ಶ್ರೀಮುರಳಿ ನಟನೆಯ ಸಿನಿಮಾ ಒಂದು ಬಿಡುಗಡೆ ಆಗಿ ಬಹು ಸಮಯ ಆಗಿತ್ತು. ಮಾತ್ರವೇ ಅಲ್ಲದೆ ಶ್ರೀಮುರಳಿ ಒಂದು ಒಳ್ಳೆಯ ಹಿಟ್ ಸಿನಿಮಾ ನೀಡಿ ಸಹ ಹೆಚ್ಚು ಸಮಯವಾಗಿತ್ತು. ಇಂದು ಶ್ರೀಮುರಳಿ ನಟನೆಯ ‘ಬಘೀರ’ ಸಿನಿಮಾ ತೆರೆಗೆ ಬಂದಿದೆ. ಸಿನಿಮಾವನ್ನು ಹೊಂಬಾಳೆ ಫಿಲಮ್ಸ್ ನಿರ್ಮಾಣ ಮಾಡಿದ್ದು, ಸಿನಿಮಾಕ್ಕೆ ಕತೆ ಬರೆದು, ಪ್ರಚಾರದಲ್ಲೂ ಭಾಗಿಯಾಗಿದ್ದರು ನಿರ್ದೇಶಕ ಪ್ರಶಾಂತ್ ನೀಲ್. ಸಿನಿಮಾವನ್ನು ಕನ್ನಡ ಮತ್ತು ತೆಲುಗು ಭಾಷೆಗಳಲ್ಲಿ ಬಿಡುಗಡೆ ಮಾಡಲಾಗಿದೆ. ತೆಲುಗಿನಲ್ಲಿ ‘ಬಘೀರ’ ಸಿನಿಮಾಕ್ಕೆ ಮೊದಲ ದಿನ ಉತ್ತಮ ಓಪನಿಂಗ್ ದೊರೆತಿದೆ. ಮೊದಲ ಶೋ ಸಿನಿಮಾ ನೋಡಿದ ತೆಲುಗು ಪ್ರೇಕ್ಷಕರು ‘ಬಘೀರ’ ಸಿನಿಮಾ ಬಗ್ಗೆ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.
ಮೊದಲ ಶೋ ‘ಬಘೀರ’ ಸಿನಿಮಾ ನೋಡಿ ಬಂದ ಪ್ರೇಕ್ಷಕರನ್ನು ಕೆಲ ಯೂಟ್ಯೂಬ್ ಚಾನೆಲ್ಗಳು ಮಾತನಾಡಿಸಿದ್ದು, ಬಹುತೇಕ ಪ್ರೇಕ್ಷಕರು ‘ಬಘೀರ’ ಸಿನಿಮಾ ಬಗ್ಗೆ ಪಾಸಿಟಿವ್ ಅಭಿಪ್ರಾಯವನ್ನೇ ಹಂಚಿಕೊಂಡಿದ್ದಾರೆ. ಕೆಲವು ಪ್ರೇಕ್ಷಕರಂತೂ ‘ಸಿನಿಮಾ 100 ಡೇಸ್ ಪಕ್ಕಾ’ ಎಂದಿದ್ದಾರೆ. ಕೆಲವರು ‘ಭಘೀರ’ ಸಿನಿಮಾವನ್ನು ಪ್ರಭಾಸ್ ನಟನೆಯ ‘ಸಲಾರ್’ ಸಿನಿಮಾಕ್ಕೆ ಹೋಲಿಸಿದ್ದಾರೆ. ಇನ್ನು ಕೆಲವರು ಸಿನಿಮಾದಲ್ಲಿ ತಮಗೆ ಬಹಳ ಇಷ್ಟವಾದ ಅಂಶಗಳ ಬಗ್ಗೆ ಮಾತನಾಡಿ, ಸಿನಿಮಾವನ್ನು ಮಿಸ್ ಮಾಡದೆ ನೋಡಬೇಕು ಎಂದು ಮನವಿ ಸಹ ಮಾಡಿದ್ದಾರೆ.
ಸಿನಿಮಾ ನೋಡಿ ಬಂದ ಯುವಕನೊಬ್ಬ, ‘ಸಿನಿಮಾದ ಕ್ಲೈಮ್ಯಾಕ್ಸ್ ಅಂತೂ ಅದ್ಭುತವಾಗಿದೆ. ಫೈಟ್ಗಳಂತೂ ಸೂಪರ್’ ಎಂದಿದ್ದಾನೆ. ಇನ್ನೊಬ್ಬ ವ್ಯಕ್ತಿ, ‘ನನಗೆ ಇಂಟರ್ವೆಲ್ಗೆ ಮುಂಚೆ ಬರುವ ಟ್ವಿಸ್ಟ್ ಬಹಳ ಇಷ್ಟವಾಯ್ತು. ಅಲ್ಲದೆ ಕಣ್ಣಲ್ಲಿ ನೀರು ತರಿಸುವ ಐದಾರು ಸೀನ್ಗಳಿವೆ ಅದು ಸಹ ಇಷ್ಟವಾಯ್ತು. ಓವರ್ಆಲ್ ಆಗಿ ಹೇಳಬೇಕೆಂದರೆ ಸಿನಿಮಾ ಮಿಸ್ ಮಾಡದೆ ನೋಡಬೇಕಾದ ಸಿನಿಮಾ’ ಎಂದಿದ್ದಾರೆ.
