು ಕಡ್ಡಿಪುಡಿ, ಸುಂದರ್ ರಾಜ್, ಸುಜಯ್ ಶಾಸ್ತ್ರಿ ಮುಂತಾದ ಕಲಾವಿದರು ಈ ಸಿನಿಮಾದ ಪಾತ್ರವರ್ಗದಲ್ಲಿದ್ದಾರೆ. ಧರ್ಮವಿಶ್ ಅವರು ಸಂಗೀತ ನಿರ್ದೇಶನ ಮಾಡಿದ್ದಾರೆ. ವಿಲಿಯಂ ಡೇವಿಡ್ ಅವರ ಛಾಯಾಗ್ರಹಣ ಮತ್ತು ಕೆ.ಎಂ. ಪ್ರಕಾಶ್ ಅವರ ಸಂಕಲನ ಈ ಚಿತ್ರಕ್ಕಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.