ಇದನ್ನೂ ಓದಿ:ಹೇಗಿದೆ ಶ್ರೀಮುರಳಿ ನಟನೆಯ ‘ಬಘೀರ’ ಸಿನಿಮಾದ ಫಸ್ಟ್ ಹಾಫ್? ಇಲ್ಲಿದೆ ರಿಪೋರ್ಟ್
ತಮ್ಮ ಮಗನನ್ನು ಸಿನಿಮಾಕ್ಕೆ ಕರೆದುಕೊಂಡು ಬಂದಿದ್ದ ವ್ಯಕ್ತಿಯೊಬ್ಬರು, ‘ಸಿನಿಮಾ ಸೂಪರ್ ಆಗಿದೆ, ಈ ಸಿನಿಮಾ 100 ದಿನ ಓಡಲಿದೆ’ ಎಂದಿದ್ದಾರೆ. ಜಾತ್ರೆ ಕನ್ನಡಕ ಧರಿಸಿದ್ದ ಯುವಕನೊಬ್ಬ, ‘ಸಿನಿಮಾದಲ್ಲಿ ಹೀರೋ ಎಲಿವೇಷನ್ ಸಖತ್ ಆಗಿದೆ. ಪ್ರತಿ ದೃಶ್ಯದಲ್ಲೂ ಒಳ್ಳೆಯ ಎಲಿವೇಷನ್ ಕೊಟ್ಟಿದ್ದಾರೆ. ಎಲಿವೇಷನ್ಗಳು ಎಲಿವೇಟರ್ಗಳ ರೀತಿ ಇವೆ’ ಎಂದು ಅತಿ ಉತ್ಸಾಹದಿಂದ ಹೇಳಿದ್ದಾರೆ. ಮಧ್ಯಮ ವಯಸ್ಕರೊಬ್ಬರು, ‘ವ್ಯಕ್ತಿಯ ಜೀವನದಲ್ಲಿ ಈ ರೀತಿ ಆದರೆ ಏನಾಗುತ್ತದೆ, ಅದನ್ನು ಹೇಗೆ ಸರಿಮಾಡಿಕೊಳ್ಳುತ್ತಾನೆ ಎಂಬುದನ್ನು ಚೆನ್ನಾಗಿ ತೋರಿಸಿದ್ದಾರೆ, ಸಂಗಿತ ಸಹ ಚೆನ್ನಾಗಿದೆ’ ಎಂದು ಗಂಭೀರವಾಗಿ ಹೇಳಿದ್ದಾರೆ.
ಇನ್ನೂ ಹಲವು ತೆಲುಗು ಪ್ರೇಕ್ಷಕರು ಅಭಿಪ್ರಾಯ ವ್ಯಕ್ತಪಡಿಸಿದ್ದು, ಬಹುತೇಕರು ‘ಭಘೀರ’ ಸಿನಿಮಾ ಚೆನ್ನಾಗಿದೆ ಎಂದೇ ಹೇಳಿದ್ದಾರೆ. ‘ಬಘೀರ’ ತೆಲುಗು ಪ್ರೇಕ್ಷಕರಿಗೆ ಸಖತ್ ಇಷ್ಟವಾದಂತಿದೆ. ಅಂದಹಾಗೆ ಸಿನಿಮಾವನ್ನು ಡಾ ಸೂರಿ ನಿರ್ದೇಶನ ಮಾಡಿದ್ದಾರೆ. ಸಿನಿಮಾಕ್ಕೆ ಪ್ರಶಾಂತ್ ನೀಲ್ ಕತೆ ಬರೆದಿದ್ದಾರೆ. ಹೊಂಬಾಳೆ ನಿರ್ಮಾಣ ಮಾಡಿದೆ. ಸಿನಿಮಾದಲ್ಲಿ ರುಕ್ಮಿಣಿ ವಸಂತ್ ನಾಯಕಿ, ಗರುಡ ರಾಮ್ ವಿಲನ್, ಪ್ರಕಾಶ್ ರಾಜ್ ಸಹ ಸಿನಿಮಾದಲ್ಲಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